Skip to content
Opens in a new window
Listen to this chapter • 5:24

[1] ಏಹೂದನು ಮರಣಹೊಂದಿದ ನಂತರ ಇಸ್ರಾಯೇಲ್ಯರು ಪುನಃ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾಗಿದ್ದರು.

[2] ಯೆಹೋವನು ಅವರನ್ನು ಹಾಚೋರಿನಲ್ಲಿ ಆಳುತ್ತಿದ್ದ ಕಾನಾನ್ಯ ರಾಜನಾದ ಯಾಬೀನನಿಗೆ ಒಪ್ಪಿಸಿಕೊಟ್ಟನು. ಹರೋಷೆತ್ ಹಗೊಯಿಮ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದ ಸೀಸೆರನು ಅವನ ಸೇನಾಧಿಪತಿಯಾಗಿದ್ದನು.

[3] ಒಂಭೈನೂರು ಕಬ್ಬಿಣದ ರಥಗಳುಳ್ಳ ಇವನು ಇಸ್ರಾಯೇಲ್ಯರನ್ನು ಇಪ್ಪತ್ತು ವರ್ಷಗಳ ಕಾಲ ಕಠಿಣವಾಗಿ ಬಾಧಿಸುತ್ತಿರಲು ಅವರು ಯೆಹೋವನಿಗೆ ಮೊರೆಯಿಟ್ಟರು.

[4] ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿ, ದೆಬೋರಳೆಂಬ ಪ್ರವಾದಿನಿಯು ಇಸ್ರಾಯೇಲರಲ್ಲಿ ನ್ಯಾಯತೀರ್ಪನ್ನು ಮಾಡುತ್ತಿದ್ದಳು.

[5] ಆಕೆ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿರುವ ದೆಬೋರಳ ಖರ್ಜೂರ ವೃಕ್ಷವೆಂದು ಹೆಸರುಗೊಂಡ ಮರದ ಕೆಳಗೆ ಕುಳಿತುಕೊಂಡಿರುತ್ತಿದ್ದಳು. ಇಸ್ರಾಯೇಲರು ನ್ಯಾಯತೀರ್ಪಿಗಾಗಿ ಆಕೆಯ ಬಳಿಗೆ ಬರುತ್ತಿದ್ದರು.

[6] ಆಕೆ ನಫ್ತಾಲಿ ದೇಶದ ಕೆದೆಷ್ ಊರಿನಲ್ಲಿದ್ದ ಅಬೀನೋವಮನ ಮಗನಾದ ಬಾರಾಕನನ್ನು ಬರಲು ಹೇಳಿ ಅವನಿಗೆ, “ನಿಶ್ಚಯವಾಗಿ ಇಸ್ರಾಯೇಲರ ದೇವರಾದ ಯೆಹೋವನು ನಿನಗೆ, ‘ಎದ್ದು ನಫ್ತಾಲಿ, ಜೆಬುಲೂನ್ ಕುಲಗಳಿಂದ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು.

[7] ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ಸೈನ್ಯರಥಗಳನ್ನೂ ನಿನ್ನ ಬಳಿಗೆ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು ನಿನ್ನ ಕೈಗೆ ಒಪ್ಪಿಸುವೆನು ಎಂದು ಆಜ್ಞಾಪಿಸಿದ್ದಾನೆ’” ಅಂದಳು.

[8] ಬಾರಾಕನು ಆಕೆಗೆ, “ನೀನು ನನ್ನ ಸಂಗಡ ಬರುವುದಾದರೆ ಹೋಗುತ್ತೇನೆ; ಇಲ್ಲವಾದರೆ ಹೋಗುವುದಿಲ್ಲ” ಅನ್ನಲು

[9] ಆಕೆಯು, “ನಾನು ಹೇಗೂ ನಿನ್ನ ಸಂಗಡ ಬರುವೆನು; ಆದರೆ ಈ ಯುದ್ಧಪ್ರಯಾಣದಲ್ಲಿ ಉಂಟಾಗುವ ಗೌರವ ನಿನಗೆ ಸಲ್ಲುವುದಿಲ್ಲ. ಯಾಕೆಂದರೆ ಒಬ್ಬ ಸ್ತ್ರೀ ಸೀಸೆರನನ್ನು ಸೋಲಿಸುವಂತೆ ಯೆಹೋವನು ಮಾಡುವನು” ಎಂದು ಹೇಳಿ ದೆಬೋರಳು ಬಾರಾಕನೊಡನೆ ಕೆದೆಷಿಗೆ ಹೋದಳು.

