[1] ಕಾನಾನ್ಯರೊಡನೆ ನಡೆದ ಯುದ್ಧಗಳಲ್ಲಿ ಒಂದನ್ನೂ ಅರಿಯದೆ ಇದ್ದ ಇಸ್ರಾಯೇಲ್ಯರನ್ನು ಪರೀಕ್ಷಿಸುವುದಕ್ಕೂ,
[2] ಇಸ್ರಾಯೇಲ್ ಸಂತತಿಯವರಲ್ಲಿ ಯುದ್ಧ ವಿದ್ಯೆಯನ್ನು ಅರಿಯದವರಿಗೆ ಅದನ್ನು ಕಲಿಸಿಕೊಡುವುದಕ್ಕೂ ಯೆಹೋವನು ಉಳಿಸಿದ ಜನಾಂಗಗಳವರು ಯಾರಾರೆಂದರೆ,
[3] ಐದು ಮಂದಿ ಫಿಲಿಷ್ಟಿಯ ಪ್ರಭುಗಳು, ಸರ್ವ ಕಾನಾನ್ಯರು, ಚೀದೋನ್ಯರು, ಲೆಬನೋನ್ ಪರ್ವತಗಳಲ್ಲಿಯೂ ಬಾಳ್ ಹೆರ್ಮೊನ್ ಬೆಟ್ಟದಿಂದ ಹಮಾತಿನ ದಾರಿಯವರೆಗೆ ವಾಸವಾಗಿರುವ ಹಿವ್ವಿಯರು ಇವರೇ.
[4] ತಾನು ಮೋಶೆಯ ಮೂಲಕವಾಗಿ ಇವರ ಪೂರ್ವಿಕರಿಗೆ ವಿಧಿಸಿದ ಆಜ್ಞೆಗಳನ್ನು ಇಸ್ರಾಯೇಲರು ಕೈಕೊಂಡು ನಡೆಯುವರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳುವುದಕ್ಕೋಸ್ಕರ ಯೆಹೋವನು ಅವರನ್ನು ಉಳಿಸಿದ್ದನು.
[5] ಇಸ್ರಾಯೇಲರು ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು ಎಂಬೀ ಜನಾಂಗಗಳ ಮಧ್ಯದಲ್ಲಿ ವಾಸಮಾಡುತ್ತಾ,
[6] ಅವರ ಕನ್ಯೆಯರನ್ನು ತಾವು ತಂದು, ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಕೊಟ್ಟು, ಅವರ ದೇವತೆಗಳನ್ನು ಸೇವಿಸಿದರು.
[7] ಇಸ್ರಾಯೇಲರು ಬಾಳ್, ಅಶೇರ ಎಂಬ ದೇವತೆಗಳನ್ನು ಪೂಜಿಸಿ, ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟು ಆತನ ದೃಷ್ಟಿಯಲ್ಲಿ ದ್ರೋಹಿಗಳಾದರು.
[8] ಆದ್ದರಿಂದ ಆತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು, ಅವರನ್ನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ನಹರಾಯಿಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮ್ ಎಂಬುವವನಿಗೆ ಮಾರಿಬಿಟ್ಟನು. ಅವರು ಎಂಟು ವರ್ಷಗಳ ವರೆಗೆ ಅವನಿಗೆ ದಾಸರಾಗಿದ್ದರು.
[9] ಇಸ್ರಾಯೇಲರು ಯೆಹೋವನಿಗೆ ಮೊರೆಯಿಟ್ಟಾಗ ಆತನು ಅವರನ್ನು ಬಿಡಿಸುವುದಕ್ಕೋಸ್ಕರ ರಕ್ಷಕನನ್ನು ಎಬ್ಬಿಸಿದನು. ಕಾಲೇಬನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನೇ ಆ ರಕ್ಷಕನು.
[10] ಯೆಹೋವನ ಆತ್ಮವು ಅವನ ಮೇಲೆ ಬಂದುದರಿಂದ ಅವನು ಇಸ್ರಾಯೇಲರ ನ್ಯಾಯಸ್ಥಾಪನೆಗೋಸ್ಕರ ಯುದ್ಧಕ್ಕೆ ಹೊರಟನು. ಯೆಹೋವನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಅವನ ಕೈಗೆ ಒಪ್ಪಿಸಿಕೊಟ್ಟದ್ದರಿಂದ ಅವನು ಅವನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟನು.
