Skip to content
Opens in a new window
Listen to this chapter • 7:41

[1] ಯೇಸು ತನ್ನ ಶಿಷ್ಯರಿಗೆ, “ಜನರನ್ನು ಪಾಪಕ್ಕೆ ನಡೆಸುವಂಥ ಸಂಗತಿಗಳು ಖಂಡಿತವಾಗಿ ಬರುತ್ತವೆ. ಆದರೆ ಅವುಗಳನ್ನು ಬರಮಾಡುವವನ ಗತಿಯನ್ನು ಏನು ಹೇಳಲಿ!

[2] ಬಲಹೀನರಾದ ಇವರನ್ನು ಪಾಪಕ್ಕೆ ನಡೆಸುವವನು ತನ್ನ ಕುತ್ತಿಗೆಗೆ ಒಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ನೀರಿನಲ್ಲಿ ಮುಳುಗುವುದೇ ಉತ್ತಮ.

[3] ಆದ್ದರಿಂದ ಎಚ್ಚರಿಕೆಯಾಗಿರಿ! “ನಿನ್ನ ಸಹೋದರನು ಪಾಪಮಾಡಿದರೆ, ಅವನನ್ನು ಖಂಡಿಸು. ಒಂದುವೇಳೆ ಅವನೇನಾದರೂ ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರೆ ಅವನನ್ನು ಕ್ಷಮಿಸು.

[4] ನಿನ್ನ ಸಹೋದರನು ನಿನಗೆ ಒಂದು ದಿನದಲ್ಲಿ ಏಳು ಸಲ ತಪ್ಪುಮಾಡಿ, ಪ್ರತಿಸಲವೂ, ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ, ನೀನು ಅವನನ್ನು ಕ್ಷಮಿಸಬೇಕು” ಎಂದು ಹೇಳಿದನು.

[5] ಅಪೊಸ್ತಲರು ಪ್ರಭುವಿಗೆ (ಯೇಸು), “ನಮ್ಮ ನಂಬಿಕೆಯನ್ನು ಹೆಚ್ಚಿಸು!” ಎಂದು ಕೇಳಿಕೊಂಡರು.

[6] ಪ್ರಭುವು ಅವರಿಗೆ ಹೀಗೆಂದನು: “ನಿಮ್ಮ ನಂಬಿಕೆ ಸಾಸಿವೆ ಕಾಳಷ್ಟು ದೊಡ್ಡದಾಗಿದ್ದರೆ, ನೀವು ಈ ಅತ್ತಿಮರಕ್ಕೆ, ‘ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿದರೂ ಅದು ನಿಮಗೆ ವಿಧೇಯವಾಗುತ್ತದೆ.

[7] “ನಿಮ್ಮಲ್ಲಿ ಒಬ್ಬನಿಗೆ ಹೊಲದಲ್ಲಿ ಕೆಲಸ ಮಾಡುವಂಥ ಒಬ್ಬ ಸೇವಕನಿದ್ದಾನೆಂದು ಭಾವಿಸಿಕೊಳ್ಳೋಣ. ಆ ಸೇವಕನು ಭೂಮಿಯನ್ನು ಉಳುತ್ತಿರುತ್ತಾನೆ ಅಥವಾ ಕುರಿಗಳನ್ನು ಮೇಯಿಸುತ್ತಿರುತ್ತಾನೆ. ಆ ಸೇವಕನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ನೀನು ಅವನಿಗೆ ಏನು ಹೇಳುವೆ? ‘ಒಳಗೆ ಬಾ! ಊಟಕ್ಕೆ ಕುಳಿತುಕೊ’ ಎಂದು ಹೇಳುವಿಯೋ?

