[1] ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ, ಗಿಲ್ಯಾದಿನಲ್ಲಿಯೂ ಇರುವ ಇಸ್ರಾಯೇಲರೆಲ್ಲರೂ ಏಕಮನಸ್ಸಿನಿಂದ ಹೊರಟು ಮಿಚ್ಪೆಗೆ ಬಂದು ಯೆಹೋವನ ಸನ್ನಿಧಿಯಲ್ಲಿ ಸಭೆ ಸೇರಿದರು.
[2] ಆ ದೇವಜನರ ಸಭೆಯಲ್ಲಿ ಎಲ್ಲಾ ಕುಲಾಧಿಪತಿಗಳೂ, ಯುದ್ಧಸನ್ನದ್ಧರಾದ ನಾಲ್ಕು ಲಕ್ಷ ಕಾಲಾಳುಗಳೂ ಇದ್ದರು.
[3] ಇಸ್ರಾಯೇಲರು ಕೂಡಿಕೊಂಡು ಮಿಚ್ಪೆಗೆ ಬಂದಿದ್ದಾರೆಂಬ ವರ್ತಮಾನವು ಬೆನ್ಯಾಮೀನ್ಯರಿಗೆ ಮುಟ್ಟಿತು. ಇಸ್ರಾಯೇಲರು, “ಈ ದುಷ್ಟತನವು ಹೇಗೆ ನಡೆಯಿತೆಂದು ತಿಳಿಸಿರಿ” ಎಂದು ಕೇಳಲು
[4] ಹತಳಾದ ಸ್ತ್ರೀಯ ಗಂಡನಾದ ಆ ಲೇವಿಯನು, “ನಾನು ನನ್ನ ಉಪಪತ್ನಿಯ ಸಹಿತವಾಗಿ ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ಒಂದು ರಾತ್ರಿ ಉಳಿದುಕೊಂಡೆನು.
[5] ಆ ಊರಿನ ಜನರು ನನ್ನನ್ನು ಕೊಲ್ಲಬೇಕೆಂದು ಅದೇ ರಾತ್ರಿ ನಾನು ಇಳಿದುಕೊಂಡಿದ್ದ ಮನೆಯನ್ನು ಸುತ್ತಿಕೊಂಡರು, ಮತ್ತು ನನ್ನ ಉಪಪತ್ನಿಯನ್ನು ಭಂಗಪಡಿಸಿದರು, ಆಕೆಯು ಸತ್ತುಹೋದಳು.
[6] ಅವರು ಇಸ್ರಾಯೇಲರಲ್ಲಿ ನಡೆಸಿದ ಇಂಥ ಕೆಟ್ಟ ಮತ್ತು ಕ್ರೂರ ಕೆಲಸವು ಎಲ್ಲರಿಗೂ ಗೊತ್ತಾಗಲೆಂದು ನಾನು ಆಕೆಯ ಶವವನ್ನು ತುಂಡುಮಾಡಿ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದೆನು.
[7] ಇಲ್ಲಿ ಕೂಡಿರುವ ಎಲ್ಲಾ ಇಸ್ರಾಯೇಲರೇ, ಈಗ ನಿಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹೇಳಿರಿ” ಅಂದನು.
[8] ಇದನ್ನು ಕೇಳಿ ಜನರು ಏಕಮನಸ್ಸಿನಿಂದ, “ನಮ್ಮಲ್ಲಿ ಯಾವನೂ ತನ್ನ ಗುಡಾರಕ್ಕೆ ಹೋಗಬಾರದು; ತನ್ನ ಮನೆಗೆ ಹಿಂದಿರುಗದಿರಲಿ.
[9] ನಾವು ಚೀಟು ಹಾಕೋಣ; ಅದು ಬಿದ್ದ ಪ್ರಕಾರವೇ ಗಿಬೆಯದವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ.
