Skip to content
Opens in a new window
Listen to this chapter • 5:44

[1] ಯೆಹೋಶುವನು ದಿನತುಂಬಿದ ಮುದುಕನಾಗಲು ಯೆಹೋವನು ಅವನಿಗೆ, “ನೀನು ಈಗ ಮುದುಕನಾದಿ, ಸ್ವಾಧೀನಮಾಡಿಕೊಳ್ಳತಕ್ಕ ದೇಶಗಳು ಇನ್ನೂ ಬಹಳ ಇವೆ.

[2] ಅವುಗಳು ಯಾವುವೆಂದರೆ: ಐಗುಪ್ತದ ಈಚೆಯಲ್ಲಿರುವ ಶೀಹೋರ್ ಹಳ್ಳ ಮೊದಲುಗೊಂಡು ಕಾನಾನ್ಯರಿಗೆ ಸೇರಿರುವ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ

[3] ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರು, ಎಕ್ರೋನ್ ಎಂಬ ಪಟ್ಟಣಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದ ಫಿಲಿಷ್ಟಿಯ ಪ್ರಾಂತ್ಯ; ಗೆಷೂರ್ಯರ ಸೀಮೆಯು,

[4] ದಕ್ಷಿಣದಲ್ಲಿದ್ದ ಅವ್ವೀಯರ ದೇಶ ಚೀದೋನ್ಯರಿಗೆ ಸೇರಿದ ಮೆಯಾರಾ ಮೊದಲುಗೊಂಡು ಅಮೋರಿಯರ ಮೇರೆಯಾದ ಅಫೇಕದವರೆಗಿರುವ ಕಾನಾನ್ಯರ ದೇಶವು

[5] ಗೆಬಾಲ್ಯರ ಸೀಮೆ, ಹೆರ್ಮೋನ್ ಬೆಟ್ಟದ ತಪ್ಪಲಿನಲ್ಲಿರುವ ಬಾಲ್ಗಾದಿನಿಂದ ಹಾಮಾತಿನ ದಾರಿಯ ವರೆಗಿರುವ ಲೆಬನೋನಿನ ಪೂರ್ವ ಪ್ರದೇಶ;

[6] ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗೂ, ಚೀದೋನ್ಯರ ಎಲ್ಲಾ ಪರ್ವತ ಪ್ರಾಂತ್ಯಗಳು. ನಾನೇ ಈ ಎಲ್ಲಾ ಜನಾಂಗಗಳನ್ನು ಇಸ್ರಾಯೇಲ್ಯರ ಸಮ್ಮುಖದಿಂದ ಹೊರಡಿಸಿಬಿಡುವೆನು. ನೀನಾದರೂ ನಾನು ಮೊದಲೇ ಆಜ್ಞಾಪಿಸಿದಂತೆ ಇಸ್ರಾಯೇಲ್ಯರಿಗೆ ದೇಶವನ್ನು ಹಂಚಿಕೊಡುವಾಗ ಇವುಗಳನ್ನು ಸೇರಿಸಿ ದೇಶವನ್ನೆಲ್ಲಾ

[7] ಒಂಭತ್ತು ಕುಲಗಳಿಗೂ, ಮನಸ್ಸೆ ಕುಲದ ಅರ್ಧ ಜನರಿಗೂ ಪಾಲು ಮಾಡಿ ಕೊಡು” ಎಂದನು.

[8] ಮನಸ್ಸೆ ಕುಲದ ಉಳಿದ ಅರ್ಧಜನರಿಗೆ, ರೂಬೇನ್ಯರಿಗೆ ಹಾಗೂ ಗಾದ್ಯರಿಗೆ ಮೋಶೆಯಿಂದ ಯೊರ್ದನಿನ ಆಚೆಕಡೆಯಲ್ಲಿರುವ ಸ್ವತ್ತು ದೊರಕಿತು. ಯೆಹೋವನ ಸೇವಕನಾದ ಮೋಶೆಯು ಅವರಿಗೆ ಕೊಟ್ಟ ಪ್ರಾಂತ್ಯಗಳು ಯಾವುವೆಂದರೆ:

[9] ಅರ್ನೋನಿನ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ ಮತ್ತು ಅದೇ ಕಣಿವೆಯಲ್ಲಿ ಇದ್ದ ಪಟ್ಟಣ, ಇವು ಮೊದಲುಗೊಂಡು ದೀಬೋನಿನವರೆಗೆ ವಿಸ್ತರಿಸಿಕೊಂಡಿರುವ ಮೇದೆಬದ ತಪ್ಪಲ ಸೀಮೆ;

[10] ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸನಾದ ಸೀಹೋನನ ವಶದಲ್ಲಿದ್ದ ಅಮ್ಮೋನಿಯರ ಮೇರೆಯ ಈಚೆಗೆ ಇದ್ದಂಥ ಎಲ್ಲಾ ಪಟ್ಟಣಗಳು; ಗಿಲ್ಯಾದ್ ಸೀಮೆ

