Skip to content
Opens in a new window
Listen to this chapter • 10:03

[1] ಆ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಸರನು ರೋಮನ್ನರ ಆಳ್ವಿಕೆಗೆ ಒಳಪಟ್ಟಿದ್ದ ಎಲ್ಲಾ ದೇಶಗಳಲ್ಲಿ ಜನಗಣತಿ ಆಗಬೇಕೆಂದು ಆಜ್ಞಾಪಿಸಿದನು.

[2] ಇದು ಮೊಟ್ಟಮೊದಲನೆಯ ಜನಗಣತಿಯಾಗಿತ್ತು. ಕುರೇನ್ಯನು ಸಿರಿಯ ದೇಶದ ರಾಜ್ಯಪಾಲನಾಗಿದ್ದಾಗ ಇದು ಸಂಭವಿಸಿತು.

[3] ಜನರೆಲ್ಲರೂ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಮ್ಮತಮ್ಮ ಊರುಗಳಿಗೆ ಪ್ರಯಾಣ ಮಾಡಿದರು.

[4] ಆದ್ದರಿಂದ ಯೋಸೇಫನು ಗಲಿಲಾಯದಲ್ಲಿನ ನಜರೇತ್ ಎಂಬ ಊರಿನಿಂದ ಹೊರಟು ಜುದೇಯದಲ್ಲಿನ ಬೆತ್ಲೆಹೇಮ್ ಎಂಬ ಊರಿಗೆ ಹೋದನು. ಯೋಸೇಫನು ದಾವೀದನ ಮನೆತನದವನಾಗಿದ್ದುದರಿಂದ ದಾವೀದನ ಊರಾದ ಬೆತ್ಲೆಹೇಮಿಗೆ ಹೋದನು.

[5] ಅವನು ತನ್ನೊಂದಿಗೆ ಮರಿಯಳನ್ನೂ ಕರೆದುಕೊಂಡು ಹೋದನು. ಆಕೆಗೆ ಅವನೊಂದಿಗೆ ನಿಶ್ಚಿತಾರ್ಥವಾಗಿತ್ತು. (ಮರಿಯಳು ಆಗ ಗರ್ಭಿಣಿಯಾಗಿದ್ದಳು.)

[6] ಅವರು ಬೆತ್ಲೆಹೇಮಿನಲ್ಲಿದ್ದಾಗ ಮರಿಯಳಿಗೆ ಹೆರಿಗೆಕಾಲ ಬಂತು.

[7] ಆಕೆ ತನ್ನ ಚೊಚ್ಚಲಮಗುವನ್ನು (ಯೇಸು) ಹೆತ್ತಳು. ಅವರಿಗೆ ಇಳಿದುಕೊಳ್ಳಲು ಛತ್ರದಲ್ಲಿ ಸ್ಥಳ ದೊರೆಯಲಿಲ್ಲ. ಆದ್ದರಿಂದ ಮರಿಯಳು ಮಗುವನ್ನು ಬಟ್ಟೆಯಿಂದ ಸುತ್ತಿ ದನದ ಕೊಟ್ಟಿಗೆಯಲ್ಲಿ ಮೇವು ಹಾಕುತ್ತಿದ್ದ ತೊಟ್ಟಿಯಲ್ಲಿ ಮಲಗಿಸಿದಳು.

[8] ಆ ರಾತ್ರಿ, ಕೆಲವು ಕುರುಬರು ಹೊಲಗಳ ಸಮೀಪದಲ್ಲಿ ತಮ್ಮ ಕುರಿಗಳನ್ನು ಕಾಯುತ್ತಿದ್ದರು.

[9] ಪ್ರಭುವಿನ ದೂತನೊಬ್ಬನು ಕುರುಬರ ಮುಂದೆ ನಿಂತನು. ಅವರ ಸುತ್ತಲೂ ಪ್ರಭುವಿನ ಪ್ರಭೆಯು ಪ್ರಕಾಶಿಸಿತು. ಕುರುಬರು ಬಹಳವಾಗಿ ಹೆದರಿದರು.

[10] ದೇವದೂತನು ಅವರಿಗೆ, “ಹೆದರಬೇಡಿರಿ, ಜನರೆಲ್ಲರಿಗೆ ಮಹಾಸಂತೋಷವನ್ನು ಉಂಟುಮಾಡುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ:

[11] ಈ ದಿನ ನಿಮಗೋಸ್ಕರ ದಾವೀದನ ಊರಿನಲ್ಲಿ ರಕ್ಷಕನು ಜನಿಸಿದ್ದಾನೆ. ಆತನೇ ಪ್ರಭುವಾದ ಕ್ರಿಸ್ತನು.

