[1] ಯೆಹೋಶುವನು ಬೆಳಗಿನ ಜಾವದಲ್ಲೇ ಎದ್ದನು; ಅವನೊಂದಿಗೆ ಇಸ್ರಾಯೇಲ್ಯರೆಲ್ಲರೂ ಶಿಟ್ಟೀಮನ್ನು ಬಿಟ್ಟು ಯೊರ್ದನಿಗೆ ಬಂದು ಅದನ್ನು ದಾಟುವ ಮೊದಲು ಅಲ್ಲೇ ಇಳಿದುಕೊಂಡರು.
[2] ಮೂರು ದಿನಗಳಾದ ಮೇಲೆ ಜನಾಧಿಪತಿಗಳು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ
[3] “ಯಾಜಕರಾದ ಲೇವಿಯರು ನಿಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತಿರುವುದನ್ನು ಕಂಡ ಕೂಡಲೆ ನೀವು ನಿಮ್ಮ ಸ್ಥಳಗಳನ್ನು ಬಿಟ್ಟು ಅದನ್ನು ಹಿಂಬಾಲಿಸಿರಿ.
[4] ಆದರೆ ನಿಮಗೂ ಮಂಜೂಷಕ್ಕೂ ಸುಮಾರು ಎರಡು ಸಾವಿರ ಮೊಳ ಅಂತರವಿರಬೇಕು; ಹತ್ತಿರ ಹೋಗಬಾರದು. ಹೀಗೆ ನೀವು ಹೋಗಬೇಕಾದ ಮಾರ್ಗವು ನಿಮಗೆ ಗೊತ್ತಾಗುವುದು; ಏಕೆಂದರೆ ನೀವು ಆ ಮಾರ್ಗವಾಗಿ ಇಲ್ಲಿಯವರೆಗೆ ಪ್ರಯಾಣ ಮಾಡಿರುವುದಿಲ್ಲ” ಅಂದರು.
[5] ಇದಲ್ಲದೆ ಯೆಹೋಶುವನು ಜನರಿಗೆ “ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ; ಯೆಹೋವನು ನಾಳೆ ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ನಡಿಸುವನು” ಎಂದು ಹೇಳಿದನು.
[6] ನಂತರ ಯೆಹೋಶುವನು ಯಾಜಕರಿಗೆ “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ನಡೆದು ಹೊಳೆ ದಾಟಿರಿ” ಎಂದು ಆಜ್ಞಾಪಿಸಲು ಅವರು ಆ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ಹೋದರು.
[7] ಆಗ ಯೆಹೋವನು ಯೆಹೋಶುವನಿಗೆ “ನಾನು ಈ ದಿನ ನಿನ್ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸುವೆನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನೆಂದು ಅವರಿಗೆ ಗೊತ್ತಾಗುವುದು.
[8] ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ನದಿಯ ಅಂಚಿಗೆ ಬಂದ ಕೂಡಲೆ ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು” ಎಂದು ಹೇಳಿದನು.
[9] ಆಗ ಯೆಹೋಶುವನು ಇಸ್ರಾಯೇಲ್ಯರಿಗೆ “ಇಲ್ಲಿಗೆ ಬಂದು ನಿಮ್ಮ ದೇವರಾದ ಯೆಹೋವನ ಮಾತುಗಳನ್ನು ಕೇಳಿರಿ” ಎಂದು ಹೇಳಿ,
[10] “ಜೀವಸ್ವರೂಪನಾದ ದೇವರು ನಿಮ್ಮ ಮಧ್ಯದಲ್ಲಿ ಇದ್ದಾನೆಂದು ಆತನು ಕಾನಾನ್ಯರನ್ನು, ಹಿತ್ತಿಯರನ್ನು, ಹಿವ್ವಿಯರನ್ನು, ಪೆರಿಜೀಯರನ್ನು, ಗಿರ್ಗಾಷಿಯರನ್ನು, ಅಮೋರಿಯರನ್ನು, ಯೆಬೂಸಿಯರನ್ನು ನಿಮ್ಮ ಮುಂದೆ ಓಡಿಸಿಬಿಡುವನೆಂದು ನಿಮಗೆ ಗೊತ್ತಾಗುವುದು.
[11] ಹೇಗೆಂದರೆ ಸರ್ವಲೋಕದ ಒಡೆಯನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದಾಗಿ ಹೋಗಿ ಯೊರ್ದನಿನಲ್ಲಿ ಇಳಿಯವುದು.
[12] ಆಗ ನೀನು ಇಸ್ರಾಯೇಲರ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಬೇಕು.
[13] ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ತಮ್ಮ ಕಾಲುಗಳನ್ನು ಯೊರ್ದನ್ ನದಿಯ ನೀರಲ್ಲಿ ಇಡುತ್ತಲೇ ಮೇಲಿನಿಂದ ಹರಿದು ಬರುವ ನೀರು ಮುಂದೆ ಸಾಗದೆ, ಅಲ್ಲೇ ರಾಶಿಯಾಗಿ ನಿಂತುಕೊಳ್ಳುವುದು” ಎಂದು ತಿಳಿಸಿದನು.
[14] ಜನರು ಯೊರ್ದನ್ ನದಿಯನ್ನು ದಾಟುವುದಕ್ಕೋಸ್ಕರ ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು.
[15] ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು, ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುತ್ತಿದ್ದ ಯೊರ್ದನ್ ನದಿಯ ನೀರು ನಿಂತುಹೋಯಿತು.
[16] ಮೇಲಿನಿಂದ ಹರಿದು ಬರುತ್ತಿದ್ದ ನೀರು ಬಹುದೂರದಲ್ಲಿದ್ದ ಚಾರೆತಾನಿನ ಹತ್ತಿರವಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದು ಹೋಯಿತು ಜನರು ಯೆರಿಕೋವಿನ ಎದುರಿನಲ್ಲಿ ಹೊಳೆದಾಟಿದರು.
[17] ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಈ ಪ್ರಕಾರ ಜನರೆಲ್ಲರೂ ಯೊರ್ದನಿನ ಆಚೆಗೆ ತಲುಪಿದರು.