Skip to content
Opens in a new window
Listen to this chapter • 5:28

[1] ಯೊರ್ದನ್ ನದಿಯ ಆಚೆಗಿರುವ ಬೆಟ್ಟದ ಮೇಲಿನ ಪ್ರದೇಶ, ಕಣಿವೆ ಪ್ರದೇಶ, ಲೆಬನೋನಿನ ಎದುರಿಗಿರುವ ಮಹಾಸಾಗರದ ತೀರಪ್ರದೇಶ ಇವುಗಳಲ್ಲಿ ವಾಸವಾಗಿದ್ದ ಅಮೋರಿಯ, ಹಿತ್ತಿಯ, ಕಾನಾನ್, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ರಾಜರು ನಡೆದ ಸಂಗತಿಯನ್ನು ಕೇಳಿದರು ಹಾಗೂ

[2] ಒಂದೇ ಮನಸ್ಸಿನಿಂದ ಯೆಹೋಶುವನಿಗೂ ಇಸ್ರಾಯೇಲ್ಯರಿಗೂ ವಿರೋಧವಾಗಿ ಯುದ್ಧಮಾಡುವುದಕ್ಕೆ ಕೂಡಿಕೊಂಡರು.

[3] ಯೆರಿಕೋವಿನವರನ್ನೂ ಮತ್ತು ಆಯಿ ಎಂಬ ಊರಿನವರನ್ನೂ ಯೆಹೋಶುವನು ಸಂಹರಿಸಿದ ಸುದ್ದಿಯು ಗಿಬ್ಯೋನಿನ ನಿವಾಸಿಗಳಿಗೆ ಮುಟ್ಟಿತು

[4] ಅವರು ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ ಅವರು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣಿ ತಟ್ಟುಗಳನ್ನು ಹಾಕಿ, ಅವುಗಳ ಮೇಲೆ ತೇಪೆ ಹಾಕಿದ ದ್ರಾಕ್ಷಾರಸದ ಹಳೆಯ ಬುದ್ದಲಿಗಳನ್ನು ಹೇರಿದರು,

[5] ಹರಿದುಹೋಗಿದ್ದ ಹಳೆಯ ಕೆರಗಳನ್ನು ಮೆಟ್ಟಿಕೊಂಡರು. ಹಳೆಯ ಬಟ್ಟೆಗಳನ್ನು ಹಾಕಿಕೊಂಡರು. ಒಣರೊಟ್ಟಿ ಚೂರುಗಳನ್ನು ಬುತ್ತಿಯಾಗಿ ಕಟ್ಟಿಕೊಂಡರು.

[6] ತಾವು ರಾಯಭಾರಿಗಳೆಂದು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಬಂದರು. ಅವನಿಗೂ ಇಸ್ರಾಯೇಲ್ಯರಿಗೂ “ನಾವು ದೂರದೇಶದಿಂದ ಬಂದವರು. ನೀವು ನಮ್ಮ ಸಂಗಡ ಒಂದು ಒಪ್ಪಂದ ಮಾಡಿಕೊಳ್ಳಬೇಕು” ಎಂದು ಕೇಳಿ ಕೊಂಡರು.

[7] ಆಗ ಇಸ್ರಾಯೇಲ್ಯರು ಹಿವ್ವಿಯರಾದ ಅವರಿಗೆ “ಬಹುಶಃ ನೀವು ನಮ್ಮ ದೇಶದ ನಿವಾಸಿಗಳೇ ಆಗಿರಬಹುದು. ಹೀಗಿರುವುದರಿಂದ ನಾವು ನಿಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳುವುದು ಹೇಗೆ?” ಎಂದು ಉತ್ತರಕೊಟ್ಟರು.

[8] ಅವರು ಯೆಹೋಶುವನಿಗೆ “ನಾವು ನಿಮ್ಮ ದಾಸರು” ಎಂದರು. ಯೆಹೋಶುವನು ಅವರನ್ನು “ನೀವು ಯಾರು? ಎಲ್ಲಿಯವರು?” ಎಂದು ವಿಚಾರಿಸಿದನು.

[9] ಅವರು “ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮ ಮಹತ್ತನ್ನು ಕೇಳಿ ಬಹುದೂರ ದೇಶದಿಂದ ಬಂದಿದ್ದೇವೆ. ನಮ್ಮ ಹಿರಿಯರೂ ದೇಶನಿವಾಸಿಗಳೂ ಯೆಹೋವನು ಐಗುಪ್ತದಲ್ಲಿ ನಡಿಸಿದ ಮಹತ್ಕಾರ್ಯಗಳ ಸುದ್ದಿಯನ್ನು ಕೇಳಿದ್ದಾರೆ.

