Skip to content
Opens in a new window
Listen to this chapter • 4:39

[1] ಯೆಹೋವನ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು ಇಸ್ರಾಯೇಲ್ಯರಿಗೆ, “ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿ, ನಿಮ್ಮ ಪೂರ್ವಿಕರಿಗೆ ಪ್ರಮಾಣ ಮಾಡಿದ ದೇಶಕ್ಕೆ ಕರೆತಂದೆನು. ‘ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವುದಿಲ್ಲವೆಂದು ನಾನು ಮಾತು ಕೊಟ್ಟಾಗ,

[2] ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು’ ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ?

[3] ‘ನೀವು ಹೀಗೆ ಮಾಡುವುದಾದರೆ ನಾನು ಈ ದೇಶ ನಿವಾಸಿಗಳನ್ನು ನಿಮ್ಮೆದುರಿನಿಂದ ಓಡಿಸುವುದಿಲ್ಲ; ಅವರು ನಿಮ್ಮ ಪಕ್ಕೆಗಳಿಗೆ ಮುಳ್ಳುಗಳಾಗಿರುವರು; ಅವರ ದೇವತೆಗಳು ನಿಮಗೆ ಉರುಲಾಗುವವು’ ಎಂದು ನಾನು ಮೊದಲೇ ಹೇಳಿದ್ದೆನಲ್ಲಾ” ಅಂದನು.

[4] ಯೆಹೋವನ ದೂತನು ಈ ಮಾತುಗಳನ್ನು ಹೇಳಿದಾಗ ಇಸ್ರಾಯೇಲರೆಲ್ಲರೂ ಬಹಳವಾಗಿ ದುಃಖಿಸಿ ಗಟ್ಟಿಯಾಗಿ ಅತ್ತರು.

[5] ಮತ್ತು ಆ ಸ್ಥಳಕ್ಕೆ ಬೋಕೀಮೆಂಬ ಹೆಸರಿಟ್ಟು, ಅಲ್ಲಿಯೇ ಯೆಹೋವನಿಗೋಸ್ಕರ ಯಜ್ಞಮಾಡಿದರು.

[6] ಯೆಹೋಶುವನು ಇಸ್ರಾಯೇಲ್ಯರನ್ನು ಕಳುಹಿಸಿದ ಮೇಲೆ ಅವರು ತಮ್ಮ ತಮ್ಮ ಪಾಲಿಗೆ ಬಂದ ಪ್ರದೇಶಗಳಿಗೆ ಹೋಗಿ ಅವುಗಳನ್ನು ಸ್ವಾಧೀನಮಾಡಿಕೊಂಡರು.

[7] ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಬದುಕಿದ್ದ, ಯೆಹೋವನು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲರು ಯೆಹೋವನನ್ನು ಸೇವಿಸುತ್ತಿದ್ದರು.

[8] ಯೆಹೋವನ ಸೇವಕನಾದ ನೂನನ ಮಗ ಯೆಹೋಶುವನು ನೂರ ಹತ್ತು ವರ್ಷದವನಾಗಿ ಮರಣಹೊಂದಿದನು.

[9] ಅವನನ್ನು ಅವನ ಸ್ವಾಧೀನದ ಭೂಮಿಯಾದ ತಿಮ್ನತ್ ಹೆರೆಸ್ ಎಂಬಲ್ಲಿ ಸಮಾಧಿಮಾಡಿದರು. ಅದು ಎಫ್ರಾಯೀಮ್ ಪರ್ವತಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿರುತ್ತದೆ.

[10] ಅವನ ಕಾಲದವರೆಲ್ಲರೂ ಪೂರ್ವಿಕರ ಬಳಿಗೆ ಸೇರಿದರು. ಆನಂತರ ಯೆಹೋವನನ್ನೂ, ಆತನು ಇಸ್ರಾಯೇಲರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.

[11] ಈ ಇಸ್ರಾಯೇಲರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನು ಮಾಡಿದರು ಹಾಗೂ ಬಾಳನನ್ನು ಸೇವಿಸಿದರು.

[12] ತಮ್ಮ ಪೂರ್ವಿಕರನ್ನು ಐಗುಪ್ತದಿಂದ ಕರತಂದ ದೇವರಾದ ಯೆಹೋವನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ, ತಮ್ಮ ಸುತ್ತಣ ಜನಾಂಗಗಳ ದೇವರುಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಯೆಹೋವನಿಗೆ ಸಿಟ್ಟು ಬರುವಂತೆ ಮಾಡಿದರು.

[13] ಅವರು ಯೆಹೋವನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸುವವರಾದರು.

[14] ಆಗ ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು. ಆತನು ಅವರನ್ನು ಸುತ್ತಣ ವೈರಿಗಳಿಗೆ ಮಾರಿಬಿಟ್ಟನು. ಅವರು ಆ ಶತ್ರುಗಳ ಮುಂದೆ ನಿಲ್ಲಲಾರದವರಾದರು.

