[1] ಜನರೆಲ್ಲರು ಯೊರ್ದನಿನ ಆಚೆಗೆ ದಾಟಿದ ಮೇಲೆ ಯೆಹೋವನು ಯೆಹೋಶುವನಿಗೆ
[2] “ನೀನು ಜನರೊಳಗಿಂದ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಂಡು
[3] ಯೊರ್ದನಿನ ಮಧ್ಯದಲ್ಲಿ ಯಾಜಕರು ನಿಂತಿದ್ದ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ಅವುಗಳನ್ನು ನಿಮ್ಮ ಸಂಗಡ ಈಚೇ ದಡಕ್ಕೆ ತಂದು ನೀವು ಈ ರಾತ್ರಿ ತಂಗುವ ಸ್ಥಳದಲ್ಲಿ ನಿಲ್ಲಿಸಿರಿ” ಎಂದು ಆಜ್ಞಾಪಿಸು ಎಂದನು.
[4] ಆಗ ಯೆಹೋಶುವನು ತಾನು ಇಸ್ರಾಯೇಲ್ಯರೊಳಗಿಂದ ಕುಲಕ್ಕೆ ಒಬ್ಬನಂತೆ ಆರಿಸಿಕೊಂಡ ಹನ್ನೆರಡು ಮಂದಿಯನ್ನು ಕರೆದು ಅವರಿಗೆ
[5] “ನೀವು ನಿಮ್ಮ ದೇವರಾದ ಯೆಹೋವನ ಮಂಜೂಷದ ಮುಂದಾಗಿ ಯೊರ್ದನಿನ ಮಧ್ಯಕ್ಕೆ ಹೋಗಿ ಇಸ್ರಾಯೇಲರ ಕುಲಗಳ ಸಂಖ್ಯೆಗೆ ಸರಿಯಾಗುವಂತೆ ಪ್ರತಿಯೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿರಿ.
[6] ಅವು ನಿಮ್ಮ ಮಧ್ಯದಲ್ಲಿ ಗುರುತಾಗಿರುವವು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ‘ಈ ಕಲ್ಲುಗಳು ಏನು ಸೂಚಿಸುತ್ತವೆ?’ ಎಂದು ನಿಮ್ಮನ್ನು ಕೇಳುವಾಗ
[7] ನೀವು ಅವರಿಗೆ ಯೆಹೋವನ ಒಡಂಬಡಿಕೆಯ ಮಂಜೂಷವು ಯೊರ್ದನ್ ನದಿ ದಾಟುವಾಗ ಅದರ ಮುಂದೆ ಯೊರ್ದನಿನ ನೀರು ನಿಂತುಹೋಯಿತೆಂದು ಹೇಳಿರಿ. ಯೊರ್ದನಿನ ನೀರು ನಿಂತು ಹೋಯಿತೆಂಬುದಕ್ಕೆ ಈ ಕಲ್ಲುಗಳು ಇಸ್ರಾಯೇಲ್ಯರಿಗೆ ಸದಾಕಾಲಕ್ಕೂ ಸಾಕ್ಷಿಗಳಾಗಿರುವವು” ಅಂದನು.
[8] ಇಸ್ರಾಯೇಲ್ಯರು ಯೆಹೋಶುವನು ಆಜ್ಞಾಪಿಸಿದಂತೆಯೇ ಮಾಡಿದರು. ಯೆಹೋವನು ಯೆಹೋಶುವನಿಗೆ ಹೇಳಿದ ಪ್ರಕಾರ ಅವರು ಇಸ್ರಾಯೇಲ್ಯರ ಕುಲಸಂಖ್ಯೆಗೆ ಅನುಸಾರವಾಗಿ ಯೊರ್ದನಿನ ಮಧ್ಯದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ತಾವು ಇಳುಕೊಳ್ಳುವ ಸ್ಥಳಕ್ಕೆ ತಂದು ಅಲ್ಲಿ ಅವುಗಳನ್ನು ನಿಲ್ಲಿಸಿದರು.
[9] ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸಿದನು. ಅವು ಇಂದಿನವರೆಗೂ ಅಲ್ಲಿಯೇ ಇವೆ.
[10] ಮೋಶೆಯು ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ ಯೆಹೋವನ ಅಪ್ಪಣೆಗಳನ್ನೆಲ್ಲಾ ಅವರು ನೆರವೇರಿಸುವ ತನಕ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲೇ ನಿಂತರು.
[11] ಜನರು ಬೇಗನೆ ಹೊಳೆ ದಾಟಿದರು. ಅವರೆಲ್ಲರು ಆಚೆ ದಡ ಸೇರಿದ ಮೇಲೆ ಯಾಜಕರು ಯೆಹೋವನ ಮಂಜೂಷ ಸಹಿತವಾಗಿ ಹೊಳೆ ದಾಟಿ ಜನರ ಎದುರಿನಲ್ಲಿ ಹೋದರು.