[12] ಬಟ್ಟೆಯಲ್ಲಿ ಸುತ್ತಿರುವ ಒಂದು ಮಗು ದನದ ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ನೀವು ಆತನನ್ನು ಗೊತ್ತುಪಡಿಸಿಕೊಳ್ಳಲು ಅದೇ ಗುರುತಾಗಿದೆ” ಎಂದು ಹೇಳಿದನು.

[13] ತಕ್ಷಣವೇ ಪರಲೋಕದಿಂದ ದೇವದೂತರು ಬಹು ದೊಡ್ಡ ಗುಂಪಾಗಿ ಬಂದು ಮೊದಲನೆಯ ದೇವದೂತನೊಡನೆ ಸೇರಿಕೊಂಡರು. ಅವರೆಲ್ಲರೂ,

[14] “ಮೇಲಿನಲೋಕಗಳಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದವರಿಗೆ ಸಮಾಧಾನ” ಎಂದು ಹೇಳುತ್ತಾ ದೇವರನ್ನು ಸ್ತುತಿಸಿದರು.

[15] ದೇವದೂತರು ಕುರುಬರ ಬಳಿಯಿಂದ ಪರಲೋಕಕ್ಕೆ ಹಿಂತಿರುಗಿದ ಮೇಲೆ ಕುರುಬರು, “ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ, ಪ್ರಭುವು ನಮಗೆ ತಿಳಿಸಿದ ಈ ಘಟನೆಯನ್ನು ನೋಡೋಣ” ಎಂದು ಮಾತಾಡಿಕೊಂಡರು.

[16] ಆದ್ದರಿಂದ ಕುರುಬರು ಬೇಗನೆ ಹೋಗಿ ಮರಿಯಳನ್ನೂ ಯೋಸೇಫನನ್ನೂ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಮಗುವನ್ನೂ ಕಂಡುಕೊಂಡರು.

[17] ಕುರುಬರು ಮಗುವನ್ನು ನೋಡಿದಾಗ ಅದರ ವಿಷಯವಾಗಿ ತಮಗೆ ದೇವದೂತರು ತಿಳಿಸಿದ್ದನ್ನು ಅವರಿಗೆ ತಿಳಿಯಪಡಿಸಿದರು.

[18] ಕುರುಬರು ತಿಳಿಸಿದ್ದನ್ನು ಕೇಳಿದ ಅವರೆಲ್ಲರೂ ಆಶ್ಚರ್ಯಪಟ್ಟರು.

[19] ಮರಿಯಳು ಈ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅವುಗಳ ಬಗ್ಗೆ ಯೋಚಿಸತೊಡಗಿದಳು.

[20] ಕುರುಬರು ತಾವು ಕಂಡು ಕೇಳಿದ ಪ್ರತಿಯೊಂದು ಸಂಗತಿಗಾಗಿ ದೇವರನ್ನು ಕೊಂಡಾಡುತ್ತಾ ಆತನನ್ನು ಸ್ತುತಿಸುತ್ತಾ ತಮ್ಮ ಕುರಿಗಳಿದ್ದಲ್ಲಿಗೆ ಮರಳಿಹೋದರು. ದೇವದೂತರು ಅವರಿಗೆ ತಿಳಿಸಿದಂತೆಯೇ ಪ್ರತಿಯೊಂದು ಸಂಗತಿಯೂ ನಡೆದಿತ್ತು.

[21] ಮಗುವಿಗೆ ಎಂಟು ದಿನವಾದಾಗ ಸುನ್ನತಿ ಆಯಿತು ಮತ್ತು ಆತನಿಗೆ “ಯೇಸು” ಎಂದು ಹೆಸರಿಡಲಾಯಿತು. ಮರಿಯಳ ಗರ್ಭದಲ್ಲಿ ಮಗುವು ಬೆಳೆಯುವುದಕ್ಕೆ ಪ್ರಾರಂಭಿಸುವ ಮೊದಲೇ ದೇವದೂತನು ಈ ಹೆಸರನ್ನೇ ಕೊಡಬೇಕೆಂದು ಸೂಚಿಸಿದ್ದನು.

[22] ಶುದ್ಧೀಕರಣದ ಬಗ್ಗೆ ಮೋಶೆಯ ಧರ್ಮಶಾಸ್ತ್ರವು ಬೋಧಿಸಿದ್ದ ಕಾರ್ಯಗಳನ್ನು ಮರಿಯಳು ಮತ್ತು ಯೋಸೇಫನು ಮಾಡುವ ಸಮಯ ಬಂತು. ಯೇಸುವನ್ನು ಪ್ರಭುವಿಗೆ (ದೇವರಿಗೆ) ಪ್ರತಿಷ್ಠಿಸಲು ಯೋಸೇಫನು ಮತ್ತು ಮರಿಯಳು ಆತನನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು.

