Skip to content
Opens in a new window
Listen to this chapter • 8:34

[1] ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಕುಲದ ಅರ್ಧ ಜನರನ್ನು ಕರೆಸಿ ಅವರಿಗೆ,

[2] “ನೀವು ಯೆಹೋವನ ಸೇವಕನಾದ ಮೋಶೆಯ ಆಜ್ಞೆಗಳೆಲ್ಲವನ್ನು ಕೈಕೊಂಡಿದ್ದೀರಿ. ನಾನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ್ದೀರಿ.

[3] ಈ ಕಾಲದಲ್ಲೆಲ್ಲಾ ನೀವು ನಿಮ್ಮ ಸಹೋದರರಿಂದ ಬೇರ್ಪಡದೆ ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಪಾಲಿಸುತ್ತಾ ಬಂದಿದ್ದೀರಿ.

[4] ಈಗ ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನಕ್ಕನುಸಾರವಾಗಿ ನಿಮ್ಮ ಸಹೋದರರಿಗೆ ವಿಶ್ರಾಂತಿಯನ್ನು ದಯಪಾಲಿಸಿರುವುದರಿಂದ, ಆತನ ಸೇವಕನಾದ ಮೋಶೆಯು ಯೊರ್ದನಿನ ಆಚೆಯಲ್ಲಿ ನಿಮಗೆ ಕೊಟ್ಟಿರುವ ಸ್ವತ್ತಿನಲ್ಲಿರುವ ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಬಹುದು.

[5] ಆದರೆ ಯೆಹೋವನ ಸೇವಕನಾದ ಮೋಶೆಯು ನಿಮಗೆ ಕೊಟ್ಟ ಧರ್ಮೋಪದೇಶದ ವಿಧಿಗಳನ್ನು ಜಾಗರೂಕತೆಯಿಂದ ಪಾಲಿಸಿರಿ; ಹಾಗೆಯೇ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾರ್ಗದಲ್ಲೇ ನಡೆದು, ಆತನ ಆಜ್ಞೆಗಳನ್ನು ಕೈಕೊಂಡು ಆತನೊಂದಿಗೆ ಸೇರಿಕೊಂಡು ಪೂರ್ಣಮನಸ್ಸಿನಿಂದಲೂ, ಪೂರ್ಣಹೃದಯದಿಂದಲೂ ಆತನನ್ನು ಸೇವಿಸಿರಿ,” ಎಂದು ಹೇಳಿ

[6] ಅವರನ್ನು ಆಶೀರ್ವದಿಸಿ ಕಳುಹಿಸಿದನು. ಅವರು ತಮ್ಮ ನಿವಾಸಗಳಿಗೆ ಹೋದರು.

[7] ಮೋಶೆಯು ಮನಸ್ಸೆ ಕುಲದ ಅರ್ಧ ಜನರಿಗೆ ಬಾಷಾನಿನಲ್ಲಿ ಸ್ವತ್ತನ್ನು ಕೊಟ್ಟಿದ್ದನು. ಉಳಿದ ಅರ್ಧಜನರಿಗೆ ಯೆಹೋಶುವನು ಯೊರ್ದನಿನ ಪಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲುಕೊಟ್ಟಿದ್ದನು. ಇದಲ್ಲದೆ ಯೆಹೋಶುವನು ಅವರನ್ನು ಹೀಗೆ ಆಶೀರ್ವದಿಸಿ ತಮ್ಮ ಸ್ವಂತ ಸ್ಥಳಗಳಿಗೆ ಕಳುಹಿಸುವಾಗ

[8] ಅವರನ್ನು ಆಶೀರ್ವದಿಸಿ “ನೀವು ಬಹಳ ಸಮೃದ್ಧಿಯುಳ್ಳವರಾಗಿ ದನಕುರಿ, ಬೆಳ್ಳಿಬಂಗಾರ, ತಾಮ್ರ, ಕಬ್ಬಿಣ, ವಸ್ತ್ರ, ಮೊದಲಾದ ವಸ್ತುಗಳನ್ನು ತೆಗೆದುಕೊಂಡು ನಿಮ್ಮನಿಮ್ಮ ನಿವಾಸಗಳಿಗೆ ಹೋಗಿರಿ. ನಿಮ್ಮ ಶತ್ರುಗಳಿಂದ ತೆಗೆದುಕೊಂಡ ಕೊಳ್ಳೆಯಲ್ಲಿ ನಿಮ್ಮ ಸಹೋದರರಿಗೂ ಪಾಲು ಕೊಡಿರಿ” ಎಂದನು