[10] ಇಸ್ರಾಯೇಲ್ಯರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವುದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾಮೀನ್ಯರಾದ ಗಿಬೆಯದವರು ಇಸ್ರಾಯೇಲರಲ್ಲಿ ನಡೆಸಿದ ದುಷ್ಟ ಕಾರ್ಯಕ್ಕಾಗಿ ಅವರಿಗೆ ದಂಡನೆಮಾಡೋಣ” ಅಂದುಕೊಂಡರು.
[11] ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರೋಧವಾಗಿ ಕೂಡಿಕೊಂಡರು.
[12] ಅವರು ಬೆನ್ಯಾಮೀನ್ಯರ ಸಮಸ್ತ ಕುಲದವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ನಿಮ್ಮಲ್ಲಿ ನಡೆದ ಈ ದುಷ್ಕೃತ್ಯ ಎಂಥದು?
[13] ಈಗ ಗಿಬೆಯ ಊರಲ್ಲಿರುವ ಆ ದುಷ್ಟರನ್ನು ನಮಗೆ ಒಪ್ಪಿಸಿರಿ; ನಾವು ಅವರನ್ನು ಕೊಂದು ಇಸ್ರಾಯೇಲರ ಮಧ್ಯದಿಂದ ಇಂಥ ದುಷ್ಟತನವನ್ನು ತೆಗೆದುಹಾಕುತ್ತೇವೆ” ಎಂದು ಹೇಳಿದರು.
[14] ಆದರೆ ಬೆನ್ಯಾಮೀನ್ಯರು ತಮ್ಮ ಬಂಧುಗಳ ಮಾತಿಗೆ ಕಿವಿಗೊಡದೆ ತಮ್ಮ ಎಲ್ಲಾ ಊರುಗಳಿಂದ ಗಿಬೆಯಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಕ್ಕೆ ಸನ್ನದ್ಧರಾದರು.
[15] ಆ ದಿನದಲ್ಲಿ ಆಯಾ ಊರುಗಳಿಂದ ಯುದ್ಧಸನ್ನದ್ಧರಾಗಿ ಸೇರಿಬಂದ ಬೆನ್ಯಾಮೀನ್ಯರ ಸಂಖ್ಯೆಯು ಇಪ್ಪತ್ತಾರು ಸಾವಿರವಾಗಿತ್ತು. ಇವರಲ್ಲದೆ ಗಿಬೆಯದಲ್ಲಿಯೇ ಏಳು ನೂರು ಮಂದಿ ಯುದ್ಧವೀರರಿದ್ದರು.
[16] ಈ ಎಲ್ಲಾ ಜನರಲ್ಲಿ ಏಳುನೂರು ಜನರು ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬರು ಕೂದಲೆಳೆಯಷ್ಟು ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವುದರಲ್ಲಿ ನಿಪುಣರಾಗಿದ್ದರು.
[17] ಬೆನ್ಯಾಮೀನ್ಯರಲ್ಲದ ಇಸ್ರಾಯೇಲರಲ್ಲಿ ನಾಲ್ಕು ಲಕ್ಷ ಯೋಧರಿದ್ದರು; ಇವರೆಲ್ಲರೂ ವೀರರಾಗಿದ್ದರು.
[18] ಇಸ್ರಾಯೇಲ್ಯರು ಬೇತೇಲಿಗೆ ಹೋಗಿ, “ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ದೇವರಾದ ಯೆಹೋವನನ್ನು ಕೇಳಲು ಆತನು, “ಮೊದಲು ಯೆಹೂದ ಕುಲದವರು ಹೋಗಲಿ” ಎಂದು ಹೇಳಿದನು.
