[1] ತರುವಾಯ ಸಂಸೋನನು ಗಾಜಕ್ಕೆ ಹೋಗಿ ಅಲ್ಲಿ ಒಬ್ಬ ವೇಶ್ಯೆಯನ್ನು ಕಂಡು ಅವಳ ಬಳಿಗೆ ಹೋದನು.
[2] ಸಂಸೋನನು ಬಂದಿರುವುದು ಗಾಜದವರಿಗೆ ಗೊತ್ತಾಗಲು ಅವರು ಬಂದು ಅವನನ್ನು ಸುತ್ತಿಕೊಂಡರು. ಸೂರ್ಯೋದಯವಾಗುತ್ತಲೆ ಅವನನ್ನು ಕೊಂದುಹಾಕೋಣ ಎಂದುಕೊಂಡು ರಾತ್ರಿಯೆಲ್ಲಾ ಊರುಬಾಗಲಲ್ಲಿ ಹೊಂಚಿನೋಡುತ್ತಾ ಸುಮ್ಮನಿದ್ದರು.
[3] ಸಂಸೋನನು ಮಲಗಿ ಮಧ್ಯರಾತ್ರಿಯಲ್ಲೆದ್ದು ಊರು ಬಾಗಿಲಿನ ಕದಗಳನ್ನೂ, ಅದರ ಎರಡು ನಿಲುವುಪಟ್ಟಿಗಳನ್ನೂ, ಅಗುಳಿಗಳನ್ನೂ ಕಿತ್ತು, ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹೆಬ್ರೋನಿನ ಎದುರಿಗಿರುವ ಪರ್ವತ ಶಿಖರದ ಮೇಲೆ ಇಟ್ಟನು.
[4] ಅನಂತರ ಸಂಸೋನನು ಸೋರೇಕ್ ತಗ್ಗಿನಲ್ಲಿ ವಾಸವಾಗಿದ್ದ ದೆಲೀಲಾ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯಲ್ಲಿ ಮೋಹಿತನಾದನು.
[5] ಫಿಲಿಷ್ಟಿಯ ಪ್ರಭುಗಳು ಅವಳ ಬಳಿಗೆ ಹೋಗಿ ಅವಳಿಗೆ, “ನೀನು ಅವನನ್ನು ಮರುಳುಗೊಳಿಸಿ, ಅವನ ಮಹಾಶಕ್ತಿಯ ಮೂಲ ಯಾವುದೆಂಬುದನ್ನೂ, ನಾವು ಅವನನ್ನೂ ಗೆದ್ದು, ಬಲವನ್ನು ಕುಂದಿಸುವುದು ಹೇಗೆಂಬುದನ್ನೂ ಗೊತ್ತುಮಾಡಿಕೊಂಡು ನಮಗೆ ತಿಳಿಸು; ನಮ್ಮಲ್ಲಿ ಪ್ರತಿಯೊಬ್ಬನೂ ನಿನಗೆ ಸಾವಿರದ ನೂರು ರೂಪಾಯಿ ಕೊಡುವೆವು” ಎಂದು ಹೇಳಿದರು.
[6] ದೆಲೀಲಳು ಸಂಸೋನನಿಗೆ, “ನಿನಗೆ ಇಂಥ ಮಹಾ ಶಕ್ತಿ ಹೇಗೆ ಬಂದಿತು? ನಿನ್ನನ್ನು ಬಲವನ್ನು ಕುಂದಿಸುವುದು ಹೇಗೆ ಎಂಬುದನ್ನು ದಯವಿಟ್ಟು ನನಗೆ ತಿಳಿಸು” ಅಂದಳು.
[7] ಅವನು, “ಹಸಿ ನಾರಿನ ಏಳು ಎಳೆಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು” ಎಂದು ಹೇಳಿದನು.
[8] ಫಿಲಿಷ್ಟಿಯ ಪ್ರಭುಗಳು ಅಂಥ ಹಸೀ ನಾರಿನ ಏಳು ಎಳೆಗಳನ್ನು ಅವಳಿಗೆ ತಂದುಕೊಟ್ಟರು.