[9] ಆಗ ರೂಬೇನ್ಯರೂ ಗಾದ್ಯರೂ ಮನಸ್ಸೆ ಕುಲದ ಅರ್ಧ ಜನರೂ ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲರನ್ನು ಬಿಟ್ಟು ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯಿಂದ ತಮಗೆ ಸಿಕ್ಕಿದ ಸ್ವತ್ತಾದ ಗಿಲ್ಯಾದ್ ದೇಶಕ್ಕೆ ಹೊರಟು ಹೋದರು.

[10] ರೂಬೇನ್ಯರೂ ಗಾದ್ಯರೂ ಹಾಗೂ ಮನಸ್ಸೆ ಕುಲದ ಅರ್ಧ ಜನರೂ ಕಾನಾನ್ ದೇಶದಲ್ಲಿರುವ ಯೊರ್ದನಿನ ತೀರಪ್ರದೇಶಕ್ಕೆ ಬಂದಾಗ ಅಲ್ಲಿ ಒಂದು ದೊಡ್ಡ ಯಜ್ಞವೇದಿಯನ್ನು ಕಟ್ಟಿದರು.

[11] ರೂಬೇನ್ಯರು, ಗಾದ್ಯರು ಹಾಗೂ ಮನಸ್ಸೆಯ ಅರ್ಧ ಜನರು ಇಸ್ರಾಯೇಲ ದೇಶವಾದ ಕಾನಾನಿನ ಪೂರ್ವಕ್ಕಿರುವ ಯೊರ್ದನ್ ನದಿಯ ತೀರಪ್ರದೇಶದಲ್ಲಿ ಯಜ್ಞವೇದಿಯನ್ನು ಕಟ್ಟಿದ್ದಾರೆಂಬ ವರ್ತಮಾನವು ಮಿಕ್ಕ ಇಸ್ರಾಯೇಲರಿಗೂ ತಿಳಿದಾಗ,

[12] ಅವರೆಲ್ಲರೂ ಶೀಲೋವಿನಲ್ಲಿ ಒಟ್ಟಿಗೆ ಸೇರಿ ಅವರೊಡನೆ ಹೋರಾಡಲು ಸಿದ್ಧರಾದರು.

[13] ಅದಕ್ಕೆ ಮೊದಲು ಗಿಲ್ಯಾದಿನಲ್ಲಿರುವ ರೂಬೇನ್ಯರ, ಗಾದ್ಯರ ಹಾಗೂ ಮನಸ್ಸೆ ಕುಲದ ಅರ್ಧಜನರ ಬಳಿಗೆ ಮಹಾಯಾಜಕ ಎಲಿಯಾಜರನ ಮಗನಾದ ಫೀನೆಹಾಸನನ್ನು

[14] ಮತ್ತು ಕುಲಕ್ಕೆ ಒಬ್ಬನಂತೆ ಹತ್ತು ಮಂದಿ ನಾಯಕರನ್ನು ಕಳುಹಿಸಿದರು. ಇವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ಕುಲಗೋತ್ರ ಕುಟುಂಬಗಳಲ್ಲಿ ಮುಖ್ಯಸ್ಥನಾಗಿದ್ದನು.

[15] ಇವರು ಗಿಲ್ಯಾದನಲ್ಲಿದ್ದ ರೂಬೇನ್ಯರ, ಗಾದ್ಯರ ಹಾಗೂ ಮನಸ್ಸೆ ಕುಲದ ಅರ್ಧಜನರ ಬಳಿಗೆ ಬಂದು,

[16] “ಯೆಹೋವನ ಸರ್ವ ಸಭೆಯ ಮಾತನ್ನು ಕೇಳಿರಿ; ನೀವು ಇಸ್ರಾಯೇಲಿನ ದೇವರಿಗೆ ವಿರುದ್ಧವಾಗಿ ಇಂಥ ದ್ರೋಹ ಮಾಡಿದ್ದೇಕೆ? ನಿಮಗೋಸ್ಕರ ಯಜ್ಞವೇದಿಯನ್ನು ಕಟ್ಟಿಕೊಂಡದ್ದರಿಂದ ನೀವು ಯೆಹೋವನಿಗೆ ದ್ರೋಹ ಮಾಡಿದಂತಾಯಿತು; ನೀವು ಈ ಹೊತ್ತು ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದಂತಾಯಿತು.