[11] ದೇಶದಲ್ಲಿ ನಲ್ವತ್ತು ವರ್ಷಗಳ ಕಾಲ ಸಮಾಧಾನವಿತ್ತು. ತರುವಾಯ ಕೆನಜನ ಮಗನಾದ ಒತ್ನೀಯೇಲನು ಮರಣಹೊಂದಿದನು.
[12] ಇಸ್ರಾಯೇಲ್ಯರು ಪುನಃ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಆತನು ಅವರ ದ್ರೋಹದ ನಿಮಿತ್ತ ಮೋವಾಬ್ಯರ ಅರಸನಾದ ಎಗ್ಲೋನನನ್ನು ಅವರಿಗೆ ವಿರೋಧವಾಗಿ ಬಲಪಡಿಸಿದನು.
[13] ಇವನು ಅಮ್ಮೋನಿಯರನ್ನೂ, ಅಮಾಲೇಕ್ಯರನ್ನೂ ಕೂಡಿಸಿಕೊಂಡು ಹೊರಟು ಬಂದು ಇಸ್ರಾಯೇಲರನ್ನು ಸೋಲಿಸಿ ಖರ್ಜೂರನಗರವನ್ನು ಹಿಡಿದನು.
[14] ಇಸ್ರಾಯೇಲರು ಅವನಿಗೆ ಹದಿನೆಂಟು ವರ್ಷ ದಾಸರಾಗಿದ್ದರು.
[15] ಅವರು ಯೆಹೋವನಿಗೆ ಮೊರೆಯಿಡಲು ಆತನು ಅವರನ್ನು ರಕ್ಷಿಸುವುದಕ್ಕೋಸ್ಕರ ಬೆನ್ಯಾಮೀನ್ ಕುಲದ ಗೇರನ ಮಗನಾದ ಏಹೂದನನ್ನು ಎಬ್ಬಿಸಿದನು. ಅವನು ಎಡಚನಾಗಿದ್ದನು. ಇಸ್ರಾಯೇಲರು ಅವನ ಮೂಲಕವಾಗಿ ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪ ಕಾಣಿಕೆಯನ್ನು ಕಳುಹಿಸಿದರು.
[16] ಅವನು ತನಗೋಸ್ಕರ ಒಂದು ಗುದ್ದುಮೊಳ ಉದ್ದವಾದ ಇಬ್ಬಾಯಿಕತ್ತಿಯನ್ನು ಮಾಡಿ ಅದನ್ನು ಬಟ್ಟೆಗಳ ಒಳಗೆ ಬಲಗಡೆಯ ಸೊಂಟಕ್ಕೆ ಕಟ್ಟಿಕೊಂಡು ಹೋಗಿ
[17] ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪ ಕಾಣಿಕೆಯನ್ನು ಒಪ್ಪಿಸಿದನು. ಎಗ್ಲೋನನು ಬಹಳ ದಪ್ಪನಾದ ವ್ಯಕ್ತಿ.
[18] ಏಹೂದನು ಕಪ್ಪಕಾಣಿಕೆಯನ್ನು ಒಪ್ಪಿಸಿದ ಮೇಲೆ ಅದನ್ನು ಹೊತ್ತುಕೊಂಡು ಬಂದಿದ್ದ ಆಳುಗಳನ್ನು ಕಳುಹಿಸಿಬಿಟ್ಟು,
[19] ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಿರುಗಿ ಎಗ್ಲೋನನ ಬಳಿಗೆ ಬಂದು, “ಅರಸನೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವಿದೆ” ಅಂದನು. ಆಗ ಅರಸನು, “ನಿಶ್ಯಬ್ದ” ಅನ್ನಲು ಅವನ ಸೇವಕರೆಲ್ಲರೂ ಹೊರಗೆ ಹೋದರು.
[20] ಅರಸನು ತನ್ನ ತಂಪಾದ ಮೇಲಂತಸ್ತಿನ ಕೋಣೆಯಲ್ಲಿ ಒಬ್ಬನೇ ಕುಳಿತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಹೋಗಿ, “ನಿನಗೆ ಹೇಳಬೇಕಾದದ್ದೊಂದು ದೈವೋಕ್ತಿಯಿದೆ” ಅನ್ನಲು ಅವನು ತನ್ನ ಸಿಂಹಾಸನದಿಂದ ಎದ್ದನು.
[21] ಆಗ ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು.