[10] ಬಾರಾಕನು ಜೆಬುಲೂನ್ಯರನ್ನೂ, ನಫ್ತಾಲ್ಯರನ್ನೂ ಕೆದೆಷಿಗೆ ಕರೆಯಿಸಿದನು. ಅವರಲ್ಲಿ ಹತ್ತು ಸಾವಿರ ಮಂದಿ ಅವನ ಹೆಜ್ಜೆ ಹಿಡಿದು ಯುದ್ಧಕ್ಕೆ ಹೋದರು, ದೆಬೋರಳೂ ಅವರೊಂದಿಗೆ ಹೋದಳು.

[11] (ಕೇನ್ಯನಾದ) ಹೆಬೆರನು ಉಳಿದ ಕೇನ್ಯರಿಂದ ತನ್ನನ್ನು ಪ್ರತ್ಯೇಕಿಸಿಕೊಂಡನು. ಕೇನ್ಯರು ಮೋಶೆಯ ಮಾವನಾದ ಹೋಬಾಬನ ವಂಶದವರು. ಹೆಬೆರನು ಕೆದೆಷಿನ ಹತ್ತಿರ ಇರುವ ಚಾನನ್ನೀಮೆಂಬ ಊರಿನ ಏಲೋನ್ ವೃಕ್ಷದ ವರೆಗೆ ಬಂದು ಅಲ್ಲಿ ಗುಡಾರ ಹಾಕಿಕೊಂಡಿದ್ದನು.

[12] ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟವನ್ನೇರಿ ಬಂದಿದ್ದಾನೆಂಬ ವರ್ತಮಾನವು ಸೀಸೆರನಿಗೆ ಮುಟ್ಟಿದಾಗ

[13] ಅವನು ತನ್ನ ಒಂಭೈನೂರು ಕಬ್ಬಿಣದ ರಥಗಳನ್ನೂ, ಎಲ್ಲಾ ಸೈನ್ಯವನ್ನೂ ತೆಗೆದುಕೊಂಡು ಅನ್ಯಜನರ ಹರೋಷೆತಿನಿಂದ ಕೀಷೋನ್ ಹಳ್ಳಕ್ಕೆ ಬಂದನು.

[14] ಆಗ ದೆಬೋರಳು ಬಾರಾಕನಿಗೆ, “ಏಳು, ಯೆಹೋವನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸುವ ದಿನವು ಇಂದೇ. ನಿಶ್ಚಯವಾಗಿ ಆತನು ತಾನೇ ನಿನಗೆ ಮುಂದಾಗಿ ಯುದ್ಧಕ್ಕೆ ಹೊರಡುವನು” ಅನ್ನಲು ಬಾರಾಕನು ಬೇಗನೆ ಹತ್ತು ಸಾವಿರ ಜನರ ಸಹಿತವಾಗಿ ತಾಬೋರ್ ಬೆಟ್ಟದಿಂದ ಇಳಿದನು.

[15] ಯೆಹೋವನು ಸೀಸೆರನನ್ನು ಅವನ ಎಲ್ಲಾ ಸೈನ್ಯರಥಗಳನ್ನೂ ಬಾರಾಕನ ಮುಂದೆ ಗಲಿಬಿಲಿಗೊಳಿಸಿ, ಕತ್ತಿಗೆ ತುತ್ತಾಗಿಸಿದನು. ಸೀಸೆರನು ರಥದಿಂದ ಇಳಿದು ಓಡಿಹೋದನು.

[16] ಬಾರಾಕನು ಅವನ ಸೈನ್ಯರಥಗಳನ್ನು ಅನ್ಯಜನರ ಹರೋಷೆತಿನ ವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರೂ ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.

[17] ಹಾಚೋರಿನ ಅರಸನಾದ ಯಾಬೀನನಿಗೂ ಕೇನ್ಯನಾದ ಹೆಬೆರನ ಮನೆಯವರಿಗೂ ಸಮಾಧಾನವಿದ್ದುದರಿಂದ ಸೀಸೆರನು ಕಾಲುನಡಿಗೆಯಿಂದ ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳ ಗುಡಾರದ ಕಡೆಗೆ ಹೋದನು.

