[1] ಸಬ್ಬತ್ ದಿನದ ಮರುದಿನ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬನ ತಾಯಿಯಾದ ಮರಿಯಳು ಕೆಲವು ಸುಗಂಧದ್ರವ್ಯಗಳನ್ನು ಯೇಸುವಿನ ದೇಹಕ್ಕೆ ಹಚ್ಚಬೇಕೆಂದಿದ್ದರು.
[2] ವಾರದ ಮೊದಲನೆಯ ದಿನ, ಮುಂಜಾನೆಯಲ್ಲಿಯೇ, ಅವರು ಸಮಾಧಿಗೆ ಹೊರಟರು. ಆಗ ಸೂರ್ಯೋದಯವಾಗಿದ್ದರೂ ಇನ್ನೂ ನಸುಕಾಗಿತ್ತು.
[3] ಆ ಸ್ತ್ರೀಯರು ಒಬ್ಬರಿಗೊಬ್ಬರು, “ದೊಡ್ಡ ಬಂಡೆಯಿಂದ ಸಮಾಧಿಯ ಬಾಗಿಲನ್ನು ಮುಚ್ಚಲಾಗಿದೆ. ಈ ಬಂಡೆಯನ್ನು ನಮಗಾಗಿ ಯಾರು ಉರುಳಿಸುತ್ತಾರೆ?” ಎಂದುಕೊಂಡರು.
[4] ಆ ಸ್ತ್ರೀಯರು ಸಮಾಧಿಯನ್ನು ತಲುಪಿದಾಗ ಆ ಬಂಡೆ ಉರುಳಿರುವುದನ್ನು ಕಂಡರು. ಆ ಬಂಡೆಯು ಬಹಳ ದೊಡ್ಡದಾಗಿತ್ತು ಆದರೆ ಅದನ್ನು ಬಾಗಿಲಿನಿಂದ ದೂರಕ್ಕೆ ಉರುಳಿಸಲಾಗಿತ್ತು.
[5] ಆ ಸ್ತ್ರೀಯರು ಸಮಾಧಿಯೊಳಗೆ ಹೋದಾಗ ಬಿಳುಪಾದ ನಿಲುವಂಗಿ ಧರಿಸಿದ್ದ ಒಬ್ಬ ಯುವಕನು ಸಮಾಧಿಯ ಬಲಗಡೆ ಕುಳಿತಿರುವುದನ್ನು ಕಂಡು ಭಯಗೊಂಡರು.
[6] ಆದರೆ ಅವನು, “ಭಯಪಡಬೇಡಿ! ಶಿಲುಬೆಗೇರಿಸಲ್ಪಟ್ಟ ನಜರೇತಿನ ಯೇಸುವನ್ನು ನೀವು ಹುಡುಕುತ್ತಿದ್ದೀರಲ್ಲವೇ? ಆತನು ಜೀವಂತನಾಗಿ ಎದ್ದಿದ್ದಾನೆ. ಆತನು ಇಲ್ಲಿಲ್ಲ. ನೋಡಿರಿ, ಆತನ ದೇಹವನ್ನು ಇಟ್ಟಿದ್ದ ಸ್ಥಳ ಇದೇ.
[7] ಈಗ ಹೋಗಿ ಆತನ ಶಿಷ್ಯರಿಗೆ ತಿಳಿಸಿರಿ. ಪೇತ್ರನಿಗಂತೂ ಖಂಡಿತವಾಗಿ ತಿಳಿಸಿರಿ. ನೀವು ಅವರಿಗೆ, ‘ಯೇಸು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ಆತನು ನಿಮಗಿಂತ ಮುಂಚೆ ಅಲ್ಲಿರುತ್ತಾನೆ. ಆತನು ನಿಮಗೆ ಮೊದಲೇ ಹೇಳಿದಂತೆ ನೀವು ಆತನನ್ನು ಅಲ್ಲಿ ನೋಡುವಿರಿ’ ಎಂದು ಹೇಳಿರಿ” ಎಂದನು.
[8] ಆ ಸ್ತ್ರೀಯರು ಬಹಳ ಭಯದಿಂದ ಗಲಿಬಿಲಿಗೊಂಡು, ಸಮಾಧಿಯನ್ನು ಬಿಟ್ಟು ಓಡಿಹೋದರು. ಅವರು ಬಹಳ ಭಯಗೊಂಡಿದ್ದರಿಂದ ಈ ವಿಷಯವನ್ನು ಯಾರಿಗೂ ಹೇಳಲಿಲ್ಲ.
