[1] ಒಮ್ಮೆ ಯೇಸು ಜೆರಿಕೊ ಪಟ್ಟಣದ ಮೂಲಕ ಹೋಗುತ್ತಿದ್ದನು.
[2] ಆ ಪಟ್ಟಣದಲ್ಲಿ ಜಕ್ಕಾಯನೆಂಬ ಮನುಷ್ಯನಿದ್ದನು. ಅವನು ಐಶ್ವರ್ಯವಂತನೂ ಪ್ರಧಾನ ಸುಂಕವಸೂಲಿಗಾರನೂ ಆಗಿದ್ದನು.
[3] ಅವನು ಯೇಸುವನ್ನು ನೋಡಲು ಬಯಸಿದನು. ಯೇಸುವನ್ನು ನೋಡುವುದಕ್ಕಾಗಿ ಇತರ ಅನೇಕ ಜನರೂ ಅಲ್ಲಿದ್ದರು. ಜಕ್ಕಾಯನು ಬಹಳ ಗಿಡ್ಡನಾಗಿದ್ದುದರಿಂದ ಆ ಜನರ ಗುಂಪಿನ ದೆಸೆಯಿಂದ ಯೇಸುವನ್ನು ನೋಡಲಾಗಲಿಲ್ಲ.
[4] ಆದ್ದರಿಂದ ಅವನು ಬೇರೊಂದು ಸ್ಥಳಕ್ಕೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಕುಳಿತುಕೊಂಡನು. ಯೇಸು ಆ ಸ್ಥಳದ ಮೂಲಕ ಹೋಗುವನೆಂದು ಜಕ್ಕಾಯನಿಗೆ ಗೊತ್ತಿತ್ತು.
[5] ಯೇಸು ಆ ಸ್ಥಳಕ್ಕೆ ಬಂದಾಗ, ಮರದ ಮೇಲೆ ಕುಳಿತಿದ್ದ ಜಕ್ಕಾಯನನ್ನು ಕಣ್ಣೆತ್ತಿ ನೋಡಿ ಅವನಿಗೆ, “ಜಕ್ಕಾಯನೇ ಬೇಗನೆ ಕೆಳಗಿಳಿದು ಬಾ! ಈ ದಿನ ನಾನು ನಿನ್ನ ಮನೆಯಲ್ಲಿ ಇಳಿದುಕೊಳ್ಳಬೇಕು” ಎಂದು ಹೇಳಿದನು.
[6] ಆಗ ಜಕ್ಕಾಯನು ಬೇಗನೆ ಕೆಳಗಿಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು.
[7] ಜನರೆಲ್ಲರೂ ಇದನ್ನು ನೋಡಿ, “ಯೇಸು ಎಂಥವನ ಮನೆಯಲ್ಲಿ ಇಳಿದುಕೊಳ್ಳುತ್ತಾನೆ. ಜಕ್ಕಾಯನು ಪಾಪಿ!” ಎಂದು ಆಕ್ಷೇಪಣೆ ಮಾಡತೊಡಗಿದರು.
[8] ಜಕ್ಕಾಯನು ಪ್ರಭುವಿಗೆ (ಯೇಸುವಿಗೆ), “ನಾನು ಜನರಿಗೆ ಉಪಕಾರ ಮಾಡಬೇಕೆಂದಿದ್ದೇನೆ. ನಾನು ನನ್ನ ಹಣದಲ್ಲಿ ಅರ್ಧವನ್ನು ಬಡವರಿಗೆ ಕೊಡುವೆನು. ನಾನು ಯಾರಿಗಾದರೂ ಮೋಸಮಾಡಿದ್ದರೆ, ಆ ವ್ಯಕ್ತಿಗೆ ಅದರ ನಾಲ್ಕರಷ್ಟು ಹೆಚ್ಚಾಗಿ ಕೊಡುತ್ತೇನೆ” ಎಂದು ಹೇಳಿದನು.
[9] ಯೇಸು, “ಈ ಮನುಷ್ಯನು ಒಳ್ಳೆಯವನೇ ಸರಿ. ಇವನು ನಿಜವಾಗಿಯೂ ಅಬ್ರಹಾಮನ ಕುಟುಂಬಕ್ಕೆ ಸೇರಿದ್ದಾನೆ. ಇಂದೇ ಈ ಮನೆಗೆ ರಕ್ಷಣೆ ಆಯಿತು.
[10] ಮನುಷ್ಯಕುಮಾರನು ಬಂದದ್ದು ತಪ್ಪಿಹೋದ ಜನರನ್ನು ಹುಡುಕಿ ರಕ್ಷಿಸುವುದಕ್ಕಾಗಿಯಷ್ಟೇ” ಎಂದು ಹೇಳಿದನು.
