Skip to content
Opens in a new window
Listen to this chapter • 9:58

[1] ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು,

[2] “ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು.

[3] ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ.

[4] ಜನರಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು.

[5] ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು.

[6] ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು.

[7] ಬಳಿಕ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

[8] ಯೇಸು ಅವರಿಗೆ, “ಹಾಗಾದರೆ, ಈ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಅಂದನು.

[9] ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದನು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿತೋಟವನ್ನು ಮಾಡಿ ಅದನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟನು. ಬಳಿಕ ಅವನು ಅಲ್ಲಿಂದ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು.

[10] ಸ್ವಲ್ಪಕಾಲದ ನಂತರ ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂತು. ಆದ್ದರಿಂದ ಅವನು ತನ್ನ ಪಾಲಿನ ಹಣ್ಣನ್ನು ತೆಗೆದುಕೊಂಡು ಬರುವುದಕ್ಕಾಗಿ ತನ್ನ ಸೇವಕನನ್ನು ಆ ರೈತರ ಬಳಿಗೆ ಕಳುಹಿಸಿದನು. ಆದರೆ ಆ ರೈತರು ಆ ಸೇವಕನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು.

[11] ಆದ್ದರಿಂದ ಅವನು ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನೂ ಹೊಡೆದು, ಅವಮಾನ ಮಾಡಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು.

[12] ಆದ್ದರಿಂದ ಅವನು ಮೂರನೆಯ ಸಲ ತನ್ನ ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ಆ ರೈತರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಗೆ ಅಟ್ಟಿದರು.

[13] “ಆಗ ತೋಟದ ಯಜಮಾನನು, ‘ನಾನೀಗ ಏನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನು ಕಳುಹಿಸುವೆನು. ಒಂದುವೇಳೆ, ಆ ರೈತರು ಅವನಿಗೆ ಮರ್ಯಾದೆ ಕೊಡಬಹುದು’ ಅಂದುಕೊಂಡನು.

[14] ಆ ರೈತರು ಮಗನನ್ನು ನೋಡಿ, ಒಬ್ಬರಿಗೊಬ್ಬರು, ‘ಇವನು ಧಣಿಯ ಮಗನು. ಈ ಹೊಲ ಇವನಿಗೇ ಸೇರುತ್ತದೆ. ನಾವು ಇವನನ್ನು ಕೊಂದರೆ, ಆಗ ಹೊಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಡಿಕೊಂಡರು.

[15] ಬಳಿಕ ಆ ಮಗನನ್ನು ತೋಟದಿಂದ ಹೊರಕ್ಕೆ ನೂಕಿಕೊಂಡು ಹೋಗಿ ಕೊಂದುಹಾಕಿದರು. “ಆಗ ತೋಟದ ಯಜಮಾನನು ಏನು ಮಾಡುವನು?

[16] ಅವನು ಬಂದು ಆ ರೈತರನ್ನು ಕೊಲ್ಲುವನು! ಬಳಿಕ ಅವನು ಆ ತೋಟವನ್ನು ಬೇರೆ ಕೆಲವು ರೈತರಿಗೆ ಕೊಡುವನು.” ಜನರು ಈ ಸಾಮ್ಯವನ್ನು ಕೇಳಿ, “ಇಲ್ಲ! ಹಾಗೆಂದಿಗೂ ಆಗಬಾರದು!” ಅಂದರು.

[17] ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, “ಹಾಗಾದರೆ, ‘ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು’ ಕೀರ್ತನೆ. 118:22 ಎಂಬ ವಚನದ ಅರ್ಥವೇನು?

[18] ಆ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ನಿಮ್ಮ ಮೇಲೆ ಬಿದ್ದರೆ ಅದು ನಿಮ್ಮನ್ನು ಜಜ್ಜಿಹಾಕುವುದು!” ಎಂದು ಹೇಳಿದನು.

[19] ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯ ನಾಯಕರು ಕೇಳಿದರು. ತಮ್ಮನ್ನು ಕುರಿತಾಗಿಯೇ ಆತನು ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದುಕೊಂಡರು. ಆದ್ದರಿಂದ ಅವರು ಆಗಲೇ ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಅವರು ಜನರಿಗೆ ಭಯಪಟ್ಟು ಆತನನ್ನು ಬಂಧಿಸಲಿಲ್ಲ.

[20] ಆದ್ದರಿಂದ ಧರ್ಮೋಪದೇಶಕರು ಮತ್ತು ಯಾಜಕರು ಯೇಸುವನ್ನು ಬಂಧಿಸಲು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ಅವರು ಕೆಲವು ಜನರನ್ನು ಯೇಸುವಿನ ಬಳಿಗೆ ಕಳುಹಿಸಿದರು. ಒಳ್ಳೆಯವರಂತೆ ನಟಿಸಲು ಅವರು ಆ ಜನರಿಗೆ ಹೇಳಿಕೊಟ್ಟಿದ್ದರು. ಅವರು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಬೇಕೆಂದಿದ್ದರು. (ಅವರು ಏನಾದರೂ ತಪ್ಪು ಕಂಡುಹಿಡಿದರೆ, ಆಗ ಯೇಸುವನ್ನು ಆತನ ಮೇಲೆ ಅಧಿಕಾರವಿದ್ದ ರಾಜ್ಯಪಾಲನಿಗೆ ಒಪ್ಪಿಸಿಕೊಡಬಹುದಾಗಿತ್ತು.)

