Skip to content
Opens in a new window
Listen to this chapter • 6:14

[1] ಆನಂತರ ಯೆರುಬ್ಬಾಳನೆನಿಸಿಕೊಳ್ಳುವ ಗಿದ್ಯೋನನೂ, ಅವನ ಸಂಗಡ ಇದ್ದ ಜನರೂ ಬೆಳಿಗ್ಗೆ ಎದ್ದು ಹೊರಟು ಹೋಗಿ ಹರೋದಿನ ಬುಗ್ಗೆಯ ಬಳಿಯಲ್ಲಿ ಬಿಡಾರ ಹಾಕಿಕೊಂಡರು. ಇವರ ಉತ್ತರದಿಕ್ಕಿನಲ್ಲಿ ಮೋರೆಗುಡ್ಡದ ಹಿಂದಿನ ತಗ್ಗಿನಲ್ಲಿ ಮಿದ್ಯಾನ್ಯರ ದಂಡಿಳಿದಿತ್ತು.

[2] ಆಗ ಯೆಹೋವನು ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಹೆಚ್ಚಾಗಿದ್ದಾರೆ; ಇವರ ಕೈಗೆ ಮಿದ್ಯಾನ್ಯರನ್ನು ಒಪ್ಪಿಸುವುದು ನನಗೆ ಸರಿಯಾಗಿ ಕಾಣುವುದಿಲ್ಲ. ಒಪ್ಪಿಸಿಕೊಟ್ಟರೆ ಸ್ವಹಸ್ತದಿಂದಲೇ ನಮಗೆ ರಕ್ಷಣೆಯುಂಟಾಯಿತೆಂದು ಹೆಚ್ಚಳಪಟ್ಟು ನನ್ನನ್ನು ಅಲಕ್ಷ್ಯಮಾಡಾರು.

[3] ಆದುದರಿಂದ ಎಲ್ಲಾ ಜನರಿಗೆ ಕೇಳಿಸುವಂತೆ, ‘ಧೈರ್ಯವಿಲ್ಲದವರೂ, ಅಂಜುವವರೂ ಈ ಗಿಲ್ಯಾದ್ ಪರ್ವತವನ್ನು ಬಿಟ್ಟು ಮನೆಗೆ ಹೋಗಲಿ ಎಂದು ಪ್ರಕಟಿಸು’” ಅಂದನು. ಹಾಗೆ ಮಾಡಲು ಇಪ್ಪತ್ತೆರಡು ಸಾವಿರ ಮಂದಿ ಹಿಂದಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು.

[4] ಯೆಹೋವನು ತಿರುಗಿ ಗಿದ್ಯೋನನಿಗೆ, “ನಿನ್ನ ಬಳಿಯಲ್ಲಿರುವ ಜನರು ಇನ್ನೂ ಹೆಚ್ಚಾಗಿದ್ದಾರೆ; ನೀನು ಅವರನ್ನು ಹಳ್ಳಕ್ಕೆ ಕರೆದುಕೊಂಡು ಹೋಗು; ನಾನು, ಅಲ್ಲಿ ಈ ಜನರ ಸಂಖ್ಯೆಯನ್ನು ಕಡಿಮೆಮಾಡಿ ನಿನಗೆ ಕೊಡುವೆನು. ಯಾರು ನಿನ್ನ ಸಂಗಡ ಹೋಗಬಹುದೆಂದು ಹೇಳುವೆನೋ ಅವರು ಮಾತ್ರ ಹೋಗಲಿ; ಯಾರಿಗೆ ಹೋಗಬಾರದೆಂದು ಹೇಳುವೆನೋ ಅವರು ಹೋಗದಿರಲಿ” ಅಂದನು.

[5] ಗಿದ್ಯೋನನು ಜನರನ್ನು ಹಳ್ಳಕ್ಕೆ ಕರೆದುಕೊಂಡು ಬಂದಾಗ ಯೆಹೋವನು ಅವನಿಗೆ, “ನಾಯಿಯಂತೆ ನೀರನ್ನು ನಾಲಿಗೆಯಿಂದ ನೆಕ್ಕುವವರನ್ನೂ, ಮೊಣಕಾಲೂರಿ ಕುಡಿಯುವವರನ್ನೂ ಬೇರೆ ಬೇರೆಯಾಗಿ ನಿಲ್ಲಿಸು” ಎಂದು ಹೇಳಿದನು.