[8] ಇಲ್ಲ! ನೀನು ಅವನಿಗೆ, ‘ನನಗೋಸ್ಕರ ಅಡಿಗೆ ಮಾಡು. ಬಳಿಕ ಶುಭ್ರವಾದ ಬಟ್ಟೆಯನ್ನು ಧರಿಸಿಕೊಂಡು ಬಂದು ನನಗೆ ಊಟಬಡಿಸು. ನಾನು ತಿಂದು ಕುಡಿದ ಮೇಲೆ ನೀನು ಊಟಮಾಡು’ ಎಂದು ಹೇಳುವೆಯಷ್ಟೇ.

[9] ಆ ಸೇವಕನು ತನ್ನ ಕೆಲಸ ಮಾಡಿದ್ದಕ್ಕಾಗಿ ನೀನೇನೂ ಅವನಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿಲ್ಲ. ಸೇವಕನಿರುವುದು ಯಜಮಾನನು ಹೇಳಿದ್ದನ್ನು ಮಾಡುವುದಕ್ಕಾಗಿಯಷ್ಟೇ.

[10] ಇದೇ ನಿಯಮ ನಿಮಗೂ ಅನ್ವಯಿಸುತ್ತದೆ. ನಿಮಗೆ ನೇಮಿಸಿದ ಕೆಲಸಗಳನ್ನು ನೀವು ಮಾಡಿ ಪೂರೈಸಿದಾಗ, ‘ನಾವು ಆಳುಗಳು, ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ’ ಎಂದು ಹೇಳಬೇಕು.”

[11] ಯೇಸುವು ಜೆರುಸಲೇಮಿಗೆ ಪ್ರಯಾಣಮಾಡುತ್ತಾ ಗಲಿಲಾಯದಿಂದ ಸಮಾರ್ಯಕ್ಕೆ ಹೋದನು.

[12] ಅಲ್ಲಿ ಆತನು ಒಂದು ಗ್ರಾಮಕ್ಕೆ ಬಂದನು. ಅಲ್ಲಿ ಹತ್ತು ಜನರು ಆತನನ್ನು ಭೇಟಿಯಾದರು. ಅವರು ಯೇಸುವಿನ ಸಮೀಪಕ್ಕೆ ಬರಲಿಲ್ಲ. ಏಕೆಂದರೆ ಅವರೆಲ್ಲರೂ ಕುಷ್ಠರೋಗಿಗಳಾಗಿದ್ದರು.

[13] ಆದರೆ ಅವರು, “ಯೇಸುವೇ! ಗುರುವೇ! ದಯಮಾಡಿ ನಮಗೆ ಸಹಾಯಮಾಡು!” ಎಂದು ಕೂಗಿಕೊಂಡರು.

[14] ಯೇಸು ಅವರನ್ನು ನೋಡಿ, “ಹೋಗಿ, ನಿಮ್ಮನ್ನು ಯಾಜಕರಿಗೆ ತೋರಿಸಿಕೊಳ್ಳಿರಿ” ಎಂದು ಹೇಳಿದನು. ಅವರು ಯಾಜಕರ ಬಳಿಗೆ ಹೋಗುತ್ತಿದ್ದಾಗ ಅವರಿಗೆ ವಾಸಿಯಾಯಿತು.

[15] ಅವರಲ್ಲಿ ಒಬ್ಬನು ತನಗೆ ಗುಣವಾದುದ್ದನ್ನು ಕಂಡು ಯೇಸುವಿನ ಬಳಿಗೆ ಹಿಂತಿರುಗಿ ಬಂದು ಗಟ್ಟಿಯಾದ ಧ್ವನಿಯಿಂದ ದೇವರನ್ನು ಕೊಂಡಾಡಿದನು.

[16] ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ವಂದನೆ ಸಲ್ಲಿಸಿದನು. (ಅವನು ಸಮಾರ್ಯದವನು, ಯೆಹೂದ್ಯನಲ್ಲ.)

[17] ಯೇಸು, “ಹತ್ತು ಜನರಿಗೆ ವಾಸಿಯಾಯಿತಲ್ಲಾ! ಇನ್ನುಳಿದ ಒಂಭತ್ತು ಮಂದಿ ಎಲ್ಲಿ?