[23] ಏಕೆಂದರೆ “ಪ್ರತಿ ಕುಟುಂಬದಲ್ಲಿ, ‘ಚೊಚ್ಚಲು ಗಂಡುಮಗುವನ್ನು ಪ್ರಭುವಿಗೆ ಪ್ರತಿಷ್ಠಿಸಬೇಕು’” ಎಂದು ಪ್ರಭುವಿನ ಧರ್ಮಶಾಸ್ತ್ರದಲ್ಲಿ ಬರೆದಿದೆ.

[24] “ಎರಡು ಪಾರಿವಾಳಗಳನ್ನು ಅಥವಾ ಎರಡು ಬೆಳವಕ್ಕಿಗಳನ್ನು ಯಜ್ಞವಾಗಿ ಸಮರ್ಪಿಸಬೇಕು” ಎಂದು ಸಹ ಪ್ರಭುವಿನ ಧರ್ಮಶಾಸ್ತ್ರವು ಹೇಳುತ್ತದೆ. ಆದ್ದರಿಂದ ಯೋಸೇಫನು ಮತ್ತು ಮರಿಯಳು ಜೆರುಸಲೇಮಿಗೆ ಹೋದರು.

[25] ಸಿಮೆಯೋನನೆಂಬ ಒಬ್ಬ ಮನುಷ್ಯನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಒಳ್ಳೆಯವನಾಗಿದ್ದನು ಮತ್ತು ಬಹಳ ಧಾರ್ಮಿಕನಾಗಿದ್ದನು. ದೇವರು ಇಸ್ರೇಲರಿಗೆ ಸಹಾಯ ಮಾಡುವ ಕಾಲವನ್ನೇ ಸಿಮೆಯೋನನು ಎದುರು ನೋಡುತ್ತಿದ್ದನು. ಅವನು ಪವಿತ್ರಾತ್ಮಭರಿತನಾಗಿದ್ದನು.

[26] ಪ್ರಭುವು ಕಳುಹಿಸುವ ಕ್ರಿಸ್ತನನ್ನು ನೋಡುವ ತನಕ ನೀನು ಸಾಯುವುದಿಲ್ಲ ಎಂದು ಪವಿತ್ರಾತ್ಮನು ಸಿಮೆಯೋನನಿಗೆ ತಿಳಿಸಿದ್ದನು.

[27] ಸಿಮೆಯೋನನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಯೆಹೂದ್ಯರ ಧರ್ಮಶಾಸ್ತ್ರದ ವಿಧಿಗಳನ್ನು ಪೂರೈಸಲು ಮರಿಯಳು ಮತ್ತು ಯೋಸೇಫನು ದೇವಾಲಯಕ್ಕೆ ಹೋದರು. ಅವರು ಮಗು ಯೇಸುವನ್ನು ದೇವಾಲಯಕ್ಕೆ ತಂದರು.

[28] ಸಿಮೆಯೋನನು ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರಿಗೆ ಹೀಗೆಂದು ಸ್ತೋತ್ರ ಸಲ್ಲಿಸಿದನು:

[29] “ಪ್ರಭುವೇ, ನಿನ್ನ ವಾಗ್ದಾನದಂತೆ ಸಮಾಧಾನದಿಂದ ಸಾಯಲು ನಿನ್ನ ದಾಸನಿಗೆ ಅಪ್ಪಣೆಯಾಗಲಿ.

[30] ನೀನು ದಯಪಾಲಿಸಿದ ರಕ್ಷಕನನ್ನು ಕಣ್ಣಾರೆಕಂಡೆನು.

[31] ನೀನು ಆತನನ್ನು ಜನರೆಲ್ಲರಿಗೆ ಪ್ರತ್ಯಕ್ಷ ಮಾಡಿರುವೆ.

[32] ಆತನು ಯೆಹೂದ್ಯರಲ್ಲದ ಜನರಿಗೆ ನಿನ್ನ ಮಾರ್ಗವನ್ನು ತೋರಿಸುವ ಬೆಳಕಾಗಿದ್ದಾನೆ. ಆತನಿಂದ ನಿನ್ನ ಜನರಾದ ಇಸ್ರೇಲರಿಗೆ ಕೀರ್ತಿಯಾಗುವುದು.”