[19] ಇಸ್ರಾಯೇಲ್ಯರು ಬೆಳಗ್ಗೆ ಹೊರಟುಹೋಗಿ ಗಿಬೆಯದ ಎದುರಿನಲ್ಲಿ ಪಾಳೆಯಮಾಡಿಕೊಂಡು,
[20] ಬೆನ್ಯಾಮೀನ್ಯರೊಡನೆ ಯುದ್ಧಮಾಡುವುದಕ್ಕೋಸ್ಕರ ಸಿದ್ಧರಾಗಿ, ಗಿಬೆಯದ ಎದುರಿನಲ್ಲಿ ವ್ಯೂಹಕಟ್ಟಿ ನಿಂತರು.
[21] ಆ ದಿನದಲ್ಲಿ ಬೆನ್ಯಾಮೀನ್ಯರು ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ನೆಲಕ್ಕುರುಳಿಸಿದರು.
[22] ಇಸ್ರಾಯೇಲ್ಯರು ತಿರುಗಿ ಧೈರ್ಯ ತಂದುಕೊಂಡು ಮೊದಲನೆಯ ದಿನದಲ್ಲಿ ವ್ಯೂಹಕಟ್ಟಿದ ಸ್ಥಳದಲ್ಲೇ ತಿರುಗಿ ವ್ಯೂಹಕಟ್ಟಿ ಯುದ್ಧಕ್ಕೆ ನಿಂತರು.
[23] ಇಸ್ರಾಯೇಲ್ಯರು ಹೋಗಿ ಯೆಹೋವನ ಮುಂದೆ ಅಳುತ್ತಾ, “ನಾವು ತಿರುಗಿ ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೋ?” ಎಂದು ಕೇಳಲು, ಆತನು, “ಹೋಗಿ ಯುದ್ಧಮಾಡಿರಿ” ಅಂದನು.
[24] ಆದ್ದರಿಂದ ಅವರು ಎರಡನೆಯ ದಿನದಲ್ಲಿಯೂ ಯುದ್ಧಕ್ಕೆ ಸಿದ್ಧರಾಗಿ ಬೆನ್ಯಾಮೀನ್ಯರ ಸಮೀಪಕ್ಕೆ ಬಂದರು.
[25] ಬೆನ್ಯಾಮೀನ್ಯರು ಎರಡನೆಯ ದಿನದಲ್ಲಿಯೂ ಗಿಬೆಯದಿಂದ ಹೊರಗೆ ಬಂದು ಇಸ್ರಾಯೇಲ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರನ್ನು ನೆಲಕ್ಕೆ ಉರುಳಿಸಿದರು.
[26] ಆಗ ಇಸ್ರಾಯೇಲ್ಯರೆಲ್ಲರೂ, ಎಲ್ಲಾ ಜನರೂ ಬೇತೇಲಿಗೆ ಹೋಗಿ ಅಲ್ಲಿ ಯೆಹೋವನ ಮುಂದೆ ಅಳುತ್ತಾ ಬಿದ್ದು ಸಾಯಂಕಾಲದ ವರೆಗೆ ಉಪವಾಸಮಾಡಿದರು. ಅಲ್ಲಿ ಅವರು ಆತನಿಗೆ ಸರ್ವಾಂಗಹೋಮಗಳನ್ನೂ, ಸಮಾಧಾನ ಯಜ್ಞಗಳನ್ನೂ ಸಮರ್ಪಿಸಿದರು.
[27] ಆ ಕಾಲದಲ್ಲಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಊರೊಳಗಿತ್ತು;
[28] ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನೂ ಆದ ಫೀನೆಹಾಸನು ಯಾಜಕಸೇವೆಮಾಡುತ್ತಿದ್ದನು. ಹೀಗಿರುವುದರಿಂದ ಇಸ್ರಾಯೇಲ್ಯರು, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಕ್ಕೆ ಹೋಗಬೇಕೋ, ಬೇಡವೋ?” ಎಂದು ಯೆಹೋವನನ್ನು ಕೇಳಿದರು. ಆತನು ಅವರಿಗೆ, “ಹೋಗಿರಿ, ನಾಳೆ ಅವರನ್ನು ನಿಮ್ಮ ಕೈಗೆ ಒಪ್ಪಿಸುವೆನು” ಅಂದನು.
