Skip to content
Opens in a new window
Listen to this chapter • 7:27

[1] ಒಂದು ಸಬ್ಬತ್ ದಿನದಲ್ಲಿ ಯೇಸು ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದನು. ಅಲ್ಲಿದ್ದ ಜನರೆಲ್ಲರೂ ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು.

[2] ಯೇಸುವಿನ ಎದುರಿನಲ್ಲಿಯೇ ಜಲೋದರ ರೋಗವುಳ್ಳ ಒಬ್ಬನನ್ನು ಇರಿಸಿದ್ದರು.

[3] ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ? ತಪ್ಪೋ?” ಎಂದು ಕೇಳಿದನು.

[4] ಅವರು ಉತ್ತರಕೊಡಲಿಲ್ಲ. ಆಗ ಯೇಸು ಆ ಮನುಷ್ಯನ ಕೈಮುಟ್ಟಿ ವಾಸಿಮಾಡಿ ಅವನನ್ನು ಕಳುಹಿಸಿಬಿಟ್ಟನು.

[5] ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್ ದಿನದಲ್ಲಿ ನಿಮ್ಮ ಮಗನಾಗಲಿ ನಿಮ್ಮ ದುಡಿಯುವ ಪಶುವಾಗಲಿ ಬಾವಿಗೆ ಬಿದ್ದರೆ, ಆ ಕೂಡಲೇ ನೀವು ಬಾವಿಯಿಂದ ಮೇಲಕ್ಕೆ ಎತ್ತಿ ಬದುಕಿಸುತ್ತೀರಿ ಎಂಬುದು ನಿಮಗೆ ಗೊತ್ತೇ ಇದೆ” ಎಂದು ಹೇಳಿದನು.

[6] ಫರಿಸಾಯರಾಗಲಿ ಧರ್ಮೋಪದೇಶಕರಾಗಲಿ ಯೇಸುವಿನ ಈ ಮಾತಿಗೆ ಉತ್ತರ ಕೊಡಲಾಗಲಿಲ್ಲ.

[7] ಅತಿಥಿಗಳಾಗಿ ಬಂದಿದ್ದ ಕೆಲವರು ಊಟಕ್ಕೆ ಕುಳಿತುಕೊಳ್ಳಲು ಉತ್ತಮವಾದ ಸ್ಥಳಗಳನ್ನು ಆರಿಸಿಕೊಳ್ಳುತ್ತಿರುವುದನ್ನು ಕಂಡ ಯೇಸು ಈ ಸಾಮ್ಯವನ್ನು ಹೇಳಿದನು:

[8] “ಒಬ್ಬನು ನಿನ್ನನ್ನು ಮದುವೆಗೆ ಆಮಂತ್ರಿಸಿದರೆ, ಉನ್ನತವಾದ ಆಸನದಲ್ಲಿ ಕುಳಿತುಕೊಳ್ಳಬೇಡ. ಅವನು ನಿನಗಿಂತಲೂ ಪ್ರಮುಖನಾದವನನ್ನು ಆಮಂತ್ರಿಸಿದ್ದಿರಬಹುದು.

[9] ನೀನು ಉನ್ನತವಾದ ಸ್ಥಳದಲ್ಲಿ ಕುಳಿತುಕೊಂಡಿದ್ದರೆ, ನಿನಗೆ ಆಮಂತ್ರಣ ನೀಡಿರುವವನು ಬಂದು, ‘ಈ ಸ್ಥಳವನ್ನು ಇವನಿಗೆ ಬಿಟ್ಟುಕೊಡು’ ಎಂದು ನಿನಗೆ ಹೇಳಬಹುದು. ಆಗ ನೀನು ನಾಚಿಕೆಯಿಂದ ಕೊನೆಯ ಸ್ಥಳದಲ್ಲಿ ಕುಳಿತುಕೊಳ್ಳಬೇಕಾಗುವುದು.

[10] “ಆದ್ದರಿಂದ ಒಬ್ಬನು ನಿನ್ನನ್ನು ಆಮಂತ್ರಿಸುವಾಗ, ಕೊನೆಯ ಸ್ಥಳದಲ್ಲಿ ಹೋಗಿ ಕುಳಿತುಕೊ. ಆಗ ನಿನ್ನನ್ನು ಆಮಂತ್ರಿಸಿದ ವ್ಯಕ್ತಿಯು ಬಂದು, ‘ಸ್ನೇಹಿತನೇ, ಉನ್ನತವಾದ ಈ ಸ್ಥಳದಲ್ಲಿ ಕುಳಿತುಕೊ!’ ಎಂದು ನಿನಗೆ ಹೇಳುವನು. ಆಗ ನೆರೆದು ಬಂದ ಅತಿಥಿಗಳೆಲ್ಲಾ ನಿನ್ನನ್ನು ಗೌರವಿಸುವರು.