[11] ಯೇಸು ಪ್ರಯಾಣ ಮಾಡುತ್ತಾ ಜೆರುಸಲೇಮಿನ ಸಮೀಪಕ್ಕೆ ಬಂದನು. ಕೆಲವು ಜನರು ದೇವರ ರಾಜ್ಯವು ಬೇಗನೆ ಬರಲಿದೆ ಎಂದುಕೊಂಡರು.
[12] ಜನರ ಈ ಭಾವನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಈ ಸಾಮ್ಯವನ್ನು ಹೇಳಿದನು: “ಬಹಳ ಪ್ರಾಮುಖ್ಯನಾದ ಒಬ್ಬನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರುವುದಕ್ಕಾಗಿ ದೂರದೇಶಕ್ಕೆ ಹೊರಟನು. ರಾಜ್ಯಾಧಿಕಾರವನ್ನು ಪಡೆದುಕೊಂಡ ಮೇಲೆ ಹಿಂತಿರುಗಿ ಬಂದು ತನ್ನ ಜನರನ್ನು ಆಳಬೇಕೆಂಬುದು ಅವನ ಬಯಕೆಯಾಗಿತ್ತು.
[13] ಆದ್ದರಿಂದ ಅವನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಒಟ್ಟಾಗಿ ಕರೆದು ಅವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಾವಿರ ರೂಪಾಯಿ ಕೊಟ್ಟು, ‘ನಾನು ಹಿಂತಿರುಗಿ ಬರುವವರೆಗೆ ಈ ಹಣದಿಂದ ವ್ಯಾಪಾರ ಮಾಡಿರಿ’ ಎಂದು ಹೇಳಿದನು.
[14] ಆದರೆ ಅವನ ದೇಶದ ಜನರು ಅವನನ್ನು ದ್ವೇಷಿಸಿ, ಜನರ ಒಂದು ಗುಂಪನ್ನು ಅವನ ಹಿಂದೆ ಕಳುಹಿಸಿದರು. ಆ ಗುಂಪಿನ ಜನರು ದೂರದೇಶದಲ್ಲಿ, ‘ಇವನು ನಮ್ಮ ರಾಜನಾಗುವುದು ನಮಗೆ ಇಷ್ಟವಿಲ್ಲ!’ ಎಂದು ಹೇಳಿದರು.
[15] “ಆದರೂ ಅವನು ಅರಸನಾದನು. ಅವನು ತನ್ನ ದೇಶಕ್ಕೆ ಹಿಂತಿರುಗಿದಾಗ, ‘ನನ್ನ ಹಣ ಹೊಂದಿರುವ ಸೇವಕರನ್ನು ಕರೆಯಿರಿ. ಅವರು ಅದರಿಂದ ಎಷ್ಟು ಹೆಚ್ಚು ಹಣ ಸಂಪಾದಿಸಿದ್ದಾರೆಂದು ನಾನು ನೋಡಬೇಕು’ ಎಂದು ಹೇಳಿದನು.
[16] ಮೊದಲನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿ ಸಂಪಾದಿಸಿದ್ದೇನೆ!’ ಎಂದು ಹೇಳಿದನು.
[17] ಅರಸನು ಆ ಸೇವಕನಿಗೆ, ‘ಭಲೇ! ನೀನು ಒಳ್ಳೆಯ ಆಳು. ಚಿಕ್ಕವಿಷಯಗಳಲ್ಲಿ ನಾನು ನಿನ್ನ ಮೇಲೆ ಭರವಸೆ ಇಡಬಹುದೆಂದು ನನಗೆ ತಿಳಿಯಿತು. ಆದ್ದರಿಂದ ನನ್ನ ಹತ್ತು ಪಟ್ಟಣಗಳನ್ನು ಆಳುವುದಕ್ಕೆ ನಿನ್ನನ್ನು ನೇಮಿಸುವೆನು!’ ಎಂದು ಹೇಳಿದನು.
[18] “ಎರಡನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿ ಸಂಪಾದಿಸಿದ್ದೇನೆ’ ಅಂದನು.
[19] ಅರಸನು ಆ ಸೇವಕನಿಗೆ, ‘ನೀನು ನನ್ನ ಐದು ಪಟ್ಟಣಗಳಿಗೆ ಅಧಿಕಾರಿಯಾಗಿರು’ ಎಂದು ಹೇಳಿದನು.
