[1] ಯೆಹೂದ್ಯರ ಹುಳಿಯಿಲ್ಲದ ರೊಟ್ಟಿಯ ಹಬ್ಬ ಅಂದರೆ ಪಸ್ಕಹಬ್ಬವು ಹತ್ತಿರವಾಗಿತ್ತು.
[2] ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸುತ್ತಾ ಜನರ ಭಯದಿಂದ ತಕ್ಕ ಮಾರ್ಗವನ್ನು ಹುಡುಕತೊಡಗಿದರು.
[3] ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು.
[4] ಯೂದನು ಮಹಾಯಾಜಕರ ಮತ್ತು ದೇವಾಲಯವನ್ನು ಕಾಯುತ್ತಿದ್ದ ಕೆಲವು ಸೈನಿಕರ ಬಳಿಗೆ ಹೋಗಿ, ಯೇಸುವನ್ನು ಹಿಡಿದುಕೊಡುವುದರ ಬಗ್ಗೆ ಅವರೊಂದಿಗೆ ಮಾತಾಡಿದನು.
[5] ಯಾಜಕರಿಗೆ ಬಹಳ ಸಂತೋಷವಾಯಿತು. ಯೇಸುವನ್ನು ತಮಗೆ ಹಿಡಿದುಕೊಟ್ಟರೆ ಹಣ ಕೊಡುವುದಾಗಿ ಅವರು ಯೂದನಿಗೆ ಮಾತುಕೊಟ್ಟರು.
[6] ಯೂದನು ಅದಕ್ಕೆ ಒಪ್ಪಿದನು. ಬಳಿಕ ಯೇಸುವನ್ನು ಅವರಿಗೆ ಹಿಡಿದುಕೊಡಲು ಉತ್ತಮವಾದ ಸಮಯಕ್ಕಾಗಿ ಕಾಯತೊಡಗಿದನು. ತನ್ನ ಈ ಕಾರ್ಯವನ್ನು ಯಾರಿಗೂ ತಿಳಿಯದಂಥ ಸಮಯದಲ್ಲಿ ಮಾಡಬೇಕೆಂಬುದು ಅವನ ಬಯಕೆಯಾಗಿತ್ತು.
[7] ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನ ಬಂತು. ಯೆಹೂದ್ಯರು ಪಸ್ಕದ ಕುರಿಮರಿಗಳನ್ನು ಕೊಯ್ಯುವ ದಿನ ಅದಾಗಿತ್ತು.
[8] ಯೇಸುವು ಪೇತ್ರ ಮತ್ತು ಯೋಹಾನರಿಗೆ, “ಹೋಗಿ, ಪಸ್ಕದ ಊಟವನ್ನು ನಮಗಾಗಿ ಸಿದ್ಧಮಾಡಿರಿ” ಎಂದು ಹೇಳಿದನು.
[9] ಪೇತ್ರ ಮತ್ತು ಯೋಹಾನರು, “ಊಟವನ್ನು ಎಲ್ಲಿ ಸಿದ್ಧಮಾಡಬೇಕು?” ಎಂದು ಯೇಸುವಿಗೆ ಕೇಳಿದರು.
[10] ಯೇಸು ಅವರಿಗೆ, “ಕೇಳಿರಿ! ನೀವು ಪಟ್ಟಣದೊಳಗೆ (ಜೆರುಸಲೇಮಿಗೆ) ಹೋದನಂತರ, ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನನ್ನು ನೋಡುವಿರಿ. ಅವನನ್ನೇ ಹಿಂಬಾಲಿಸಿರಿ. ಅವನು ಒಂದು ಮನೆಯೊಳಗೆ ಹೋಗುವನು. ನೀವು ಅವನೊಂದಿಗೆ ಹೋಗಿರಿ.
[11] ಆ ಮನೆಯ ಯಜಮಾನನಿಗೆ, ‘ಗುರುವು ತನ್ನ ಶಿಷ್ಯರೊಂದಿಗೆ ಯಾವ ಕೋಣೆಯಲ್ಲಿ ಪಸ್ಕದ ಊಟವನ್ನು ಮಾಡಬೇಕೆಂಬುದನ್ನು ದಯಮಾಡಿ ತೋರಿಸು’ ಎಂದು ಹೇಳಿರಿ.
[12] ಆಗ ಮನೆಯ ಯಜಮಾನನು ಮೇಲಂತಸ್ತಿನಲ್ಲಿ ಒಂದು ದೊಡ್ಡ ಕೋಣೆಯನ್ನು ತೋರಿಸುವನು. ಈ ಕೋಣೆಯು ನಿಮಗಾಗಿ ಸಿದ್ಧವಾಗಿರುವುದು. ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿರಿ” ಅಂದನು.