[18] ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ಸಮಾರ್ಯದವನನ್ನು ಬಿಟ್ಟು ಬೇರೆ ಯಾರೂ ಬರಲಿಲ್ಲವೇ?” ಎಂದು ಕೇಳಿದನು.

[19] ಬಳಿಕ ಯೇಸು ಅವನಿಗೆ, “ಎದ್ದೇಳು! ಈಗ ನೀನು ಮನೆಗೆ ಹೋಗು! ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಅಂದನು.

[20] ಫರಿಸಾಯರಲ್ಲಿ ಕೆಲವರು ಯೇಸುವನ್ನು, “ದೇವರ ರಾಜ್ಯವು ಯಾವಾಗ ಬರುವುದು?” ಎಂದು ಕೇಳಿದರು. ಯೇಸು ಅವರಿಗೆ, “ದೇವರ ರಾಜ್ಯವು ಬರುತ್ತಿದೆ, ಆದರೆ ನಿಮ್ಮ ಕಣ್ಣುಗಳಿಗೆ ಕಾಣಿಸುವಂತೆ ಅದು ಬರುವುದಿಲ್ಲ.

[21] ‘ಇಗೋ, ದೇವರ ರಾಜ್ಯವು ಇಲ್ಲಿದೆ!’ ‘ಅಗೋ ಅಲ್ಲಿದೆ!’ ಎಂದು ಜನರು ಹೇಳುವಂತಿಲ್ಲ. ದೇವರ ರಾಜ್ಯವು ನಿಮ್ಮೊಳಗೇ ಇದೆ” ಎಂದು ಉತ್ತರಿಸಿದನು.

[22] ಬಳಿಕ ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನ ದಿನಗಳಲ್ಲೊಂದನ್ನು ನೀವು ನೋಡಬೇಕೆಂದು ಬಹಳವಾಗಿ ಆಶಿಸುವ ಕಾಲವು ಬರುವುದು, ಆದರೆ ನೀವು ಅದನ್ನು ನೋಡಲಾಗುವುದಿಲ್ಲ.

[23] ಜನರು ನಿಮಗೆ, ‘ಅಗೋ, ಅಲ್ಲಿದ್ದಾನೆ, ಇಗೋ, ಇಲ್ಲಿದ್ದಾನೆ!’ ಎಂದು ಹೇಳುವರು. ನೀವು ಇದ್ದಲ್ಲಿಯೇ ಇರಿ. ಅವರನ್ನು ಹಿಂಬಾಲಿಸಿ ಹೋಗಿ ಹುಡುಕಬೇಡಿ.

[24] “ಮನುಷ್ಯಕುಮಾರನು ಬಂದಾಗ ನಿಮಗೇ ಗೊತ್ತಾಗುವುದು. ಆಕಾಶದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಹೊಳೆಯುವ ಮಿಂಚಿನಂತೆ ಆತನು ಬರುವನು.

[25] ಆದರೆ ಅದಕ್ಕಿಂತಲೂ ಮೊದಲು, ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಿ ಈ ಕಾಲದ ಜನರಿಂದ ತಿರಸ್ಕರಿಸಲ್ಪಡುವನು.

[26] “ಮನುಷ್ಯಕುಮಾರನು ತಿರುಗಿ ಬರುವ ದಿವಸಗಳಲ್ಲಿ ಈ ಲೋಕದ ಸ್ಥಿತಿಯು ನೋಹನ ಕಾಲದ ಸ್ಥಿತಿಯಂತೆಯೇ ಇರುವುದು.

[27] ನೋಹನ ಕಾಲದಲ್ಲಿ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯನ್ನು ಪ್ರವೇಶಿಸಿದ ದಿನದಲ್ಲಿಯೂ ಅವರು ಹಾಗೆಯೇ ಮಾಡುತ್ತಿದ್ದರು. ಆಗ ಜಲಪ್ರಳಯ ಬಂದು ಎಲ್ಲಾ ಜನರನ್ನು ನಾಶಮಾಡಿತು.