[9] ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿಟ್ಟು ಅವುಗಳಿಂದ ಅವನನ್ನು ಕಟ್ಟಿ, “ಸಂಸೋನನೇ, ನಿನ್ನ ಮೇಲೆ ಫಿಲಿಷ್ಟಿಯರು ಬಂದರು” ಎಂದು ಕೂಗಿದಳು. ಅವನು ಬೆಂಕಿತಗುಲಿದ ಸೆಣಬಿನ ದಾರವನ್ನೋ ಎಂಬಂತೇ ಆ ಎಳೆಗಳನ್ನು ಹರಿದುಬಿಟ್ಟನು; ಹೀಗೆ ಅವನ ಶಕ್ತಿಯ ರಹಸ್ಯವು ತಿಳಿಯದೆ ಹೋಯಿತು.
[10] ದೆಲೀಲಳು ತಿರುಗಿ ಸಂಸೋನನಿಗೆ, “ನೀನು ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವುದರಿಂದ ಕಟ್ಟಬಹುದೆಂಬುದನ್ನು ದಯವಿಟ್ಟು ನನಗೆ ತಿಳಿಸು” ಎಂದಳು.
[11] ಅವನು ಅವಳಿಗೆ, “ಯಾವುದಕ್ಕೂ ಉಪಯೋಗಿಸದ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಬೇರೆ ಮನುಷ್ಯರಂತಾಗುವೆನು” ಅಂದನು.
[12] ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿರಿಸಿ, ಹೊಸ ಹಗ್ಗಗಳನ್ನು ತೆಗೆದುಕೊಂಡು ಅವುಗಳಿಂದ ಅವನನ್ನು ಕಟ್ಟಿ, “ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಲು ಅವನೆದ್ದು ತೋಳುಗಳಿಗೆ ಕಟ್ಟಿದ್ದ ಹಗ್ಗಗಳನ್ನು ದಾರವನ್ನೋ ಎಂಬಂತೆ ಹರಿದುಬಿಟ್ಟನು.
[13] ಆಗ ದೆಲೀಲಳು ಸಂಸೋನನಿಗೆ “ನೀನು ತಿರುಗಿ ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವುದರಿಂದ ಕಟ್ಟಬಹುದೆಂದು ತಿಳಿಸು” ಅನ್ನಲು ಅವನು, “ನನ್ನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯಿದರೆ ಸಾಕು” ಎಂದು ಹೇಳಿದನು.
[14] ಅವಳು ಅವನ ತಲೆಕೂದಲಿನ ಏಳು ಜಡೆಗಳನ್ನು ಗೂಟಕ್ಕೆ ಭದ್ರಮಾಡಿ, “ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಿದಳು. ಅವನು ನಿದ್ರೆಯಿಂದ ಎಚ್ಚೆತ್ತು ಮಗ್ಗವನ್ನೂ ಮಗ್ಗದ ಗೂಟವನ್ನೂ ಕಿತ್ತುಕೊಂಡು ಹೋದನು.
[15] ಆಕೆಯು ತಿರುಗಿ ಅವನಿಗೆ, “ನನ್ನನ್ನು ಪ್ರೀತಿಸುತ್ತೇನೆಂದು ನೀನು ನನಗೆ ಹೇಗೆ ಹೇಳುವೇ? ನಿನ್ನ ಮನಸ್ಸು ನನ್ನ ಮೇಲೆ ಇಲ್ಲವಲ್ಲಾ; ಮೂರು ಸಾರಿ ನನ್ನನ್ನು ವಂಚಿಸಿದಿ. ನಿನಗೆ ಇಂಥ ಮಹಾ ಶಕ್ತಿ ಯಾವುದರಿಂದ ಬಂದಿತೆಂಬುದನ್ನು ನನಗೆ ತಿಳಿಸಲಿಲ್ಲ” ಅಂದಳು.
[16] ಇದಲ್ಲದೆ ಅವಳು ಅವನನ್ನು ದಿನದಿನವೂ ಮಾತಿನಿಂದ ಪೀಡಿಸಿದ್ದರಿಂದ ಅವನಿಗೆ ಸಾಯುವುದು ಒಳ್ಳೆಯದು ಎನ್ನುವಷ್ಟು ಬೇಸರವಾಯಿತು.