[6] ಕೈಯಿಂದ ನೀರನ್ನು ಬಾಯಿಗೆ ತೆಗೆದುಕೊಂಡು ನೆಕ್ಕಿಕುಡಿದವರ ಸಂಖ್ಯೆ ಮುನ್ನೂರು. ಇತರ ಜನರು ಮೊಣಕಾಲೂರಿ ಕುಡಿದವರು.

[7] ಆಗ ಯೆಹೋವನು ಗಿದ್ಯೋನನಿಗೆ, “ನೀರನ್ನು ನೆಕ್ಕಿಕುಡಿದ ಆ ಮುನ್ನೂರು ಜನರಿಂದಲೇ ನಿಮಗೆ ಜಯವನ್ನುಂಟುಮಾಡಿ ಮಿದ್ಯಾನ್ಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಉಳಿದವರು ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ” ಎಂದು ಆಜ್ಞಾಪಿಸಿದನು.

[8] ಗಿದ್ಯೋನನು ಆ ಮುನ್ನೂರು ಜನರನ್ನು ಇಟ್ಟುಕೊಂಡು ಉಳಿದ ಇಸ್ರಾಯೇಲ್ಯರನ್ನು ಅವರವರ ಗುಡಾರಗಳಿಗೆ ಕಳುಹಿಸಿದನು. ಕಳುಹಿಸುವಾಗ ಅವರ ಹತ್ತಿರ ಇದ್ದ ಆಹಾರವನ್ನೂ, ಕೊಂಬುಗಳನ್ನೂ ತನ್ನ ಜನರಿಗೋಸ್ಕರ ತೆಗೆದುಕೊಂಡನು. ಮಿದ್ಯಾನ್ಯರ ದಂಡು ಕೆಳಗೆ ತಗ್ಗಿನಲ್ಲಿ ಇಳಿದುಕೊಂಡಿತ್ತು.

[9] ಅದೇ ದಿನದ ರಾತ್ರಿಯಲ್ಲಿ ಯೆಹೋವನು ಅವನಿಗೆ, “ನೀನು ಎದ್ದು ಹೋಗಿ, ಶತ್ರುಗಳ ಪಾಳೆಯದ ಮೇಲೆ ಬೀಳು. ಅದನ್ನು ನಿನಗೆ ಒಪ್ಪಿಸಿಕೊಡುತ್ತೇನೆ.

[10] ಆದರೆ ನೀನು ಅವರ ಮೇಲೆ ಬೀಳುವುದಕ್ಕೆ ಹೆದರುತ್ತೀಯಾದರೆ ಮೊದಲು ನಿನ್ನ ಸೇವಕನಾದ ಪುರನ ಸಂಗಡ ಅಲ್ಲಿಗೆ ಹೋಗಿ ಅವರು ಮಾತನಾಡಿಕೊಳ್ಳುವುದನ್ನು ಲಾಲಿಸು;

[11] ಆಗ ಅವರ ಮೇಲೆ ಬೀಳುವುದಕ್ಕೆ ನಿನಗೆ ಧೈರ್ಯಬರುವುದು” ಅಂದನು. ಗಿದ್ಯೋನನು ಅದರಂತೆಯೇ ತನ್ನ ಸೇವಕನಾದ ಪುರನ ಸಂಗಡ ಶತ್ರುಸೈನಿಕರ ಪಾಳೆಯದ ಕಡೇ ಭಾಗಕ್ಕೆ ಹೋದನು.

[12] ಮಿದ್ಯಾನ್ಯರೂ, ಅಮಾಲೇಕ್ಯರೂ, ಮೂಡಣ ದೇಶದವರೂ ಮಿಡತೆಗಳಂತೆ ಗುಂಪಾಗಿ ತಗ್ಗಿನಲ್ಲಿ ಇಳಿದುಕೊಂಡಿದ್ದರು. ಅವರ ಒಂಟೆಗಳು ಸಮುದ್ರತೀರದ ಮರಳಿನಂತೆ ಅಸಂಖ್ಯವಾಗಿದ್ದವು.

