Skip to content
Opens in a new window
Listen to this chapter • 7:05

[1] ಚೀಟು ಎರಡನೆಯ ಸಾರಿ ಸಿಮೆಯೋನನ ಕುಲದವರಿಗೆ ಬಿದ್ದಿತು. ಸಿಮೆಯೋನನ ಕುಲದ ಗೋತ್ರಗಳ ಸ್ವತ್ತು ಯೆಹೂದ ಕುಲದವರ ಸ್ವತ್ತಿನ ಮಧ್ಯದಲ್ಲಿತ್ತು.

[2] ಅವರ ಊರುಗಳು ಯಾವುವೆಂದರೆ: ಬೇರ್ಷೆಬ, ಶೆಬ, ಮೋಲಾದಾ,

[3] ಹಚರ್‌ ಷೂವಾಲ್, ಬಾಲಾ, ಎಚೆಮ್,

[4] ಎಲ್ತೋಲದ್, ಬೆತೂಲ್, ಹೊರ್ಮಾ,

[5] ಚಿಕ್ಲಗ್, ಬೇತ್‌ಮರ್ಕಾಬೋತ್, ಹಚರ್‌ಸೂಸಾ,

[6] ಬೇತ್‌ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.

[7] ಅಯಿನ್, ರಿಮ್ಮೋನ್, ಏತೆರ್, ಅಷಾನ್ ಎಂಬ ನಾಲ್ಕು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.

[8] ಅವುಗಳ ಸುತ್ತಣ ಪ್ರದೇಶದಲ್ಲಿ ರಾಮ ಎಂಬ ಬಾಲತ್ ಬೇರ್ ಎಂಬ ಊರಿನವರೆಗೂ ಇದ್ದ ಎಲ್ಲಾ ಗ್ರಾಮಗಳೂ ಆಗಿವೆ. ಬಾಲತ್ ಬೇರ್ ಎಂಬುದು ದಕ್ಷಿಣ ರಾಮ ಎನ್ನಿಸಿಕೊಳ್ಳುತ್ತದೆ. ಸಿಮೆಯೋನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಇವೇ.

[9] ಸಿಮೆಯೋನ್ಯರ ಈ ಸ್ವತ್ತು ಯೆಹೂದ್ಯರ ಸ್ವತ್ತಿನ ಒಂದು ಭಾಗವಾಗಿತ್ತು. ಯೆಹೂದ್ಯರಿಗೆ ದೊರಕಿದ ಪ್ರದೇಶವು ಹೆಚ್ಚಾಗಿದ್ದುದರಿಂದ ಸಿಮೆಯೋನ್ಯರಿಗೂ ಅದರಲ್ಲೇ ಪಾಲು ಸಿಕ್ಕಿತು.

[10] ಚೀಟು ಮೂರನೆಯ ಸಾರಿ ಜೆಬುಲೂನ್ಯರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ಮೇರೆಯು

[11] ಸಾರೀದಿನಿಂದ ಪಶ್ಚಿಮ ದಿಕ್ಕಿನಲ್ಲಿರುವ ಮರ್ಗಲಾ, ದಬ್ಬೆಷೆತ್ ಇವುಗಳ ಮೇಲೆ ಯೊಕ್ನೆಯಾಮ್ ಊರಿನ ಈಚೆಯಲ್ಲಿರುವ ಹಳ್ಳಕ್ಕೆ ಹೋಗುತ್ತದೆ.

[12] ಅದೇ ಸಾರೀದಿನಿಂದ ಅದು ಪೂರ್ವ ದಿಕ್ಕಿನಲ್ಲಿ ಕಿಸ್ಲೋತ್ ತಾಬೋರಿನ ಮೇರೆಗೆ ಹತ್ತಿ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.