[13] ಆದ್ದರಿಂದ ಪೇತ್ರ ಮತ್ತು ಯೋಹಾನ ಹೊರಟರು. ಯೇಸು ಹೇಳಿದ ಹಾಗೆ ಪ್ರತಿಯೊಂದೂ ನಡೆಯಿತು. ಅವರು ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿದರು.
[14] ಪಸ್ಕದ ಊಟಮಾಡುವ ಸಮಯ ಬಂತು. ಯೇಸು ಮತ್ತು ಅಪೊಸ್ತಲರು ಮೇಜಿನ ಸುತ್ತಲೂ ಊಟಕ್ಕೆ ಕುಳಿತುಕೊಂಡರು.
[15] ಯೇಸು ಅವರಿಗೆ, “ನಾನು ಸಾಯುವ ಮೊದಲು ಈ ಪಸ್ಕದ ಊಟ ಮಾಡಲು ಬಹಳವಾಗಿ ಅಪೇಕ್ಷಿಸಿದ್ದೇನೆ.
[16] ಇದರ ನಿಜವಾದ ಅರ್ಥವು ದೇವರ ರಾಜ್ಯದಲ್ಲಿ ನೆರವೇರುವ ತನಕ, ನಾನೆಂದಿಗೂ ಇನ್ನೊಂದು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಅಂದನು.
[17] ಬಳಿಕ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಆತನು, “ಈ ಪಾತ್ರೆಯಲ್ಲಿರುವ ದ್ರಾಕ್ಷಾರಸವನ್ನು ನೀವೆಲ್ಲರೂ ಹಂಚಿಕೊಳ್ಳಿರಿ.
[18] ದೇವರ ರಾಜ್ಯ ಬರುವ ತನಕ, ನಾನೆಂದಿಗೂ ತಿರುಗಿ ದ್ರಾಕ್ಷಾರಸ ಕುಡಿಯುವುದಿಲ್ಲ” ಅಂದನು.
[19] ಆಮೇಲೆ ಯೇಸು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ರೊಟ್ಟಿಗಾಗಿ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ಅಪೊಸ್ತಲರಿಗೆ ಕೊಟ್ಟನು. ಬಳಿಕ ಯೇಸು, “ನಾನು ನಿಮಗೋಸ್ಕರ ಕೊಡುತ್ತಿರುವ ನನ್ನ ದೇಹವಿದು. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಅಂದನು.
[20] ಅದೇ ರೀತಿಯಾಗಿ, ಊಟವಾದ ನಂತರ, ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಇದು ಸೂಚಿಸುತ್ತದೆ. ನಾನು ನಿಮಗಾಗಿ ಕೊಡುತ್ತಿರುವ ರಕ್ತದಿಂದ ಈ ಹೊಸ ಒಡಂಬಡಿಕೆ ಪ್ರಾರಂಭವಾಗುತ್ತದೆ” ಅಂದನು.
[21] ಯೇಸು, “ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ.
[22] ಮನುಷ್ಯಕುಮಾರನು ದೇವರ ಯೋಜನೆಗನುಸಾರವಾಗಿ ಮರಣಹೊಂದುವನು. ಆದರೆ ಮನುಷ್ಯಕುಮಾರನನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಡುವ ವ್ಯಕ್ತಿಗೆ ಬಹಳ ಕೇಡಾಗುವುದು” ಎಂದು ಹೇಳಿದನು.
[23] ಆಗ ಅಪೊಸ್ತಲರು, “ನಮ್ಮಲ್ಲಿ ಯಾವನು ಇಂಥ ದುಷ್ಕೃತ್ಯ ಮಾಡುವನು?” ಎಂದು ಒಬ್ಬರನ್ನೊಬ್ಬರು ಕೇಳಿಕೊಂಡರು.
[24] ಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು.
[25] ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ.
[26] ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು.
[27] ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ!
[28] “ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು.
[29] ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ.
[30] ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
[31] “ಒಬ್ಬ ರೈತನು ತನ್ನ ಗೋಧಿಯನ್ನು ತೂರುವಂತೆ ಸೈತಾನನು ನಿಮ್ಮನ್ನು ಶೋಧಿಸಲು ಕೇಳಿಕೊಂಡನು. ಸೀಮೋನನೇ, ಸೀಮೋನನೇ (ಪೇತ್ರ)
[32] ನಿನ್ನ ನಂಬಿಕೆಯು ಕುಂದಿಹೋಗಬಾರದೆಂದು ನಾನು ಪ್ರಾರ್ಥಿಸಿದೆನು! ನೀನು ಪರಿವರ್ತನೆಗೊಂಡ ನಂತರ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು.
