Skip to content
Opens in a new window
Listen to this chapter • 13:26

[1] ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ಒಟ್ಟಾಗಿ ಕರೆದು ಅವರಿಗೆ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿಯನ್ನೂ ದೆವ್ವಗಳ ಮೇಲೆ ಅಧಿಕಾರವನ್ನೂ ಕೊಟ್ಟನು.

[2] ದೇವರ ರಾಜ್ಯದ ಬಗ್ಗೆ ತಿಳಿಸುವುದಕ್ಕೂ ಅಸ್ವಸ್ಥರಾದವರನ್ನು ವಾಸಿಮಾಡುವುದಕ್ಕೂ ಯೇಸು ಅಪೊಸ್ತಲರನ್ನು ಕಳುಹಿಸಿದನು.

[3] ಆತನು ಅವರಿಗೆ ಹೇಳಿದ್ದೇನೆಂದರೆ: “ನೀವು ಪ್ರಯಾಣಕ್ಕಾಗಿ ಊರುಗೋಲನ್ನಾಗಲಿ ಚೀಲವನ್ನಾಗಲಿ ಆಹಾರವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ಎರಡು ಅಂಗಿಗಳನ್ನೂ ತೆಗೆದುಕೊಳ್ಳಬೇಡಿ.

[4] ನೀವು ಒಂದು ಮನೆಯಲ್ಲಿ ಇಳಿದುಕೊಂಡಾಗ, ಆ ಊರನ್ನು ಬಿಟ್ಟುಹೋಗುವ ಸಮಯದವರೆಗೂ ಅಲ್ಲೇ ತಂಗಿರಿ.

[5] ಆ ಊರಿನ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ಆ ಊರಿನ ಹೊರಗೆ ಹೋಗಿ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರಿಗೆ ಎಚ್ಚರಿಕೆಯಾಗಿರುವುದು.”

[6] ಆದ್ದರಿಂದ ಅಪೊಸ್ತಲರು ಹೊರಟು ಊರೂರುಗಳಿಗೆ ಹೋಗಿ, ಎಲ್ಲೆಲ್ಲೂ ಸುವಾರ್ತೆಯನ್ನು ಸಾರಿದರು ಮತ್ತು ರೋಗಿಗಳನ್ನು ವಾಸಿಮಾಡಿದರು.

[7] ನಡೆಯುತ್ತಿದ್ದ ಎಲ್ಲಾ ಸಂಗತಿಗಳ ಬಗ್ಗೆ ರಾಜ್ಯಪಾಲ ಹೆರೋದನು ಕೇಳಿ ಗಲಿಬಿಲಿಗೊಂಡನು. ಏಕೆಂದರೆ, “ಸ್ನಾನಿಕ ಯೋಹಾನನೇ ಸತ್ತವರೊಳಗಿಂದ ಎದ್ದಿದ್ದಾನೆ” ಎಂದು ಕೆಲವರು ಹೇಳುತ್ತಿದ್ದರು.

[8] ಇನ್ನು ಕೆಲವರು, “ಎಲೀಯನು ನಮ್ಮ ಬಳಿಗೆ ಬಂದಿದ್ದಾನೆ” ಎಂದು ಹೇಳುತ್ತಿದ್ದರು. ಮತ್ತೆ ಕೆಲವರು, “ಪೂರ್ವಕಾಲದ ಪ್ರವಾದಿಗಳಲ್ಲೊಬ್ಬನು ಜೀವಂತವಾಗಿ ಎದ್ದಿದ್ದಾನೆ” ಎಂದು ಹೇಳುತ್ತಿದ್ದರು.

[9] ಹೆರೋದನು, “ನಾನು ಯೋಹಾನನ ತಲೆಯನ್ನು ಕತ್ತರಿಸಿದೆನು. ಆದರೆ ಈ ಸಂಗತಿಗಳನ್ನು ಮಾಡುತ್ತಿರುವ ಈ ಮನುಷ್ಯನು ಯಾರು?” ಎಂದು ಆಲೋಚಿಸುತ್ತಾ ಯೇಸುವನ್ನು ನೋಡಲು ಪ್ರಯತ್ನಿಸಿದನು.

