Skip to content
Opens in a new window
Listen to this chapter • 3:18

[1] ಯೊರ್ದನಿನ ಪಶ್ಚಿಮದಲ್ಲಿದ್ದ ಅಮೋರಿಯರ ಎಲ್ಲಾ ಅರಸರು ಮತ್ತು ಸಮುದ್ರದ ಬಳಿಯಲ್ಲಿದ್ದ ಎಲ್ಲಾ ಕಾನಾನ್ಯರ ರಾಜರು, ಯೆಹೋವನು ಇಸ್ರಾಯೇಲ್ಯರ ಮುಂದೆ ಯೊರ್ದನಿನ ಹೊಳೆಯನ್ನು ಬತ್ತಿಸಿ, ಅವರನ್ನು ದಾಟಿಸಿದನೆಂಬ ವಾರ್ತೆ ಕೇಳಲು ಅವರ ಎದೆಯೊಡೆದು ಹೋಯಿತು. ಇಸ್ರಾಯೇಲ್ಯರ ನಿಮಿತ್ತವಾಗಿ ಅವರು ಬಲಗುಂದಿ ಹೋದರು.

[2] ಆ ಸಮಯದಲ್ಲಿ ಯೆಹೋವನು ಯೆಹೋಶುವನಿಗೆ “ನೀನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಪುನಃ ಇಸ್ರಾಯೇಲ್ಯರಿಗೆ ಸುನ್ನತಿ ಮಾಡು” ಎಂದು ಹೇಳಲು

[3] ಯೆಹೋಶುವನು ಕಲ್ಲಿನ ಚೂರಿಗಳನ್ನು ಮಾಡಿಕೊಂಡು ಸುನ್ನತಿ ಗುಡ್ಡದಲ್ಲಿ ಇಸ್ರಾಯೇಲ್ಯರಿಗೆ ಸುನ್ನತಿ ಮಾಡಿದನು.

[4] ಯೆಹೋಶುವನು ಸುನ್ನತಿ ಮಾಡಿದ್ದಕ್ಕೆ ಕಾರಣವೇನಂದರೆ ಐಗುಪ್ತದಿಂದ ಹೊರಟು ಬಂದ ಗಂಡಸರಲ್ಲಿ ಯುದ್ಧವೀರರೆಲ್ಲರು ಆ ದೇಶವನ್ನು ಬಿಟ್ಟು ಬಂದ ನಂತರ ಅರಣ್ಯದಲ್ಲಿ ಸತ್ತು ಹೋದರು.

[5] ಅಲ್ಲಿಂದ ಬಂದಿದ್ದ ಗಂಡಸರಿಗೆಲ್ಲಾ ಸುನ್ನತಿಯಾಗಿತ್ತು. ಐಗುಪ್ತವನ್ನು ಬಿಟ್ಟ ನಂತರ ಅರಣ್ಯ ಪ್ರಯಾಣದಲ್ಲಿ ಹುಟ್ಟಿದ ಗಂಡುಮಕ್ಕಳಿಗೆ ಸುನ್ನತಿಯಾಗಿರಲಿಲ್ಲ.

[6] ಐಗುಪ್ತದಿಂದ ಬಂದ ಇಸ್ರಾಯೇಲ್ಯರು ಯೆಹೋವನ ಮಾತನ್ನು ಕೇಳದೆ ಹೋಗಿದ್ದರಿಂದ ಅವರು ತಮ್ಮ ಭಟರೆಲ್ಲರು ಸಂಹಾರವಾಗುವ ತನಕ ನಲವತ್ತು ವರ್ಷ ಅರಣ್ಯದಲ್ಲೇ ಅಲೆಯುತ್ತಿರಬೇಕಾಯಿತು. ಯೆಹೋವನು ತಾನು ಆ ಜನರ ಪೂರ್ವಿಕರಿಗೆ ವಾಗ್ದಾನ ಮಾಡಿದ್ದ ಹಾಲೂ ಜೇನೂ ಹರಿಯುವ ದೇಶದಲ್ಲಿ ಅವರನ್ನು ಸೇರಿಸುವುದಿಲ್ಲವೆಂದು ಆಣೆಯಿಟ್ಟನು.