[33] ಅದಕ್ಕೆ ಪೇತ್ರನು ಯೇಸುವಿಗೆ, “ಪ್ರಭುವೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು.
[34] ಅದಕ್ಕೆ ಯೇಸು, “ಪೇತ್ರನೇ, ನಾಳೆ ಬೆಳಿಗ್ಗೆ ಕೋಳಿ ಕೂಗುವ ಮೊದಲು ನನ್ನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವೆ!” ಅಂದನು.
[35] ಬಳಿಕ ಯೇಸು ಅಪೊಸ್ತಲರಿಗೆ, “ಜನರಿಗೆ ಬೋಧಿಸುವುದಕ್ಕೆ ನಾನು ನಿಮ್ಮನ್ನು ಹಣವಿಲ್ಲದೆ, ಚೀಲವಿಲ್ಲದೆ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದೆನು. ಆದರೆ ನಿಮಗೆ ಏನಾದರೂ ಕೊರತೆ ಆಯಿತೇ?” ಎಂದು ಕೇಳಿದನು. ಅಪೊಸ್ತಲರು, “ಇಲ್ಲ” ಅಂದರು.
[36] ಯೇಸು ಅವರಿಗೆ, “ಆದರೆ ಈಗ ನಿಮ್ಮಲ್ಲಿ ಹಣವಾಗಲಿ ಚೀಲವಾಗಲಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿರಿ. ನಿಮ್ಮಲ್ಲಿ ಖಡ್ಗವಿಲ್ಲದಿದ್ದರೆ, ನಿಮ್ಮ ಮೇಲಂಗಿಯನ್ನು ಮಾರಿ ಒಂದು ಖಡ್ಗವನ್ನು ಕೊಂಡುಕೊಳ್ಳಿರಿ.
[37] ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಯೆಶಾಯ 53:12 ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನನ್ನ ಬಗ್ಗೆ ಬರೆಯಲ್ಪಟ್ಟಿರುವ ಈ ಮಾತು ನೆರವೇರಬೇಕಾಗಿದೆ ಮತ್ತು ಈಗ ನೆರವೇರುತ್ತಿದೆ” ಎಂದು ಹೇಳಿದನು.
[38] ಶಿಷ್ಯರು, “ಪ್ರಭುವೇ, ಇಲ್ಲಿ ನೋಡು, ಎರಡು ಖಡ್ಗಗಳಿವೆ” ಎಂದು ಹೇಳಿದರು. ಯೇಸು “ಅಷ್ಟು ಸಾಕು” ಅಂದನು.
[39] ಯೇಸು ಪಟ್ಟಣದಿಂದ (ಜೆರುಸಲೇಮ್) ಆಲಿವ್ ಮರಗಳ ಗುಡ್ಡಕ್ಕೆ ಹೋದನು.
[40] ಆತನ ಶಿಷ್ಯರೂ ಆತನೊಡನೆ ಹೋದರು. (ಯೇಸು ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದನು.) ಯೇಸು ತನ್ನ ಶಿಷ್ಯರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
[41] ಬಳಿಕ ಯೇಸು ಅವರಿಂದ ಸುಮಾರು ನೂರೈವತ್ತು ಅಡಿ ದೂರ ಹೋದನು. ಆತನು ಮೊಣಕಾಲೂರಿ,
[42] “ತಂದೆಯೇ, ನಿನಗೆ ಇಷ್ಟವಿದ್ದರೆ, ಈ ಶ್ರಮೆಯ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಇಷ್ಟದಂತಾಗದೆ ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು.
[43] ಆಗ ಪರಲೋಕದಿಂದ ಒಬ್ಬ ದೇವದೂತನು ಕಾಣಿಸಿಕೊಂಡನು. ಯೇಸುವನ್ನು ಬಲಪಡಿಸುವುದಕ್ಕಾಗಿ ಈ ದೇವದೂತನನ್ನು ಕಳುಹಿಸಲಾಗಿತ್ತು.