[10] ಅಪೊಸ್ತಲರು ಸುವಾರ್ತಾ ಪ್ರಯಾಣದಿಂದ ಹಿಂತಿರುಗಿ ಬಂದು, ತಾವು ಮಾಡಿದ ಸಂಗತಿಗಳನ್ನು ಯೇಸುವಿಗೆ ತಿಳಿಸಿದರು. ಆಗ ಆತನು ಅವರನ್ನು ಬೆತ್ಸಾಯಿದ ಊರಿನ ಸಮೀಪಕ್ಕೆ ಪ್ರತ್ಯೇಕವಾಗಿ ಕರೆದುಕೊಂಡು ಹೋದನು. ಅಲ್ಲಿ ಯೇಸು ಮತ್ತು ಆತನ ಅಪೊಸ್ತಲರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ.

[11] ಆದರೆ ಯೇಸು ಅಲ್ಲಿಗೆ ಹೋದದ್ದು ಜನರಿಗೆ ತಿಳಿಯಿತು. ಅವರು ಆತನನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವಾಗತಿಸಿ ದೇವರ ರಾಜ್ಯದ ಬಗ್ಗೆ ಅವರಿಗೆ ತಿಳಿಸಿದನು; ಕಾಯಿಲೆಯ ಜನರನ್ನು ವಾಸಿಮಾಡಿದನು.

[12] ಅಂದು ಸಾಯಂಕಾಲ, ಹನ್ನೆರಡು ಮಂದಿ ಅಪೊಸ್ತಲರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸವಾಗಿಲ್ಲ. ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ಹೊಲಗಳಿಗೂ ಊರುಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ ಮತ್ತು ರಾತ್ರಿ ನಿದ್ರಿಸಲು ಸ್ಥಳವನ್ನು ಹುಡುಕಿಕೊಳ್ಳಲಿ” ಎಂದು ಹೇಳಿದರು.

[13] ಆದರೆ ಯೇಸು ಅಪೊಸ್ತಲರಿಗೆ, “ನೀವೇ ಅವರಿಗೆ ಸ್ವಲ್ಪ ಆಹಾರ ಕೊಡಿರಿ” ಎಂದು ಹೇಳಿದನು. ಅದಕ್ಕೆ ಅಪೊಸ್ತಲರು, “ನಮ್ಮಲ್ಲಿ ಕೇವಲ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ. ನಾವೇ ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡುಕೊಳ್ಳಬೇಕೇ?” ಎಂದು ಕೇಳಿದರು.

[14] (ಅಲ್ಲಿ ಸುಮಾರು ಐದು ಸಾವಿರ ಮಂದಿ ಗಂಡಸರು ಇದ್ದರು.) ಯೇಸು ತನ್ನ ಶಿಷ್ಯರಿಗೆ, “ಇವರನ್ನು ಸುಮಾರು ಐವತ್ತೈವತ್ತು ಜನರಂತೆ ಸಾಲಾಗಿ ಕುಳ್ಳಿರಿಸಿರಿ” ಅಂದನು.

[15] ಅಂತೆಯೇ ಶಿಷ್ಯರು ಮಾಡಿದರು. ಜನರೆಲ್ಲರೂ ನೆಲದ ಮೇಲೆ ಕುಳಿತುಕೊಂಡರು.

[16] ಆಗ ಯೇಸು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಕೈಯಲ್ಲಿ ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಯೇಸು ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚಬೇಕೆಂದು ಹೇಳಿದನು.

[17] ಎಲ್ಲರೂ ತಿಂದು ತೃಪ್ತರಾದರು. ತಿನ್ನಲಾರದೆ ಬಿಟ್ಟಿದ್ದ ಆಹಾರದ ತುಂಡುಗಳನ್ನು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು.

[18] ಒಮ್ಮೆ ಯೇಸು ಏಕಾಂತವಾಗಿ ಪ್ರಾರ್ಥನೆ ಮಾಡುತ್ತಿದ್ದನು. ಆತನ ಶಿಷ್ಯರು ಒಟ್ಟಾಗಿ ಅಲ್ಲಿಗೆ ಬಂದರು. ಯೇಸು ಅವರಿಗೆ, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.