[33] ಸಿಮೆಯೋನನು ಮಗುವಿನ ಕುರಿತಾಗಿ ಹೇಳಿದ ಮಾತುಗಳನ್ನು ಕೇಳಿ ತಂದೆತಾಯಿಗಳಿಗೆ ಆಶ್ಚರ್ಯವಾಯಿತು.

[34] ಬಳಿಕ ಸಿಮೆಯೋನನು ಅವರನ್ನು ಆಶೀರ್ವದಿಸಿ ಮರಿಯಳಿಗೆ, “ಈ ಮಗುವಿನ ನಿಮಿತ್ತ ಯೆಹೂದ್ಯರಲ್ಲಿ ಅನೇಕರು ಬೀಳುವರು. ಅನೇಕರು ಏಳುವರು. ಕೆಲವರು ಅಂಗೀಕರಿಸರು ಎಂಬುದಕ್ಕೆ ಈತನು ದೇವರಿಂದ ಬಂದ ಗುರುತಾಗಿರುವನು.

[35] ಜನರು ಗುಟ್ಟಾಗಿ ಯೋಚಿಸುವ ಸಂಗತಿಗಳು ಬಯಲಾಗುವವು. ಮುಂದೆ ಸಂಭವಿಸುವ ಸಂಗತಿಗಳಿಂದ ನಿನ್ನ ಹೃದಯಕ್ಕೆ ಅಲಗು ನಾಟಿದಂತಾಗುವುದು” ಎಂದು ಹೇಳಿದನು.

[36] ದೇವಾಲಯದಲ್ಲಿ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆಯು ಅಸೇರನ ವಂಶದ ಫನುವೇಲನ ಕುಟುಂಬದವಳಾಗಿದ್ದಳು. ಅನ್ನಳು ಬಹಳ ಮುಪ್ಪಿನವಳಾಗಿದ್ದಳು. ಆಕೆಯು ಮದುವೆಯಾದ ಏಳು ವರ್ಷಕ್ಕೆ ಗಂಡನನ್ನು ಕಳೆದುಕೊಂಡಳು.

[37] ತನ್ನ ಉಳಿದ ಜೀವಮಾನವೆಲ್ಲಾ ವಿಧವೆಯಾಗಿದ್ದ ಆಕೆಗೆ ಈಗ ಎಂಭತ್ತನಾಲ್ಕು ವರ್ಷ ವಯಸ್ಸಾಗಿತ್ತು. ಅನ್ನಳು ಯಾವಾಗಲೂ ದೇವಾಲಯದಲ್ಲಿಯೇ ಇದ್ದಳು. ಆಕೆ ಬೇರೆಲ್ಲಿಗೂ ಹೋಗುತ್ತಿರಲಿಲ್ಲ. ಆಕೆ ಉಪವಾಸ ಮಾಡುತ್ತಾ ಮತ್ತು ಹಗಲಿರುಳು ಪ್ರಾರ್ಥಿಸುತ್ತಾ ದೇವರನ್ನು ಆರಾಧಿಸುತ್ತಿದ್ದಳು.

[38] ಅವಳು ಅದೇ ಸಮಯದಲ್ಲಿ ಅಲ್ಲಿಗೆ ಬಂದು, ದೇವರಿಗೆ ಸ್ತೋತ್ರ ಸಲ್ಲಿಸಿ ದೇವರು ಜೆರುಸಲೇಮಿಗೆ ದಯಪಾಲಿಸುವ ಬಿಡುಗಡೆಯನ್ನು ಎದುರುನೋಡುತ್ತಿದ್ದ ಜನರಿಗೆ ಯೇಸುವಿನ ವಿಷಯವಾಗಿ ತಿಳಿಸಿದಳು.

[39] ಪ್ರಭುವಿನ ಧರ್ಮಶಾಸ್ತ್ರದ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಯೋಸೇಫ ಮತ್ತು ಮರಿಯಳು ಗಲಿಲಾಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಂತ ಊರಾದ ನಜರೇತಿಗೆ ಹಿಂತಿರುಗಿದರು.

[40] ಬಾಲಕ ಯೇಸು ಬೆಳೆದು ಬಲಗೊಂಡು ಸಂಪೂರ್ಣ ಜ್ಞಾನಿಯಾದನು. ದೇವರ ಆಶೀರ್ವಾದವು ಆತನೊಡನೆ ಇತ್ತು.

[41] ಪ್ರತಿವರ್ಷ ಯೇಸುವಿನ ತಂದೆತಾಯಿಗಳು ಪಸ್ಕಹಬ್ಬಕ್ಕಾಗಿ ಜೆರುಸಲೇಮಿಗೆ ಹೋಗುತ್ತಿದ್ದರು.