[13] ಗಿದ್ಯೋನನು ಬಂದಾಗ ಅವರಲ್ಲೊಬ್ಬನು ತನ್ನ ಜೊತೆಗಾರನಿಗೆ ಒಂದು ಕನಸನ್ನು ತಿಳಿಸುತ್ತಿದ್ದನು. ಅವನು, “ಇಗೋ, ನಾನು ಒಂದು ಕನಸು ಕಂಡೆನು; ಅದರಲ್ಲಿ ಒಂದು ಜವೆಗೋದಿಯ ರೊಟ್ಟಿಯು ಉರುಳುತ್ತಾ ಮಿದ್ಯಾನ್ಯರ ಪಾಳೆಯದೊಳಗೆ ಬಂದು, ಒಂದು ಡೇರೆಗೆ ತಗಲಿ, ಅದನ್ನು ಬುಡಮೇಲು ಮಾಡಿ ಬೀಳಿಸಿಬಿಟ್ಟಿತು” ಎಂದು ಹೇಳಿದನು

[14] ಆಗ ಅವನ ಜೊತೆಗಾರನು, “ಇದು ಇಸ್ರಾಯೇಲನಾದ ಯೋವಾಷನ ಮಗ ಗಿದ್ಯೋನನ ಕತ್ತಿಯೇ ಹೊರತು ಮತ್ತೊಂದಲ್ಲ; ದೇವರು ಮಿದ್ಯಾನ್ಯರನ್ನೂ ಅವರ ಪಾಳೆಯಗಳನ್ನೂ ಅವನ ಕೈಗೆ ಒಪ್ಪಿಸಿಕೊಟ್ಟಿದ್ದಾನೆ” ಅಂದನು.

[15] ಗಿದ್ಯೋನನು ಆ ಕನಸನ್ನೂ, ಅದರ ಅರ್ಥವನ್ನೂ ಕೇಳಿದಾಗ ಯೆಹೋವನಿಗೆ ಅಡ್ಡಬಿದ್ದು, ಇಸ್ರಾಯೇಲರ ಪಾಳೆಯಕ್ಕೆ ಹಿಂದಿರುಗಿ ಬಂದು ಅವರಿಗೆ, “ಏಳಿರಿ, ಯೆಹೋವನು ಮಿದ್ಯಾನ್ಯರ ಪಾಳೆಯವನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ” ಅಂದನು.

[16] ಮತ್ತು ಅವನು ಆ ಮುನ್ನೂರು ಮಂದಿಯನ್ನು ಮೂರು ಗುಂಪು ಮಾಡಿ ಪ್ರತಿಯೊಬ್ಬನ ಕೈಯಲ್ಲಿ ಕೊಂಬನ್ನೂ, ಉರಿಯುವ ಪಂಜು ಇರುವ ಬರಿಕೊಡವನ್ನೂ ಕೊಟ್ಟು ಅವರಿಗೆ,

[17] “ನನ್ನನ್ನೇ ನೋಡುತ್ತಾ ನಾನು ಮಾಡುವ ಹಾಗೆ ಮಾಡಿರಿ. ನಾನು ಪಾಳೆಯದ ಅಂಚಿಗೆ ಬಂದಾಗ ಹೇಗೆ ಮಾಡುತ್ತೇನೋ ಹಾಗೆ ನೀವೂ ಮಾಡಬೇಕು.

[18] ನಾನೂ ನನ್ನ ಸಂಗಡ ಇದ್ದವರೂ ಕೊಂಬುಗಳನ್ನು ಊದಲು ನೀವೂ ಪಾಳೆಯದ ಸುತ್ತಲೂ ಕೊಂಬನ್ನು ಊದಿ, ‘ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ ಎಂದು ಕೂಗಿರಿ’” ಎಂದು ಹೇಳಿದನು.

[19] ರಾತ್ರಿಯ ಎರಡನೆಯ ಜಾವದಲ್ಲಿ ಕಾವಲುಗಾರರು ಬದಲಾದ ಕೂಡಲೆ ಗಿದ್ಯೋನನೂ ಅವನ ಸಂಗಡ ಇದ್ದ ನೂರು ಮಂದಿಯೂ (ಶತ್ರುಗಳ) ಪಾಳೆಯದ ಅಂಚಿಗೆ ಬಂದು, ಕೊಂಬುಗಳನ್ನು ಊದಿ, ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದುಬಿಟ್ಟರು.