[19] ಅದಕ್ಕೆ ಶಿಷ್ಯರು, “ಕೆಲವು ಜನರು ನಿನ್ನನ್ನು ‘ಸ್ನಾನಿಕನಾದ ಯೋಹಾನ’ ಎನ್ನುತ್ತಾರೆ. ಇನ್ನು ಕೆಲವರು, ‘ಎಲೀಯ’ ಎನ್ನುತ್ತಾರೆ. ಮತ್ತೆ ಕೆಲವರು, ‘ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಜೀವಂತವಾಗಿ ಎದ್ದುಬಂದಿದ್ದಾನೆ’ ಎನ್ನುತ್ತಾರೆ” ಎಂದು ಉತ್ತರಿಸಿದರು.

[20] ಆಗ ಯೇಸು, “ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಶಿಷ್ಯರನ್ನು ಕೇಳಿದನು. ಪೇತ್ರನು, “ನೀನು ದೇವರಿಂದ ಬಂದ ಕ್ರಿಸ್ತನು” ಎಂದು ಉತ್ತರಕೊಟ್ಟನು.

[21] ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಯೇಸು ಅವರನ್ನು ಎಚ್ಚರಿಸಿದನು.

[22] ಬಳಿಕ ಯೇಸು, “ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಆತನು ಹಿರಿಯ ಯೆಹೂದ್ಯನಾಯಕರಿಂದಲೂ ಮಹಾಯಾಜಕರಿಂದಲೂ ಧರ್ಮೋಪದೇಶಕರಿಂದಲೂ ತಿರಸ್ಕೃತನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.

[23] ಯೇಸು ತನ್ನ ಮಾತನ್ನು ಮುಂದುವರಿಸಿ ಅವರೆಲ್ಲರಿಗೆ ಹೇಳಿದ್ದೇನೆಂದರೆ: “ನನ್ನ ಹಿಂಬಾಲಕನಾಗಬಯಸುವವನು ತನ್ನನ್ನು ನಿರಾಕರಿಸಿ, ಪ್ರತಿದಿನ ತನ್ನ ಶಿಲುಬೆಯನ್ನು (ತನಗಾಗುವ ಹಿಂಸೆಯನ್ನು) ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

[24] ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗೋಸ್ಕರ ತನ್ನ ಜೀವವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು.

[25] ಒಬ್ಬನು ಇಡೀ ಲೋಕವನ್ನೇ ಸಂಪಾದಿಸಿಕೊಂಡು, ತನ್ನನ್ನೇ ಕೆಡಿಸಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಲಾಭವೇನು?

[26] ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಳ್ಳುವುದಾದರೆ, ನಾನು ನನ್ನ ಮಹಿಮೆಯೊಡನೆ, ತಂದೆಯ ಮಹಿಮೆಯೊಡನೆ ಮತ್ತು ಪರಿಶುದ್ಧ ದೂತರ ಮಹಿಮೆಯೊಡನೆ ಬಂದಾಗ ಅವನ ವಿಷಯದಲ್ಲಿ ನಾಚಿಕೊಳ್ಳುವೆನು.

[27] ನಾನು ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ಕೆಲವರು ತಾವು ಸಾಯುವುದಕ್ಕಿಂತ ಮೊದಲು ದೇವರ ರಾಜ್ಯವನ್ನು ನೋಡುವರು” ಎಂದು ಹೇಳಿದನು.

[28] ಯೇಸು ಈ ಸಂಗತಿಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ನಂತರ, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಬೆಟ್ಟದ ಮೇಲೆ ಹೋದನು.

[29] ಯೇಸು ಪ್ರಾರ್ಥಿಸುತ್ತಿದ್ದಾಗ, ಆತನ ಮುಖವು ರೂಪಾಂತರವಾಯಿತು. ಆತನ ಬಟ್ಟೆಗಳು ಬೆಳ್ಳಗೆ ಹೊಳೆಯತೊಡಗಿದವು.