[17] ನಾವು ಪೆಗೋರದಲ್ಲಿ ಅಪರಾಧಿಗಳಾದದ್ದು ಸಾಕಾಗಲಿಲ್ಲವೋ? ಅದರ ದೆಸೆಯಿಂದ ಯೆಹೋವನ ಸಭೆಗೆ ವ್ಯಾಧಿ ಬಂದರೂ ನಾವು ಇನ್ನೂ ಅದರಿಂದ ಪೂರ್ಣ ಶುದ್ಧರಾಗಲಿಲ್ಲ.

[18] ಈಗ ನೀವು ಪುನಃ ಯೆಹೋವನನ್ನು ತಳ್ಳಿ ಬಿಡುತ್ತಿದ್ದೀರೋ? ನೀವು ಈ ಹೊತ್ತು ಯೆಹೋವನಿಗೆ ವಿರೋಧವಾಗಿ ತಿರುಗಿ ಬಿದ್ದರೆ, ನಾಳೆಯೇ ಯೆಹೋವನ ಕೋಪಾಗ್ನಿಯು ಇಸ್ರಾಯೇಲ್ ಸರ್ವಸಭೆಯ ಮೇಲೆ ಉರಿಯ ತೊಡಗುವುದು.

[19] ನಿಮ್ಮ ದೇಶವು ಅಶುದ್ಧವಾಗಿದೆ ಎಂದು ತೋರಿದರೆ ಯೆಹೋವನ ಗುಡಾರವಿರುವ ಆತನ ಸ್ವಂತ ಸೀಮೆಗೆ ಬಂದು ನಮ್ಮ ಮಧ್ಯದಲ್ಲಿರುವ ಸ್ವತ್ತನ್ನು ತೆಗೆದುಕೊಳ್ಳಿ. ನಮ್ಮ ದೇವರಾದ ಯೆಹೋವನ ಯಜ್ಞವೇದಿಯ ಹೊರತು ನಿಮಗೋಸ್ಕರ ಇನ್ನೊಂದನ್ನು ಕಟ್ಟಿಕೊಂಡು ಯೆಹೋವನಿಗೂ ನಮಗೂ ವಿರೋಧವಾಗಿ ತಿರುಗಿ ಬೀಳಬೇಡಿರಿ.

[20] ಜೆರಹನ ಮಗನಾದ ಆಕಾನನು ಯೆಹೋವನ ಸೊತ್ತನ್ನು ಕದ್ದುಕೊಂಡು ದ್ರೋಹಿಯಾದಾಗ ಯೆಹೋವನ ಕೋಪವು ಇಸ್ರಾಯೇಲ್ಯರ ಸರ್ವಸಭೆಯ ಮೇಲೆ ಬಂದಿತು. ಅವನ ಪಾಪದ ದೆಸೆಯಿಂದ ಅವನೊಡನೆ ಅನೇಕರು ಸಾಯಬೇಕಾಯಿತಲ್ಲಾ” ಎಂದು ಹೇಳಿದನು.

[21] ಆಗ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆ ಕುಲದ ಅರ್ಧ ಜನರು ಇಸ್ರಾಯೇಲ್ ಕುಲಾಧಿಪತಿಗಳಿಗೆ ಹೀಗೆಂದು ಉತ್ತರಿಸಿದರು:

[22] “ದೇವಾಧಿದೇವನಾದ ಯೆಹೋವನು ಇದಕ್ಕೆ ಸಾಕ್ಷಿ; ಆ ದೇವಾಧಿದೇವನಾದ ಯೆಹೋವನಿಗೆ ಇದು ಗೊತ್ತಿದೆ. ಇಸ್ರಾಯೇಲರಿಗೂ ಗೊತ್ತಾಗುವುದು. ನಾವು ದ್ರೋಹಿಗಳು, ಯೆಹೋವನ ವಿರುದ್ಧವಾಗಿ ಪಾಪಮಾಡಿದವರು ಆಗಿದ್ದರೆ ಯೆಹೋವನು ನಮ್ಮನ್ನು ಈ ಹೊತ್ತೇ ನಮ್ಮ ಜೀವವನ್ನು ತೆಗೆದುಬಿಡಲಿ.

