Skip to content
Opens in a new window
Listen to this chapter • 7:25

[1] ಅನಂತರ ಎಫ್ರಾಯೀಮ್ಯರು ಗಿದ್ಯೋನನಿಗೆ, “ನೀನು ಹೀಗೆ ಯಾಕೆ ಮಾಡಿದಿ? ಮಿದ್ಯಾನ್ಯರೊಡನೆ ಯುದ್ಧಮಾಡುವುದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ?” ಎಂದು ಉಗ್ರಕೋಪದಿಂದ ಜಗಳವಾಡಿದರು.

[2] ಆಗ ಅವನು ಅವರಿಗೆ, “ನೀವು ಮಾಡಿದ ಕಾರ್ಯಕ್ಕೆ ಸಮಾನವಾಗುವಂತದ್ದು ನಾನೇನು ಮಾಡಿದೆ? ಅಬೀಯೆಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ, ಎಫ್ರಾಯೀಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ?

[3] ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ನಾಯಕರಾದ ಓರೇಬ್ ಜೇಬರನ್ನು ಒಪ್ಪಿಸಿ ಕೊಟ್ಟಿದ್ದಾನಲ್ಲಾ! ಇದಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದ್ದೇನೆ?” ಎಂದನು. ಈ ಮಾತುಗಳನ್ನು ಕೇಳಿದಾಗ ಅವರ ಸಿಟ್ಟಿಳಿಯಿತು.

[4] ಗಿದ್ಯೋನನು ಅವನ ಸಂಗಡ ಇದ್ದ ಮುನ್ನೂರು ಜನರು ಬಹಳ ದಣಿದವರಾಗಿದ್ದರೂ, ಹಿಂದಟ್ಟುತ್ತಾ ಯೊರ್ದನನ್ನು ದಾಟಿ ಸುಖೋತಿಗೆ ಬಂದರು.

[5] ಗಿದ್ಯೋನನು ಸುಖೋತಿನವರಿಗೆ, “ದಯವಿಟ್ಟು ನನ್ನ ಜೊತೆಯಲ್ಲಿ ಬಂದಿರುವವರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ, ಅವರು ಬಹಳ ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸರಾದ ಜೆಬಹ, ಚಲ್ಮುನ್ನರನ್ನು ಹಿಂದಟ್ಟುತ್ತಾ ಇದ್ದೇನೆ” ಅಂದನು.

[6] ಆದರೆ ಸುಖೋತಿನ ಮುಖಂಡರು ಅವನಿಗೆ, “ನಾವು ನಿನ್ನ ಸೈನಿಕರಿಗೆ ರೊಟ್ಟಿಗಳನ್ನು ಕೊಡುವುದಕ್ಕೆ ಜೆಬಹ, ಚಲ್ಮುನ್ನರನ್ನು ನೀನು ಕೈಕಟ್ಟಿ ವಶಮಾಡಿಕೊಂಡಿದ್ದೀಯೋ?” ಎಂದು ಉತ್ತರಕೊಟ್ಟರು.

[7] ಆಗ ಗಿದ್ಯೋನನು ಅವರಿಗೆ, “ಒಳ್ಳೇದು, ಯೆಹೋವನು ಜೆಬಹ, ಚಲ್ಮುನ್ನರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಕಾಡಿನಲ್ಲಿರುವ ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸುವೆನು” ಎಂದು ಹೇಳಿದನು.

[8] ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನವರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ಉತ್ತರಕೊಟ್ಟರು.

[9] ಗಿದ್ಯೋನನು ಅವರಿಗೆ, “ನಾನು ಸುರಕ್ಷಿತವಾಗಿ ಹಿಂದಿರುಗಿ ಬಂದಾಗ ಈ ಬುರುಜನ್ನು ಕೆಡವಿಬಿಡುವೆನು” ಅಂದನು.

[10] ಜೆಬಹ, ಚಲ್ಮುನ್ನರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳಿದುಕೊಂಡಿದ್ದರು. ಮೂಡಣದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಭಟರು ಹತರಾಗಿ ಉಳಿದವರು ಇಷ್ಟೇ ಮಂದಿ.

[11] ಗಿದ್ಯೋನನು ಕಾಡುಗೊಲ್ಲರ ಪ್ರದೇಶಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳುಕೊಂಡಿದ್ದ ಆ ಪಾಳೆಯದ ಮೇಲೆ ಬಿದ್ದನು.

[12] ಜೆಬಹನೂ ಮತ್ತು ಚಲ್ಮುನ್ನನೂ ಓಡಿಹೋಗಲಾಗಿ, ಅವರನ್ನು ಹಿಂದಟ್ಟಿ ಹಿಡಿದು, ಅವರ ಸೈನ್ಯವನ್ನು ಚದರಿಸಿಬಿಟ್ಟನು.

