[1] ಯೇಸುವು ಜೋರ್ಡನ್ ನದಿಯಿಂದ ಹಿಂತಿರುಗಿದನು. ಆತನು ಪವಿತ್ರಾತ್ಮಭರಿತನಾಗಿದ್ದನು. ಪವಿತ್ರಾತ್ಮನು ಯೇಸುವನ್ನು ಅಡವಿಗೆ ನಡಿಸಿದನು.
[2] ಅಲ್ಲಿ ಸೈತಾನನು ಆತನನ್ನು ನಲವತ್ತು ದಿನಗಳವರೆಗೆ ಶೋಧಿಸಿದನು. ಆ ದಿನಗಳಲ್ಲಿ ಯೇಸು ಏನನ್ನೂ ತಿನ್ನಲಿಲ್ಲ. ತರುವಾಯ, ಯೇಸುವಿಗೆ ಬಹಳ ಹಸಿವೆಯಾಯಿತು.
[3] ಆಗ ಸೈತಾನನು ಯೇಸುವಿಗೆ, “ನೀನು ದೇವರ ಮಗನಾಗಿದ್ದರೆ, ಈ ಕಲ್ಲಿಗೆ ರೊಟ್ಟಿಯಾಗು ಎಂದು ಆಜ್ಞಾಪಿಸು” ಎಂದನು.
[4] ಅದಕ್ಕೆ ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರಕ್ಕೆ ಬದುಕುವುದಿಲ್ಲ.’ ಧರ್ಮೋಪದೇಶ. 8:3 ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಉತ್ತರಕೊಟ್ಟನು.
[5] ಆಗ ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ, ಒಂದೇ ಕ್ಷಣದಲ್ಲಿ ಭೂಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿ,
[6] “ಈ ರಾಜ್ಯಗಳೆಲ್ಲವನ್ನೂ ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುತ್ತೇನೆ. ಇವುಗಳೆಲ್ಲಾ ನನ್ನ ಅಧೀನದಲ್ಲಿವೆ. ನಾನು ಯಾರಿಗೆ ಬೇಕಾದರೂ ಇವುಗಳನ್ನು ಕೊಡಬಲ್ಲೆ.
[7] ನೀನು ನನ್ನನ್ನು ಆರಾಧಿಸುವುದಾದರೆ ಇವೆಲ್ಲವನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
[8] ಅದಕ್ಕೆ ಯೇಸು, “‘ನಿನ್ನ ಪ್ರಭುವಾದ ದೇವರೊಬ್ಬನನ್ನೇ ಆರಾಧಿಸಬೇಕು, ಆತನೊಬ್ಬನಿಗೇ ಸೇವೆಮಾಡಬೇಕು’ ಧರ್ಮೋಪದೇಶ. 6:13 ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದಿದೆ!” ಎಂದನು.
[9] ಬಳಿಕ ಸೈತಾನನು ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು, ದೇವಾಲಯದ ಬಹು ಎತ್ತರವಾದ ಸ್ಥಳದಲ್ಲಿ ನಿಲ್ಲಿಸಿ, “ನೀನು ದೇವರ ಮಗನಾಗಿದ್ದರೆ, ಕೆಳಕ್ಕೆ ಧುಮುಕು!
[10] ‘ದೇವರು ನಿನ್ನನ್ನು ಕಾಪಾಡುವುದಕ್ಕೆ ತನ್ನ ದೂತರಿಗೆ ಅಪ್ಪಣೆಕೊಡುವನು.’ ಕೀರ್ತನೆ. 91:1
[11] ‘ನಿನ್ನ ಪಾದವು ಕಲ್ಲಿಗೆ ತಗಲೀತೆಂದು ಅವರು ತಮ್ಮ ಕೈಗಳಿಂದ ನಿನ್ನನ್ನು ಎತ್ತಿಕೊಳ್ಳುವರು’ ಕೀರ್ತನೆ. 91:12 ಎಂಬುದಾಗಿ ಶಾಸ್ತ್ರದಲ್ಲಿ ಬರೆದಿದೆ” ಎಂದನು.
[12] ಅದಕ್ಕೆ ಯೇಸು, “‘ನಿನ್ನ ಪ್ರಭುವಾದ ದೇವರನ್ನು ಪರೀಕ್ಷಿಸಬಾರದು’ ಧರ್ಮೋಪದೇಶ. 6:16 ಎಂಬುದಾಗಿಯೂ ಬರೆದಿದೆ” ಎಂದು ಉತ್ತರಿಸಿದನು.
[13] ಸೈತಾನನು ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕಕಾಲ ಬರುವ ತನಕ ಆತನನ್ನು ಬಿಟ್ಟುಹೋದನು.