[17] ಆಗ ಅವನು, “ಕ್ಷೌರಕತ್ತಿಯು ನನ್ನ ತಲೆಯ ಮೇಲೆ ಮುಟ್ಟಿಸಿಲ್ಲ; ನಾನು ಮಾತೃಗರ್ಭದಿಂದಲೇ ದೇವರಿಗೆ ಪ್ರತಿಷ್ಠಿತನಾದವನು (ನಾಜೀರನು). ನನ್ನ ತಲೆಯನ್ನು ಕ್ಷೌರಮಾಡುವುದಾದರೆ ನನ್ನ ಶಕ್ತಿಯು ಹೋಗುವುದು; ಮತ್ತು ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು” ಎಂದು ತನ್ನ ಗುಟ್ಟನ್ನೆಲ್ಲಾ ಆಕೆಯ ಮುಂದೆ ಬಿಚ್ಚಿಹೇಳಿದನು.
[18] ಅವನು ಇದ್ದದ್ದನ್ನು ಇದ್ದ ಹಾಗೆಯೇ ಹೇಳಿದನೆಂದು ದೆಲೀಲಳು ತಿಳಿದು ಫಿಲಿಷ್ಟಿಯ ಪ್ರಭುಗಳ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ಇದೊಂದು ಸಾರಿ ಬನ್ನಿರಿ: ಅವನು ನನಗೆ ತನ್ನ ಹೃದಯವನ್ನೆಲ್ಲಾ ತಿಳಿಸಿದ್ದಾನೆ” ಎಂದು ಹೇಳಿ, ಕರೆಕಳುಹಿಸಿದಳು. ಅವರು ಹಣವನ್ನು ತೆಗೆದುಕೊಂಡು ಆಕೆಯ ಬಳಿಗೆ ಬಂದರು.
[19] ಆಕೆಯು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನಿಗೆ ನಿದ್ರೆಹತ್ತಿದಾಗ ಒಬ್ಬ ಮನುಷ್ಯನಿಂದ ಅವನ ತಲೆಯ ಏಳು ಜಡೆಗಳನ್ನು ಬೋಳಿಸಿ, ಅವನನ್ನು ದುರ್ಬಲಪಡಿಸಿದಳು. ಅವನ ಶಕ್ತಿಯು ಅವನನ್ನು ಬಿಟ್ಟು ಹೋಯಿತು,
[20] ಆಗ ಅವಳು, “ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಲು ಅವನು ಎಚ್ಚೆತ್ತು, ಮುಂಚಿನಂತೆ ಈಗಲೂ ಕೊಸರಿಕೊಂಡು ಹೋಗುವೆನು ಅಂದುಕೊಂಡನು; ಆದರೆ ಯೆಹೋವನು ತನ್ನನ್ನು ಬಿಟ್ಟುಹೋಗಿದ್ದಾನೆಂಬದು ಅವನಿಗೆ ತಿಳಿಯಲಿಲ್ಲ.
[21] ಫಿಲಿಷ್ಟಿಯರು ಅವನನ್ನು ಹಿಡಿದು, ಕಣ್ಣುಗಳನ್ನು ಕಿತ್ತು, ಗಾಜಕ್ಕೆ ಒಯ್ದು, ಕಬ್ಬಿಣದ ಬೇಡಿಗಳನ್ನು ಹಾಕಿ, ಸೆರೆಮನೆಯಲ್ಲಿ ಹಿಟ್ಟನ್ನು ಬೀಸುವುದಕ್ಕೆ ಇರಿಸಿದರು.
[22] ಅಷ್ಟರಲ್ಲಿ ಅವನ ತಲೆಯ ಕೂದಲುಗಳು ಬೆಳೆಯ ತೊಡಗಿದವು.
[23] ಶತ್ರುವಾದ ಸಂಸೋನನನ್ನು ತಮ್ಮ ಕೈಗೆ ಒಪ್ಪಿಸಿದ ತಮ್ಮ ದೇವರಾದ ದಾಗೋನನಿಗೆ ಮಹಾಯಜ್ಞವನ್ನು ಸಮರ್ಪಿಸಿ ಸಂತೋಷಪಡಬೇಕೆಂದು ಫಿಲಿಷ್ಟಿಯ ಪ್ರಭುಗಳು ಒಟ್ಟಾಗಿ ಸೇರಿಬಂದರು.
[24] ಜನರು ಸಂಸೋನನನ್ನು ನೋಡಿದಾಗ, “ನಮ್ಮ ದೇಶವನ್ನು ಹಾಳುಮಾಡಿ ನಮ್ಮಲ್ಲಿ ಅನೇಕರನ್ನು ಕೊಂದುಹಾಕಿದ ಈ ಶತ್ರುವನ್ನು ನಮ್ಮ ದೇವರು ನಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾನೆ” ಎಂದು ಹಾಡು ಹಾಡಿ ಸಂತೋಷಿಸಿದರು.
