[1] ಯೋಸೇಫನ ಚೊಚ್ಚಲ ಮಗನಾದ ಮನಸ್ಸೆಯ ವಂಶದವರಿಗೆ ಸಿಕ್ಕಿದ ಸ್ವತ್ತಿನ ವಿವರ: ಮನಸ್ಸೆಯ ಹಿರಿಯ ಮಗನೂ ಗಿಲ್ಯಾದನ ತಂದೆಯೂ ಆಗಿರುವ ಮಾಕೀರನು ಯುದ್ಧವೀರನಾಗಿದ್ದನು. ಆದ್ದರಿಂದ ಅವನಿಗೆ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳು ಸಿಕ್ಕಿದವು.
[2] ಯೋಸೇಫನ ಮಗನಾಗಿರುವ ಮನಸ್ಸೆಯ ಉಳಿದ ಗಂಡು ಮಕ್ಕಳಾದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೆರ್, ಶೆಮೀದಾ ಎಂಬುವವರ ವಂಶದವರಿಗೆ ಯೊರ್ದನಿನ ಈಚೆಯಲ್ಲಿ ಸ್ವತ್ತು ಸಿಕ್ಕಿತು.
[3] ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನೂ ಆದ ಚಲ್ಪಹಾದನಿಗೆ ಹೆಣ್ಣು ಮಕ್ಕಳ ಹೊರತು ಗಂಡು ಮಕ್ಕಳು ಇರಲಿಲ್ಲ. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬುವವರು ಅವನ ಹೆಣ್ಣು ಮಕ್ಕಳು.
[4] ಇವರು ಮಹಾಯಾಜಕನಾದ ಎಲ್ಲಾಜಾರ, ನೂನನ ಮಗನಾದ ಯೆಹೋಶುವ, ಹಾಗೂ ಕುಲಾಧಿಪತಿಗಳ ಬಳಿಗೆ ಬಂದು, “ನಮ್ಮ ಅಣ್ಣತಮ್ಮಂದಿರೊಡನೆ ನಮಗೂ ಪಾಲುಕೊಡಬೇಕೆಂದು ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನಲ್ಲಾ?” ಎಂದು ಹೇಳಲು ಯೆಹೋಶುವನು ಯೆಹೋವನ ಅಪ್ಪಣೆಯಂತೆ ಅವರಿಗೆ ಅವರ ತಂದೆಯ ಅಣ್ಣತಮ್ಮಂದಿರ ಜೊತೆಗೆ ಸ್ವತ್ತನ್ನು ಕೊಟ್ಟನು.
[5] ಮನಸ್ಸೆ ಕುಲದ ಹೆಣ್ಣುಮಕ್ಕಳಿಗೆ ಗಂಡು ಮಕ್ಕಳ ಸಹಿತವಾಗಿ ಸ್ವಾಸ್ತ್ಯ ದೊರಕಿದ್ದರಿಂದ ಮನಸ್ಸೆಯವರಿಗೆ ಯೊರ್ದನಿನ ಆಚೆಯಲ್ಲಿ ಬಾಷಾನ್ ಮತ್ತು ಗಿಲ್ಯಾದ್ ಪ್ರಾಂತ್ಯಗಳ ಜೊತೆಗೆ ಈಚೆಯಲ್ಲಿಯೂ ಹತ್ತು ಪಾಲು ಸಿಕ್ಕಿದವು.
[6] ಗಿಲ್ಯಾದ್ ಸೀಮೆಯು ಮನಸ್ಸೆಯ ಉಳಿದ ಗೋತ್ರಗಳಿಗೆ ಸಿಕ್ಕಿತು.
[7] ಮನಸ್ಸೆಯವರ ಸ್ವತ್ತಿನ ಮೇರೆಯು ಆಶೇರ್ ಊರಿನಿಂದ ಶೆಕೆಮಿನ ಪೂರ್ವದಲ್ಲಿರುವ ಮಿಕ್ಮೆತಾತಿನ ಮೇಲೆ ದಕ್ಷಿಣದಲ್ಲಿರುವ ತಪ್ಪೂಹದ ಬುಗ್ಗೆಗೆ ಹೋಗುತ್ತದೆ.
[8] ತಪ್ಪೂಹ ಪಟ್ಟಣಕ್ಕೆ ಸೇರುವ ಭೂಮಿಯು ಮನಸ್ಸೆಯವರದು; ಆದರೆ ಅವರ ಮೇರೆಗೆ ಹೊಂದಿರುವ ತಪ್ಪೂಹ ಪಟ್ಟಣವು ಎಫ್ರಾಯೀಮ್ಯರದು;
[9] ಅಲ್ಲಿಂದ ಅವರ ಮೇರೆಯು ಇಳಿಯುತ್ತಾ ಕಾನಾ ಹಳ್ಳದ ದಕ್ಷಿಣಕ್ಕೆ ಹೋಗುತ್ತದೆ. ಅಲ್ಲಿ ಮನಸ್ಸೆಯವರಿಗೆ ಇರುವಂತೆ ಎಫ್ರಾಯೀಮ್ಯರಿಗೂ ಕೆಲವು ಪಟ್ಟಣಗಳಿರುತ್ತವೆ. ಮನಸ್ಸೆಯವರ ಮುಂದಿನ ಮೇರೆಯು ಹಳ್ಳದ ಉತ್ತರ ತೀರವನ್ನು ಅನುಸರಿಸಿ ಹೋಗಿ ಸಮುದ್ರದ ದಡದಲ್ಲಿ ಮುಕ್ತಾಯಗೊಳ್ಳುತ್ತದೆ.