[13] ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹೆರೆಸಿನ ಗಟ್ಟದ ಮಾರ್ಗವಾಗಿ ಹಿಂದಿರುಗಿ ಬಂದು,

[14] ಸುಖೋತಿನ ಒಬ್ಬ ಯೌವನಸ್ಥನನ್ನು ಹಿಡಿದು, ಆ ಊರಿನ ಮುಖಂಡರೂ, ಹಿರಿಯರೂ ಯಾರಾರೆಂದು ವಿಚಾರಿಸಲು ಅವನು ಎಪ್ಪತ್ತೇಳು ಮಂದಿಯ ಹೆಸರುಗಳನ್ನು ಬರೆದುಕೊಟ್ಟನು.

[15] ಅನಂತರ ಅವನು ಸುಖೋತಿನವರ ಬಳಿಗೆ ಹೋಗಿ ಅವರಿಗೆ, “ನಾವು ದಣಿದಿರುವ ನಿನ್ನ ಸೈನಿಕರಿಗೋಸ್ಕರ ರೊಟ್ಟಿಗಳನ್ನು ಕೊಡುವುದಕ್ಕೆ ಜೆಬಹ, ಚಲ್ಮುನ್ನರನ್ನು ಕೈಕಟ್ಟಿ ಸ್ವಾಧೀನಮಾಡಿಕೊಂಡಿದ್ದೀಯೋ? ಎಂದು ನನ್ನನ್ನು ನಿಂದಿಸಿದಿರಲ್ಲಾ;

[16] ನೋಡಿರಿ, ಅವರು ಇಲ್ಲಿರುತ್ತಾರೆ” ಎಂದು ಹೇಳಿ ಊರಿನ ಹಿರಿಯರನ್ನೂ, ಮುಖಂಡರನ್ನೂ, ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸಿ ಸುಖೋತಿನವರಿಗೆ ಬುದ್ಧಿಕಲಿಸಿದನು.

[17] ಮತ್ತು ಪೆನೂವೇಲಿನ ಬುರುಜನ್ನು ಕೆಡವಿಬಿಟ್ಟು ಆ ಊರಿನ ಜನರನ್ನು ಸಂಹರಿಸಿದನು.

[18] ಅವನು ಜೆಬಹ, ಚಲ್ಮುನ್ನರನ್ನು, “ನೀವು ತಾಬೋರದಲ್ಲಿ ಕೊಂದುಹಾಕಿದ ಮನುಷ್ಯರು ಹೇಗಿದ್ದರು?” ಎಂದು ಕೇಳಲಾಗಿ ಅವರು ಅವನಿಗೆ, “ನಿನ್ನ ಹಾಗೆಯೇ ಇದ್ದರು; ಎಲ್ಲರೂ ರೂಪದಲ್ಲಿ ರಾಜಪುತ್ರರಂತಿದ್ದರು” ಎಂದು ಉತ್ತರಕೊಟ್ಟರು.

[19] ಆಗ ಅವನು, “ಅವರು ನನ್ನ ತಾಯಿಯ ಮಕ್ಕಳು; ನನ್ನ ಸಹೋದರರು; ಯೆಹೋವನಾಣೆ, ನೀವು ಅವರನ್ನು ಉಳಿಸಿದ್ದರೆ ನಾನು ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿ

[20] ತನ್ನ ಹಿರೀ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು” ಅಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ.

[21] ಆಗ ಜೆಬಹನೂ ಮತ್ತು ಚಲ್ಮುನ್ನನೂ ಗಿದ್ಯೋನನಿಗೆ, “ನೀನೇ ಎದ್ದು ಬಂದು ನಮ್ಮನ್ನು ಕೊಂದುಹಾಕು; ಪ್ರಾಯಕ್ಕೆ ತಕ್ಕಂತೆ ಪುರುಷನಿಗೆ ಬಲವಿರುತ್ತದಲ್ಲಾ” ಅನ್ನಲು ಅವನೆದ್ದು ಜೆಬಹ, ಚಲ್ಮುನ್ನರನ್ನು ಕೊಂದುಹಾಕಿ, ಅವರ ಒಂಟೆಗಳ ಕೊರಳಿನಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.

[22] ತರುವಾಯ ಇಸ್ರಾಯೇಲ್ಯರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದ್ದೀಯಲ್ಲಾ; ನೀನೂ, ನಿನ್ನ ಮಗನೂ, ಮೊಮ್ಮಗನೂ ವಂಶಪಾರಂಪರ್ಯವಾಗಿ ನಮ್ಮ ಮೇಲೆ ಅರಸರಾಗಿರಬೇಕು” ಎಂದರು.

[23] ಅವನು ಅವರಿಗೆ, “ನಾನಾಗಲಿ, ನನ್ನ ಮಗನಾಗಲಿ ನಿಮ್ಮನ್ನು ಆಳುವುದಿಲ್ಲ; ಯೆಹೋವನೇ ನಿಮ್ಮ ಅರಸನಾಗಿರುವನು.

[24] ಆದರೆ ನಿಮಗೆ ಒಂದು ಬಿನ್ನಹ ಮಾಡುತ್ತೇನೆ; ಪ್ರತಿಯೊಬ್ಬನು ತಾನು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ನನಗೆ ಕೊಡಲಿ” ಅಂದನು. ಮಿದ್ಯಾನ್ಯರು ಇಷ್ಮಾಯೇಲ್ಯರಾಗಿದ್ದರಿಂದ ಅವರ ಬಳಿಯಲ್ಲಿ ಬಂಗಾರದ ಓಲೆಗಳು ಇದ್ದವು.