[20] “ಆ ಬಳಿಕ ಇನ್ನೊಬ್ಬ ಆಳು ಬಂದು ಅರಸನಿಗೆ, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿ ಇಲ್ಲಿದೆ.
[21] ನೀನು ಬಲಿಷ್ಠನೂ ಕಠಿಣ ಮನುಷ್ಯನೂ ಸ್ವತಃ ಸಂಪಾದನೆ ಮಾಡದ ಹಣವನ್ನು ದೋಚಿಕೊಳ್ಳುವವನೂ ಸ್ವತಃ ನೀನೇ ಬೆಳೆಯದ ದವಸಧಾನ್ಯಗಳನ್ನು ಒಟ್ಟುಗೂಡಿಸುವವನೂ ಆಗಿರುವೆ. ಆದ್ದರಿಂದ ನಿನಗೆ ಹೆದರಿ ನಿನ್ನ ಹಣವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದೆ’ ಎಂದನು.
[22] “ಆಗ ಅರಸನು ಆ ಸೇವಕನಿಗೆ, ‘ನೀನು ಕೆಟ್ಟ ಆಳು! ನಿನ್ನ ಸ್ವಂತ ಮಾತುಗಳಿಂದಲೇ ನಿನಗೆ ತೀರ್ಪು ಮಾಡುತ್ತೇನೆ. ನನ್ನನ್ನು ಕಠಿಣ ಮನುಷ್ಯನೆಂದು ನೀನು ಹೇಳಿದೆ. ಸ್ವತಃ ನಾನೇ ಸಂಪಾದನೆ ಮಾಡದ ಹಣವನ್ನು ನಾನು ತೆಗೆದುಕೊಳ್ಳುವುದಾಗಿಯೂ ಸ್ವತಃ ನಾನೇ ಬೆಳೆಯದ ದವಸಧಾನ್ಯಗಳನ್ನು ನಾನು ಸಂಗ್ರಹಿಸುವುದಾಗಿಯೂ ನೀನು ಹೇಳಿದೆ.
[23] ಅದು ನಿಜವಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ನಾನು ಮರಳಿ ಬಂದಾಗ, ನನಗೆ ಸ್ವಲ್ಪ ಬಡ್ಡಿಯಾದರೂ ಸಿಕ್ಕುತ್ತಿತ್ತು’ ಎಂದನು.
[24] ಬಳಿಕ ಅರಸನು ಅಲ್ಲಿದ್ದ ಜನರಿಗೆ, ‘ಈ ಸೇವಕನ ಒಂದುಸಾವಿರ ರೂಪಾಯಿ ತೆಗೆದುಕೊಂಡು ಹತ್ತುಸಾವಿರ ರೂಪಾಯಿ ಸಂಪಾದಿಸಿದವನಿಗೆ ಕೊಡಿರಿ’ ಎಂದು ಹೇಳಿದನು.
[25] “ಆ ಜನರು ಅರಸನಿಗೆ, ‘ಸ್ವಾಮೀ, ಆ ಸೇವಕನ ಬಳಿ ಈಗಾಗಲೇ ಹತ್ತುಸಾವಿರ ರೂಪಾಯಿ ಇದೆಯಲ್ಲಾ!’ ಎಂದು ಹೇಳಿದರು.
[26] “ಅರಸನು, ‘ತನ್ನಲ್ಲಿರುವುದನ್ನು ಉಪಯೋಗಿಸುವವನು ಹೆಚ್ಚು ಪಡೆಯುವನು. ಆದರೆ ತನ್ನಲ್ಲಿರುವುದನ್ನು ಉಪಯೋಗಿಸದವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು.
[27] ಈಗ ನನ್ನ ವೈರಿಗಳೆಲ್ಲಿ? ನಾನು ಅರಸನಾಗುವುದನ್ನು ವಿರೋಧಿಸಿದ ಜನರೆಲ್ಲಿ? ನನ್ನ ವೈರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನನ್ನ ಕಣ್ಣೆದುರಿನಲ್ಲಿಯೇ ಕೊಲ್ಲಿರಿ!’ ಎಂದು ಹೇಳಿದನು.”
[28] ಯೇಸು ಈ ಸಂಗತಿಗಳನ್ನು ಹೇಳಿದ ನಂತರ ಜೆರುಸಲೇಮಿನ ಕಡೆಗೆ ಪ್ರಯಾಣ ಮುಂದುವರಿಸಿದನು.