[14] ಯೇಸು ಪವಿತ್ರಾತ್ಮನ ಶಕ್ತಿಯಿಂದ ಕೂಡಿದವನಾಗಿ ಗಲಿಲಾಯಕ್ಕೆ ಹಿಂತಿರುಗಿ ಹೋದನು. ಯೇಸುವಿನ ಸುದ್ದಿಯು ಗಲಿಲಾಯದ ಸುತ್ತಮುತ್ತಲಿರುವ ಪ್ರದೇಶದಲ್ಲೆಲ್ಲಾ ಹಬ್ಬಿತು.
[15] ಯೇಸು ಸಭಾಮಂದಿರಗಳಲ್ಲಿ ಉಪದೇಶಿಸಲು ಪ್ರಾರಂಭಿಸಿದನು. ಜನರೆಲ್ಲರೂ ಆತನನ್ನು ಹೊಗಳಿದರು.
[16] ಯೇಸು ತಾನು ಬೆಳೆದ ನಜರೇತ್ ಎಂಬ ಊರಿಗೆ ಪ್ರಯಾಣ ಮಾಡಿದನು. ವಾಡಿಕೆಯ ಪ್ರಕಾರ, ಆತನು ಸಬ್ಬತ್‌ದಿನದಲ್ಲಿ ಸಭಾಮಂದಿರಕ್ಕೆ ಹೋದನು. ಯೇಸು ಓದುವುದಕ್ಕಾಗಿ ಎದ್ದುನಿಂತನು.
[17] ಪ್ರವಾದಿಯಾದ ಯೆಶಾಯನ ಗ್ರಂಥವನ್ನು ಆತನಿಗೆ ಓದಲು ಕೊಡಲಾಗಿತ್ತು. ಯೇಸು ಆ ಪುಸ್ತಕವನ್ನು ತೆರೆದು ಈ ಭಾಗವನ್ನು ಓದಿದನು:
[18] “ಪ್ರಭುವಿನ (ದೇವರ) ಆತ್ಮವು ನನ್ನಲ್ಲಿ ಇದೆ. ಬಡಜನರಿಗೆ ಶುಭಸಂದೇಶವನ್ನು ತಿಳಿಸಲು ದೇವರು ನನ್ನನ್ನು ಅಭಿಷೇಕಿಸಿದ್ದಾನೆ. ಪಾಪಕ್ಕೆ ಸೆರೆಯಾಳುಗಳಾಗಿರುವ ಜನರಿಗೆ ‘ನೀವು ಬಿಡುಗಡೆಯಾಗಿದ್ದೀರಿ’ ಎಂತಲೂ ಕುರುಡರಿಗೆ, ‘ನಿಮಗೆ ಮತ್ತೆ ಕಣ್ಣು ಕಾಣಿಸುವುದು’ ಎಂತಲೂ ತಿಳಿಸುವುದಕ್ಕೆ ದೇವರು ನನ್ನನ್ನು ಕಳುಹಿಸಿದ್ದಾನೆ. ದಬ್ಬಾಳಿಕೆಗೆ ಗುರಿಯಾದವರನ್ನು ಬಿಡಿಸುವುದಕ್ಕೂ
[19] ಪ್ರಭುವಿನ ಶುಭವರ್ಷವನ್ನು ಪ್ರಕಟಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾನೆ.” ಯೆಶಾಯ 61:1-2
[20] ಈ ಭಾಗವನ್ನು ಓದಿದ ನಂತರ ಯೇಸು ಆ ಪುಸ್ತಕವನ್ನು ಮುಚ್ಚಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಸಭಾಮಂದಿರದಲ್ಲಿದ್ದ ಪ್ರತಿಯೊಬ್ಬರು ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು.
[21] ಆಗ ಯೇಸು, ಅವರಿಗೆ, “ನಾನು ಇದೀಗ ಓದಿದ ಮಾತುಗಳನ್ನು ನೀವು ಕೇಳುತ್ತಿದ್ದಾಗಲೇ ಅವು ನಿಜವಾಗಿ ನೆರವೇರಿದವು!” ಎಂದು ಹೇಳಿದನು.
[22] ಜನರೆಲ್ಲರೂ ಯೇಸುವನ್ನು ಹೊಗಳತೊಡಗಿದರು. ಅವರು ಆತನ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಈ ರೀತಿ ಮಾತಾಡಲು ಹೇಗೆ ಸಾಧ್ಯ? ಇವನು ಯೋಸೇಫನ ಮಗನಲ್ಲವೇ?” ಎಂದು ಮಾತಾಡಿಕೊಂಡರು.
[23] ಯೇಸು ಅವರಿಗೆ, “ನೀವಂತೂ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೊ’ ಎಂಬ ಗಾದೆಯನ್ನು ನನಗೆ ಹೇಳುತ್ತೀರಿ ಎಂಬುದು ನನಗೆ ಗೊತ್ತು. ‘ನೀನು ಕಪೆರ್ನೌಮಿನಲ್ಲಿ ಮಾಡಿದ ಕೆಲವು ಕಾರ್ಯಗಳ ಬಗ್ಗೆ ನಾವು ಕೇಳಿದ್ದೇವೆ. ಅದೇ ಕಾರ್ಯಗಳನ್ನು ನಿನ್ನ ಸ್ವಂತ ಊರಿನಲ್ಲಿ ಮಾಡು!’” ಎಂದು ಹೇಳಬೇಕೆಂದಿದ್ದೀರಿ.