[21] ಆದ್ದರಿಂದ ಅವರು ಯೇಸುವಿಗೆ, “ಉಪದೇಶಕನೇ, ನೀನು ಸತ್ಯವನ್ನೇ ಹೇಳುವೆ ಮತ್ತು ಉಪದೇಶಿಸುವೆ ಎಂದು ನಮಗೆ ಗೊತ್ತಿದೆ. ನೀನು ಮುಖದಾಕ್ಷಿಣ್ಯ ಮಾಡುವವನಲ್ಲ. ದೇವರ ಮಾರ್ಗದ ಕುರಿತಾಗಿ ನೀನು ಯಾವಾಗಲೂ ಸತ್ಯವನ್ನೇ ಬೋಧಿಸುವೆ!

[22] ಈಗ ಹೇಳು, ನಾವು ಸೀಸರನಿಗೆ ತೆರಿಗೆ ಕೊಡುವುದು ಸರಿಯೋ? ತಪ್ಪೋ?” ಎಂದು ಕೇಳಿದರು.

[23] ಆದರೆ ಈ ಜನರು ತನಗೆ ಮೋಸಮಾಡಲು ಪ್ರಯತ್ನಿಸುತ್ತಿದ್ದಾರೆಂದು ಯೇಸುವಿಗೆ ತಿಳಿದಿತ್ತು.

[24] ಆದ್ದರಿಂದ ಯೇಸು ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಆ ನಾಣ್ಯದ ಮೇಲೆ ಯಾರ ಹೆಸರಿದೆ? ಅದರ ಮೇಲೆ ಯಾರ ಮುಖಚಿತ್ರವಿದೆ?” ಎಂದು ಕೇಳಿದನು. ಅವರು, “ಸೀಸರನದು” ಎಂದು ಹೇಳಿದರು.

[25] ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದನು.

[26] ಆ ಜನರು ಆತನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿ ಆಶ್ಚರ್ಯಪಟ್ಟು ಮರುಪ್ರಶ್ನೆ ಕೇಳದಂತಾದರು. ಜನರ ಮುಂದೆ ಯೇಸುವನ್ನು ಮಾತಿನಲ್ಲಿ ಸಿಕ್ಕಿಸಲು ಅವರಿಂದಾಗಲಿಲ್ಲ.

[27] ಕೆಲವು ಸದ್ದುಕಾಯರು ಯೇಸುವಿನ ಬಳಿಗೆ ಬಂದರು. (ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದು ಸದ್ದುಕಾಯರು ನಂಬುತ್ತಾರೆ.) ಅವರು ಯೇಸುವಿಗೆ,

[28] “ಉಪದೇಶಕನೇ, ಮದುವೆಯಾದ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ಆ ಸ್ತ್ರೀಯನ್ನು ಮದುವೆಯಾಗಿ, ಸತ್ತುಹೋದ ಸಹೋದರನಿಗಾಗಿ ಮಕ್ಕಳನ್ನು ಪಡೆಯಬೇಕೆಂದು ಮೋಶೆಯು ಬರೆದಿದ್ದಾನಷ್ಟೆ.

[29] ಒಂದು ಕಾಲದಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯ ಸಹೋದರನು ಒಬ್ಬ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ.

[30] ಆಗ ಎರಡನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು.

[31] ಆಗ ಮೂರನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು. ಬಳಿಕ ಅವನೂ ಸತ್ತುಹೋದನು. ಇನ್ನುಳಿದ ಸಹೋದರರಿಗೂ ಹೀಗೆಯೇ ಆಯಿತು. ಅವರೆಲ್ಲರೂ ಮಕ್ಕಳಿಲ್ಲದೆ ಸತ್ತರು.

[32] ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು.

[33] ಆದರೆ ಆ ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿದ್ದರು. ಹೀಗಿರಲಾಗಿ, ಸತ್ತವರು ಪುನರುತ್ಥಾನ ಹೊಂದುವಾಗ, ಆ ಸ್ತ್ರೀಯು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.

[34] ಯೇಸು ಸದ್ದುಕಾಯರಿಗೆ, “ಭೂಲೋಕದಲ್ಲಿ ಜನರು ಒಬ್ಬರನ್ನೊಬ್ಬರು ಮದುವೆ ಆಗುತ್ತಾರೆ.

[35] ಪುನರುತ್ಥಾನಕ್ಕೆ ಯೋಗ್ಯರಾದ ಕೆಲವು ಜನರು ಜೀವಂತವಾಗಿ ಎದ್ದುಬಂದು ಮತ್ತೆ ಜೀವಿಸುತ್ತಾರೆ. ಆ ಹೊಸ ಜೀವನದಲ್ಲಿ ಅವರು ಮದುವೆ ಆಗುವುದಿಲ್ಲ.