[29] ಆಗ ಇಸ್ರಾಯೇಲ್ಯರು ಗಿಬೆಯದ ಸುತ್ತಲೂ ಕೆಲವರನ್ನು ಹೊಂಚು ಹಾಕುವುದಕ್ಕೆ ಇರಿಸಿ,
[30] ಉಳಿದವರು ಬೆನ್ಯಾಮೀನ್ಯರ ಸಂಗಡ ಕಾದಾಡುವುದಕ್ಕೋಸ್ಕರ ಮುಂಚಿನಂತೆ ಮೂರನೆಯ ದಿನದಲ್ಲಿಯೂ ಗಿಬೆಯದ ಸಮೀಪದಲ್ಲಿ ವ್ಯೂಹಕಟ್ಟಿದರು.
[31] ಬೆನ್ಯಾಮೀನ್ಯರು ಇಸ್ರಾಯೇಲ್ಯರೊಡನೆ ಯುದ್ಧಮಾಡವುದಕ್ಕಾಗಿ ಪಟ್ಟಣವನ್ನು ಬಿಟ್ಟು ಊರೊಳಕ್ಕೆ ಬಂದರು. ಅವರು ಮೊದಲಿನಂತೆ ಜನರನ್ನು ಕೊಲ್ಲುವುದಕ್ಕೆ ಪ್ರಾರಂಭಿಸಿ ಬೇತೇಲಿಗೂ, ಬೈಲಿನಲ್ಲಿರುವ ಗಿಬೆಯಕ್ಕೂ ಹೋಗುವ ರಾಜಮಾರ್ಗಗಳಲ್ಲಿ ಸುಮಾರು ಮೂವತ್ತು ಮಂದಿಯನ್ನು ಹತಮಾಡಿದರು.
[32] ಬೆನ್ಯಾಮೀನ್ಯರು, “ಅವರು ಮುಂಚಿನಂತೆ ಈಗಲೂ ಸೋತುಹೋಗುತ್ತಾರೆ” ಎಂದು ಅಂದುಕೊಂಡರು. ಇಸ್ರಾಯೇಲ್ಯರಾದರೋ, “ಅವರು ತಮ್ಮ ಪಟ್ಟಣಕ್ಕೆ ದೂರವಾಗುವಂತೆ ನಾವು ಸ್ವಲ್ಪ ದೂರ ಓಡಿಹೋಗೋಣ” ಎಂದು ಮಾತನಾಡಿಕೊಂಡು,
[33] ತಾವು ಮೊದಲು ನಿಂತ ಸ್ಥಳದಿಂದ ಓಡತೊಡಗಿದರು. ಬಾಳ್‌ತಾಮರಿಗೆ ಮುಟ್ಟಿದ ಕೂಡಲೆ ಅಲ್ಲಿ ನಿಂತು ತಿರುಗಿ ಯುದ್ಧವನ್ನು ಪ್ರಾರಂಭಿಸಿದರು. ಅಷ್ಟರಲ್ಲಿ ಹೊಂಚಿ ನೋಡುತ್ತಿದ್ದವರು ತಾವು ಅಡಗಿಕೊಂಡಿದ್ದ ಗಿಬೆಯದ ಮೈದಾನದಿಂದ ಎದ್ದು
[34] ಪಟ್ಟಣದ ಮುಂದೆ ಬಂದರು; ಅವರು ಸುಮಾರು ಹತ್ತು ಸಾವಿರ ಮಂದಿ ಯುದ್ಧವೀರರು. ಯುದ್ಧವು ಬಹುಘೋರವಾಯಿತು. ತಮಗೆ ಅಪಾಯವು ಒದಗಿ ಬಂದಿದೆ ಎಂಬುದು ಬೆನ್ಯಾಮೀನ್ಯರಿಗೆ ಇನ್ನೂ ಗೊತ್ತಾಗಿರಲಿಲ್ಲ.
