[1] ನೂನನ ಮಗನಾದ ಯೆಹೋಶುವನು ಇಬ್ಬರು ಗೂಢಚಾರರನ್ನು ಗುಪ್ತವಾಗಿ ಯೆರಿಕೋ ಪಟ್ಟಣವನ್ನೂ ನೋಡುವುದಕ್ಕೋಸ್ಕರ ಶಿಟ್ಟೀಮಿನಿಂದ ಕಳುಹಿಸಿದನು. ಅವರಿಗೆ “ನೀವು ಹೊರಟು ಹೋಗಿ ಕಾನಾನ್ ದೇಶದ ಯೆರಿಕೋ ಪಟ್ಟಣವನ್ನು ನೋಡಿರಿ” ಎಂದನು. ಆಗ ಅವರು ಹೊರಟು ಹೋಗಿ ರಾಹಾಬಳೆಂಬ ವೇಶ್ಯೆಯ ಮನೆಯಲ್ಲಿ ಇಳಿದುಕೊಂಡರು.
[2] ಜನರು ಯೆರಿಕೋವಿನ ಅರಸನಿಗೆ “ಇಗೋ, ಈ ರಾತ್ರಿ ಇಸ್ರಾಯೇಲ್ಯರ ಕಡೆಯವರು ನಮ್ಮ ದೇಶವನ್ನು ಸಂಚರಿಸಿ ಹೊಂಚುಹಾಕುವುದಕ್ಕೆ ಬಂದಿದ್ದಾರೆ” ಎಂದು ತಿಳಿಸಿದರು.
[3] ಆಗ ಯೆರಿಕೋವಿನ ಅರಸನು ರಾಹಾಬಳಿಗೆ “ನಿನ್ನ ಮನೆಯಲ್ಲಿ ಇಳಿದುಕೊಂಡಿರುವ ಆ ಮನುಷ್ಯರನ್ನು ತಂದೊಪ್ಪಿಸು; ಅವರು ದೇಶವನ್ನೆಲ್ಲಾ ಸಂಚರಿಸಿ ನೋಡಿ ಹೊಂಚುಹಾಕುವುದಕ್ಕೆ ಬಂದವರು” ಎಂದು ಹೇಳಿ ಕಳುಹಿಸಿದನು.
[4] ಆದರೆ ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು ಕೇಳಲು ಬಂದವರಿಗೆ, “ಆ ಮನುಷ್ಯರು ನನ್ನ ಬಳಿಗೆ ಬಂದದ್ದು ನಿಜ; ಅವರು ಎಲ್ಲಿಯವರೆಂಬುದು ನನಗೆ ತಿಳಿಯಲಿಲ್ಲ.
[5] ಊರಬಾಗಿಲನ್ನು ಮುಚ್ಚುವ ಹೊತ್ತಿನಲ್ಲಿ ಕತ್ತಲಲ್ಲೇ ಹೊರಟುಹೋದರು. ಎಲ್ಲಿಗೆ ಹೋದರೆಂಬುದು ಗೊತ್ತಿಲ್ಲ. ಬೇಗನೆ ಅವರನ್ನು ಬೆನ್ನಟ್ಟಿರಿ; ನಿಮಗೆ ಸಿಕ್ಕಾರು” ಎಂದು ಹೇಳಿದಳು.
[6] ಆದರೆ ಅವಳು ಆ ಮನುಷ್ಯರನ್ನು ಮಾಳಿಗೆಯ ಮೇಲೆ ಹತ್ತಿಸಿ, ಅಲ್ಲಿ ಸಾಲಾಗಿ ಇಟ್ಟಿದ್ದ ಸೆಣಬಿನ ಹೊರೆಗಳ ಮಧ್ಯದಲ್ಲಿ ಬಚ್ಚಿಟ್ಟಿದ್ದಳು.
[7] ಅರಸನ ಆಳುಗಳು ಯೊರ್ದನಿನ ದಾರಿ ಹಿಡಿದು ಹೋಗಿ ಹೊಳೆದಾಟುವ ಸ್ಥಳದವರೆಗೂ ಹುಡುಕಿದರು. ಅವರನ್ನು ಹಿಂದಟ್ಟುವವರು ಹೋದ ಕೂಡಲೇ ಹೆಬ್ಬಾಗಿಲನ್ನು ಮುಚ್ಚಿದರು.