[29] ಯೇಸು ಬೇತ್ಛಗೆ ಮತ್ತು ಬೆಥಾನಿಯ ಎಂಬ ಊರುಗಳ ಸಮೀಪಕ್ಕೆ ಬಂದನು. ಈ ಊರುಗಳು ಆಲಿವ್ ಮರಗಳ ಬೆಟ್ಟ ಎಂದು ಕರೆಯಲ್ಪಟ್ಟ ಗುಡ್ಡದ ಹತ್ತಿರವಿತ್ತು. ಯೇಸು ಇಬ್ಬರು ಶಿಷ್ಯರನ್ನು ಕರೆದು ಅವರಿಗೆ,
[30] “ಅಲ್ಲಿ ಕಾಣುವ ಊರಿಗೆ ಹೋಗಿರಿ. ನೀವು ಆ ಊರನ್ನು ಪ್ರವೇಶಿಸಿದಾಗ ಕಟ್ಟಿಹಾಕಿರುವ ಒಂದು ಪ್ರಾಯದ ಕತ್ತೆಯನ್ನು ಕಾಣುವಿರಿ. ಆ ಕತ್ತೆಯ ಮೇಲೆ ಯಾರೂ ಇದುವರೆಗೆ ಸವಾರಿಮಾಡಿಲ್ಲ. ಆ ಕತ್ತೆಯನ್ನು ಬಿಚ್ಚಿಕೊಂಡು ಇಲ್ಲಿಗೆ ಕರೆತನ್ನಿರಿ.
[31] ನೀವು ಏಕೆ ಈ ಕತ್ತೆಯನ್ನು ಬಿಚ್ಚಿಕೊಂಡು ಹೋಗುತ್ತಿದ್ದೀರೆಂದು ಯಾರಾದರೂ ನಿಮ್ಮನ್ನು ಕೇಳಿದರೆ, ‘ಗುರುವಿಗೆ ಈ ಕತ್ತೆ ಬೇಕಾಗಿದೆ’ ಎಂದು ಹೇಳಿರಿ” ಎಂದನು.
[32] ಆ ಇಬ್ಬರು ಶಿಷ್ಯರು ಪಟ್ಟಣದೊಳಕ್ಕೆ ಹೋದರು. ಯೇಸು ಅವರಿಗೆ ಹೇಳಿದ ಪ್ರಕಾರವೇ ಅವರು ಕತ್ತೆಯನ್ನು ಕಂಡು
[33] ಅದನ್ನು ಬಿಚ್ಚಿದರು. ಆದರೆ ಕತ್ತೆಯ ಯಜಮಾನ ಹೊರಗೆ ಬಂದು ಶಿಷ್ಯರಿಗೆ, “ಆ ಕತ್ತೆಯನ್ನು ನೀವು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದನು.
[34] ಶಿಷ್ಯರು, “ಪ್ರಭುವಿಗೆ ಇದು ಬೇಕಾಗಿದೆ” ಎಂದು ಉತ್ತರಿಸಿದರು.
[35] ಹೀಗೆ, ಶಿಷ್ಯರು ಆ ಕತ್ತೆಯನ್ನು ಯೇಸುವಿನ ಬಳಿಗೆ ತಂದರು. ಶಿಷ್ಯರು ತಮ್ಮ ಬಟ್ಟೆಗಳನ್ನು ಕತ್ತೆಯ ಬೆನ್ನಿನ ಮೇಲೆ ಹಾಕಿ ಯೇಸುವನ್ನು ಕತ್ತೆಯ ಮೇಲೆ ಕುಳ್ಳಿರಿಸಿದರು.
[36] ಯೇಸು ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು. ಶಿಷ್ಯರು ತಮ್ಮ ಬಟ್ಟೆಗಳನ್ನು ರಸ್ತೆಯಲ್ಲಿ ಯೇಸುವಿನ ಮುಂದೆ ಹಾಸಿದರು.
[37] ಯೇಸು ಜೆರುಸಲೇಮಿಗೆ ಸಮೀಪಿಸಿ ಆಲಿವ್ ಮರಗಳ ಗುಡ್ಡದ ಬಳಿಗೆ ಬಂದನು. ಆತನನ್ನು ಹಿಂಬಾಲಿಸುತ್ತಿದ್ದ ಶಿಷ್ಯ ಸಮೂಹದಲ್ಲಿದ್ದವರೆಲ್ಲರೂ ಸಂತೋಷಪಡುತ್ತಾ ತಾವು ನೋಡಿದ ಎಲ್ಲಾ ಮಹತ್ಕಾರ್ಯಗಳಿಗಾಗಿ ದೇವರನ್ನು ಸ್ತುತಿಸಿದರು.