[13] ಅಲ್ಲಿಂದ ಮತ್ತು ಪೂರ್ವಕ್ಕೆ ಮುಂದುವರೆದು ಗತ್‌ಹೇಫೆರನ್ನು ಎತ್‌ಕಾಚೀನ ಇವುಗಳ ಮೇಲೆ ಹಾದು ನೇಯದ ಪಕ್ಕದಲ್ಲಿ ಇರುವ ರಿಮ್ಮೋನಿಗೆ ಹೋಗುತ್ತದೆ.

[14] ಅಲ್ಲಿಂದ ಅದು ಉತ್ತರಕ್ಕೆ ತಿರುಗಿಕೊಂಡು ಹನ್ನಾತೋನಿನ ಮೇಲೆ ಇಪ್ತಹೇಲಿನ ಕಣಿವೆಗೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ.

[15] ಕಟ್ಟಾತ್, ನಹಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಇವೇ ಮೊದಲಾದ ಹನ್ನೆರಡು ಪಟ್ಟಣಗಳು, ಅವುಗಳಿಗೆ ಸೇರಿದ ಗ್ರಾಮಗಳು.

[16] ಜೆಬುಲೂನಿನ ಕುಲದ ಗೋತ್ರಗಳಿಗೆ ಸ್ವತ್ತಾಗಿ ದೊರಕಿದವು.

[17] ಚೀಟು ನಾಲ್ಕನೆಯ ಸಾರಿ ಇಸ್ಸಾಕಾರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಪಟ್ಟಣಗಳು ಯಾವುವೆಂದರೆ:

[18] ಇಜ್ರೇಲ್, ಕೆಸುಲ್ಲೋತ್, ಶೂನೇಮ್,

[19] ಹಫಾರಯಿಮ್, ಶೀಯೋನ್, ಅನಾಹರತ್,

[20] ರಬ್ಬೀತ್, ಕಿಷ್ಯೋನ್, ಎಬೆಜ್,

[21] ರೆಮೆತ್, ಏಂಗನ್ನೀಮ್, ಏನ್‌ಹದ್ದಾ, ಬೇತ್ ಪಚ್ಚೇಚ್ ಇವುಗಳೇ.

[22] ತಾಬೋರ್, ಶಹಚೀಮಾ, ಬೇತ್‌ಷೆಮೆಷ್‌ ಎಂಬ ಊರುಗಳು ಅದರ ಮೇರೆಯೊಳಗಿದ್ದವು. ಮೇರೆಯು ಯೊರ್ದನ್ ನದಿಯ ತೀರದಲ್ಲಿ ಕೊನೆಗೊಳ್ಳುತ್ತದೆ. ಒಟ್ಟಾರೆ ಹದಿನಾರು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು,

[23] ಇಸ್ಸಾಕಾರನ ಕುಲದ ಗೋತ್ರಗಳಿಗೆ ಸಿಕ್ಕಿದವು.

[24] ಚೀಟು ಐದನೆಯ ಸಾರಿ ಆಶೇರ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಊರುಗಳು ಯಾವುವೆಂದರೆ: -

[25] ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,

[26] ಅಲಮ್ಮೆಲೆಕ್, ಅಮಾದ್, ಮಿಷಾಲ್ ಇವುಗಳೇ. ಇವರ ದೇಶದ ಮೇರೆಯು ಪಶ್ಚಿಮದಲ್ಲಿ ಕರ್ಮೆಲ್ ಬೆಟ್ಟಕ್ಕೂ, ಶೀಹೋರ್ ಲಿಬ್ನತ್ ಎಂಬ ಹಳ್ಳಕ್ಕೂ ತಾಕಿ ಅಲ್ಲಿಂದ ಪೂರ್ವಕ್ಕೆ ತಿರುಗಿ,

[27] ಬೇತ್‌ದಾಗೋನಿಗೆ ಹೋಗುತ್ತದೆ. ಅಲ್ಲಿಂದ ಜೆಬುಲೂನ್ಯರ ಮೇರೆಗೂ ಇಪ್ತಹೇಲಿನ ಕಣಿವೆಯ ಉತ್ತರ ದಿಕ್ಕಿನ ಮೂಲೆಗೂ ಹೊಂದಿಕೊಂಡು ಬೇತೇಮೇಕ ನೆಗೀಯೇಲ್ ಇವುಗಳ ಮೇಲೆ ಉತ್ತರಕ್ಕೆ ಮುಂದುವರೆದು

[28] ಕಾಬೂಲ್, ಎಬ್ರೋನ್, ರೆಹೋಬ್, ಹಮ್ಮೋನ್, ಕಾನಾ ಇವುಗಳ ಮೇಲೆ ಚೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.