[25] ಅವರು ಸಂಭ್ರಮದಲ್ಲಿದ್ದಾಗ, “ನಮ್ಮ ವಿನೋದಕ್ಕೋಸ್ಕರ ಸಂಸೋನನನ್ನು ಕರೆದುಕೊಂಡು ಬನ್ನಿರಿ” ಅಂದರು. ಅದರಂತೆಯೇ ಸಂಸೋನನನ್ನು ಸೆರೆಮನೆಯಿಂದ ಕರೆದುಕೊಂಡು ಬಂದರು. ಅವನು ಎರಡು ಸ್ತಂಭಗಳ ನಡುವೆ ನಿಂತು ವಿನೋದ ಮಾಡಬೇಕಾಯಿತು.
[26] ಆಗ ಸಂಸೋನನು ತನ್ನನ್ನು ಕೈಹಿಡಿದು ನಡೆಸುವ ಹುಡುಗನಿಗೆ, “ನನ್ನ ಕೈಗಳನ್ನು ಬಿಡು; ನಾನು ಕೈಯಾಡಿಸಿ ಮನೆಗೆ ಆಧಾರವಾಗಿರುವ ಸ್ತಂಭಗಳನ್ನು ಹುಡುಕಿ ಅವುಗಳಿಗೆ ಸ್ವಲ್ಪ ಒರಗಿಕೊಳ್ಳುತ್ತೇನೆ” ಅಂದನು.
[27] ಆ ಮನೆಯು ಸ್ತ್ರೀಪುರುಷರಿಂದ ಕಿಕ್ಕಿರಿದು ಹೋಗಿತ್ತು. ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಅಲ್ಲಿದ್ದರು; ಸಂಸೋನನ ವಿನೋದವನ್ನು ನೋಡುವುದಕ್ಕಾಗಿ ಬಂದವರಲ್ಲಿ ಸುಮಾರು ಮೂರು ಸಾವಿರ ಮಂದಿ ಸ್ತ್ರೀಪುರುಷರು ಮಾಳಿಗೆಯ ಮೇಲಿದ್ದರು.
[28] ಆಗ ಸಂಸೋನನು ಯೆಹೋವನಿಗೆ, “ಕರ್ತನೇ, ಯೆಹೋವನೇ, ಫಿಲಿಷ್ಟಿಯರು ಕಿತ್ತುಹಾಕಿದ ನನ್ನ ಎರಡೂ ಕಣ್ಣುಗಳಲ್ಲಿ ಒಂದಕ್ಕೋಸ್ಕರವಾದರೂ ನಾನು ಅವರಿಗೆ ಮುಯ್ಯಿತೀರಿಸುವ ಹಾಗೆ ನನ್ನನ್ನು ಈ ಸಾರಿ ಬಲಪಡಿಸು” ಎಂದು ಮೊರೆಯಿಟ್ಟು,
[29] ಮನೆಯ ಆಧಾರಸ್ತಂಭಗಳಲ್ಲಿ ಒಂದನ್ನು ಬಲಗೈಯಿಂದಲೂ, ಇನ್ನೊಂದನ್ನು ಎಡಗೈಯಿಂದಲೂ ಹಿಡಿದು, ಅವುಗಳನ್ನು ಒತ್ತಿ,
[30] “ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು” ಎಂದು ಹೇಳಿ ಬಲವಾಗಿ ಬಾಗಿಕೊಂಡನು. ಆಗ ಅ ಕಟ್ಟಡವು ಅಧಿಪತಿಗಳ ಮೇಲೆಯೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೆಯೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಾಗಿತ್ತು.
[31] ಅವನ ಬಂಧುಗಳೂ, ತಂದೆಯ ಮನೆಯವರೆಲ್ಲರೂ ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿದ್ದ ಅವನ ತಂದೆಯಾದ ಮಾನೋಹನ ಸಮಾಧಿಯಲ್ಲಿ ಹೂಣಿಟ್ಟರು. ಅವನು ಇಸ್ರಾಯೇಲರನ್ನು ಇಪ್ಪತ್ತು ವರ್ಷ ಪಾಲಿಸಿದ್ದನು.