[11] ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು. ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”

[12] ಬಳಿಕ ಯೇಸು ತನ್ನನ್ನು ಆಮಂತ್ರಿಸಿದ ಫರಿಸಾಯನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ನಿನ್ನ ಸ್ನೇಹಿತರನ್ನು, ಸಹೋದರರನ್ನು, ಸಂಬಂಧಿಕರನ್ನು ಮತ್ತು ಶ್ರೀಮಂತರಾದ ನೆರೆಯವರನ್ನು ಆಮಂತ್ರಿಸಿದರೆ, ಅವರೂ ನಿನ್ನನ್ನು ಮತ್ತೊಮ್ಮೆ ಊಟಕ್ಕೆ ಆಮಂತ್ರಿಸುವರು. ಆಗ ಅದೇ ನಿನಗೆ ಪ್ರತಿಫಲವಾಗುವುದು.

[13] ಅದರ ಬದಲು, ನೀನು ಔತಣ ಮಾಡಿಸುವಾಗ ಬಡಜನರನ್ನು, ಕುಂಟರನ್ನು ಮತ್ತು ಕುರುಡರನ್ನು ಆಮಂತ್ರಿಸು.

[14] ಆಗ ನಿನಗೆ ಆಶೀರ್ವಾದ ದೊರೆಯುವುದು. ಏಕೆಂದರೆ, ಈ ಜನರು ನಿನ್ನನ್ನು ಔತಣಕ್ಕೆ ಆಮಂತ್ರಿಸಲಾರರು. ಅವರಲ್ಲಿ ಏನೂ ಇಲ್ಲ. ಆದರೆ ನೀತಿವಂತರು ಜೀವಂತವಾಗಿ ಎದ್ದುಬರುವಾಗ, ನಿನಗೆ ಪ್ರತಿಫಲ ದೊರೆಯುವುದು” ಎಂದು ಹೇಳಿದನು.

[15] ಯೇಸುವಿನೊಡನೆ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಈ ವಿಷಯಗಳನ್ನು ಕೇಳಿ ಯೇಸುವಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವರೇ ಧನ್ಯರು!” ಎಂದನು.

[16] ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬನು ಒಂದು ದೊಡ್ಡ ಔತಣವನ್ನು ಮಾಡಿಸಿ ಅನೇಕ ಜನರನ್ನು ಆಮಂತ್ರಿಸಿದನು.

[17] ಊಟದ ಸಮಯ ಬಂದಾಗ, ಅವನು ತನ್ನ ಸೇವಕನನ್ನು ಕಳುಹಿಸಿ, ‘ಬನ್ನಿರಿ! ಊಟ ಸಿದ್ಧವಾಗಿದೆ’ ಎಂದು ಅತಿಥಿಗಳಿಗೆ ತಿಳಿಸಿದನು.

[18] ಆದರೆ ಎಲ್ಲಾ ಅತಿಥಿಗಳು ತಾವು ಬರಲಾಗುವುದಿಲ್ಲವೆಂದು ಹೇಳಿದರು. ಪ್ರತಿಯೊಬ್ಬನೂ ಒಂದೊಂದು ನೆವ ಹೇಳಿದನು. ಮೊದಲನೆಯವನು, ‘ನಾನು ಇದೀಗ ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಆದ್ದರಿಂದ ನಾನು ಹೋಗಿ ಅದನ್ನು ನೋಡಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು.

[19] ಎರಡನೆಯವನು, ‘ನಾನು ಇದೀಗ ಐದು ಜೊತೆ ಎತ್ತುಗಳನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ನಾನು ಹೋಗಿ ಅವುಗಳನ್ನು ಪರೀಕ್ಷಿಸಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು.

[20] ಮೂರನೆಯವನು, ‘ನಾನು ಇದೀಗ ಮದುವೆಯಾಗಿದ್ದೇನೆ, ನಾನು ಬರಲಾರೆ’ ಎಂದನು.

[21] “ಆದ್ದರಿಂದ ಆ ಸೇವಕನು ಹಿಂತಿರುಗಿ ಹೋಗಿ ಅವರು ಹೇಳಿದ್ದನ್ನೆಲ್ಲ ತನ್ನ ಯಜಮಾನನಿಗೆ ತಿಳಿಸಿದನು. ಆಗ ಯಜಮಾನನು ಬಹಳ ಕೋಪಗೊಂಡು ಆ ಸೇವಕನಿಗೆ, ‘ಈ ಊರಿನ ಬೀದಿಗಳಿಗೂ ಸಂದಿಗಳಿಗೂ ಬೇಗನೆ ಹೋಗಿ ಬಡವರನ್ನೂ ಅಂಗವಿಕಲರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.

