Skip to content
Opens in a new window
Listen to this chapter • 5:03

[1] ದೇಶವೆಲ್ಲಾ ತಮ್ಮ ವಶವಾದ ಮೇಲೆ ಇಸ್ರಾಯೇಲ್ಯ ಸಮೂಹದ ಎಲ್ಲಾ ಜನರೂ ಶೀಲೋವಿನಲ್ಲಿ ಕೂಡಿ ಬಂದು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.

[2] ಇಸ್ರಾಯೇಲ್ಯರಲ್ಲಿ ಇನ್ನೂ ಏಳು ಕುಲದವರಿಗೆ ಪಾಲು ಸಿಕ್ಕಿರಲಿಲ್ಲ.

[3] ಆಗ ಯೆಹೋಶುವನು ಇಸ್ರಾಯೇಲ್ಯರಿಗೆ “ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವುದರಲ್ಲಿ ಇನ್ನೆಷ್ಟು ತಡಮಾಡುತ್ತೀರಿ?

[4] ಪ್ರತಿಯೊಂದು ಕುಲದಿಂದ ಮೂರು ಮೂರು ಜನರನ್ನು ನೇಮಿಸಿರಿ. ನಾನು ಅವರನ್ನು ಕಳುಹಿಸುವೆನು. ಅವರು ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ತಮ್ಮ ತಮ್ಮ ಕುಲಗಳಿಗನುಸಾರವಾಗಿ ಎಲ್ಲಾ ಪ್ರದೇಶಗಳ ಪಟ್ಟಿಯನ್ನು ಬರೆದುಕೊಂಡು ನನ್ನ ಬಳಿಗೆ ಬರಲಿ.

[5] ತರುವಾಯ ಅವರು ಏಳು ಪಾಲುಗಳನ್ನು ಮಾಡಿ ತಮ್ಮತಮ್ಮೊಳಗೆ ಹಂಚಿಕೊಳ್ಳಲಿ. ದಕ್ಷಿಣದಲ್ಲಿ ಯೆಹೂದ ಕುಲದವರಿಗೂ ಉತ್ತರದಲ್ಲಿ ಯೋಸೇಫನ ಕುಲದವರಿಗೂ ಸ್ವತ್ತು ಸಿಕ್ಕುತ್ತದೆ. ಅದು ಅವರಿಗೇ ಇರಲಿ.

[6] ಅವರು ಪಟ್ಟಿಯಲ್ಲಿ ದೇಶವನ್ನು ಏಳು ಪಾಲು ಮಾಡಿ ನನ್ನ ಬಳಿಗೆ ತೆಗೆದುಕೊಂಡು ಬರಬೇಕು. ನಾನು ನಿಮಗೋಸ್ಕರ ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಚೀಟು ಹಾಕುವೆನು.

[7] ಲೇವಿಯರಿಗೆ ನಿಮ್ಮ ಸಂಗಡ ಪಾಲು ಇರುವುದಿಲ್ಲ. ಯೆಹೋವನಿಗೆ ಸಲ್ಲಿಸುವ ಯಾಜಕ ಸೇವೆಯೇ ಅವರ ಸ್ವತ್ತಾಗಿದೆ. ಗಾದ್ ಹಾಗೂ ರೂಬೇನ್ ಕುಲಗಳಿಗೂ ಮನಸ್ಸೆ ಕುಲದ ಅರ್ಧ ಜನರಿಗೂ ಯೊರ್ದನಿನ ಪೂರ್ವ ದಿಕ್ಕಿನಲ್ಲಿ ಯೆಹೋವನ ಸೇವಕನಾದ ಮೋಶೆಯಿಂದಲೇ ಸ್ವತ್ತು ಸಿಕ್ಕಿದೆ,” ಎಂದನು

[8] ದೇಶದ ಪಟ್ಟಿಯನ್ನು ಮಾಡತಕ್ಕ ಜನರು ಹೊರಡುವುದಕ್ಕಿಂತ ಮೊದಲು ಯೆಹೋಶುವನು ಅವರಿಗೆ, “ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ಪಟ್ಟಿಮಾಡಿಕೊಂಡು ಶೀಲೋವಿನಲ್ಲಿರುವ ನನ್ನ ಬಳಿಗೆ ಬನ್ನಿರಿ. ನಾನು ಯೆಹೋವನ ಮುಂದೆ ನಿಮಗೋಸ್ಕರ ಚೀಟು ಹಾಕುವೆನು” ಎಂದು ಹೇಳಿ ಕಳುಹಿಸಿದನು.

[9] ಆ ಜನರು ಹೊರಟು ದೇಶದಲ್ಲೆಲ್ಲಾ ಸಂಚರಿಸಿ ಒಂದು ಪುಸ್ತಕದಲ್ಲಿ ಅದರ ಗ್ರಾಮ ನಗರಗಳನ್ನೆಲ್ಲಾ ಬರೆದು ಏಳು ಭಾಗಗಳನ್ನಾಗಿ ಮಾಡಿ ಶೀಲೋವಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಹಿಂತಿರುಗಿ ಬಂದರು.

[10] ಯೆಹೋಶುವನು ಶೀಲೋವಿನಲ್ಲಿಯೇ ಯೆಹೋವನ ಮುಂದೆ ಅವರಿಗೋಸ್ಕರ ಚೀಟು ಹಾಕಿ ದೇಶವನ್ನು ಅವರ ಕುಲಗಳಿಗೆ ಹಂಚಿಕೊಟ್ಟನು.