[8] ಆ ಗೂಢಚಾರರು ಮಲಗಿಕೊಳ್ಳುವ ಮೊದಲೇ ಆಕೆಯು ಮಾಳಿಗೆ ಹತ್ತಿ ಅವರ ಬಳಿಗೆ ಬಂದು ಹೇಳಿದ್ದೇನೆಂದರೆ
[9] “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿದ್ದಾನೆಂದು ನಾನು ಬಲ್ಲೆನು. ನಿಮ್ಮ ವಿಷಯದಲ್ಲಿ ನಮಗೆ ಮಹಾಭಯವುಂಟಾಗಿದೆ; ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟುಹೋಗಿದ್ದಾರೆ.
[10] ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟಿದ್ದನ್ನೂ, ನೀವು ಯೊರ್ದನಿನ ಆಚೆಯಲ್ಲಿರುವ ಸೀಹೋನ್ ಮತ್ತು ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನಾಶಮಾಡಿದ್ದನ್ನೂ ಕೇಳಿ
[11] ನಮ್ಮ ಎದೆ ಒಡೆದು ಹೋಯಿತು; ನಿಮ್ಮನ್ನು ಎದುರಿಸುವ ಧೈರ್ಯವು ಯಾರಿಗೂ ಇಲ್ಲ. ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು.
[12] ಆದುದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತನ್ನು ಕೊಡಬೇಕು. ನಾನು ನಿಮಗೆ ದಯೆತೋರಿಸಿದಂತೆ ನೀವೂ ಸಹ ನನ್ನ ತಂದೆಯ ಮನೆಯವರಿಗೆ ದಯೆತೋರಿಸಬೇಕೆಂದು ಯೆಹೋವನ ಮೇಲೆ ವಾಗ್ದಾನ ನೀಡಬೇಕು.
[13] ನನ್ನ ತಂದೆ ತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗಿರುವುದೆಲ್ಲವನ್ನು ನಾಶಮಾಡದೆ ಉಳಿಸುವುದಾಗಿ ಯೆಹೋವನ ಹೆಸರಿನಲ್ಲಿ ವಾಗ್ದಾನ ಮಾಡಬೇಕು ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎಂದಳು.
[14] ಆಗ ಆ ಗೂಢಚಾರರು “ನೀವು ನಮ್ಮ ವಿಷಯವನ್ನು ಬಹಿರಂಗ ಮಾಡದಿದ್ದರೆ ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿರುತ್ತೇವೆ; ಯೆಹೋವನು ಈ ದೇಶವನ್ನು ನಮಗೆ ಅನುಗ್ರಹಿಸಿದ ಮೇಲೆ ನಾವು ಕೊಟ್ಟ ಮಾತಿನಂತೆ ನಿನ್ನಲ್ಲಿ ದಯೆಯಿಂದಲೂ ನಂಬಿಗಸ್ತಿಕೆಯಿಂದಲೂ ನಡೆದುಕೊಳ್ಳುವೆವು” ಅಂದರು.
[15] ಅವಳ ಮನೆಯು ಊರಗೋಡೆಯ ಮೇಲಿದ್ದುದರಿಂದ ಅವರನ್ನು ಹಗ್ಗದ ಮೂಲಕ ಕಿಟಿಕಿಯಿಂದ ಕೆಳಕ್ಕೆ ಇಳಿಸಿ ಅವರಿಗೆ
[16] “ನಿಮ್ಮನ್ನು ಹಿಂದಟ್ಟುವವರಿಗೆ ನೀವು ಸಿಕ್ಕದಂತೆ ಆ ಬೆಟ್ಟಕ್ಕೆ ಓಡಿ ಹೋಗಿ ಅಲ್ಲಿ ಮೂರು ದಿನ ಅಡಗಿಕೊಂಡಿದ್ದು, ತರುವಾಯ ಅವರು ಹಿಂದಿರುಗಿದ ಮೇಲೆ ನಿಮ್ಮ ದಾರಿ ಹಿಡಿದು ಹೋಗಿರಿ” ಎಂದಳು.