[18] ಯಾಯೇಲಳು ಹೊರಗೆ ಹೋಗಿ ಸೀಸೆರನನ್ನು ಎದುರುಗೊಂಡು ಅವನಿಗೆ, “ಸ್ವಾಮೀ, ಒಳಗೆ ಬನ್ನಿರಿ; ಹೆದರಬೇಡಿರಿ, ನಮ್ಮಲ್ಲಿಗೆ ಬನ್ನಿರಿ” ಅನ್ನಲು ಅವನು ಗುಡಾರದೊಳಗೆ ಹೋದನು. ಆಗ ಆಕೆಯು ಅವನನ್ನು ಕಂಬಳಿಯಿಂದ ಮುಚ್ಚಿದಳು.

[19] ಅವನು ಆಕೆಗೆ, “ದಯವಿಟ್ಟು ಸ್ವಲ್ಪ ನೀರನ್ನು ಕೊಡು, ನನಗೆ ಬಹಳ ಬಾಯಾರಿಕೆಯಾಗಿದೆ” ಅಂದನು. ಆಕೆಯು ಬುದ್ದಲಿಯನ್ನು ಬಿಚ್ಚಿ ಹಾಲನ್ನು ಕುಡಿಯಲು ಕೊಟ್ಟು ಅವನನ್ನು ಪುನಃ ಮುಚ್ಚಿದಳು.

[20] ಅವನು ಆಕೆಗೆ, “ನೀನು ಗುಡಾರದ ಬಾಗಿಲಲ್ಲೇ ನಿಂತಿರು; ಯಾರಾದರೂ ಬಂದು ‘ಇಲ್ಲಿ ಒಬ್ಬ ಮನುಷ್ಯನಿದ್ದಾನೆಯೇ ಎಂದು ವಿಚಾರಿಸಿದರೆ’ ಇಲ್ಲ ಎಂದು ಹೇಳು” ಎಂದು ಹೇಳಿದನು.

[21] ಹೆಬೆರನ ಹೆಂಡತಿಯಾದ ಯಾಯೇಲಳು ಕೈಯಲ್ಲಿ ಗುಡಾರದ ಗೂಟವನ್ನೂ, ಒಂದು ಸುತ್ತಿಗೆಯನ್ನೂ ತೆಗೆದುಕೊಂಡು ಅವನು ಆಯಾಸದಿಂದ ಗಾಢನಿದ್ರೆಯಲ್ಲಿದ್ದಾಗ, ಮೆಲ್ಲಗೆ ಹತ್ತಿರ ಹೋಗಿ, ಅವನ ತಲೆಯಲ್ಲಿ ಆ ಗೂಟವನ್ನು ಹೊಡೆದು ನೆಲಕ್ಕೆ ನಾಟಿಸಿದಳು; ಅವನು ಸತ್ತನು.

[22] ಅದೇ ಕ್ಷಣದಲ್ಲಿ ಸೀಸೆರನನ್ನು ಹಿಂದಟ್ಟುತ್ತಿದ್ದ ಬಾರಾಕನು ಅಲ್ಲಿಗೆ ಬಂದನು. ಯಾಯೇಲಳು ಹೊರಗೆ ಹೋಗಿ ಅವನನ್ನು ಎದುರುಗೊಂಡು, “ಬಾ, ನೀನು ಹುಡುಕುವ ಮನುಷ್ಯನನ್ನು ತೋರಿಸುತ್ತೇನೆ” ಎಂದು ಹೇಳಲು ಅವನು ಒಳಗೆ ಹೋಗಿ ಸೀಸೆರನು ಸತ್ತು ಬಿದ್ದದ್ದನ್ನು ಕಂಡನು. ಅವನ ಕಣ್ತಲೆಯಲ್ಲಿ ಗೂಟವು ಜಡಿದಿತ್ತು.

[23] ಆ ದಿನದಲ್ಲಿ ದೇವರು ಕಾನಾನ್ಯ ರಾಜನಾದ ಯಾಬೀನನನ್ನು ಇಸ್ರಾಯೇಲರ ಮುಂದೆ ತಗ್ಗಿಸಿದನು.

[24] ಇಸ್ರಾಯೇಲರ ಹಸ್ತವು ಹೆಚ್ಚು ಹೆಚ್ಚು ಬಲಗೊಂಡದ್ದರಿಂದ ಕಾನಾನ್ಯರ ಅರಸನಾದ ಯಾಬೀನನು ಪೂರ್ಣವಾಗಿ ಸೋತು ನಿರ್ನಾಮವಾದನು.

ನ್ಯಾಯಸ್ಥಾಪಕರು — Chapters