[29] ಅಲ್ಲಿಂದ ಅದು ತಿರುಗಿಕೊಂಡು ರಾಮ, ತೂರ್ ಕೋಟೆ, ಹೋಸಾ ಇವುಗಳ ಮೇಲೆ ಅಕ್ಜೀಬ್ ಪ್ರಾಂತ್ಯಕ್ಕೆ ಹೋಗಿ ಸಮುದ್ರ ತೀರದಲ್ಲಿ ಕೊನೆಗೊಳ್ಳುತ್ತದೆ.

[30] ಉಮ್ಮಾ, ಅಫೇಕ್‌, ರೆಹೋಬ್ ಇವೇ ಮೊದಲಾದ ಇಪ್ಪತ್ತೆರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.

[31] ಅಶೇರನ ಕುಲದ ಗೋತ್ರಗಳ ಸ್ವತ್ತಾಗಿವೆ.

[32] ಚೀಟು ಆರನೆಯ ಸಾರಿ ನಫ್ತಾಲಿಯ ಕುಲದವರಿಗೆ ಬಿದ್ದಿತು. ಆ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ಮೇರೆಯು

[33] ಚಾನನ್ನೀಮಿನಲ್ಲಿರುವ ಹೆಲೇಫಿನ ಅಲ್ಲೋನ ಮರದಿಂದ ಆದಾಮಿನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಲಕ್ಕೂಮಿಗೆ ಹೋಗಿ ಯೊರ್ದನ್ ನದಿಯ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.

[34] ಇದಲ್ಲದೆ ಮೇರೆಯು ತಿರುಗಿ ಅದೇ ಸ್ಥಳದಿಂದ ಅಜ್ನೊತ್-ತಾಬೋರಿನ ಮೇಲೆ ಹುಕ್ಕೋಕಿಗೆ ಹೋಗುತ್ತದೆ, ದಕ್ಷಿಣದಲ್ಲಿ ಜೆಬುಲೂನ್ಯರ ಮೇರೆಗೂ, ಪಶ್ಚಿಮದಲ್ಲಿ ಆಶೇರರ ಮತ್ತು ಯೆಹೂದ್ಯರ ಮೇರೆಗೂ ಪೂರ್ವದಲ್ಲಿ ಯೊರ್ದನ್ ಹೊಳೆಗೂ ಹೊಂದಿಕೊಂಡಿರುತ್ತದೆ.

[35] ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್,

[36] ಆದಾಮಾ, ರಾಮಾ, ಹಾಚೋರ್,

[37] ಕೆದೆಷ್ ಎದ್ರೈ, ಏನ್ ಹಾಚೋರ್,

[38] ಇರೋನ್, ಮಿಗ್ದಲೇಲ್, ಹೊರೇಮ್, ಬೇತ್ ಷೆಮೆಷ್, ಬೆತನಾತ್ ಇವೇ ಮೊದಲಾದ ಹತ್ತೊಂಬತ್ತು ಕೋಟೆಕೊತ್ತಲುಗಳುಳ್ಳ ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು,

[39] ನಫ್ತಾಲಿ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತಾಗಿದೆ.