[10] ಹೆಷ್ಬೋನಿನ ಅರಸನಾದ ಸೀಹೋನ್, ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಎಂಬ ಈ ಇಬ್ಬರು ಅಮೋರಿಯರ ಅರಸರಿಗೆ ಯೆಹೋವನು ಮಾಡಿದ್ದೆಲ್ಲವನ್ನೂ ಕೇಳಿದ್ದಾರೆ.

[11] ‘ನೀವು ಪ್ರಯಾಣಕ್ಕೋಸ್ಕರ ಬುತ್ತೀ ಕಟ್ಟಿಕೊಂಡು ಹೋಗಿ ಇಸ್ರಾಯೇಲ್ಯರನ್ನು ಎದುರುಗೊಂಡು “ನಾವು ನಿಮ್ಮ ಸೇವಕರು”, ನೀವು ನಮ್ಮ ಸಂಗಡ ಒಪ್ಪಂದ ಮಾಡಿಕೊಳ್ಳಬೇಕು ಎಂಬುದಾಗಿ ಅವರನ್ನು ಬೇಡಿಕೊಳ್ಳಿರಿ ಎಂದು ಹೇಳಿ ನಮ್ಮನ್ನು ಕಳುಹಿಸಿದರು.

[12] ನಾವು ನಿಮ್ಮನ್ನು ಎದುರುಗೊಳ್ಳುವುದಕ್ಕಾಗಿ ಮನೆಬಿಟ್ಟು ಹೊರಟಾಗ ಪ್ರಯಾಣಕ್ಕೋಸ್ಕರ ತೆಗೆದುಕೊಂಡ ಈ ರೊಟ್ಟಿ ಬಿಸಿಯಾಗಿತ್ತು. ಈಗ ಒಣಗಿ ಚೂರುಚೂರಾಗಿದೆ ನೋಡಿರಿ.

[13] ನಾವು ದ್ರಾಕ್ಷಾರಸ ತುಂಬಿಸಿಕೊಂಡಿದ್ದ ಈ ಬುದ್ದಲಿಗಳು ಹೊಸದಾಗಿದ್ದವು; ಈಗ ಹರಿದುಹೋಗಿವೆ. ನಮ್ಮ ಬಟ್ಟೆಬರೆಗಳು ಹಾಗೂ ಕೆರಗಳು ದೀರ್ಘಪ್ರಯಾಣದಿಂದ ಸವೆದುಹೋಗಿವೆ’” ಎಂದು ವಿವರಿಸಿದರು.

[14] ಆಗ ಇಸ್ರಾಯೇಲ್ಯರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಯೆಹೋವನನ್ನು ವಿಚಾರಿಸಲಿಲ್ಲ.

[15] ಯೆಹೋಶುವನು ಅವರೊಡನೆ “ನಿಮ್ಮ ಜೀವವನ್ನು ಕಾಪಾಡುತ್ತೇವೆ” ಎಂದು ಶಾಂತಿ ಸಂಧಾನ ಮಾಡಿಕೊಂಡನು. ಸಭೆಯ ನಾಯಕರೂ ಹಾಗೆಯೇ ಪ್ರಮಾಣ ಮಾಡಿದರು. ಜನರ ಪ್ರಧಾನರೂ ಪ್ರಮಾಣಮಾಡಿದರು.

[16] ಈ ಒಪ್ಪಂದವಾದ ಮೂರು ದಿನಗಳ ಮೇಲೆ ಅವರು ತಮ್ಮ ನೆರೆಯವರೆಂದು ತಮ್ಮ ಮಧ್ಯದಲ್ಲಿಯೇ ವಾಸಿಸುವವರೆಂದು ಇಸ್ರಾಯೇಲ್ಯರಿಗೆ ಗೊತ್ತಾಯಿತು.

[17] ಹೇಗೆಂದರೆ ಇಸ್ರಾಯೇಲ್ಯರು ಮೂರನೆಯ ದಿನದಲ್ಲಿ ಹೊರಟು ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳನ್ನು ಸೇರಿದರು. ಆಗ ಆ ಊರುಗಳು ಆ ಜನರದ್ದೇ ಎಂದು ಗೊತ್ತಾಯಿತು.

[18] ಸಭೆಯ ನಾಯಕರು ಇಸ್ರಾಯೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ಆ ಜನರಿಗೆ ಪ್ರಮಾಣಮಾಡಿದ್ದರಿಂದ ಇಸ್ರಾಯೇಲ್ಯರು ಅವರನ್ನು ಕೊಲ್ಲಲಿಲ್ಲ. ಆದರೆ ಸಭಿಕರೆಲ್ಲರು ತಮ್ಮ ನಾಯಕರಿಗೆ ವಿರೋಧವಾಗಿ ಗೊಣಗಾಡಿದರು.