[17] ಆಗ ಅವರಲ್ಲಿ ಒಬ್ಬನು ಆಕೆಗೆ “ನಾವು ಹೇಳುವ ಮಾತಿನಂತೆ ನೀನು ನಡೆಯದಿದ್ದರೆ, ನೀನು ನಮ್ಮಿಂದ ಮಾಡಿಸಿದ ವಾಗ್ದಾನಕ್ಕೆ ನಾವು ಹೊಣೆಗಾರರಲ್ಲ;
[18] ನಾವು ಈ ದೇಶದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಇಳಿಸಿದ ಕಿಟಿಕಿಗೆ ಈ ಕೆಂಪು ದಾರವನ್ನು ಕಟ್ಟಬೇಕು ಮತ್ತು ನಿನ್ನ ತಂದೆತಾಯಿಗಳನ್ನೂ ಅಣ್ಣತಮ್ಮಂದಿರನ್ನೂ ಎಲ್ಲಾ ಬಂಧುಬಳಗದವರನ್ನೂ ನಿನ್ನ ಮನೆಯಲ್ಲಿ ಸೇರಿಸಿಕೊಂಡಿರಬೇಕು.
[19] ಅವರಲ್ಲಿ ಯಾರಾದರೂ ಮನೆಬಿಟ್ಟು ಬೀದಿಗೆ ಬಂದರೆ ಅವರ ಮರಣಕ್ಕೆ ಅವರೇ ಕಾರಣರು; ಅದಕ್ಕೆ ನಾವು ಹೊಣೆಗಾರರಲ್ಲ. ಆದರೆ ನಿನ್ನೊಡನೆ ಮನೆಯಲ್ಲಿದ್ದವರ ಮೇಲೆ ಯಾರಾದರೂ ಕೈ ಮಾಡಿದ್ದಾದರೆ ಆ ರಕ್ತಾಪರಾಧವು ನಮ್ಮ ತಲೆಯ ಮೇಲೆ ಇರುವುದು.
[20] ಇದಲ್ಲದೆ ನೀನು ನಮ್ಮ ವಿಷಯವನ್ನು ಬಹಿರಂಗಪಡಿಸಿದರೆ ನಮ್ಮಿಂದ ಮಾಡಿಸಿದ ವಾಗ್ದಾನಕ್ಕೆ ನಾವು ಹೊಣೆಗಾರರಲ್ಲ” ಎಂದು ಹೇಳಿದರು.
[21] ಅದಕ್ಕೆ ಅವಳು “ನಿಮ್ಮ ಮಾತಿನಂತೆಯೇ ಆಗಲಿ” ಎಂದು ಹೇಳಿ ಅವರನ್ನು ಕಳುಹಿಸಿದಳು; ಅವರು ಹೊರಟು ಹೋದ ಮೇಲೆ ಆ ಕೆಂಪು ದಾರವನ್ನು ಕಿಟಿಕಿಗೆ ಕಟ್ಟಿದಳು.
[22] ಗೂಢಚಾರರು ಹೊರಟು ಹೋಗಿ ಆ ಬೆಟ್ಟವನ್ನು ಸೇರಿ ಬೆನ್ನಟ್ಟುವವರು ಹಿಂದಿರುಗುವ ತನಕ ಮೂರು ದಿನಗಳ ಕಾಲ ಅಲ್ಲೇ ತಂಗಿದ್ದರು. ಬೆನ್ನಟ್ಟುವವರು ಅವರನ್ನು ದಾರಿಯುದ್ದಕ್ಕೂ ಹುಡುಕಿ ಕಾಣದೆ ಹಿಂದಿರುಗಿದರು.
[23] ಆಗ ಅವರಿಬ್ಬರೂ ಬೆಟ್ಟದಿಂದಿಳಿದು, ಹೊಳೆದಾಟಿ, ನೂನನ ಮಗನಾದ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದರು.
[24] ಇದಲ್ಲದೆ ಅವರು “ಯೆಹೋಶುವನಿಗೆ ನಿಶ್ಚಯವಾಗಿ ಯೆಹೋವನು ಆ ದೇಶವನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ; ಅದರ ನಿವಾಸಿಗಳೆಲ್ಲಾ ನಮ್ಮ ನಿಮಿತ್ತ ನಡುಗುತ್ತಾ ಕಂಗೆಟ್ಟು ಹೋಗಿದ್ದಾರೆ” ಎಂದು ತಿಳಿಸಿದರು.