Skip to content
Opens in a new window
Listen to this chapter • 6:45

[1] ಯೆಹೋಶುವನು ಮರಣಹೊಂದಿದ ನಂತರ ಇಸ್ರಾಯೇಲ್ಯರು “ಕಾನಾನ್ಯರೊಡನೆ ಯುದ್ಧಮಾಡುವುದಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ಯೆಹೋವನನ್ನು ಕೇಳಲು

[2] ಆತನು ಅವರಿಗೆ “ಯೆಹೂದ್ಯರು ಹೋಗಲಿ; ಇಗೋ, ದೇಶವನ್ನು ಅವರಿಗೆ ಒಪ್ಪಿಸಿದ್ದೇನೆ” ಅಂದನು.

[3] ಆಗ ಯೆಹೂದ್ಯರು ತಮ್ಮ ಸಹೋದರರಾದ ಸಿಮೆಯೋನ್ಯರಿಗೆ, “ಕಾನಾನ್ಯರೊಡನೆ ಯುದ್ಧಮಾಡುವುದಕ್ಕೋಸ್ಕರ ನೀವು ನಮ್ಮ ಸಂಗಡ ನಮ್ಮ ಸ್ವಾಧೀನದಲ್ಲಿರುವ ಭೂಮಿಗೆ ಬನ್ನಿರಿ; ಅನಂತರ ನಾವೂ ನಿಮ್ಮ ಸಂಗಡ ನಿಮ್ಮ ಸ್ವಾಧೀನದಲ್ಲಿರುವ ಭೂಮಿಗೆ ಬರುವೆವು” ಎಂದು ಹೇಳಿದರು.

[4] ಅವರು ಒಪ್ಪಿ ಯೆಹೂದ್ಯರ ಜೊತೆಯಲ್ಲಿ ಯುದ್ಧಕ್ಕೆ ಹೋದರು. ಆಗ ಯೆಹೋವನು ಕಾನಾನ್ಯರನ್ನೂ, ಪೆರಿಜ್ಜೀಯರನ್ನೂ ಅವರ ಕೈಗೆ ಒಪ್ಪಿಸಿದ್ದರಿಂದ ಅವರು ಅವರಲ್ಲಿ ಹತ್ತು ಸಾವಿರ ಮಂದಿಯನ್ನು ಬೆಜೆಕ್ ಎಂಬ ಸ್ಥಳದಲ್ಲಿ ಹತ್ಯೆಮಾಡಿದರು.

[5] ಅವರು ಅಲ್ಲಿ ಅದೋನೀ ಬೆಜೆಕನನ್ನು ಸಂಧಿಸಿ, ಅವನೊಡನೆ ಯುದ್ಧಮಾಡಿ ಕಾನಾನ್ಯರನ್ನೂ, ಪೆರಿಜ್ಜೀಯರನ್ನೂ ಸೋಲಿಸಿದರು.

[6] ಅದೋನೀಬೆಜೆಕನು ಓಡಿಹೋಗಲು ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.

[7] ಆಗ ಅದೋನೀಬೆಜೆಕನು, “ಕೈ ಕಾಲುಗಳ ಹೆಬ್ಬೆರಳುಗಳನ್ನು ನಾನು ಕತ್ತರಿಸಿಬಿಟ್ಟ ಎಪ್ಪತ್ತು ಮಂದಿ ಅರಸರು ನನ್ನ ಮೇಜಿನ ಕೆಳಗೆ ಬೀಳುವ ಆಹಾರದ ಚೂರುಗಳನ್ನು ಕೂಡಿಸಿಕೊಂಡು ತಿನ್ನುತ್ತಿದ್ದರು. ನಾನು ಅವರಿಗೆ ಮಾಡಿದಂತೆಯೇ ದೇವರು ನನಗೆ ಮಾಡಿದ್ದಾನೆ” ಅಂದನು. ಅವರು ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬರಲು ಅವನು ಅಲ್ಲಿ ಸತ್ತನು.

[8] ಯೆಹೂದ್ಯರು ಯೆರೂಸಲೇಮಿನವರೊಡನೆ ಯುದ್ಧಮಾಡಿ, ಅಲ್ಲಿನ ಜನರನ್ನು ಹಿಡಿದು ಕತ್ತಿಯಿಂದ ಸಂಹರಿಸಿ ಪಟ್ಟಣಕ್ಕೆ ಬೆಂಕಿಯಿಟ್ಟರು.