[19] ಆಗ ನಾಯಕರೆಲ್ಲರು ಸಭೆಯ ಎಲ್ಲಾ ಸದಸ್ಯರಿಗೆ “ನಾವು ಇಸ್ರಾಯೇಲರ ದೇವರಾದ ಯೆಹೋವನ ಹೆಸರಿನಲ್ಲಿ ಅವರಿಗೆ ಪ್ರಮಾಣ ಮಾಡಿದ್ದರಿಂದ ಅವರನ್ನು ಮುಟ್ಟಲಾಗದು.

[20] ನಾವು ಇಟ್ಟ ಆಣೆಯ ನಿಮಿತ್ತ ದೇವರ ಕೋಪವು ನಮ್ಮ ಮೇಲೆ ಬಾರದಂತೆ ಅವರನ್ನು ಜೀವದಿಂದುಳಿಸಬೇಕು. ನಾವು ಹೀಗೆ ಮಾಡೋಣ, ಅವರನ್ನು ಜೀವದಿಂದ ಉಳಿಸಿ ಬಿಟ್ಟುಬಿಡೋಣ

[21] ಅವರು ಸಮೂಹಕ್ಕೆಲ್ಲಾ ಕಟ್ಟಿಗೆ ಸೀಳುವವರೂ ನೀರು ಹೊರುವವರೂ ಆಗಿರಲಿ” ಎಂದು ಹೇಳಿದರು. ನಾಯಕರ ಮಾತಿನಂತೆಯೇ ಆಯಿತು.

[22] ಯೆಹೋಶುವನು ಗಿಬ್ಯೋನ್ಯರನ್ನು ಕರೆಸಿ ಅವರಿಗೆ “ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ ಬಹು ದೂರದವರೆಂದು ಹೇಳಿ ನಮ್ಮನ್ನು ವಂಚಿಸಿದ್ದೇಕೆ?

[23] ಇದರಿಂದ ನೀವು ಶಾಪಗ್ರಸ್ತರು! ನೀವು ಯಾವಾಗಲೂ ದಾಸರಾಗಿದ್ದು ನನ್ನ ದೇವರ ಮಂದಿರಕ್ಕೆ ಕಟ್ಟಿಗೆ ಹೊಡೆಯುವವರೂ ನೀರುತರುವವರೂ ಆಗಿರಬೇಕು” ಎಂದನು.

[24] ಅವರು ಯೆಹೋಶುವನಿಗೆ “ನಿನ್ನ ದೇವರಾದ ಯೆಹೋವನು ತನ್ನ ಸೇವಕನಾದ ಮೋಶೆಗೆ ‘ನಾನು ನಿಮಗೆ ಈ ದೇಶವನ್ನೆಲ್ಲಾ ಕೊಡುವಾಗ ನೀವು ಇದರ ಎಲ್ಲಾ ನಿವಾಸಿಗಳನ್ನು ಸಂಹರಿಸಿ ಬಿಡಬೇಕೆಂದು’ ಆಜ್ಞಾಪಿಸಿದ್ದನ್ನು ಕೇಳಿ ನಮ್ಮ ಪ್ರಾಣ ತೆಗೆಯುವಿರೆಂದು ಹೆದರಿ ಹೀಗೆ ಮಾಡಿದೆವು.

[25] ಇಗೋ, ಈಗ ನಾವು ನಿನ್ನ ಕೈಯಲ್ಲಿದ್ದೇವೆ; ನಿನಗೆ ಯಾವುದು ಒಳ್ಳೆಯದು, ನ್ಯಾಯವಾದುದ್ದು ಎಂದು ತೋರುತ್ತದೋ ಅದರಂತೆ ನಮಗೆ ಮಾಡು” ಎಂದು ಉತ್ತರಕೊಟ್ಟರು.

[26] ಯೆಹೋಶುವನು ತಾನು ಮೊದಲು ಹೇಳಿದಂತೆಯೇ ಮಾಡಿದನು. ಅವನು ಅವರನ್ನು ಇಸ್ರಾಯೇಲ್ಯರ ಕೈಯಿಂದ ಹತರಾಗದಂತೆ ತಪ್ಪಿಸಿದನು.

[27] ಇಸ್ರಾಯೇಲ್ಯರಿಗಾಗಿ ಯೆಹೋವನು ಆರಿಸಿಕೊಂಡ ಸ್ಥಳದಲ್ಲಿ ಕಟ್ಟಲಾಗುವ ಆತನ ಯಜ್ಞವೇದಿಗೂ ಕಟ್ಟಿಗೆ ಕಡಿಯುವವರನ್ನಾಗಿ ಹಾಗೂ ನೀರು ಹೊರುವವರನ್ನಾಗಿ ಅವರನ್ನು ನೇಮಿಸಿದನು. ಅವರು ಇಂದಿನವರೆಗೂ ಅದೇ ಕೆಲಸವನ್ನು ಮಾಡಿಕೊಂಡು ಇಸ್ರಾಯೇಲ್ಯರೊಂದಿಗಿದ್ದಾರೆ.

ಯೆಹೋಶುವನು — Chapters