[44] ಯೇಸುವಿಗೆ ತುಂಬಾ ವೇದನೆಯಿತ್ತು. ಆತನು ಪ್ರಾರ್ಥನೆಯಲ್ಲಿ ಕಷ್ಟಪಟ್ಟು ಹೋರಾಡಿದನು. ಆತನ ಮುಖದಲ್ಲಿ ಬೆವರು ರಕ್ತದೋಪಾದಿಯಲ್ಲಿ ತೊಟ್ಟಿಕ್ಕತೊಡಗಿತು.
[45] ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.)
[46] ಯೇಸು ಅವರಿಗೆ, “ನೀವು ಏಕೆ ನಿದ್ರಿಸುತ್ತಿದ್ದೀರಿ? ಎದ್ದೇಳಿರಿ! ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.
[47] ಯೇಸು ಮಾತಾಡುತ್ತಿದ್ದಾಗ, ಜನರ ಒಂದು ಗುಂಪು ಅಲ್ಲಿಗೆ ಬಂದಿತು. ಹನ್ನೆರಡು ಅಪೊಸ್ತಲರಲ್ಲಿ ಒಬ್ಬನು ಆ ಗುಂಪಿಗೆ ಮುಂದಾಳಾಗಿದ್ದನು. ಅವನೇ ಯೂದನು. ಅವನು ಯೇಸುವಿಗೆ ಮುದ್ದಿಡುವಷ್ಟು ಹತ್ತಿರ ಬಂದನು.
[48] ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುವಿಯೋ?” ಎಂದು ಕೇಳಿದನು.
[49] ಯೇಸುವಿನ ಶಿಷ್ಯರು ಸಹ ಅಲ್ಲಿ ನಿಂತಿದ್ದರು. ಅಲ್ಲಿ ನಡೆಯುತ್ತಿದ್ದುದನ್ನು ಅವರು ನೋಡುತ್ತಿದ್ದರು. ಶಿಷ್ಯರು ಯೇಸುವಿಗೆ, “ಪ್ರಭುವೇ, ನಾವು ನಮ್ಮ ಖಡ್ಗಗಳನ್ನು ಉಪಯೋಗಿಸೋಣವೇ?” ಎಂದು ಕೇಳಿದರು.
[50] ಶಿಷ್ಯರಲ್ಲಿ ಒಬ್ಬನು ತನ್ನ ಖಡ್ಗವನ್ನು ಬೀಸಿ ಮಹಾಯಾಜಕನ ಆಳಿನ ಬಲಗಿವಿಯನ್ನು ಕತ್ತರಿಸಿದನು.
[51] ಯೇಸು ಅವನಿಗೆ, “ನಿಲ್ಲಿಸು” ಎಂದು ಹೇಳಿ, ಆ ಸೇವಕನ ಕಿವಿಯನ್ನು ಮುಟ್ಟಿ ಸ್ವಸ್ಥಗೊಳಿಸಿದನು.
[52] ಯೇಸುವನ್ನು ಬಂಧಿಸಲು ಅಲ್ಲಿಗೆ ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಮತ್ತು ಯೆಹೂದ್ಯ ಸಿಪಾಯಿಗಳು ಬಂದಿದ್ದರು. ಯೇಸು ಅವರಿಗೆ, “ಖಡ್ಗಗಳನ್ನೂ ದೊಣ್ಣೆಗಳನ್ನೂ ಹಿಡಿದುಕೊಂಡು ಇಲ್ಲಿಗೆ ಬಂದದ್ದೇಕೆ? ನಾನು ಅಪರಾಧಿಯೆಂದು ನೀವು ಭಾವಿಸುತ್ತೀರೋ?
[53] ಪ್ರತಿದಿನ ನಿಮ್ಮ ಸಂಗಡ ದೇವಾಲಯದಲ್ಲಿದ್ದೆನು. ನೀವು ನನ್ನನ್ನು ಅಲ್ಲಿ ಏಕೆ ಬಂಧಿಸಲಿಲ್ಲ? ಆದರೆ ಇದು ನಿಮ್ಮ ಸಮಯ. ಇದು ಅಂಧಕಾರದ (ಪಾಪ) ದೊರೆತನ” ಎಂದು ಹೇಳಿದನು.
[54] ಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಮನೆಯೊಳಗೆ ಕರೆದುಕೊಂಡು ಬಂದರು. ಪೇತ್ರನು ಅವರನ್ನು ಹಿಂಬಾಲಿಸಿದನು. ಆದರೆ ಅವನು ಯೇಸುವಿನ ಹತ್ತಿರ ಬರಲಿಲ್ಲ.