[7] ಆದುದರಿಂದ ಅವರ ಪೂರ್ವಿಕರಿಗೆ ಪ್ರತಿಯಾಗಿ ಹುಟ್ಟಿದ ಗಂಡು ಮಕ್ಕಳಿಗೆ ಯೆಹೋಶುವನು ಸುನ್ನತಿ ಮಾಡಿದನು. ದಾರಿಯಲ್ಲಿ ಯಾರೂ ಅವರಿಗೆ ಸುನ್ನತಿಮಾಡಿರಲಿಲ್ಲ. ಆದುದರಿಂದ ಅವರು ಸುನ್ನತಿಯಿಲ್ಲದವರಾಗಿದ್ದರು.

[8] ಸುನ್ನತಿಯಾದ ಮೇಲೆ ಆ ಜನರು ವಾಸಿಯಾಗುವ ತನಕ ತಮ್ಮ ತಮ್ಮ ಪಾಳೆಯಗಳಲ್ಲಿಯೇ ಇದ್ದರು.

[9] ಯೆಹೋವನು ಯೆಹೋಶುವನಿಗೆ, “ನಾನು ಐಗುಪ್ತ್ಯರ ನಿಂದೆಯನ್ನು ಈ ಹೊತ್ತು ನಿಮ್ಮಿಂದ ನಿವಾರಿಸಿ ಬಿಟ್ಟಿದ್ದೇನೆ” ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿರುತ್ತದೆ.

[10] ಇಸ್ರಾಯೇಲ್ಯರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲ ಯೆರಿಕೋವಿನ ಬೈಲಿನಲ್ಲಿ ಪಸ್ಕಹಬ್ಬವನ್ನು ಆಚರಿಸಿದರು.

[11] ಮರುದಿನದಿಂದ ಆ ದೇಶದ ಧಾನ್ಯವನ್ನು ಊಟಕ್ಕೆ ಉಪಯೋಗಿಸಲು ತೊಡಗಿದರು. ಹೇಗೆಂದರೆ ಅದೇ ಪಸ್ಕಹಬ್ಬದ ದಿನದಲ್ಲಿ ಅವರು ಹುಳಿಯಿಲ್ಲದ ರೊಟ್ಟಿಗಳನ್ನೂ, ಸುಟ್ಟ ತೆನೆಗಳನ್ನೂ ತಿಂದರು.

[12] ಆ ದೇಶದ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು. ಅದು ಅವರಿಗೆ ತಿರುಗಿ ಸಿಕ್ಕಲೇ ಇಲ್ಲ. ಇಸ್ರಾಯೇಲ್ಯರು ಆ ವರ್ಷವೆಲ್ಲ ಕಾನಾನ್ ದೇಶದ ಉತ್ಪನ್ನವನ್ನೇ ಅನುಭವಿಸಿದರು.

[13] ಯೆಹೋಶುವನು ಯೆರಿಕೋವಿನ ಹತ್ತಿರದಲ್ಲಿ ಇದ್ದಾಗ ಒಮ್ಮೆ ತನ್ನ ಕಣ್ಣೆತ್ತಿ ನೋಡಲು ಒಬ್ಬ ಮನುಷ್ಯನು ಹಿರಿದ ಕತ್ತಿಯನ್ನು ಕೈಯಲ್ಲಿ ಹಿಡಿದು ತನ್ನೆದುರಿನಲ್ಲಿ ನಿಂತಿರುವುದನ್ನು ಕಂಡನು. ಯೆಹೋಶುವನು ಅವನ ಸಮೀಪಕ್ಕೆ ಹೋಗಿ “ನೀನು ನಮ್ಮವನೋ ಅಥವಾ ಶತ್ರು ಪಕ್ಷದವನೋ?” ಎಂದು ಕೇಳಲು

[14] ಆ ಮನುಷ್ಯನು “ನಾನು ಅಂಥವನಲ್ಲ; ಯೆಹೋವನ ಸೇನಾಧಿಪತಿ; ಈಗಲೇ ಬಂದಿದ್ದೇನೆ” ಎಂದು ಉತ್ತರಿಸಿದನು. ಆಗ ಯೆಹೋಶುವನು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ “ಒಡೆಯಾ, ನಿಮ್ಮ ದಾಸನಾದ ನನಗೆ ಏನು ಆಜ್ಞಾಪಿಸಬೇಕೆಂದಿದ್ದೀರಿ?” ಅನ್ನಲು

[15] ಯೆಹೋವನ ಸೇನಾಧಿಪತಿಯು “ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧವಾದದ್ದು” ಎಂದು ಹೇಳಿದನು. ಯೆಹೋಶುವನು ಹಾಗೆಯೇ ಮಾಡಿದನು.

ಯೆಹೋಶುವನು — Chapters