[30] ಆಗ ಇಬ್ಬರು ಪ್ರವಾದಿಗಳು ಯೇಸುವಿನೊಡನೆ ಮಾತನಾಡುತ್ತಿದ್ದರು. ಅವರು ಮೋಶೆ ಮತ್ತು ಎಲೀಯ.

[31] ಇವರಿಬ್ಬರು ಸಹ ಪ್ರಕಾಶಮಾನವಾಗಿ ಹೊಳೆಯುತ್ತಿದ್ದರು. ಜೆರುಸಲೇಮಿನಲ್ಲಿ ಸಂಭವಿಸಲಿಕ್ಕಿದ್ದ ಆತನ ಮರಣದ ಬಗ್ಗೆ ಅವರು ಮಾತಾಡುತ್ತಿದ್ದರು.

[32] ಗಾಢನಿದ್ರೆಯಲ್ಲಿದ್ದ ಪೇತ್ರ ಮತ್ತು ಇತರರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಯೇಸುವಿನೊಡನೆ ನಿಂತಿದ್ದ ಅವರಿಬ್ಬರನ್ನೂ ಕಂಡರು.

[33] ಮೋಶೆ ಮತ್ತು ಎಲೀಯ ಆತನನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ಇಲ್ಲಿ ನಾವು ಮೂರು ಗುಡಾರಗಳನ್ನು ಹಾಕುತ್ತೇವೆ. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು” ಎಂದು ಹೇಳಿದನು. (ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದು ತಿಳಿಯಲಿಲ್ಲ.)

[34] ಪೇತ್ರನು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಮೋಡವು ಬಂದು ಅವರ ಸುತ್ತಲೂ ಆವರಿಸಿತು. ಆಗ ಪೇತ್ರ, ಯಾಕೋಬ ಮತ್ತು ಯೋಹಾನನಿಗೆ ಭಯವಾಯಿತು.

[35] ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಆರಿಸಿಕೊಂಡವನು ಇವನೇ. ಈತನಿಗೆ ವಿಧೇಯರಾಗಿರಿ” ಎಂಬ ವಾಣಿ ಕೇಳಿಸಿತು.

[36] ಆ ವಾಣಿ ಆದಮೇಲೆ ಅವರು ಯೇಸುವನ್ನು ಮಾತ್ರ ಕಂಡರು. ಪೇತ್ರ, ಯಾಕೋಬ, ಯೋಹಾನರು ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಮೌನವಾಗಿದ್ದರು.

[37] ಮರುದಿನ, ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಬೆಟ್ಟದಿಂದಿಳಿದು ಬಂದರು. ಜನರ ಬಹು ದೊಡ್ಡ ಗುಂಪೊಂದು ಯೇಸುವನ್ನು ಎದುರುಗೊಂಡಿತು.

[38] ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಉಪದೇಶಕನೇ, ದಯಮಾಡಿ ಬಂದು ನನ್ನ ಮಗನನ್ನು ನೋಡು. ನನಗೆ ಅವನೊಬ್ಬನೇ ಮಗನು.

[39] ದೆವ್ವವೊಂದು ನನ್ನ ಮಗನೊಳಗೆ ಬರುತ್ತದೆ. ಆಗ ಅವನು ಕೂಗಾಡುತ್ತಾನೆ. ಸ್ವಾಧೀನ ಕಳೆದುಕೊಂಡು ಬಾಯಿಂದ ನೊರೆಸುರಿಸುತ್ತಾನೆ. ದೆವ್ವವು ಅವನನ್ನು ಒದ್ದಾಡಿಸಿ ಜಜ್ಜದ ಹೊರತು ಬಿಟ್ಟುಬಿಡುವುದೇ ಇಲ್ಲ.

[40] ನನ್ನ ಮಗನನ್ನು ದೆವ್ವದಿಂದ ಬಿಡಿಸಬೇಕೆಂದು ನಿನ್ನ ಶಿಷ್ಯರನ್ನೂ ಬೇಡಿಕೊಂಡೆನು. ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಯೇಸುವಿಗೆ ಕೂಗಿ ಹೇಳಿದನು.