[55] ಸೈನಿಕರು ಅಂಗಳದ ಮಧ್ಯದಲ್ಲಿ ಬೆಂಕಿಯನ್ನು ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡರು. ಪೇತ್ರನೂ ಅವರ ಜೊತೆ ಕುಳಿತುಕೊಂಡನು.
[56] ಪೇತ್ರನು ಅಲ್ಲಿ ಕುಳಿತಿರುವುದನ್ನು ಒಬ್ಬ ಸೇವಕಿ ನೋಡಿದಳು. ಬೆಂಕಿಯ ಬೆಳಕಿನಿಂದ ಆಕೆಯು ಪೇತ್ರನನ್ನು ಗುರುತಿಸಿದಳು. ಅವಳು ಪೇತ್ರನ ಮುಖವನ್ನೇ ಲಕ್ಷ್ಯವಿಟ್ಟು ನೋಡಿ, “ಈ ಮನುಷ್ಯನು ಆತನ (ಯೇಸು) ಸಂಗಡ ಇದ್ದವನು” ಅಂದಳು.
[57] ಆದರೆ ಪೇತ್ರನು ಅದು ನಿಜವಲ್ಲವೆಂದು ಹೇಳಿದನು. ಅವನು ಅಕೆಗೆ, “ಅಮ್ಮಾ, ಆತನು ನನಗೆ ಗೊತ್ತೇ ಇಲ್ಲ” ಅಂದನು.
[58] ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು. ಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು.
[59] ಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು.
[60] ಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು. ಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು.
[61] ಆಗ ಪ್ರಭುವು (ಯೇಸು) ಹಿಂತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು. “ಮುಂಜಾನೆ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನನ್ನು ಅರಿಯೆನೆಂಬುದಾಗಿ ಮೂರು ಸಲ ಹೇಳುವೆ” ಎಂದು ಪ್ರಭುವು ಹೇಳಿದ ಮಾತನ್ನು ಪೇತ್ರನು ಆಗ ಜ್ಞಾಪಿಸಿಕೊಂಡನು.
[62] ಬಳಿಕ ಪೇತ್ರನು ಹೊರಗೆ ಹೋಗಿ ಬಹು ದುಃಖದಿಂದ ಅತ್ತನು.
[63] ಕೆಲವು ಜನರು ಯೇಸುವನ್ನು ಹಿಡಿದುಕೊಂಡಿದ್ದರು. ಅವರು ಯೇಸುವಿನ ಮುಖಕ್ಕೆ ಮುಸುಕು ಹಾಕಿ, ಆತನನ್ನು ಹೊಡೆದು, “ನಿನ್ನನ್ನು ಹೊಡೆದವರ್ಯಾರು? ನಮಗೆ ಪ್ರವಾದನೆ ಹೇಳು” ಎಂದು ಗೇಲಿಮಾಡಿದರು.
[65] ಅವರು ಹಲವಾರು ವಿಧದಲ್ಲಿ ಆತನನ್ನು ದೂಷಿಸಿ ನಿಂದಿಸಿದರು.
[66] ಮರುದಿನ ಮುಂಜಾನೆ ಹಿರಿಯ ಜನನಾಯಕರು, ಮಹಾಯಾಜಕರು ಮತ್ತು ಧರ್ಮೋಪದೇಶಕರು ಒಟ್ಟಾಗಿ ಸೇರಿಬಂದರು. ಅವರು ಯೇಸುವನ್ನು ನ್ಯಾಯಾಲಯಕ್ಕೆ ಕರೆದೊಯ್ದು,
[67] “ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಎಂದು ಹೇಳಿದರು. ಯೇಸು ಅವರಿಗೆ, “ನಾನು ಕ್ರಿಸ್ತನೆಂದು ಹೇಳಿದರೂ ನೀವು ನನ್ನನ್ನು ನಂಬುವುದಿಲ್ಲ.
[68] ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರಕೊಡುವುದಿಲ್ಲ.
[69] ಆದರೆ ಇಂದಿನಿಂದ ಮನುಷ್ಯಕುಮಾರನು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿರುವನು” ಎಂದು ಹೇಳಿದನು.
[70] ಅವರೆಲ್ಲರೂ, “ಹಾಗಾದರೆ ನೀನು ದೇವರ ಕುಮಾರನೋ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ” ಎಂದನು.
[71] ಆಗ ಅವರು, “ಇನ್ನೇನು ಸಾಕ್ಷಿಬೇಕು? ಆತನು ಹೀಗೆ ಹೇಳುವುದನ್ನು ನಾವೇ ಕೇಳಿದೆವಲ್ಲಾ!” ಅಂದರು.