[9] ತರುವಾಯ ಯೆಹೂದ್ಯರು ಹೋಗಿ ಪರ್ವತಪ್ರದೇಶ, ದಕ್ಷಿಣಸೀಮೆ ಹಾಗೂ ಕಣಿವೆ ಪ್ರದೇಶಗಳಲ್ಲಿದ್ದ ಕಾನಾನ್ಯರೊಡನೆ ಯುದ್ಧಮಾಡಿದರು.

[10] ಅವರು ಮೊದಲು ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ಬಿದ್ದು, ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬುವರನ್ನು ಸೋಲಿಸಿದರು.

[11] ಅಲ್ಲಿಂದ ದೆಬೀರಿನವರಿಗೆ ವಿರೋಧವಾಗಿ ಹೋದರು; ದೆಬೀರಕ್ಕೆ ಮೊದಲು ಕಿರ್ಯತಸೇಫೆರ್ ಎಂಬ ಹೆಸರಿತ್ತು.

[12] ಕಿರ್ಯತಸೇಫೆರ ಎಂಬ ಪಟ್ಟಣವನ್ನು ವಶಪಡಿಸಿಕೊಳ್ಳುವವನಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿಕೊಡುತ್ತೇನೆಂದು ಕಾಲೇಬನು ಹೇಳಿದನು.

[13] ಅವನ ತಮ್ಮನೂ, ಕೆನಜನ ಮಗನೂ ಆದ ಒತ್ನೀಯೇಲನು ಕಿರ್ಯತ್ ಸೇಫೆರನ್ನು ವಶಪಡಿಸಿಕೊಂಡನು. ಆಗ ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಮದುವೆಮಾಡಿಕೊಟ್ಟನು.

[14] ಆಕೆಯು ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಹೊಲವನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯಿಂದ ಇಳಿದಳು. ಕಾಲೇಬನು, “ನಿನಗೇನು ಬೇಕು?” ಎಂದು ಆಕೆಯನ್ನು ಕೇಳಲು

[15] ಆಕೆಯು, “ನನಗೊಂದು ದಾನಕೊಡಬೇಕು; ನೀನು ನನ್ನನ್ನು ದಕ್ಷಿಣ ಪ್ರಾಂತ್ಯಕ್ಕೆ ಕೊಟ್ಟುಬಿಟ್ಟಿಯಲ್ಲಾ, ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು” ಅಂದಳು. ಆಗ ಅವನು ಆಕೆಗೆ ಮೇಲಣ ಬುಗ್ಗೆ ಮತ್ತು ಕೆಳಗಣ ಪ್ರದೇಶದ ಬುಗ್ಗೆಗಳನ್ನು ಕೊಟ್ಟನು.

[16] ಮೋಶೆಯ ಮಾವನಾದ ಕೇನ್ಯನ ವಂಶದವರು ಖರ್ಜೂರ ನಗರದಿಂದ ಹೊರಟು ಯೆಹೂದ್ಯರ ಜೊತೆಯಲ್ಲಿ ಅರಾದಿನ ದಕ್ಷಿಣದಲ್ಲಿರುವ ಯೆಹೂದ ಅಡವಿಗೆ ಬಂದು ಅಲ್ಲಿನ ಜನರ ಸಂಗಡ ವಾಸಮಾಡಿದರು.

[17] ತರುವಾಯ ಯೆಹೂದ್ಯರು ತಮ್ಮ ಬಂಧುಗಳಾದ ಸಿಮೆಯೋನ್ಯರ ಸಂಗಡ ಹೋಗಿ ಚೆಫತ್ ಎಂಬ ಪಟ್ಟಣದಲ್ಲಿದ್ದ ಕಾನಾನ್ಯರನ್ನು ಸೋಲಿಸಿ, ಆ ಪಟ್ಟಣವನ್ನು ಹಾಳುಮಾಡಿ ಅದನ್ನು ಹೊರ್ಮಾ ಎಂದು ಕರೆದರು.