[23] ನಾವು ಯೆಹೋವನಿಂದ ವಿಮುಖರಾಗಿ ಸರ್ವಾಂಗಹೋಮ, ಸಮಾಧಾನಯಜ್ಞ, ಧಾನ್ಯ ನೈವೇದ್ಯ ಇವುಗಳನ್ನು ಸಮರ್ಪಿಸುವುದಕ್ಕೋಸ್ಕರ ಈ ಯಜ್ಞವೇದಿಯನ್ನು ಕಟ್ಟಿದ್ದರೆ ಯೆಹೋವನು ತಾನೇ ನಮ್ಮನ್ನು ಶಿಕ್ಷಿಸಲಿ.

[24] ಒಂದು ವಿಶೇಷವಾದ ಉದ್ದೇಶದಿಂದ ಈ ಕೆಲಸವನ್ನು ಮಾಡಿದ್ದೇವಷ್ಟೇ, ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ, ‘ಇಸ್ರಾಯೇಲ್ ದೇವರಾದ ಯೆಹೋವನಲ್ಲಿ ನಿಮಗೇನು ಪಾಲಿದೆ?’

[25] ರೂಬೇನ್ಯರೇ, ಗಾದ್ಯರೇ, ಯೆಹೋವನು ನಿಮಗೂ ನಮಗೂ ನಡುವೆ ಈ ಯೊರ್ದನ್ ನದಿಯನ್ನು ಮೇರೆಯಾಗಿ ಇಟ್ಟಿದ್ದಾನೆ. ಯೆಹೋವನಲ್ಲಿ ನಿಮಗೆ ಯಾವ ಪಾಲೂ ಇಲ್ಲ ಎಂದು ಹೇಳಿ ನಿಮ್ಮ ಮಕ್ಕಳು ನಮ್ಮ ಮಕ್ಕಳನ್ನು ದೈವಭಕ್ತಿಯಿಂದ ಬೇರ್ಪಡಿಸಿಯಾರೆಂದು ಭಯಪಟ್ಟೆವು.

[26] ಈ ಕಾರಣದಿಂದಲೇ, ‘ಬನ್ನಿ, ಒಂದು ಯಜ್ಞವೇದಿಯನ್ನು ಕಟ್ಟೋಣ. ಅದು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವುದಕ್ಕಲ್ಲ,’

[27] ಆದರೆ ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮಯಜ್ಞ, ಸಮಾಧಾನಯಜ್ಞ, ಮೊದಲಾದವುಗಳನ್ನು ಸಮರ್ಪಿಸಿ ಆರಾಧಿಸುವುದಕ್ಕೋಸ್ಕರ ನಮಗೂ ಹಕ್ಕಿದೆ ಎಂಬುದಕ್ಕೆ ಇದು ನಮಗೂ, ನಿಮಗೂ, ನಮ್ಮ ಸಂತಾನಕ್ಕೂ ನಿಮ್ಮ ಸಂತಾನಕ್ಕೂ ಸಾಕ್ಷಿಯಾಗಿರುವುದು. ಇದರಿಂದ ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ ಯೆಹೋವನಲ್ಲಿ ನಿಮಗೆ ಪಾಲಿಲ್ಲವೆಂದು ಹೇಳುವುದಕ್ಕೆ ಆಸ್ಪದವಿರುವುದಿಲ್ಲ.

[28] ಅವರು ಮುಂದೆ ನಮಗಾಗಲಿ, ನಮ್ಮ ಸಂತಾನದವರಿಗಾಗಲಿ ಈ ರೀತಿಯಾಗಿ ಹೇಳಿದರೆ ನಾವು ಅವರಿಗೆ ‘ಯೆಹೋವನ ಯಜ್ಞವೇದಿಯ ಮಾದರಿಯನ್ನು ನೋಡಿರಿ: ನಮ್ಮ ಪೂರ್ವಿಕರು ಇದನ್ನು ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಲಿಲ್ಲ; ಇದು ನಮ್ಮ ನಿಮ್ಮ ಮಧ್ಯದಲ್ಲಿ ಒಂದು ಸಾಕ್ಷಿಯಾಗಿದೆಯಷ್ಟೆ’ ಎಂದು ಹೇಳುವೆವು.