[15] ಯೆಹೋವನು ತಾನು ಮೊದಲೇ ಆಣೆಯಿಟ್ಟು ಹೇಳಿದಂತೆ ಇಸ್ರಾಯೇಲರು ಎಲ್ಲಿ ಹೋದರೂ ಆತನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರು ಬಹು ಕಷ್ಟಗಳಿಗೆ ಗುರಿಯಾದರು.

[16] ಆಗ ಯೆಹೋವನು ಅವರನ್ನು ಸೂರೆಮಾಡುವವರ ಕೈಯಿಂದ ತಪ್ಪಿಸುವುದಕ್ಕೋಸ್ಕರ ನ್ಯಾಯಸ್ಥಾಪಕರನ್ನು ಕಳುಹಿಸಿದನು.

[17] ಇಸ್ರಾಯೇಲರು ಅವರ ಮಾತನ್ನೂ ಕೇಳದೆ ಅನ್ಯದೇವರುಗಳನ್ನು ಪೂಜಿಸಿ, ಅವುಗಳಿಗೆ ಅಡ್ಡಬಿದ್ದು ದೈವದ್ರೋಹಿಗಳಾದರು. ಯೆಹೋವನ ಆಜ್ಞೆಗಳನ್ನು ಕೈಕೊಳ್ಳುತ್ತಿದ್ದ ತಮ್ಮ ಪೂರ್ವಿಕರ ಮಾರ್ಗವನ್ನು ಬೇಗನೆ ಬಿಟ್ಟುಬಿಟ್ಟರು. ಅವರಂತೆ ನಡೆಯಲೇ ಇಲ್ಲ.

[18] ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಯೆಹೋವನು ಕೇಳಿ, ಕನಿಕರಪಟ್ಟು, ನ್ಯಾಯಸ್ಥಾಪಕರನ್ನು ಎಬ್ಬಿಸಿ ಜೀವಮಾನವೆಲ್ಲಾ ಅವರ ಸಂಗಡ ಇದ್ದನು. ಅವರ ಮೂಲಕವಾಗಿ ಇಸ್ರಾಯೇಲರನ್ನು ಶತ್ರುಗಳಿಂದ ಬಿಡಿಸಿದನು.

[19] ಅಂಥ ನ್ಯಾಯಸ್ಥಾಪಕರು ತೀರಿಹೋದನಂತರ ಇಸ್ರಾಯೇಲರು ಪುನಃ ತಮ್ಮ ಹಿರಿಯರಿಗಿಂತಲೂ ಭ್ರಷ್ಟರಾಗಿ ಅನ್ಯದೇವತೆಗಳನ್ನು ಅವಲಂಬಿಸಿ, ಸೇವಿಸಿ, ಅವುಗಳಿಗೆ ಅಡ್ಡಬಿದ್ದರು. ಅವರು ತಮ್ಮ ದುರ್ಮಾರ್ಗಗಳನ್ನು, ಮೊಂಡತನಗಳನ್ನು ಬಿಡಲೇ ಇಲ್ಲ.

[20] ಆದ್ದರಿಂದ ಯೆಹೋವನ ಕೋಪವು ಇಸ್ರಾಯೇಲರ ಮೇಲೆ ಹೆಚ್ಚಾಯಿತು. ಆತನು, “ಈ ಜನರ ಪೂರ್ವಿಕರಿಗೆ ನಾನು ಕೊಟ್ಟ ಒಡಂಬಡಿಕೆಯನ್ನು ಇವರು ಕೈಕೊಳ್ಳಲಿಲ್ಲ; ನನ್ನ ಮಾತಿಗೆ ಕಿವಿಗೊಡಲಿಲ್ಲ.

[21] ಹೀಗಿರುವುದರಿಂದ ಯೆಹೋಶುವನು ಸಾಯುವ ಮೊದಲು ಹೊರಡಿಸದೆ ಬಿಟ್ಟಿದ ಜನಾಂಗಗಳಲ್ಲಿ ನಾನು ಒಂದನ್ನು ಹೊರಡಿಸಿಬಿಡುವುದಿಲ್ಲ.

[22] ಇವರೂ ತಮ್ಮ ಹಿರಿಯರಂತೆ ಜಾಗರೂಕತೆಯಿಂದ ಯೆಹೋವನಾದ ನನ್ನ ಮಾರ್ಗದಲ್ಲಿ ನಡೆಯುವರೋ ಇಲ್ಲವೋ ಎಂದು ಈ ಜನಾಂಗಗಳ ಮೂಲಕವಾಗಿ ಪರೀಕ್ಷಿಸುವೆನು” ಅಂದನು.

[23] ಇದರಿಂದ ಯೆಹೋವನು ಯೆಹೋಶುವನ ಕೈಗೆ ಒಪ್ಪಿಸದೆ ಉಳಿಸಿದ್ದ ಜನಾಂಗಗಳನ್ನು ಬೇಗನೆ ಓಡಿಸಲಿಲ್ಲ.

ನ್ಯಾಯಸ್ಥಾಪಕರು — Chapters