[38] ಅವರು, “‘ಪ್ರಭುವಿನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದವಾಗಲಿ!’ ಕೀರ್ತನೆ. 118:26 ಪರಲೋಕದಲ್ಲಿ ಸಮಾಧಾನವಾಗಲಿ; ದೇವರಿಗೆ ಮಹಿಮೆಯಾಗಲಿ” ಎಂದು ಆರ್ಭಟಿಸಿದರು.
[39] ಫರಿಸಾಯರಲ್ಲಿ ಕೆಲವರು, “ಬೋಧಕನೇ, ಈ ರೀತಿಯೆಲ್ಲಾ ಹೇಳಕೂಡದೆಂದು ನಿನ್ನ ಶಿಷ್ಯರಿಗೆ ಹೇಳು!” ಅಂದರು.
[40] ಅದಕ್ಕೆ ಯೇಸು, “ಅವರು ಹೀಗೆ ಹೇಳಲೇಬೇಕು. ಒಂದುವೇಳೆ ಅವರು ಹೀಗೆ ಹೇಳದಿದ್ದರೆ, ಈ ಕಲ್ಲುಗಳೇ ಅವರ ಬದಲಾಗಿ ಹೇಳುತ್ತವೆ ಎಂದು ನಿಮಗೆ ಹೇಳುತ್ತೇನೆ” ಎಂಬುದಾಗಿ ಉತ್ತರಿಸಿದನು.
[41] ಯೇಸು ಜೆರುಸಲೇಮಿನ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯದಲ್ಲಿ ಕಣ್ಣೀರಿಟ್ಟು
[42] ಜೆರುಸಲೇಮಿಗೆ, “ನಿನಗೆ ಯಾವುದರಿಂದ ಸಮಾಧಾನವಾಗುತ್ತದೆ ಎಂಬುದನ್ನು ನೀನು ಇಂದೇ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದಾಗಿತ್ತು! ಆದರೆ ನೀನು ಅದನ್ನು ತಿಳಿಯಲಾರೆ, ಏಕೆಂದರೆ ಅದು ನಿನಗೆ ಮರೆಯಾಗಿದೆ.
[43] ನಿನ್ನ ವೈರಿಗಳು ನಿನ್ನ ಸುತ್ತಲೂ ಗೋಡೆ ಕಟ್ಟಿ ನಿನ್ನನ್ನು ಎಲ್ಲಾ ಕಡೆಗಳಿಂದಲೂ ಮುತ್ತಿಗೆ ಹಾಕಿ,
[44] ನಿನ್ನನ್ನೂ ನಿನ್ನ ಜನರೆಲ್ಲರನ್ನೂ ನಾಶಮಾಡುವರು. ನಿನ್ನ ಕಟ್ಟಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ದೇವರು ನಿನ್ನನ್ನು ರಕ್ಷಿಸುವುದಕ್ಕೆ ಬಂದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.
[45] ಯೇಸು ದೇವಾಲಯದೊಳಗೆ ಹೋಗಿ, ಅಲ್ಲಿ ಮಾರಾಟ ಮಾಡುತ್ತಿದ್ದ ಜನರನ್ನೆಲ್ಲಾ ಹೊರಕ್ಕೆ ಓಡಿಸತೊಡಗಿ,
[46] ಅವರಿಗೆ, “‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’ ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ಅದನ್ನು ‘ಕಳ್ಳರ ಗವಿಯನ್ನಾಗಿ ಮಾರ್ಪಡಿಸಿದ್ದೀರಿ’” ಎಂದನು.
[47] ಯೇಸು ದೇವಾಲಯದಲ್ಲಿ ಪ್ರತಿದಿನ ಜನರಿಗೆ ಉಪದೇಶಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಜನರ ನಾಯಕರಲ್ಲಿ ಕೆಲವರು ಯೇಸುವನ್ನು ಕೊಲ್ಲಲು ಬಯಸಿದರು.
[48] ಆದರೆ ಜನರೆಲ್ಲರೂ ಯೇಸುವಿನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಯೇಸು ಹೇಳಿದ ವಿಷಯಗಳಲ್ಲಿ ಅವರು ಬಹಳ ಆಸಕ್ತರಾಗಿದ್ದರು. ಆದ್ದರಿಂದ ಮಹಾಯಾಜಕರಿಗೆ, ಧರ್ಮೋಪದೇಶಕರಿಗೆ ಮತ್ತು ಜನನಾಯಕರಿಗೆ ಯೇಸುವನ್ನು ಹೇಗೆ ಕೊಲ್ಲಬೇಕೆಂದೇ ತಿಳಿಯಲಿಲ್ಲ.