[10] ಆ ಹಳ್ಳದ ದಕ್ಷಿಣ ತೀರವು ಎಫ್ರಾಯೀಮ್ಯರದು; ಉತ್ತರ ತೀರವು ಮನಸ್ಸೆಯವರದು. ಸಮುದ್ರವೇ ಇವರ ಪಶ್ಚಿಮದ ಮೇರೆಯು. ಉತ್ತರಕ್ಕೆ ಆಶೇರ್ ಕುಲದವರ ಪ್ರಾಂತ್ಯವೂ ಪೂರ್ವಕ್ಕೆ ಇಸ್ಸಾಕಾರ್ ಕುಲದವರ ದೇಶವೂ ಇರುತ್ತದೆ.
[11] ಇದಲ್ಲದೆ ಮನಸ್ಸೆಯವರಿಗೆ ಇಸ್ಸಾಕಾರ್, ಆಶೇರ್ ಎಂಬುವವರ ಪ್ರಾಂತ್ಯಗಳಲ್ಲಿ ಬೇತಷೆಯಾನ್, ಇಬ್ಲೆಯಾಮ, ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ದುರ್ಗತ್ರಯವಾದ ಎಂದೋರ, ತಾನಾಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳಿಗೆ ಸೇರಿದ ಊರುಗಳು ಸಿಕ್ಕಿದವು.
[12] ಆದರೆ ಮನಸ್ಸೆಯವರು ಆ ಪಟ್ಟಣಗಳ ನಿವಾಸಿಗಳನ್ನು ಹೊರದೂಡಲಿಲ್ಲ. ಕಾನಾನ್ಯರಿಗೆ ಅಲ್ಲಿ ವಾಸಿಸುವುದಕ್ಕೆ ಅನುಕೂಲವಾಯಿತು.
[13] ಇಸ್ರಾಯೇಲ್ಯರು ಬಲಗೊಂಡ ಮೇಲೆ ಕಾನಾನ್ಯರನ್ನು ಹೊರಡಿಸದೇ ಅವರನ್ನು ದಾಸತ್ವಕ್ಕೆ ಹಚ್ಚಿದರು.
[14] ಆದರೆ ಯೋಸೇಫನ ಸಂತಾನದವರು ಯೆಹೋಶುವನಿಗೆ, “ನೀನು ಚೀಟು ಹಾಕಿ, ನಮಗೆ ಒಂದೇ ಭಾಗವನ್ನು ಕೊಟ್ಟದ್ದೇಕೆ? ಯೆಹೋವನು ನಮ್ಮನ್ನು ಇಂದಿನವರೆಗೂ ಆಶೀರ್ವದಿಸಿರುವುದರಿಂದ ನಾವು ಮಹಾಜನಾಂಗವಾಗಿದ್ದೇವಲ್ಲಾ?” ಎಂದು ಹೇಳಲು
[15] ಯೆಹೋಶುವನು ಅವರಿಗೆ, “ಮಹಾಜನಾಂಗವಾದ ನಿಮಗೆ ಎಫ್ರಾಯೀಮ್ ಬೆಟ್ಟದ ಸೀಮೆ ಸಾಲದಿದ್ದರೆ ಪೆರಿಜ್ಜೀಯರ ಮತ್ತು ರೆಫಾಯರ ಸೀಮೆಗಳಿಗೆ ಹೋಗಿ ಅಲ್ಲಿನ ಕಾಡು ಕಡಿದು ಸ್ಥಳಮಾಡಿಕೊಳ್ಳಿ” ಎಂದನು.
[16] ಅವರು ತಿರುಗಿ ಯೆಹೋಶುವನಿಗೆ, “ನಮ್ಮ ಪರ್ವತ ಪ್ರದೇಶವು ನಮಗೆ ಸಾಲುವುದಿಲ್ಲ. ಬೇತಷೆಯಾನ್ ಮತ್ತು ಅದಕ್ಕೆ ಸೇರಿದ ಊರುಗಳಿರುವ ಕಣಿವೆಯಲ್ಲೂ ಹಾಗೂ ಇಜ್ರೇಲಿನ ಕಣಿವೆಯಲ್ಲೂ ವಾಸಮಾಡುವ ಕಾನಾನ್ಯರೆಲ್ಲರೂ ಕಬ್ಬಿಣದ ರಥವುಳ್ಳವರು” ಎಂದರು
[17] ಯೆಹೋಶುವನು ಯೋಸೇಫರಾದ ಎಫ್ರಾಯೀಮ್ ಹಾಗೂ ಮನಸ್ಸೆ ಕುಲಗಳ ಜನರಿಗೆ, “ನೀವು ಮಹಾಜನಾಂಗವೂ ಬಹು ಬಲವುಳ್ಳವರೂ ಆಗಿರುವುದು ನಿಜ. ನೀವು ಒಂದು ಭಾಗಕ್ಕಿಂತ ಹೆಚ್ಚು ತೆಗೆದುಕೊಳ್ಳಬಹುದಾಗಿದೆ.
[18] ಆ ಬೆಟ್ಟದ ಸೀಮೆಯನ್ನು ನಿಮಗೆ ಕೊಟ್ಟಿರುತ್ತೇನೆ. ಅದರಲ್ಲಿ ಕಾಡುಗಳಿದ್ದರೂ ನೀವು ಅವುಗಳನ್ನು ಕಡಿದುಹಾಕಬಹುದು. ಅದಕ್ಕೆ ಸೇರಿರುವ ಬಯಲು ಭೂಮಿ ನಿಮ್ಮದೇ. ಕಾನಾನ್ಯರು ಬಲಿಷ್ಠರಾಗಿ ಕಬ್ಬಿಣದ ರಥಗಳುಳ್ಳವರಾಗಿದ್ದರೂ ನೀವು ಅವರನ್ನು ಹೊರದೂಡುವಿರಿ” ಎಂದು ಉತ್ತರ ಕೊಟ್ಟನು.