[25] ಗಿದ್ಯೋನನ ಬಿನ್ನಹಕ್ಕೆ ಇಸ್ರಾಯೇಲ್ಯರು, “ನಾವು ಸಂತೋಷದಿಂದ ಕೊಡುವೆವು” ಎಂದು ಹೇಳಿ, ಅಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಓಲೆಗಳನ್ನು ಇಟ್ಟುಬಿಟ್ಟರು.

[26] ಗಿದ್ಯೋನನಿಗೆ ಮೊದಲೇ ದೊರಕಿದ್ದ ಅರ್ಧಚಂದ್ರಾಕಾರದ ಆಭರಣ, ಕುಂಡಲ, ಮಿದ್ಯಾನ್ ರಾಜರು ಹೊದ್ದುಕೊಂಡಿದ್ದ ರಕ್ತಾಂಬರ, ಅವರ ಒಂಟೆಗಳ ಕಂಠಮಾಲೆ, ಇವುಗಳ ಹೊರತಾಗಿ ಅವನು ಇಸ್ರಾಯೇಲ್ಯರಿಂದ ಕೇಳಿ ತೆಗೆದುಕೊಂಡ ಓಲೆಗಳ ಬಂಗಾರವೇ ಸಾವಿರದ ಏಳುನೂರು ತೊಲೆ ತೂಕವಾಗಿತ್ತು.

[27] ಈ ಬಂಗಾರದಿಂದ ಗಿದ್ಯೋನನು ಒಂದು ಏಫೋದನ್ನು ಮಾಡಿಸಿ, ಅದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಆದ್ದರಿಂದ ಇಸ್ರಾಯೇಲರೆಲ್ಲರೂ ಅದನ್ನು ಪೂಜಿಸುತ್ತಿದ್ದುದರಿಂದ ದೈವದ್ರೋಹಿಗಳಾದರು; ಅದು ಗಿದ್ಯೋನನಿಗೂ ಅವನ ಮನೆಯವರಿಗೂ ಉರುಲಾಯಿತು.

[28] ಮಿದ್ಯಾನ್ಯರು ಇಸ್ರಾಯೇಲ್ಯರ ಮುಂದೆ ಬಹಳವಾಗಿ ತಗ್ಗಿಸಲ್ಪಟ್ಟರು; ಅವರು ಪುನಃ ತಲೆಯೆತ್ತಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಲ್ವತ್ತು ವರ್ಷಗಳ ಕಾಲ ದೇಶದಲ್ಲಿ ಸಮಾಧಾನವಿತ್ತು.

[29] ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಮನೆಯಲ್ಲಿ ವಾಸವಾಗಿದ್ದನು.

[30] ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದುದರಿಂದ ಅವನಿಗೆ ಎಪ್ಪತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು.

[31] ಅವನಿಗೆ ಶೆಕೆಮಿನಲ್ಲಿದ್ದ ತನ್ನ ಉಪಪತ್ನಿಯಲ್ಲಿ ಇನ್ನೊಬ್ಬ ಮಗನು ಹುಟ್ಟಲು, ಆ ಮಗನಿಗೆ ಅಬೀಮೆಲೆಕನೆಂದು ಹೆಸರಿಟ್ಟನು.

[32] ಯೋವಾಷನ ಮಗನಾದ ಗಿದ್ಯೋನನು ದಿನತುಂಬಿದ ಮುದುಕನಾಗಿ ಮರಣ ಹೊಂದಲು, ಅವನ ಶವವನ್ನು ಅಬೀಯೆಜೆರೀಯರ ಒಫ್ರದಲ್ಲಿದ್ದ ಒಂದು ಸಮಾಧಿಯಲ್ಲಿ ಹೂಣಿಟ್ಟರು. ಆ ಸಮಾಧಿಯು ಅವನ ತಂದೆಯಾದ ಯೋವಾಷನದಾಗಿತ್ತು.

[33] ಗಿದ್ಯೋನನು ಸತ್ತನಂತರ ಇಸ್ರಾಯೇಲರು ದೈವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್‌ಬೆರೀತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು.

[34] ಸುತ್ತಣ ಎಲ್ಲಾ ಶತ್ರುಗಳಿಂದ ತಮ್ಮನ್ನು ಬಿಡಿಸಿದ ದೇವರಾದ ಯೆಹೋವನನ್ನು ಮರೆತುಬಿಟ್ಟರು.

[35] ಯೆರುಬ್ಬಾಳನೆಂಬ ಗಿದ್ಯೋನನು ತಮಗೆ ಮಾಡಿದ ಉಪಕಾರಗಳನ್ನು ಅವರು ನೆನಸಲಿಲ್ಲ; ಅವನ ಮನೆಯವರಿಗೆ ದಯೆತೋರಿಸಲಿಲ್ಲ.

ನ್ಯಾಯಸ್ಥಾಪಕರು — Chapters