[11] ಗೆಷೂರ‍್ಯರ ಮತ್ತು ಮಾಕತೀಯರ ಪ್ರಾಂತ್ಯಗಳು ಹೆರ್ಮೋನ್ ಬೆಟ್ಟದ ಮೇಲಿನ ಎಲ್ಲಾ ಪ್ರದೇಶ,

[12] ಅಷ್ಟರೋತ್ ಎದ್ರೈ ಎಂಬ ಊರುಗಳಲ್ಲಿ ಆಳುತ್ತಿದ್ದ ರೆಫಾಯರ ವಂಶಸ್ಥನಾದ ಓಗನ ರಾಜ್ಯವಾಗಿದ್ದ ಸಲ್ಕಾ ಪಟ್ಟಣದ ವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳೂ. ಮೋಶೆ ಅವರನ್ನು ಗೆದ್ದು ಅವರ ದೇಶಗಳನ್ನು ಸ್ವಾಧೀನಮಾಡಿಕೊಂಡಿದ್ದನು.

[13] ಇಸ್ರಾಯೇಲ್ಯರು ಗೆಷೂರ‍್ಯರನ್ನೂ, ಮಾಕತೀಯರನ್ನೂ ದೇಶದೊಳಗಿಂದ ಹೊರಡಿಸಲಿಲ್ಲ. ಏಕೆಂದರೆ ಆದ್ದರಿಂದ ಗೆಷೂರ‍್ಯರೂ ಮಾಕತೀಯರೂ ಅವರು ಇಂದಿನವರೆಗೂ ಇಸ್ರಾಯೇಲ್ಯರ ಮಧ್ಯದಲ್ಲಿ ಇರುತ್ತಾರೆ.

[14] ಲೇವಿ ಕುಲದವರಿಗೆ ಮಾತ್ರ ಯಾವ ಪಾಲು ಸಿಕ್ಕಲಿಲ್ಲ. ಏಕೆಂದರೆ ಇಸ್ರಾಯೇಲಿನ ದೇವರಾದ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಆತನ ಯಜ್ಞಶೇಷವೇ ಅವರ ಸ್ವಾಸ್ತ್ಯವಾಗಿತ್ತು.

[15] ಮೋಶೆಯು ರೂಬೇನ್ಯರ ಮಕ್ಕಳ ಗೋತ್ರಗಳಿಗೆ ಸ್ವತ್ತಾಗಿ ಕೊಟ್ಟ ಪ್ರದೇಶಗಳು ಯಾವುವೆಂದರೆ:

[16] ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ;

[17] ಮೇದೆಬದ ತಪ್ಪಲ ಸೀಮೆಗೆ ಸೇರಿದ ಹೆಷ್ಬೋನ್ ಪಟ್ಟಣ, ಅಲ್ಲೇ ಎತ್ತರವಾದ ಬೈಲಿನಲ್ಲಿರುವ ದೀಬೋನ್, ಬಾಮೋತ್ ಬಾಳ್ ಬೇತ್ಬಾಳ್ಮೆಯೋನ್,

[18] ಯಹಚಾ ಕೆದೇಮೋತ್, ಮೇಫಾಯತ್,

[19] ಕಿರ್ಯಾತಯಿಮ್ ಸಿಬ್ಮಾ ಎಂಬ ಹೆಷ್ಬೋನಿನ ಉಪಗ್ರಾಮಗಳು, ಕಣಿವೆಯಲ್ಲಿರುವ ಬೆಟ್ಟದ ಮೇಲಿನ ಚೆರೆತ್ ಶಹರ್,

[20] ಬೇತ್‍ಪೆಗೋರ್, ಎಂಬ ಪಟ್ಟಣಗಳೂ ಪಿಸ್ಗಾದ ಬುಡದಲ್ಲಿರುವ ಸೀಮೆ, ಬೇತ್‌ಯೆಷಿಮೋತ್ ಪಟ್ಟಣ,

[21] ಒಟ್ಟಾರೆ ಮೀಶೋರೆಂಬ ಎತ್ತರವಾದ ಬಯಲಿನಲ್ಲಿದ್ದ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸನಾದ ಸೀಹೋನಿನ ಸಮಸ್ತ ರಾಜ್ಯಗಳು. ಮೋಶೆಯು ಆ ದೇಶದಲ್ಲಿ ವಾಸವಾಗಿದ್ದ ಸೀಹೋನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ ಪ್ರಭುಗಳಾಗಿರುವ ಅವನ ಸರದಾರರನ್ನೂ ಕೊಂದುಹಾಕಿದನು.

[22] ಇಸ್ರಾಯೇಲ್ಯರು ಕತ್ತಿಯಿಂದ ಸಂಹರಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನಾಗಿದ್ದ ಬಿಳಾಮನೂ ಇದ್ದನು.