[12] ರೂಬೇನ್ಯರೂ, ಗಾದ್ಯರೂ, ಮನಸ್ಸೆ ಕುಲದ ಅರ್ಧ ಗೋತ್ರದವರೂ ಮೋಶೆಯು ತಮಗೆ ಆಜ್ಞಾಪಿಸಿದಂತೆ ಯುದ್ಧಸನ್ನದ್ದರಾಗಿ ಇಸ್ರಾಯೇಲ್ಯರ ಮುಂದಾಗಿ ಹೊರಟು ಹೊಳೆದಾಟಿದರು.
[13] ಸುಮಾರು ನಲವತ್ತು ಸಾವಿರ ಭಟರು ಯುದ್ಧಮಾಡುವುದಕ್ಕಾಗಿ ಯೆಹೋವನ ಸಮ್ಮುಖದಲ್ಲಿ ಯೆರಿಕೋವಿನ ಬೈಲಿಗೆ ಬಂದರು:
[14] ಆ ದಿನದಲ್ಲಿ ಯೆಹೋವನು ಯೆಹೋಶುವನನ್ನು ಎಲ್ಲಾ ಇಸ್ರಾಯೇಲ್ಯರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಹೇಗೆ ನಡೆದುಕೊಂಡರೋ ಹಾಗೆಯೇ ಯೆಹೋಶುವನು ಭಯ ಮತ್ತು ಗೌರವದಿಂದ ನಡೆದುಕೊಂಡರು.
[15] ಯೆಹೋವನು ಯೆಹೋಶುವನ ಸಂಗಡ ಮಾತನಾಡಿ “ಆಜ್ಞಾಶಾಸನಗಳ ಮಂಜೂಷವನ್ನು ಹೊತ್ತ ಯಾಜಕರಿಗೆ ಯೊರ್ದನಿನ ಹೊಳೆಯಿಂದ ಮೇಲೆ ಬರಬೇಕೆಂದು ಆಜ್ಞಾಪಿಸು” ಎಂದನು.
[17] ಆಗ ಯೆಹೋಶುವನು ಆ ಯಾಜಕರಿಗೆ ಯೊರ್ದನ್ ನದಿಯಿಂದ ಹೊರಕ್ಕೆ ಬರಬೇಕೆಂದು ಆಜ್ಞಾಪಿಸಿದನು.
[18] ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನಿಂದ ಮೇಲೆ ಬಂದು ಒಣನೆಲದಲ್ಲಿ ತಮ್ಮ ಕಾಲುಗಳನ್ನಿಟ್ಟ ಕೂಡಲೇ ನೀರು ಮೊದಲಿನಂತೆ ಬಂದು, ಯೊರ್ದನ್ ನದಿಯು ದಡಮೀರಿ ಹರಿಯಿತು.
[19] ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಯೊರ್ದನನ್ನು ದಾಟಿ ಬಂದು ಯೆರಿಕೋವಿನ ಪೂರ್ವ ಗಡಿಯಲ್ಲಿರುವ ಗಿಲ್ಗಾಲಿನಲ್ಲಿ ಬಂದು ತಂಗಿದರು.
[20] ಯೆಹೋಶುವನು ಇಸ್ರಾಯೇಲರು ಯೊರ್ದನಿನಿಂದ ತೆಗೆದುಕೊಂಡು ಬಂದಿದ್ದ ಹನ್ನೆರಡು ಕಲ್ಲುಗಳನ್ನು ಗಿಲ್ಗಾಲಿನಲ್ಲೇ ನಿಲ್ಲಿಸಿದನು.
[21] ಇಸ್ರಾಯೇಲ್ಯರಿಗೆ, “ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ಈ ಕಲ್ಲುಗಳನ್ನು ಏಕೆ ಹೀಗೆ ನಿಲ್ಲಿಸಿದ್ದಾರೆಂದು ನಿಮ್ಮನ್ನು ಕೇಳಿದರೆ ನೀವು ಅವರಿಗೆ
[22] ‘ಇಸ್ರಾಯೇಲ್ಯರು ಒಣನೆಲವಾಗಿದ್ದ ಈ ಯೊರ್ದನನ್ನು ದಾಟಿ ಬಂದ್ದದರ ಗುರುತು’ ಎಂದು ಹೇಳಿರಿ.
[23] ನಿಮ್ಮ ದೇವರಾದ ಯೆಹೋವನು ನಮ್ಮ ಕಣ್ಣು ಮುಂದೆ ಕೆಂಪುಸಮುದ್ರವನ್ನು ಬತ್ತಿಸಿ, ನಮ್ಮನ್ನು ದಾಟಿಸಿದಂತೆ ಈಗ ನಿಮ್ಮ ಕಣ್ಣು ಮುಂದೆಯೇ ಈ ಯೊರ್ದನನ್ನು ಬತ್ತಿಸಿ, ನಿಮ್ಮನ್ನು ದಾಟಿಸಿದ್ದಾನೆ.
[24] ಇದರಿಂದ ಭೂನಿವಾಸಿಗಳೆಲ್ಲರೂ ಯೆಹೋವನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವ ಹಾಗೆಯೂ ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವವರಾಗಿರುವರು” ಎಂದನು.