[42] ಯೇಸುವಿಗೆ ಹನ್ನೆರಡು ವರ್ಷವಾಗಿದ್ದಾಗ ಎಂದಿನಂತೆ ಅವರು ಪಸ್ಕ ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದರು.

[43] ಹಬ್ಬದ ದಿನಗಳು ಮುಗಿದ ನಂತರ ಅವರು ಮನೆಗೆ ಹೋದರು. ಆದರೆ ಬಾಲಕನಾದ ಯೇಸು ಜೆರುಸಲೇಮಿನಲ್ಲಿ ಉಳಿದುಕೊಂಡನು. ಆತನ ತಂದೆತಾಯಿಗಳಿಗೆ ಇದು ತಿಳಿದಿರಲಿಲ್ಲ. ಯೇಸುವು ಯಾತ್ರಿಕರ ಗುಂಪಿನಲ್ಲಿರಬಹುದೆಂದು ಭಾವಿಸಿಕೊಂಡ

[44] ಯೋಸೇಫನು ಮತ್ತು ಮರಿಯಳು ಒಂದು ದಿನವೆಲ್ಲ ಪ್ರಯಾಣ ಮಾಡಿದರು. ನಂತರ ಮಗನನ್ನು ಕಾಣದೆ ತಮ್ಮ ಕುಟುಂಬದವರ ಮತ್ತು ಆಪ್ತಸ್ನೇಹಿತರ ಮಧ್ಯದಲ್ಲಿ ಆತನಿಗಾಗಿ ಹುಡುಕತೊಡಗಿದರು.

[45] ಆದರೆ ಅಲ್ಲೆಲ್ಲೂ ಕಾಣದೆ ಯೇಸುವನ್ನು ಹುಡುಕಲು ಜೆರುಸಲೇಮಿಗೆ ಮರಳಿಹೋದರು.

[46] ಮೂರು ದಿನಗಳಾದ ಮೇಲೆ ಆತನನ್ನು ಕಂಡುಕೊಂಡರು. ಯೇಸುವು ದೇವಾಲಯದಲ್ಲಿ ಧಾರ್ಮಿಕ ಉಪದೇಶಕರೊಡನೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಮತ್ತು ಅವರಿಗೆ ಪ್ರಶೆಗಳನ್ನು ಕೇಳುತ್ತಾ ಇದ್ದನು.

[47] ಆತನ ಮಾತುಗಳನ್ನು ಕೇಳಿ ಆತನ ತಿಳುವಳಿಕೆಗೂ ಆತನ ಬುದ್ಧಿವಂತಿಕೆಯ ಉತ್ತರಗಳಿಗೂ ಅವರೆಲ್ಲರೂ ಆಶ್ಚರ್ಯಪಟ್ಟರು.

[48] ಯೇಸುವಿನ ತಂದೆತಾಯಿಗಳು ಆತನನ್ನು ಅಲ್ಲಿ ಕಂಡು ಆಶ್ಚರ್ಯಪಟ್ಟರು. ಮರಿಯಳು ಆತನಿಗೆ, “ಮಗನೇ, ನೀನು ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆ ಮತ್ತು ನಾನು ನಿನಗಾಗಿ ಬಹಳ ಚಿಂತಿಸುತ್ತಿದ್ದೆವು. ನಿನಗೋಸ್ಕರ ನಾವು ಹುಡುಕುತ್ತಿದ್ದೆವು” ಎಂದು ಹೇಳಿದಳು.

[49] ಯೇಸು ಅವರಿಗೆ, “ನೀವು ನನಗೋಸ್ಕರ ಏಕೆ ಹುಡುಕಬೇಕಿತ್ತು? ನನ್ನ ತಂದೆಯ (ದೇವರ) ಕೆಲಸ ಎಲ್ಲಿರುತ್ತದೋ ಅಲ್ಲಿ ನಾನು ಇರಬೇಕು ಎಂಬುದನ್ನು ನೀವು ತಿಳಿದಿರಬೇಕಾಗಿತ್ತು!” ಎಂದು ಹೇಳಿದನು.

[50] ಆದರೆ ಆತನ ಮಾತು ಅವರಿಗೆ ಅರ್ಥವಾಗಲಿಲ್ಲ.

[51] ಯೇಸು ಅವರೊಡನೆ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿ ಈ ವಿಷಯಗಳನ್ನೆಲ್ಲಾ ಇನ್ನೂ ಆಲೋಚಿಸುತ್ತಿದ್ದಳು.

[52] ಯೇಸುವು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ದೇವರಿಗೂ ಜನರಿಗೂ ಅಚ್ಚುಮೆಚ್ಚಾದನು.

ಲೂಕನ ಸುವಾರ್ತೆ — Chapters