[28] “ಲೋಟನ ಕಾಲದಲ್ಲಿ ದೇವರು ಸೊದೋಮನ್ನು ನಾಶಮಾಡಿದಾಗ ಲೋಕದ ಸ್ಥಿತಿಯು ಹೇಗಿತ್ತೋ ಅದೇರೀತಿಯಲ್ಲಿ ಮುಂದೆಯೂ ಇರುವುದು. ಆ ಜನರು ತಿನ್ನುತ್ತಾ, ಕುಡಿಯುತ್ತಾ, ಕೊಂಡುಕೊಳ್ಳುತ್ತಾ, ಮಾರಾಟ ಮಾಡುತ್ತಾ, ಬೀಜ ಬಿತ್ತುತ್ತಾ ಮತ್ತು ತಮಗಾಗಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಾ ಇದ್ದರು.

[29] ಲೋಟನು ಆ ಪಟ್ಟಣವನ್ನು ಬಿಟ್ಟು ಹೊರಟ ದಿನದಲ್ಲಿಯೂ ಜನರು ಹಾಗೆಯೇ ಮಾಡುತ್ತಿದ್ದರು. ಆಗ ಆಕಾಶದಿಂದ ಬೆಂಕಿಯ ಸುರಿಮಳೆಯಾಗಿ ಅವರೆಲ್ಲರನ್ನೂ ನಾಶಮಾಡಿತು.

[30] ಮನುಷ್ಯಕುಮಾರನು ತಿರುಗಿ ಬರುವಾಗ ಲೋಕದ ಸ್ಥಿತಿ ಅದೇ ರೀತಿಯಲ್ಲಿರುವುದು.

[31] “ಆ ದಿನದಲ್ಲಿ, ಮಾಳಿಗೆಯ ಮೇಲಿರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಹೋಗದಿರಲಿ. ಹೊಲದಲ್ಲಿರುವವನು ತನ್ನ ಮನೆಗೆ ಮರಳಿ ಹೋಗದಿರಲಿ.

[32] ಲೋಟನ ಹೆಂಡತಿಗೆ ಸಂಭವಿಸಿದ್ದು ಜ್ಞಾಪಕವಿದೆಯೇ?

[33] “ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ತನ್ನ ಪ್ರಾಣವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು.

[34] ನಾನು ತಿರುಗಿ ಬರುವಾಗ ಒಂದೇ ಕೋಣೆಯಲ್ಲಿ ಇಬ್ಬರು ಮಲಗಿದ್ದರೂ ಅವರಲ್ಲಿ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು.

[35] ಇಬ್ಬರು ಸ್ತ್ರೀಯರು ಒಟ್ಟಿಗೆ ಕೆಲಸಮಾಡುತ್ತಿದ್ದರೂ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.”

[36]

[37] ಶಿಷ್ಯರು ಯೇಸುವಿಗೆ, “ಪ್ರಭುವೇ, ಇದೆಲ್ಲಾ ಎಲ್ಲಿ ಸಂಭವಿಸುವುದು?” ಎಂದು ಕೇಳಿದರು. ಯೇಸು ಅವರಿಗೆ, “ಹದ್ದುಗಳು ಎಲ್ಲಿ ಕೂಡಿಬಂದಿರುತ್ತವೆಯೋ ಅಲ್ಲಿ ಹೆಣ ಇದ್ದೇ ಇರುತ್ತದೆಯೆಂದು ಜನರು ತಿಳಿದುಕೊಳ್ಳುತ್ತಾರೆ” ಎಂದು ಉತ್ತರಿಸಿದನು.

ಲೂಕನ ಸುವಾರ್ತೆ — Chapters