[22] “ತರುವಾಯ ಆ ಸೇವಕನು ಬಂದು, ‘ಸ್ವಾಮೀ, ನೀನು ಹೇಳಿದಂತೆಯೇ ಮಾಡಿದೆನು. ಆದರೆ ನಮ್ಮಲ್ಲಿ ಇನ್ನೂ ಹೆಚ್ಚು ಜನರಿಗೆ ಸ್ಥಳವಿದೆ.’ ಎಂದು ಹೇಳಿದನು.

[23] ಆಗ ಯಜಮಾನನು ಆ ಸೇವಕನಿಗೆ, ‘ಹೆದ್ದಾರಿಗಳಿಗೂ ರಸ್ತೆಗಳಿಗೂ ಹೋಗಿ, ಅಲ್ಲಿರುವ ಜನರನ್ನೆಲ್ಲಾ ಆಮಂತ್ರಿಸು. ನನ್ನ ಮನೆಯು ಜನರಿಂದ ತುಂಬಿಹೋಗಬೇಕೆಂಬುದೇ ನನ್ನ ಅಪೇಕ್ಷೆ.

[24] ನಾನು ಮೊದಲನೆ ಸಲ ಆಮಂತ್ರಿಸಿದ ಆ ಜನರಲ್ಲಿ ಒಬ್ಬರಾದರೂ ನನ್ನೊಂದಿಗೆ ಊಟಮಾಡಕೂಡದು!’ ಎಂದು ಹೇಳಿದನು.”

[25] ಅನೇಕ ಜನರು ಯೇಸುವಿನೊಂದಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾಗ ಆತನು ಅವರಿಗೆ ಹೀಗೆಂದನು:

[26] “ನನ್ನ ಬಳಿಗೆ ಬರುವವನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ತಂದೆತಾಯಿಗಳನ್ನು, ಹೆಂಡತಿಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನನ್ನು ಪ್ರೀತಿಸುವುದಾದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.

[27] ನನ್ನನ್ನು ಹಿಂಬಾಲಿಸುವವನು ತನಗೆ ಕೊಡಲ್ಪಟ್ಟಿರುವ ಶಿಲುಬೆಯನ್ನು (ಶ್ರಮೆ) ಹೊತ್ತುಕೊಂಡು ಹೋಗದಿದ್ದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.

[28] “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು.

[29] ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ,

[30] ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.

[31] “ಒಬ್ಬ ಅರಸನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವಾಗ, ಮೊದಲು ಅವನು ಕುಳಿತುಕೊಂಡು ಯೋಜನೆ ಮಾಡುವನು. ಅರಸನ ಬಳಿಯಲ್ಲಿ ಕೇವಲ ಹತ್ತುಸಾವಿರ ಮಂದಿ ಸೈನಿಕರಿದ್ದರೆ, ಇಪ್ಪತ್ತುಸಾವಿರ ಮಂದಿ ಸೈನಿಕರಿರುವ ಇನ್ನೊಬ್ಬ ಅರಸನನ್ನು ಸೋಲಿಸಲು ತನಗೆ ಸಾಧ್ಯವೇ ಎಂದು ಆಲೋಚಿಸುವನು.

[32] ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.

[33] “ಅದೇರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಬೇಕೆಂದಿದ್ದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ತ್ಯಜಿಸಿಬಿಡಬೇಕು. ಇಲ್ಲವಾದರೆ, ನನ್ನ ಶಿಷ್ಯರಾಗಲು ಸಾಧ್ಯವಿಲ್ಲ!

[34] “ಉಪ್ಪು ಒಳ್ಳೆಯ ಪದಾರ್ಥ. ಆದರೆ ಉಪ್ಪು ತನ್ನ ರುಚಿ ಕಳೆದುಕೊಂಡರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ನೀವು ಅದಕ್ಕೆ ಮತ್ತೆ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯವಿಲ್ಲ.

[35] ಅದರಿಂದ ಮಣ್ಣಿಗಾಗಲಿ ಗೊಬ್ಬರಕ್ಕಾಗಲಿ ಪ್ರಯೋಜನವಿಲ್ಲ. ಜನರು ಅದನ್ನು ಹೊರಗೆ ಬಿಸಾಡುತ್ತಾರೆ. “ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!”

ಲೂಕನ ಸುವಾರ್ತೆ — Chapters