[35] ಯೆಹೋವನು ಇಸ್ರಾಯೇಲರಿಗೆ ಜಯವನ್ನು ಕೊಟ್ಟಿದ್ದರಿಂದ ಅವರು ಆ ದಿನದಲ್ಲಿ ಇಪ್ಪತ್ತೈದು ಸಾವಿರದ ನೂರು ಮಂದಿ ಬೆನ್ಯಾಮೀನ್ಯರ ಯೋಧರನ್ನು ಹತಮಾಡಿದರು.
[36] ತಾವು ಸೋತುಹೋದೆವೆಂಬುದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. ಇಸ್ರಾಯೇಲ್ಯರು ತಾವು ಗಿಬೆಯದ ಸಮೀಪದಲ್ಲಿ ಹೊಂಚು ಹಾಕುವುದಕ್ಕಾಗಿ ಇಟ್ಟ ಜನರಲ್ಲಿ ಭರವಸವುಳ್ಳವರಾಗಿದ್ದರಿಂದ, ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.
[37] ಅಷ್ಟರಲ್ಲಿ ಅಡಗಿಕೊಂಡಿದ್ದವರು ಎದ್ದು ಗಿಬೆಯಕ್ಕೆ ಶೀಘ್ರವಾಗಿ ಹೋಗಿ, ಅದರೊಳಗಿದ್ದವರೆಲ್ಲರನ್ನೂ ಕತ್ತಿಯಿಂದ ಸಂಹರಿಸಿದರು.
[38] ಅಡಗಿದ್ದವರು ಊರಿಗೆ ಬೆಂಕಿಹೊತ್ತಿಸಿ ಹೊಗೆ ಏರಿಹೋಗುವಂತೆ ಮಾಡಿದ ಮೇಲೆ, ಓಡಿಹೋಗುತ್ತಿದ್ದವರು ಪುನಃ ಯುದ್ಧಕ್ಕೆ ನಿಲ್ಲಬೇಕೆಂದು ಹೊಂಚು ಹಾಕುವವರೂ ಹಾಗು ಉಳಿದ ಇಸ್ರಾಯೇಲರೂ ತಮ್ಮ ತಮ್ಮೊಳಗೆ ಮೊದಲೇ ಗೊತ್ತುಮಾಡಿಕೊಂಡಿದ್ದರು.
[39] ಬೆನ್ಯಾಮೀನ್ಯರಾದರೋ, “ಇಸ್ರಾಯೇಲ್ಯರು ಮುಂಚಿನಂತೆ ನಮ್ಮ ಮುಂದೆ ಸೋತುಹೋದರು” ಎಂದು ತಿಳಿದು ಅವರನ್ನು ಹತಮಾಡಲು ಪ್ರಾರಂಭಿಸಿ, ಸುಮಾರು ಮೂವತ್ತು ಮಂದಿಯನ್ನು ಕೊಂದುಹಾಕಿದರು.
[40] ಆದರೆ ಪಟ್ಟಣದಿಂದ ಹೊಗೆ ಎದ್ದು ಸ್ತಂಭದೋಪಾದಿಯಲ್ಲಿ ಕಾಣಿಸಿಕೊಳ್ಳಲು ಇಸ್ರಾಯೇಲರು ತಿರುಗಿ ನಿಂತರು.
[41] ಬೆನ್ಯಾಮೀನ್ಯರು ಹಿಂದಿರುಗಿ ನೋಡಿ ತಮ್ಮ ಪಟ್ಟಣವು ಬೆಂಕಿಯಿಂದ ಸುಟ್ಟುಹೋಗುವುದನ್ನು ಕಂಡು ತಮಗೆ ಅಪಾಯ ಉಂಟಾಗುವುದೆಂದು ಕಳವಳಗೊಂಡರು.