[41] ಆಗ ಯೇಸು, “ನಂಬಿಕೆಯಿಲ್ಲದ ದುಷ್ಟಸಂತಾನವೇ, ಇನೆಷ್ಟು ಕಾಲ ನಾನು ನಿಮ್ಮ ಸಂಗಡ ತಾಳ್ಮೆಯಿಂದ ಇರಲಿ?” ಎಂದು ಉತ್ತರಿಸಿ, ಆ ಮನುಷ್ಯನಿಗೆ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.

[42] ಆ ಹುಡುಗನು ಬರುತ್ತಿದ್ದಾಗ, ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿತು. ಹುಡುಗನು ತನ್ನ ಸ್ವಾಧೀನ ಕಳೆದುಕೊಂಡನು. ಆಗ ಯೇಸು ದೆವ್ವವನ್ನು ಗದರಿಸಿ ಆ ಹುಡುಗನನ್ನು ಗುಣಪಡಿಸಿದನು. ಬಳಿಕ ಅವನನ್ನು ಅವನ ತಂದೆಗೆ ಒಪ್ಪಿಸಿಕೊಟ್ಟನು.

[43] ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು. ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ,

[44] “ಮನುಷ್ಯಕುಮಾರನನ್ನು ಕೆಲವರ ವಶಕ್ಕೆ ಒಪ್ಪಿಸಲಾಗುವುದು. ನೀವು ಇದನ್ನು ಮರೆಯಕೂಡದು” ಎಂದು ಹೇಳಿದನು.

[45] ಆದರೆ ಯೇಸುವಿನ ಈ ಮಾತುಗಳು ಶಿಷ್ಯರಿಗೆ ಅರ್ಥವಾಗಲಿಲ್ಲ. ಏಕೆಂದರೆ ಅವುಗಳ ಅರ್ಥವು ಅವರಿಗೆ ಮರೆಯಾಗಿತ್ತು. ಆದರೂ ಯೇಸು ಹೇಳಿದ್ದರ ಬಗ್ಗೆ ಆತನನ್ನು ಕೇಳುವದಕ್ಕೆ ಶಿಷ್ಯರು ಭಯಪಟ್ಟರು.

[46] ತಮ್ಮಲ್ಲಿ ಯಾವನು ಅತ್ಯಂತ ಪ್ರಮುಖನು ಎಂಬುದರ ಬಗ್ಗೆ ಯೇಸುವಿನ ಶಿಷ್ಯರು ವಾದಮಾಡತೊಡಗಿದರು.

[47] ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಒಂದು ಚಿಕ್ಕ ಮಗುವನ್ನು ಕರೆದು ತನ್ನ ಬಳಿಯಲ್ಲಿ ನಿಲ್ಲಿಸಿದನು.

[48] ಬಳಿಕ ಯೇಸು ತನ್ನ ಶಿಷ್ಯರಿಗೆ, “ಒಬ್ಬನು ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ಒಬ್ಬನು ನನ್ನನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನು ಕಳುಹಿಸಿದಾತನನ್ನೇ (ದೇವರನ್ನು) ಸ್ವೀಕರಿಸಿಕೊಂಡಂತಾಯಿತು. ನಿಮ್ಮಲ್ಲಿ ಯಾವನು ದೀನನಾಗಿದ್ದಾನೋ ಅವನೇ ನಿಮ್ಮಲ್ಲಿ ಪ್ರಮುಖನಾಗಿದ್ದಾನೆ” ಎಂದು ಹೇಳಿದನು.

[49] ಯೋಹಾನನು, “ಗುರುವೇ, ನಿನ್ನ ಹೆಸರಿನ ಮೂಲಕ ಜನರಿಂದ ದೆವ್ವಗಳನ್ನು ಬಿಡಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ನಾವು ನೋಡಿದೆವು. ಅವನು ನಮ್ಮವನಲ್ಲದ ಕಾರಣ ನಿನ್ನ ಹೆಸರನ್ನು ಬಳಸಕೂಡದೆಂದು ಅವನಿಗೆ ಹೇಳಿದೆವು” ಎಂದರು.