[18] ಅನಂತರ ಅವರು ಗಾಜಾ, ಅಷ್ಕೆಲೋನ್, ಎಕ್ರೋನ್ ಎಂಬ ಪಟ್ಟಣಗಳನ್ನೂ ಅವುಗಳ ಮೇರೆಗಳನ್ನೂ ಸ್ವಾಧೀನಮಾಡಿಕೊಂಡರು.

[19] ಯೆಹೋವನು ಯೆಹೂದ್ಯರ ಸಂಗಡ ಇದ್ದುದರಿಂದ ಅವರು ಪರ್ವತಪ್ರದೇಶಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ತಗ್ಗಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಬ್ಬಿಣದ ರಥಗಳಿದ್ದುದರಿಂದ ಅವರನ್ನು ಹೊರಡಿಸುವುದಕ್ಕೆ ಆಗಲಿಲ್ಲ.

[20] ಮೋಶೆ ಆಜ್ಞಾಪಿಸಿದಂತೆ ಅವರು ಕಾಲೇಬನಿಗೆ ಹೆಬ್ರೋನ್ ಪಟ್ಟಣವನ್ನು ಕೊಟ್ಟರು. ಅವನು ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಓಡಿಸಿಬಿಟ್ಟನು.

[21] ಯೆರೂಸಲೇಮಿನಲ್ಲಿದ್ದ ಯೆಬೂಸಿಯರನ್ನು ಬೆನ್ಯಾಮೀನ್ಯರು ಹೊರಡಿಸಿಬಿಡಲಿಲ್ಲ. ಅವರು ಇಂದಿನವರೆಗೂ ಬೆನ್ಯಾಮೀನ್ಯರ ಸಂಗಡ ಯೆರೂಸಲೇಮಿನಲ್ಲಿಯೇ ವಾಸವಾಗಿದ್ದಾರೆ.

[22] ಇವರ ಹಾಗೆಯೇ ಯೋಸೇಫನ ವಂಶದವರೂ ಹೊರಟು ಬೇತೇಲಿಗೆ ಬಂದರು. ಯೆಹೋವನು ಅವರ ಸಂಗಡ ಇದ್ದನು.

[23] ಅವರು ಲೂಜ್ ಎಂದು ಕರೆಯುತ್ತಿದ್ದ ಬೇತೇಲ್ ಊರನ್ನು ಸಂಚರಿಸಿ ನೋಡುವುದಕ್ಕೆ ಗೂಢಚಾರರನ್ನು ಕಳುಹಿಸಿದರು.

[24] ಅವರು ಆ ಊರೊಳಗಿನಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ, “ದಯವಿಟ್ಟು ಪಟ್ಟಣದೊಳಗೆ ನುಗ್ಗಬಹುದಾದ ದಾರಿಯನ್ನು ನಮಗೆ ತೋರಿಸು; ನಾವೂ ನಿನಗೆ ದಯೆತೋರಿಸುವೆವು” ಎಂದು ಹೇಳಲು ಅವನು ಅವರಿಗೆ ಆ ದಾರಿಯನ್ನು ತೋರಿಸಿದನು.

[25] ಆಗ ಅವರು ಆ ಪಟ್ಟಣವನ್ನು ಕತ್ತಿಯಿಂದ ಸಂಹರಿಸಿದರು. ಆದರೆ ಆ ಮನುಷ್ಯನನ್ನೂ ಅವನ ಕುಟುಂಬವನ್ನೂ ಏನು ಮಾಡದೆ ಕಳುಹಿಸಿಬಿಟ್ಟರು.

[26] ಅವನು ಹಿತ್ತಿಯರ ದೇಶಕ್ಕೆ ಹೋಗಿ ಒಂದು ಪಟ್ಟಣವನ್ನು ಕಟ್ಟಿಕೊಂಡು ಅದಕ್ಕೆ ಲೂಜ್ ಎಂದು ಹೆಸರಿಟ್ಟನು; ಅದಕ್ಕೆ ಇಂದಿನವರೆಗೂ ಅದೇ ಹೆಸರಿರುತ್ತದೆ.