[11] ಚೀಟು ಮೊದಲು ಬೆನ್ಯಾಮೀನ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಯೆಹೂದ್ಯರ ಮತ್ತು ಯೋಸೇಫರ ಪ್ರಾಂತ್ಯಗಳ ಮಧ್ಯದಲ್ಲಿರುತ್ತದೆ.

[12] ಅದರ ಉತ್ತರದಿಕ್ಕಿನ ಮೇರೆಯು ಯೊರ್ದನ್ ನದಿಯಿಂದ ಯೆರಿಕೋವಿನ ಉತ್ತರದಲ್ಲಿರುವ ಗುಡ್ಡದ ಮೇಲಿನಿಂದ ಪಶ್ಚಿಮಕ್ಕೆ ಹೋಗಿ ಗಟ್ಟಾಹತ್ತಿ ಬೇತಾವೆನಿನ ಬಯಲಿನಲ್ಲಿ ಕೊನೆಗೊಳ್ಳುತ್ತದೆ.

[13] ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಎನ್ನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗುತ್ತದೆ.

[14] ಅದರ ಮೇರೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು ಕಿರ್ಯಾತ್ ಬಾಳ್ ಎನ್ನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯಾತ್ಯಾರೀಮ್ ಎಂಬ ಪಟ್ಟಣದಲ್ಲಿ ಕೊನೆಗೊಳ್ಳುತ್ತದೆ. ಇದೇ ಅವರ ಪಡುವಣ ಮೇರೆ.

[15] ದಕ್ಷಿಣ ದಿಕ್ಕಿನ ಮೇರೆಯು ಪಡುವಣ ಮೂಲೆಯಾಗಿರುವ ಕಿರ್ಯಾತ್ಯಾರೀಮಿನ ಪ್ರಾಂತ್ಯದಿಂದ

[16] ನೆಫ್ತೋಹ ಬುಗ್ಗೆಯ ಮೇಲೆ ಬೆನ್ ಹಿನ್ನೋಮ್ ಕಣಿವೆಯ ಈಚೆಗೂ ರೆಫಾಯೀಮ್ ಕಣಿವೆಯ ಉತ್ತರದಲ್ಲಿಯೂ ಇರುವ ಬೆಟ್ಟದ ಅಂಚಿಗೆ ಹೋಗಿ ಅಲ್ಲಿಂದ ಯೆಬೂಸಿಯರ ಬೆಟ್ಟದ ದಕ್ಷಿಣದಲ್ಲಿದ್ದ ಬೆನ್ ಹಿನ್ನೋಮ್ ಕಣಿವೆಯ ಮಾರ್ಗವಾಗಿ ಏನರೋಗೆಲಿಗೆ ಬರುತ್ತದೆ.

[17] ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಇಳಿಯುತ್ತಾ ಏನ್ ಷೆಮೆಷಿಗೂ, ಅದುಮೀಮಿನ ದಾರಿಯ ಎದುರಿನಲ್ಲಿರುವ ಗೆಲೀಲೋತಕ್ಕೆ ತಲುಪಿ ರೂಬೇನನ ಮಗನಾದ ಬೋಹನನ ಬಂಡೆಯ ತನಕ ಇಳಿದು,

[18] ಅರಾಬದ ಉತ್ತರದಲ್ಲಿರುವ ಬೆಟ್ಟ ಇವುಗಳ ಮೇಲೆ ಅರಾಬಾ ಎಂಬ ಕಣಿವೆ ಪ್ರದೇಶಕ್ಕೆ ಹೋಗುತ್ತದೆ.

[19] ಅಲ್ಲಿಂದ ಮೇರೆಯು ಬೇತ್ ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಬಡಗಣ ಮೂಲೆಗೆ ಹೋಗಿ ಯೊರ್ದನ್ ನದಿಯು ಸಮುದ್ರಕ್ಕೆ ಬಂದು ಸೇರುವ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. ಇದೇ ದಕ್ಷಿಣ ದಿಕ್ಕಿನ ಮೇರೆಯು.

[20] ಯೊರ್ದನ್ ನದಿಯೇ ಅವರ ಪೂರ್ವ ದಿಕ್ಕಿನ ಮೇರೆಯು.

[21] ಬೆನ್ಯಾಮೀನ್ ಗೋತ್ರಗಳ ಸ್ವತ್ತಿನ ಸುತ್ತಣ ಮೇರೆಯು ಇದೇ ಬೆನ್ಯಾಮೀನನ ಗೋತ್ರಗಳಿಗೆ ದೊರಕಿದ ಪಟ್ಟಣಗಳು ಯಾವುವೆಂದರೆ: ಯೆರಿಕೋ, ಬೇತ್‌ಹೊಗ್ಲಾ, ಏಮೆಕ್ಕೆಚ್ಚೀಚ್,

[22] ಬೇತ್ ಅರಾಬಾ, ಚೆಮಾರಯಿಮ್, ಬೇತೇಲ್,

[23] ಅವ್ವೀಮ್, ಪಾರಾ, ಒಫ್ರಾ, ಅಮ್ಮೋನ್ಯ,

[24] ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು;

[25] ಗಿಬ್ಯೋನ್, ರಾಮಾ, ಬೇರೋತ್,

[26] ಮಿಚ್ಪೆ, ಕೆಫೀರಾ, ಮೋಚಾ,

[27] ರೆಕೆಮ್, ಇರ್ಪೇಲ್, ತರಲಾ,

[28] ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು ಇವೇ. ಬೆನ್ಯಾಮೀನ ಗೋತ್ರಗಳಿಗೆ ದೊರಕಿದ ಸ್ವತ್ತು ಇವೇ.

ಯೆಹೋಶುವನು — Chapters