[9] ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಜೀವಂತನಾಗಿ ಎದ್ದನು. ಯೇಸು ಮೊಟ್ಟಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು. ಹಿಂದೊಮ್ಮೆ ಯೇಸು ಮರಿಯಳಿಂದ ಏಳು ದೆವ್ವಗಳನ್ನು ಬಿಡಿಸಿದ್ದನು.
[10] ಮರಿಯಳು ಹೋಗಿ ಆತನ ಶಿಷ್ಯರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಿದ್ದರು.
[11] ಯೇಸು ಬದುಕಿರುವುದಾಗಿಯೂ ತಾನು ಆತನನ್ನು ನೋಡಿದ್ದಾಗಿಯೂ ಮರಿಯಳು ತಿಳಿಸಿದಾಗ ಶಿಷ್ಯರು ಅವಳನ್ನು ನಂಬಲಿಲ್ಲ.
[12] ನಂತರ, ಇಬ್ಬರು ಶಿಷ್ಯರು ಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಯೇಸು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು.
[13] ಈ ಶಿಷ್ಯರು ಇತರ ಶಿಷ್ಯರ ಬಳಿಗೆ ಹಿಂತಿರುಗಿ, ಈ ವಿಷಯವನ್ನು ತಿಳಿಸಿದರು. ಆದರೆ ಆ ಶಿಷ್ಯರು ಅವರನ್ನು ನಂಬಲಿಲ್ಲ.
[14] ನಂತರ ಹನ್ನೊಂದು ಜನ ಶಿಷ್ಯರು ಊಟ ಮಾಡುತ್ತಿರುವಾಗ, ಯೇಸು ಅವರಿಗೆ ಕಾಣಿಸಿಕೊಂಡನು. ಶಿಷ್ಯರಲ್ಲಿ ಕೊಂಚ ನಂಬಿಕೆ ಇದ್ದುದರಿಂದ ಯೇಸು ಅವರನ್ನು ಖಂಡಿಸಿದನು. ಏಕೆಂದರೆ, ಯೇಸು ಸಾವಿನಿಂದ ಎದ್ದುಬಂದಿದ್ದಾನೆಂದು ದೃಢವಾಗಿ ಹೇಳಿದ ಮಾತನ್ನು ಅವರು ನಂಬಲಿಲ್ಲ.
[15] ಯೇಸು ಶಿಷ್ಯರಿಗೆ, “ಪ್ರಪಂಚದ ಎಲ್ಲಾ ಕಡೆಗೆ ಹೋಗಿರಿ. ಪ್ರತಿಯೊಬ್ಬನಿಗೂ ಸುವಾರ್ತೆಯನ್ನು ಹೇಳಿರಿ.
[16] ನಂಬಿಕೆಯಿಟ್ಟು, ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದವನು ಅಪರಾಧಿ ಎಂಬ ನಿರ್ಣಯ ಹೊಂದುವನು.
[17] ನಂಬುವವರಾದರೋ ಅದ್ಭುತಕಾರ್ಯಗಳನ್ನು ಮಾಡುವರು. ಅವರು ನನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುವರು. ತಾವೆಂದೂ ಕಲಿತಿಲ್ಲದ ಭಾಷೆಗಳಲ್ಲಿ ಮಾತನಾಡುವರು.
[18] ಅವರು ಹಾವುಗಳನ್ನು ಹಿಡಿದುಕೊಂಡರೂ ಅವು ಅವರನ್ನು ಕಚ್ಚುವುದಿಲ್ಲ. ವಿಷಕುಡಿದರೂ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ಮುಟ್ಟಿದರೆ ರೋಗಿಗಳು ಗುಣಹೊಂದುವರು” ಎಂದು ಹೇಳಿದನು.
[19] ಪ್ರಭುವಾದ ಯೇಸು ಈ ಸಂಗತಿಗಳನ್ನು ಶಿಷ್ಯರಿಗೆ ಹೇಳಿದ ಮೇಲೆ, ಸ್ವರ್ಗದೊಳಗೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಕುಳಿತುಕೊಂಡನು.
[20] ಶಿಷ್ಯರು ಪ್ರಪಂಚದ ಎಲ್ಲಾ ಕಡೆಗೆ ಹೋಗಿ, ಜನರಿಗೆ ಸುವಾರ್ತೆಯನ್ನು ಸಾರಿದರು. ಪ್ರಭುವು ಅವರೊಂದಿಗೆ ಕಾರ್ಯಸಾಧಿಸುತ್ತಾ, ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ಬಲಪಡಿಸಿದನು.