[36] ಆ ಜೀವನದಲ್ಲಿ ಅವರು ದೇವದೂತರಂತಿರುತ್ತಾರೆ. ಅವರಿಗೆ ಮರಣವೂ ಇರುವುದಿಲ್ಲ. ಅವರು ದೇವರ ಮಕ್ಕಳಾಗಿರುತ್ತಾರೆ, ಏಕೆಂದರೆ ಅವರು ಪುನರುತ್ಥಾನ ಹೊಂದಿದವರಾಗಿದ್ದಾರೆ.

[37] ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯು ಸ್ಪಷ್ಟವಾಗಿ ತೋರಿಸಿದ್ದಾನೆ. ಉರಿಯುವ ಪೊದೆಯ ಕುರಿತು ಮೋಶೆ ಬರೆಯುವಾಗ ‘ಪ್ರಭುವಾದ ದೇವರೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದಾನೆ.

[38] ದೇವರು ಅವರೆಲ್ಲರಿಗೆ ದೇವರಾಗಿರುವುದರಿಂದ ಅವರೆಲ್ಲರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ ದೇವರು ಜೀವಿಸುವ ಜನರಿಗೇ ದೇವರಾಗಿದ್ದಾನೆ. ದೇವರಿಗೆ ಸೇರಿದವರೆಲ್ಲರೂ ಜೀವಂತರಾಗಿದ್ದಾರೆ” ಎಂದು ಹೇಳಿದನು.

[39] ಧರ್ಮೋಪದೇಶಕರಲ್ಲಿ ಕೆಲವರು, “ಬೋಧಕನೇ, ನೀನು ಒಳ್ಳೆಯ ಉತ್ತರವನ್ನು ಕೊಟ್ಟಿರುವೆ” ಎಂದು ಹೇಳಿದರು.

[40] ಇನ್ನೊಂದು ಪ್ರಶ್ನೆಯನ್ನು ಆತನಿಗೆ ಕೇಳುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.

[41] ಆಗ ಯೇಸು, “ಕ್ರಿಸ್ತನು ದಾವೀದನ ಮಗನೆಂದು ಜನರು ಏಕೆ ಹೇಳುತ್ತಾರೆ?

[42] ಕೀರ್ತನೆಗಳ ಪುಸ್ತಕದಲ್ಲಿ ಸ್ವತಃ ದಾವೀದನೇ ಇಂತೆಂದಿದ್ದಾನೆ: ‘ಪ್ರಭುವು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ) ಹೇಳಿದ್ದೇನೆಂದರೆ,

[43] ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವನ್ನಾಗಿ ಮಾಡುವ ತನಕ ನನ್ನ ಬಲಗಡೆಯಲ್ಲೇ ಕುಳಿತುಕೊಂಡಿರು.’ ಕೀರ್ತನೆ. 110:1

[44] ದಾವೀದನು ಕ್ರಿಸ್ತನನ್ನು ‘ಪ್ರಭು’ವೆಂದು ಕರೆದ ಮೇಲೆ ಆತನು ಅವನಿಗೆ ಮಗನಾಗಲು ಹೇಗೆ ಸಾಧ್ಯ?” ಎಂದು ಹೇಳಿದನು.

[45] ಜನರೆಲ್ಲರೂ ಯೇಸುವಿನ ಮಾತನ್ನು ಆಲಿಸಿದರು. ಯೇಸು ತನ್ನ ಶಿಷ್ಯರಿಗೆ,

[46] “ಧರ್ಮೋಪದೇಶಕರ ಕುರಿತು ಎಚ್ಚರಿಕೆಯಾಗಿರಿ. ಅವರು ಪ್ರಾಮುಖ್ಯ ವ್ಯಕ್ತಿಗಳಂತೆ ಬಟ್ಟೆ ಧರಿಸಿಕೊಂಡು ತಿರುಗಾಡುತ್ತಾರೆ. ಮಾರುಕಟ್ಟೆಗಳಲ್ಲಿ ಜನರಿಂದ ಗೌರವ ಹೊಂದಲು ಆಶಿಸುತ್ತಾರೆ. ಸಭಾಮಂದಿರಗಳಲ್ಲಿ ಮತ್ತು ಔತಣಕೂಟಗಳಲ್ಲಿ ಉನ್ನತವಾದ ಆಸನಗಳನ್ನು ಆಶಿಸುತ್ತಾರೆ.

[47] ಆದರೆ ಅವರು ವಿಧವೆಯರಿಗೆ ಮೋಸಮಾಡಿ ಅವರ ಮನೆಗಳನ್ನು ಕಸಿದುಕೊಳ್ಳುತ್ತಾರೆ. ಬಳಿಕ ಉದ್ದವಾದ ಪ್ರಾರ್ಥನೆಗಳನ್ನು ಮಾಡಿ ಒಳ್ಳೆಯವರಂತೆ ನಟಿಸುತ್ತಾರೆ. ದೇವರು ಇವರನ್ನು ಕಠಿಣವಾದ ದಂಡನೆಗೆ ಗುರಿಪಡಿಸುತ್ತಾನೆ” ಎಂದು ಹೇಳಿದನು.

ಲೂಕನ ಸುವಾರ್ತೆ — Chapters