[24] ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರವಾದಿ ತನ್ನ ಸ್ವಂತ ಊರಿನಲ್ಲಿ ಸ್ವೀಕೃತನಾಗುವುದಿಲ್ಲ.
[25] “ನಾನು ಹೇಳುವುದು ಸತ್ಯ. ಎಲೀಯನ ಕಾಲದಲ್ಲಿ ಮೂರುವರೆ ವರ್ಷಗಳವರೆಗೆ ಇಸ್ರೇಲ್ ದೇಶದಲ್ಲಿ ಮಳೆ ಬೀಳಲಿಲ್ಲ. ದೇಶದ ಯಾವ ಕಡೆಯಲ್ಲಿಯೂ ಆಹಾರವಿರಲಿಲ್ಲ. ಆ ಸಮಯದಲ್ಲಿ ಇಸ್ರೇಲಿನಲ್ಲಿ ಅನೇಕ ವಿಧವೆಯರು ಇದ್ದರು.
[26] ಆದರೆ ಎಲೀಯನನ್ನು ಬೇರೆ ಯಾವ ವಿಧವೆಯರ ಬಳಿಗೂ ಕಳುಹಿಸದೆ ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಲಾಯಿತು.
[27] “ಪ್ರವಾದಿಯಾದ ಎಲೀಷನ ಕಾಲದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರೇಲಿನಲ್ಲಿ ವಾಸಿಸುತ್ತಿದ್ದರು. ಆದರೆ ಅವರಲ್ಲಿ ಯಾರಿಗೂ ವಾಸಿಯಾಗದೆ ಸಿರಿಯ ದೇಶದ ನಾಮಾನನೊಬ್ಬನಿಗೇ ವಾಸಿಯಾಯಿತು” ಎಂದು ಹೇಳಿದನು.
[28] ಸಭಾಮಂದಿರದಲ್ಲಿದ್ದ ಜನರೆಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಕೋಪಗೊಂಡು
[29] ಯೇಸುವನ್ನು ಪಟ್ಟಣದಿಂದ ಹೊರಗಟ್ಟಿದರು. ಆ ಪಟ್ಟಣವು ಒಂದು ಗುಡ್ಡದ ಮೇಲಿತ್ತು. ಅವರು ಯೇಸುವನ್ನು ಗುಡ್ಡದ ಅಂಚಿಗೆ ಕರೆದುಕೊಂಡು ಬಂದು ಕೆಳಕ್ಕೆ ತಳ್ಳಿಬಿಡಬೇಕೆಂದಿದ್ದರು.
[30] ಆದರೆ ಯೇಸು ಅವರ ಮಧ್ಯದಲ್ಲಿ ಹಾದು ಹೊರಟುಹೋದನು.
[31] ಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್‌ದಿನದಂದು ಯೇಸು ಜನರಿಗೆ ಉಪದೇಶಿಸಿದನು.
[32] ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು.
[33] ಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ,
[34] “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು.
[35] ಆದರೆ ಯೇಸು ಆ ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು.
[36] ಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.
[37] ಹೀಗಾಗಿ ಯೇಸುವಿನ ಸುದ್ದಿಯು ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು.
[38] ಯೇಸು ಸಭಾಮಂದಿರದಿಂದ ಹೊರಟು ಸೀಮೋನನ ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು.
[39] ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಆ ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು.
[40] ಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು.
[41] ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ಆ ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು.
[42] ಮರುದಿನ ಯೇಸು ನಿರ್ಜನ ಸ್ಥಳಕ್ಕೆ ಹೋದನು. ಜನರು ಯೇಸುವಿಗಾಗಿ ಹುಡುಕುತ್ತಾ ಅಲ್ಲಿಗೆ ಬಂದು, ತಮ್ಮನ್ನು ಬಿಟ್ಟುಹೋಗದಂತೆ ಆತನನ್ನು ತಡೆಯಲು ಪ್ರಯತ್ನಿಸಿದರು.
[43] ಆದರೆ ಯೇಸು ಅವರಿಗೆ, “ನಾನು ಬೇರೆ ಊರುಗಳವರಿಗೂ ಸಹ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಬೇಕು. ಇದಕ್ಕಾಗಿಯೇ ನನ್ನನ್ನು ಕಳುಹಿಸಲಾಗಿದೆ” ಎಂದು ಹೇಳಿದನು.
[44] ಬಳಿಕ ಯೇಸು ಜುದೇಯದ ಸಭಾಮಂದಿರಗಳಲ್ಲಿ ಬೋಧಿಸಿದನು.