[50] ಅದಕ್ಕೆ ಯೇಸು, “ಅವನಿಗೆ ಅಡ್ಡಿಮಾಡಬೇಡಿ. ಏಕೆಂದರೆ, ನಿಮಗೆ ವಿರೋಧವಾಗಿಲ್ಲದವನು ನಿಮ್ಮವನೇ” ಎಂದನು.

[51] ಯೇಸು ಮತ್ತೆ ಪರಲೋಕಕ್ಕೆ ಹಿಂತಿರುಗುವ ಸಮಯ ಹತ್ತಿರವಾಗುತ್ತಿತ್ತು. ಆದ್ದರಿಂದ ಆತನು ಜೆರುಸಲೇಮಿಗೆ ಹೋಗಲು ತೀರ್ಮಾನಿಸಿದನು.

[52] ಯೇಸು ಕೆಲವರನ್ನು ತನ್ನ ಮುಂದಾಗಿ ಕಳುಹಿಸಿದನು. ಯೇಸುವಿಗಾಗಿ ಪ್ರತಿಯೊಂದನ್ನು ಸಿದ್ಧಪಡಿಸಲು ಅವರು ಸಮಾರ್ಯ ಪಟ್ಟಣಕ್ಕೆ ಹೋದರು.

[53] ಆದರೆ ಆತನು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಸಮಾರ್ಯದ ಜನರು ಆತನನ್ನು ಸ್ವಾಗತಿಸಲಿಲ್ಲ.

[54] ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನ ಇದನ್ನು ಕಂಡು, “ಸ್ವಾಮೀ, ಆಕಾಶದಿಂದ ಬೆಂಕಿ ಬಿದ್ದು ಇವರನ್ನು ನಾಶಮಾಡಲಿ ಎಂದು ನಾವು ಆಜ್ಞಾಪಿಸಬೇಕೆನ್ನುವಿಯೋ!” ಎಂದು ಕೇಳಿದರು.

[55] ಆದರೆ ಯೇಸು ಅವರ ಕಡೆಗೆ ತಿರುಗಿ ಗದರಿಸಿದನು.

[56] ಬಳಿಕ ಯೇಸು ಮತ್ತು ಆತನ ಶಿಷ್ಯರು ಇನ್ನೊಂದು ಪಟ್ಟಣಕ್ಕೆ ಹೋದರು.

[57] ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ, ಒಬ್ಬನು ಯೇಸುವಿಗೆ, “ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.

[58] ಯೇಸು, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಎಂದು ಉತ್ತರಿಸಿದನು.

[59] ಯೇಸು ಇನೊಬ್ಬನಿಗೆ, “ನನ್ನನ್ನು ಹಿಂಬಾಲಿಸು!” ಎಂದನು. ಆದರೆ ಅವನು, “ಸ್ವಾಮೀ, ನಾನು ಮೊದಲು ಹೋಗಿ ನನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡಲು ಅವಕಾಶ ನೀಡು” ಎಂದು ಹೇಳಿದನು.

[60] ಯೇಸು ಅವನಿಗೆ, “ಸತ್ತಜನರೇ ತಮ್ಮವರಲ್ಲಿ ಸತ್ತುಹೋದವರ ಅಂತ್ಯಕ್ರಿಯೆ ಮಾಡಲಿ! ನೀನು ಹೋಗಿ ದೇವರ ರಾಜ್ಯದ ಬಗ್ಗೆ ತಿಳಿಸು” ಎಂದು ಹೇಳಿದನು.

[61] ಮತ್ತೊಬ್ಬನು, “ಸ್ವಾಮೀ, ನಾನು ನಿನ್ನನ್ನು ಹಿಂಬಾಲಿಸುವೆನು. ಆದರೆ ಮೊದಲು ನನ್ನ ಕುಟುಂಬದವರ ಬಳಿಗೆ ಹೋಗಿಬರಲು ಅವಕಾಶ ನೀಡು” ಎಂದು ಹೇಳಿದನು.

[62] ಯೇಸು, “ನೇಗಿಲಿನ ಮೇಲೆ ಕೈಯನ್ನು ಹಾಕಿ ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಅಂದನು.

ಲೂಕನ ಸುವಾರ್ತೆ — Chapters