[42] ಅವರು ಇಸ್ರಾಯೇಲರಿಗೆ ಬೆನ್ನು ತೋರಿಸಿ ಅರಣ್ಯಮಾರ್ಗವಾಗಿ ಓಡಿಹೋದರು. ಆದರೆ ಯುದ್ಧವೀರರು ಅವರನ್ನು ಹಿಂದಟ್ಟಿದ್ದರಿಂದಲೂ, ಪಟ್ಟಣಕ್ಕೆ ಬೆಂಕಿ ಹೊತ್ತಿಸಿದವರು ಹೊರಗೆ ಬಂದುಬಿಟ್ಟಿದ್ದರಿಂದಲೂ, ಅವರು ಇಬ್ಬರ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡರು.
[43] ಇಸ್ರಾಯೇಲರು ಅವರನ್ನು ಸುತ್ತಿಕೊಂಡು, ಎಲ್ಲಿಯೂ ಓಡಿಹೋಗದಂತೆ, ಗಿಬೆಯ ಊರಿನ ಪೂರ್ವದಿಕ್ಕಿನಲ್ಲಿರುವ ಮೆನೂಹದಲ್ಲಿ ತುಳಿದುಹಾಕಿಬಿಟ್ಟರು.
[44] ಈ ಪ್ರಕಾರ ಬೆನ್ಯಾಮೀನ್ಯರಲ್ಲಿ ಹದಿನೆಂಟು ಸಾವಿರ ಮಂದಿ ಯುದ್ಧವೀರರು ಹತರಾದರು.
[45] ಇದಲ್ಲದೆ ಅವರು ಅರಣ್ಯದಲ್ಲಿರುವ ರಿಮ್ಮೋನ್ ಗಿರಿಗೆ ಓಡಿಹೋಗುವಾಗ ಹಕ್ಕಲು ತೆನೆಗಳನ್ನೋ ಎಂಬಂತೆ ಐದು ಸಾವಿರ ಜನರನ್ನು ರಾಜಮಾರ್ಗಗಳಲ್ಲಿ ಕೊಂದು ಹಾಕಿದರು. ಅಲ್ಲಿಂದ ಗಿದೋಮಿನವರೆಗೆ ಹಿಂದಟ್ಟಿ ತಿರುಗಿ ಎರಡು ಸಾವಿರ ಜನರನ್ನು ಹತಮಾಡಿದರು.
[46] ಹೀಗೆ ಆ ದಿನ ಬೆನ್ಯಾಮೀನ್ಯರಲ್ಲಿ ಇಪ್ಪತ್ತೈದು ಸಾವಿರ ಯುದ್ಧಸನ್ನದ್ಧರಾದ ಸೈನಿಕರು ಸಂಹರಿಸಲ್ಪಟ್ಟರು.
[47] ಆದರೆ ಆರು ನೂರು ಮಂದಿ ಅರಣ್ಯಮಾರ್ಗವಾಗಿ ಓಡಿಹೋಗಿ, ರಿಮ್ಮೋನ್ ಗಿರಿಯನ್ನು ಸೇರಿ ಅಲ್ಲಿ ನಾಲ್ಕು ತಿಂಗಳಿದ್ದರು.
[48] ಇಸ್ರಾಯೇಲರು ಪುನಃ ಹಿಂತಿರುಗಿ ಬಂದು ಬೆನ್ಯಾಮೀನ್ ದೇಶದ ಉಳಿದ ಗ್ರಾಮನಗರಗಳಿಗೆ ಹೋಗಿ ಅವುಗಳ ನಿವಾಸಿಗಳನ್ನೂ, ದನಕುರಿಗಳನ್ನೂ, ಸಿಕ್ಕಿದ್ದೆಲ್ಲವನ್ನು ಸಂಹರಿಸಿ ಎಲ್ಲಾ ಊರುಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.