[20] ಕೂಡಲೆ ಮೂರು ಗುಂಪಿನವರೂ ಕೊಂಬುಗಳನ್ನು ಊದಿ, ಕೊಡಗಳನ್ನು ಒಡೆದುಬಿಟ್ಟು, ಎಡಗೈಯಲ್ಲಿ ಪಂಜುಗಳನ್ನೂ ಬಲಗೈಯಲ್ಲಿ ಊದುವ ಕೊಂಬುಗಳನ್ನೂ ಹಿಡಿದು, “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ ಆಗಿದೆ” ಎಂದು ಕೂಗಿ

[21] ಪಾಳೆಯದ ಸುತ್ತಲೂ ತಮ್ಮ ತಮ್ಮ ಸ್ಥಳದಲ್ಲಿ ನಿಂತರು. ಪಾಳೆಯದವರಾದರೋ ಕೂಗುತ್ತಾ ಓಡಿಹೋದರು.

[22] ಆ ಮುನ್ನೂರು ಮಂದಿಯು ಕೊಂಬುಗಳನ್ನು ಊದುತ್ತಿರುವಾಗ ಪಾಳೆಯದವರು ಒಬ್ಬರನ್ನೊಬ್ಬರು ಹತಮಾಡಿಕೊಳ್ಳುವಂತೆ ಯೆಹೋವನು ಮಾಡಿದನು. ಪಾಳೆಯದವರು ಚೆರೇರದ ದಾರಿಯಲ್ಲಿರುವ ಬೇತ್‍ಷಿಟ್ಟದ ವರೆಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾ ಪ್ರಾಂತ್ಯದ ವರೆಗೂ ಓಡಿಹೋದರು.

[23] ಇಸ್ರಾಯೇಲ್ಯರಾದ ನಫ್ತಾಲಿ, ಆಶೇರ್ ಕುಲಗಳವರೂ, ಮನಸ್ಸೆ ಕುಲದ ಎಲ್ಲಾ ಜನರೂ ಕೂಡಿ ಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು.

[24] ಇದಲ್ಲದೆ ಗಿದ್ಯೋನನು ಎಫ್ರಾಯೀಮ್ ಪರ್ವತಪ್ರದೇಶಗಳಿಗೆ ದೂತರನ್ನು ಕಳುಹಿಸಿ ಅಲ್ಲಿನವರಿಗೆ, “ನೀವು ಮಿದ್ಯಾನ್ಯರಿಗೆ ವಿರೋಧವಾಗಿ ಹೊರಟು ಬೇತ್‌ಬಾರದವರೆಗಿರುವ ಪ್ರವಾಹಗಳನ್ನೂ ಯೊರ್ದನ್ ಹೊಳೆಯನ್ನೂ ವಶಪಡಿಸಿಕೊಳ್ಳಿರಿ” ಎಂದು ಹೇಳಿಕಳುಹಿಸಿದನು. ಆಗ ಎಫ್ರಾಯೀಮ್ಯರೆಲ್ಲರೂ ಒಟ್ಟಾಗಿ ಬೇತ್‌ಬಾರದವರೆಗಿರುವ ಪ್ರವಾಹಗಳಿಗೂ ಬಂದು ಅವುಗಳ ಹಾಯಗಡಗಳನ್ನೆಲ್ಲಾ ಮತ್ತು ಯೊರ್ದನ್ ಹೊಳೆಯನ್ನೂ ಹಿಡಿದರು.

[25] ಇದಲ್ಲದೆ ಅವರು ಮಿದ್ಯಾನ್ಯರ ನಾಯಕರಾದ ಓರೇಬ್, ಜೇಬ್ ಎಂಬುವರನ್ನು ಹಿಡಿದು ಓರೇಬನನ್ನು, ಓರೇಬನ ಬಂಡೆಯ ಮೇಲೆಯೂ, ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯಲ್ಲಿಯೂ ಕೊಂದು ಅವರ ತಲೆಗಳನ್ನು ತೆಗೆದುಕೊಂಡು ಮಿದ್ಯಾನ್ಯರನ್ನು ಹಿಂದಟ್ಟುತ್ತಾ ಯೊರ್ದನಿನ ಆಚೆಗೆ ಹೋಗಿ ಅಲ್ಲಿದ್ದ ಗಿದ್ಯೋನನಿಗೆ ಅವುಗಳನ್ನು ಒಪ್ಪಿಸಿದರು.

ನ್ಯಾಯಸ್ಥಾಪಕರು — Chapters