[29] ನಮ್ಮ ದೇವರಾದ ಯೆಹೋವನ ಗುಡಾರದ ಮುಂದಿರುವ ಯಜ್ಞವೇದಿಯ ಹೊರತು ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ, ಮೊದಲಾದವುಗಳನ್ನು ಸಮರ್ಪಿಸುವುದಕ್ಕೋಸ್ಕರ ಬೇರೊಂದು ಯಜ್ಞವೇದಿಯನ್ನು ಕಟ್ಟಿ ಯೆಹೋವನಿಗೆ ವಿರುದ್ಧವಾಗಿ ದ್ರೋಹಿಗಳಾಗಿರದಂತಾಗಲಿ. ಹಾಗೆ ನಮಗೆ ಎಂದಿಗೂ ಆಗದಿರಲಿ” ಎಂದರು.

[30] ಯಾಜಕನಾದ ಫೀನೆಹಾಸನೂ ಅವನ ಜೊತೆಯಲ್ಲಿ ಬಂದ ಕುಲಾಧಿಪತಿಗಳಾಗಿರುವ ಇಸ್ರಾಯೇಲ್ ಪ್ರಭುಗಳು, ರೂಬೇನ್, ಗಾದ್, ಮನಸ್ಸೆಯ ಕುಲಗಳವರ ಮಾತುಗಳನ್ನು ಕೇಳಿ ಸಂತೋಷಪಟ್ಟರು.

[31] ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನು ರೂಬೇನ್, ಗಾದ್, ಮನಸ್ಸೆ ಕುಲಗಳವರಿಗೆ “ನೀವು ಯೆಹೋವನಿಗೆ ವಿರುದ್ಧವಾಗಿ ಅಂಥ ದ್ರೋಹವನ್ನು ಮಾಡಲಿಲ್ಲವಾದ್ದರಿಂದ ಆತನು ನಮ್ಮ ಮಧ್ಯದಲ್ಲಿದ್ದಾನೆಂಬುದು ಈಗ ನಮಗೆ ತಿಳಿಯಿತು. ಹೀಗಿರಲಾಗಿ ನೀವು ಇಸ್ರಾಯೇಲರನ್ನು ಯೆಹೋವನ ಶಿಕ್ಷಾಹಸ್ತದಿಂದ ತಪ್ಪಿಸಿದ್ದೀರಿ” ಎಂದನು.

[32] ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನು, ಪ್ರಭುಗಳು, ಗಿಲ್ಯಾದ್ ಸೀಮೆಯಲ್ಲಿದ್ದ ರೂಬೇನ್ಯರು, ಗಾದ್ಯರು ಇವರ ಬಳಿಯಿಂದ ಕಾನಾನ್ ದೇಶದಲ್ಲಿದ್ದ ಇಸ್ರಾಯೇಲರ ಬಳಿಗೆ ಬಂದು, ಅವರಿಗೆ ಈ ವರ್ತಮಾನವನ್ನು ತಿಳಿಸಲು

[33] ಅವರು ಬಹು ಸಂತೋಷಪಟ್ಟು ದೇವರನ್ನು ಕೊಂಡಾಡಿ ರೂಬೇನ್ ಗಾದ್ ಕುಲಗಳೊಡನೆ ಯುದ್ಧ ಮಾಡಿ ಅವರ ದೇಶವನ್ನು ಹಾಳುಮಾಡಬೇಕೆಂಬ ಆಲೋಚನೆಯನ್ನು ಬಿಟ್ಟರು.

[34] ರೂಬೇನ್ಯರೂ ಗಾದ್ಯರೂ ಯೆಹೋವನೇ ದೇವರು ಎಂಬುದಕ್ಕೆ ಈ ಯಜ್ಞವೇದಿಯೇ ಸಾಕ್ಷಿ ಎಂದು ಹೇಳಿ ಅದಕ್ಕೆ ಏದ್ ಎಂಬ ಹೆಸರಿಟ್ಟರು.

ಯೆಹೋಶುವನು — Chapters