[23] ಯೊರ್ದನ್ ನದಿಯು, ರೂಬೇನ್ಯರ ಪಡುವಣ ಮೇರೆಯಾಗಿತ್ತು. ರೂಬೇನ್ಯರ ಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿದ ಗ್ರಾಮನಗರಗಳು ಇವುಗಳೇ.

[24] ಮೋಶೆಯು ಗಾದ್ ಕುಲದ ಗೋತ್ರಗಳಿಗೆ ಸ್ವತ್ತಾಗಿ ಕೊಟ್ಟ ಪ್ರದೇಶಗಳು ಯಾವುವೆಂದರೆ:

[25] ಹೆಷ್ಬೋನಿನ ಅರಸನಾದ ಸೀಹೋನಿನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್, ಮೊದಲಾದ ಗಿಲ್ಯಾದಿನ ಎಲ್ಲಾ ಪಟ್ಟಣಗಳು, ರಬ್ಬಾ ಊರಿನ ಪೂರ್ವದಲ್ಲಿರುವ ಅರೋಯೇರ್ ಪಟ್ಟಣದ ವರೆಗೆ ವಿಸ್ತರಿಸಿಕೊಂಡಿರುವ ಅಮ್ಮೋನಿಯರ ಅರ್ಧ ರಾಜ್ಯ,

[26] ಹೆಷ್ಬೋನಿನಿಂದ ರಾಮತ್ ಮಿಚ್ಪೆ, ಬೆಟೋನೀಮ್ ಎಂಬ ಊರುಗಳ ವರೆಗೆ ಇರುವ ಪ್ರದೇಶ, ಮಹನಯಿಮಿನಿಂದ ದೆಬೀರ್ ಪ್ರಾಂತ್ಯದವರೆಗೂ ಇರುವ ಸೀಮೆ,

[27] ಯೊರ್ದನ್ ಕಣಿವೆಯಲ್ಲಿರುವ ಬೇತ್‌ಹಾರಾಮ್; ಬೇತ್‌ನಿಮ್ರಾ, ಸುಕ್ಕೋತ್, ಚಾಫೋನ ಎಂಬ ಪಟ್ಟಣಗಳು. ಕಿನ್ನೆರೆತ್ ಸಮುದ್ರದ ದಕ್ಷಿಣದಿಕ್ಕಿನ ಮೂಲೆಯ ವರೆಗೆ ವಿಸ್ತರಿಸಿಕೊಂಡಿರುವ ಯೊರ್ದನಿನ ಪೂರ್ವ ಪ್ರದೇಶಗಳು.

[28] ಈ ಎಲ್ಲಾ ಗ್ರಾಮನಗರಗಳು ಗಾದ್ ಕುಲದ ಸ್ವತ್ತಾದವು.

[29] ಮಹನಯಿಮಿನ ಉತ್ತರದಲ್ಲಿದ್ದ ಹಾಗೂ ಮೊದಲು ಬಾಷಾನಿನ ಅರಸನಾಗಿದ್ದ ಓಗನ ರಾಜ್ಯವಾಗಿದ್ದ ಎಲ್ಲಾ ಬಾಷಾನ್ ಸೀಮೆಯನ್ನು,

[30] ಮೋಶೆಯು ಮನಸ್ಸೆ ಕುಲದ ಅರ್ಧ ಗೋತ್ರಗಳಿಗೆ ಕೊಟ್ಟನು. ಯಾಯೀರನ ಗ್ರಾಮಗಳೆನ್ನಿಸಿಕೊಳ್ಳುವ ಅರವತ್ತು ಊರುಗಳು ಇದರೊಂದಿಗೆ ಇರುತ್ತವೆ.

[31] ಗಿಲ್ಯಾದಿನಲ್ಲಿ ಅರ್ಧ ಭಾಗವು ಓಗನ ರಾಜಧಾನಿಯಾಗಿದ್ದ, ಬಾಷಾನಿನ ಅಷ್ಟರೋತ್ ಹಾಗೂ ಎದ್ರೈ ಎಂಬ ಪಟ್ಟಣಗಳೂ ಮನಸ್ಸೆಯ ಮಗನಾದ ಮಾಕೀರನ ಗೋತ್ರದ ಅರ್ಧ ಜನರಿಗೆ ಸಿಕ್ಕಿದವು.

[32] ಮೋಶೆಯು ಯೊರ್ದನಿನ ಆಚೆ ಯೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲಿನಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವತ್ತಾಗಿ ಕೊಟ್ಟನು.

[33] ಆದರೆ ಲೇವಿಯ ಕುಲಕ್ಕೆ ಮೋಶೆಯು ಯಾವ ಸ್ವತ್ತನ್ನು ಕೊಡಲಿಲ್ಲ. ಯಾಕೆಂದರೆ ಇಸ್ರಾಯೇಲ್ಯರ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ಆತನೇ ಅವರ ಸ್ವತ್ತಾಗಿದ್ದನು.

ಯೆಹೋಶುವನು — Chapters