[22] ಆ ಕತ್ತಿ ಹಿಡಿಯ ಸಮೇತ ಹೊಟ್ಟೆಯೊಳಗೆ ಹೊಕ್ಕಿತು. ಅವನು ಕತ್ತಿಯನ್ನು ಹೊರಗೆ ತೆಗೆಯದಿದ್ದುದರಿಂದ ಕೊಬ್ಬು ಕತ್ತಿಯನ್ನು ಸುತ್ತಿಕೊಂಡಿತು; ಕೊಬ್ಬು ಬೆನ್ನಿನಿಂದ ಹೊರಗೆ ಬಂದಿತು.
[23] ಏಹೂದನು ಪಡಸಾಲೆಗೆ ಬಂದು, ಆ ಮೇಲುಪ್ಪರಿಗೆಯ ಕದವನ್ನು ಮುಚ್ಚಿ ಬೀಗಹಾಕಿ ಹೊರಟು ಹೋದನು.
[24] ತರುವಾಯ ಸೇವಕರು ಅಲ್ಲಿ ಬಂದು ಬಾಗಿಲಿಗೆ ಬೀಗಹಾಕಿರುವುದನ್ನು ಕಂಡು, ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು ಅಂದುಕೊಂಡು
[25] ತಮಗೆ ಬೇಸರವಾಗುವ ತನಕ ಕಾಯುತ್ತಾ ಇದ್ದರು. ಆದರೂ ಕದಗಳು ತೆರೆಯಲ್ಪಡದೆ ಇರುವುದನ್ನು ನೋಡಿ ಬೀಗದ ಕೈಯನ್ನು ತೆಗೆದುಕೊಂಡು ಬಾಗಿಲನ್ನು ತೆರೆಯಲು, ಇಗೋ, ಅವರ ಒಡೆಯನು ಸತ್ತುಬಿದ್ದಿದ್ದನು.
[26] ಅವರು ಅರಸನಿಗಾಗಿ ಕಾಯುತ್ತಿದ್ದ ಸಮಯದಲ್ಲೇ ಏಹೂದನು ತಪ್ಪಿಸಿಕೊಂಡು ವಿಗ್ರಹಗಳಿದ್ದ ಸ್ಥಳದಲ್ಲಿ ಹೊಳೆದಾಟಿ ಸೆಯೀರಾ ಎಂಬಲ್ಲಿಗೆ ಬಂದು,
[27] ಎಫ್ರಾಯೀಮ್ ಪರ್ವತಪ್ರದೇಶದಲ್ಲಿ ಕೊಂಬನ್ನು ಊದಿದನು. ಆಗ ಇಸ್ರಾಯೇಲರು ಅವನ ಬಳಿಗೆ ಬಂದು, ಗಟ್ಟಾ ಇಳಿದು ಅವನ ಸಂಗಡ ಹೊರಟರು.
[28] ಅವನು ಅವರ ನಾಯಕನಾಗಿ, “ನನ್ನನ್ನು ಹಿಂಬಾಲಿಸಿರಿ; ಯೆಹೋವನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ” ಎಂದು ಹೇಳಲು, ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲಾ (ನದಿಯಲ್ಲಿ ಹಾದು ಹೋಗಬಹುದಾದ ಸ್ಥಳಗಳು) ಹಿಡಿದರು; ಯಾರನ್ನೂ ದಾಟಗೊಡಲಿಲ್ಲ.
[29] ಅವರು ಆ ಕಾಲದಲ್ಲಿ ಪುಷ್ಟರೂ ಪರಾಕ್ರಮಿಗಳೂ ಆದ ಸುಮಾರು ಹತ್ತು ಸಾವಿರ ಮಂದಿ ಮೋವಾಬ್ಯರಲ್ಲಿ ಒಬ್ಬನೂ ತಪ್ಪಿಸಿಕೊಳ್ಳದಂತೆ ಹತ್ಯೆಮಾಡಿದರು.
[30] ಆ ದಿನದಲ್ಲಿ ಮೋವಾಬ್ಯರು ಇಸ್ರಾಯೇಲ್ಯರಿಂದ ತಗ್ಗಿಸಲ್ಪಟ್ಟರು. ದೇಶದಲ್ಲಿ ಎಂಭತ್ತು ವರ್ಷ ಸಮಾಧಾನವಿತ್ತು.
[31] ಏಹೂದನ ತರುವಾಯ ಅನಾತನ ಮಗನಾದ ಶಮ್ಗರನು ಎದ್ದು ಎತ್ತಿನ ತಿವಿಗೋಲಿನಿಂದ ಆರುನೂರು ಮಂದಿ ಫಿಲಿಷ್ಟಿಯರನ್ನು ಕೊಂದು ಇಸ್ರಾಯೇಲರನ್ನು ರಕ್ಷಿಸಿದನು.