[27] ಮನಸ್ಸೆಯವರು ಬೇತ್ ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ಎಂಬ ಪಟ್ಟಣಗಳಲ್ಲಿಯೂ ಅವುಗಳ ಗ್ರಾಮಗಳಲ್ಲಿಯೂ ವಾಸವಾಗಿದ್ದವರನ್ನು ಹೊರಡಿಸಿಬಿಡಲಿಲ್ಲ. ಆದುದರಿಂದ ಕಾನಾನ್ಯರು ಆ ಪ್ರಾಂತ್ಯಗಳಲ್ಲೇ ವಾಸಿಸುವುದಕ್ಕೆ ದೃಢಮಾಡಿಕೊಂಡರು.

[28] ಇಸ್ರಾಯೇಲ್ಯರು ಬಲಗೊಂಡ ಮೇಲೆ ಅವರನ್ನು ದಾಸತ್ವದಲ್ಲಿ ಇಟ್ಟುಕೊಂಡರೇ ಹೊರತು ಅಲ್ಲಿಂದ ಓಡಿಸಲಿಲ್ಲ.

[29] ಎಫ್ರಾಯೀಮ್ಯರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದ್ದರಿಂದ ಕಾನಾನ್ಯರು ಎಫ್ರಾಯೀಮ್ಯರ ಮಧ್ಯದಲ್ಲೇ ವಾಸಿಸುವವರಾದರು.

[30] ಜೆಬುಲೂನ್ಯರು ಕಿತ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಓಡಿಸಲಿಲ್ಲ. ಇದರಿಂದ ಕಾನಾನ್ಯರು ಅವರ ಮಧ್ಯದಲ್ಲೇ ವಾಸಮಾಡುವವರಾದರು. ಆದರೆ ಜೆಬುಲೂನ್ಯರು ಕಾನಾನ್ಯರನ್ನು ಗುಲಾಮರನ್ನಾಗಿ ಮಾಡಿಕೊಂಡರು.

[31] ಆಶೇರ್ಯರು ಅಕ್ಕೋ, ಚೀದೋನ್, ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಎಂಬ ಪಟ್ಟಣಗಳಲ್ಲಿ ವಾಸವಾಗಿದ್ದ ಜನರನ್ನು ಹೊರಡಿಸಿಬಿಡಲಿಲ್ಲ;

[32] ಹೀಗಾಗಿ ಆಶೇರ್ಯರು ಕಾನಾನ್ಯರನ ಮಧ್ಯದಲ್ಲೇ ವಾಸಮಾಡಿದರು.

[33] ನಫ್ತಾಲಿ ಕುಲದವರು ಬೇತ್ ಷೆಮೆಷ್, ಬೇತನಾತ್ ಎಂಬ ಊರುಗಳಲ್ಲಿ ಸ್ವಾಧೀನ ಮಾಡಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು ಮತ್ತು ಬೇತ್ ಷೆಮೆಷ್, ಬೇತನಾತ್ ಊರುಗಳ ಜನರು ಅವರಿಗೆ ಗುಲಾಮರಾದರು.

[34] ಇದಲ್ಲದೆ ಅಮೋರಿಯರು ದಾನ್ ಕುಲದವರನ್ನು ತಗ್ಗಿನ ಪ್ರದೇಶಕ್ಕೆ ಇಳಿಯಗೊಡದೆ ಹಿಂದಟ್ಟಿ ಬೆಟ್ಟಗಳಿಗೆ ಓಡಿಸಿಬಿಟ್ಟರು.

[35] ಹೀಗೆ ಅಮೋರಿಯರು ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳ ಬಳಿ ಇದ್ದ ಹರ್ ಹೆರೆಸ್ ಎಂಬ ಬೆಟ್ಟದ ಹತ್ತಿರ ವಾಸಿಸಲು ನಿರ್ಧಾರಮಾಡಿಕೊಂಡರು. ಆದರೆ ಯೋಸೇಫನ ಕುಲದವರು ಅವರನ್ನು ಸೋಲಿಸಿ ಗುಲಾಮರನ್ನಾಗಿ ಮಾಡಿಕೊಂಡರು.

[36] ಅಮೋರಿಯರ ಮೇರೆಯು ಅಕ್ರಬ್ಬೀಮ್ ಮೇಲುದಿಣ್ಣೆಯಿಂದ ಸೇಲಾ ಊರಿನಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ.

ನ್ಯಾಯಸ್ಥಾಪಕರು — Chapters