[40] ಚೀಟು ಏಳನೆಯ ಸಾರಿ ದಾನನ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸ್ವತ್ತಾಗಿ ದೊರಕಿದ ಊರುಗಳು ಯಾವುವೆಂದರೆ:

[41] ಚೊರ್ಗಾ, ಎಷ್ಟಾವೋಲ್, ಈರ್ಷೆಮೆಷ್,

[42] ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,

[43] ಏಲೋನ್, ತಿಮ್ನಾ ಎಕ್ರೋನ್,

[44] ಎಲ್ತೆಕೇ, ಗಿಬ್ಬೆತೋನ್, ಬಾಲತ್,

[45] ಯೆಹುದ್, ಬೆನೇಬೆರಕ್, ಗತ್ ರಿಮ್ಮೋನ್,

[46] ಮೇಯರ್ಕೋನ್, ರಕ್ಕೋನ್ ಇವೇ. ಯೊಪ್ಪಕ್ಕೆ ಹೊಂದಿರುವ ಪ್ರದೇಶವೂ ಇವರಿಗೇ ದೊರಕಿತು.

[47] ದಾನ್ ಕುಲದವರು ತಮ್ಮ ಪ್ರಾಂತ್ಯವನ್ನು ವಿಸ್ತರಿಸುವುದಕ್ಕಾಗಿ ಹೊರಟು ಲೆಷೆಮಿನವರೊಡನೆ ಯುದ್ಧಮಾಡಿ ಜಯಿಸಿ ಆ ಜನರನ್ನು ಕತ್ತಿಯಿಂದ ಸಂಹರಿಸಿ ಪಟ್ಟಣವನ್ನು ಸ್ವಾಧೀನ ಮಾಡಿಕೊಂಡು ಅದರಲ್ಲಿ ವಾಸಿಸಿದರು. ಅದಕ್ಕೆ ತಮ್ಮ ಮೂಲಪುರುಷನ ಹೆಸರಾದ ದಾನ್ ಎಂಬ ಹೆಸರಿಟ್ಟರು.

[48] ದಾನ್ ಕುಲದ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಅದರಲ್ಲಿದ್ದ ಗ್ರಾಮ ಮತ್ತು ನಗರಗಳು ಇವೇ.

[49] ಇಸ್ರಾಯೇಲ್ಯರು ದೇಶವನ್ನು ಮೇರೆಗಳ ಪ್ರಕಾರ ತಮ್ಮೊಳಗೆ ಹಂಚಿಕೊಂಡ ಮೇಲೆ ನೂನನ ಮಗನಾದ ಯೆಹೋಶುವನಿಗೂ ತಮ್ಮದರಲ್ಲಿ ಪಾಲು ಕೊಟ್ಟರು.

[50] ಅವನು ತನಗೋಸ್ಕರ ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿರುವ ತಿಮ್ನತ್ ಸೆರಹ ಎಂಬ ಪಟ್ಟಣವನ್ನು ಕೇಳಿಕೊಳ್ಳಲು ಅವರು ಯೆಹೋವನ ಆಜ್ಞೆಯಂತೆ ಅದನ್ನು ಅವನಿಗೆ ಕೊಟ್ಟು ಬಿಟ್ಟರು. ಅವನು ಅದನ್ನು ಹೊಸದಾಗಿ ಕಟ್ಟಿಕೊಂಡು ಅದರಲ್ಲೇ ವಾಸವಾಗಿದ್ದನು.

[51] ಯಾಜಕನಾದ ಎಲಿಯಾಜರನೂ, ನೂನನ ಮಗ ಯೆಹೋಶುವನೂ, ಇಸ್ರಾಯೇಲ್ಯರ ಕುಲಮುಖ್ಯಸ್ಥರೂ ಸೇರಿ ಇಸ್ರಾಯೇಲ್ಯರಿಗೆ ಶೀಲೋವಿನಲ್ಲಿದ್ದ ದೇವದರ್ಶನ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲೇ ಚೀಟು ಹಾಕಿ ಹಂಚಿಕೊಟ್ಟ ಪ್ರಾಂತ್ಯಗಳು ಇವೇ. ಹೀಗೆ ದೇಶ ವಿಭಜನೆಯ ಕಾರ್ಯವು ಪೂರ್ಣಗೊಂಡಿತು.

ಯೆಹೋಶುವನು — Chapters