[1] ಆ ದಿನದಲ್ಲಿ ದೆಬೋರಳೂ ಅಬೀನೋವಮನ ಮಗನಾದ ಬಾರಾಕನೂ ಈ ಗೀತೆಯನ್ನು ಹಾಡಿದರು:
[2] “ಇಸ್ರಾಯೇಲರಲ್ಲಿ ಸೇನಾ ನಾಯಕರು ಎದ್ದಿದ್ದಾರೆ; ಜನರು ಸ್ವಇಚ್ಛೆಯಿಂದ ಸೈನ್ಯದಲ್ಲಿ ಸೇರಿದ್ದಾರೆ, ಯೆಹೋವನನ್ನು ಕೊಂಡಾಡಿರಿ.
[3] “ಅರಸರೇ, ಕೇಳಿರಿ! ಪ್ರಭುಗಳೇ, ಕಿವಿಗೊಡಿರಿ! ನಾನು ಯೆಹೋವನನ್ನು ಕೀರ್ತಿಸುವೆನು; ನಾನು ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತುತಿ ಗೀತೆ ಹಾಡುವೆನು.
[4] “ಯೆಹೋವನೇ, ನೀನು ಹೊರಟು ಎದೋಮ್ಯರ ಪ್ರಾಂತ್ಯವಾದ ಸೇಯೀರಿನ ಮಾರ್ಗವಾಗಿ ಪಯಣಮಾಡುತ್ತಾ ಬರುವಾಗ ಭೂಲೋಕವು ಕಂಪಿಸಿತು, ಆಕಾಶವು ನಡುಗಿತು; ಮೇಘಮಂಡಲವು ಮಳೆಗರೆಯಿತು.
[5] ಯೆಹೋವನ ಮುಂದೆ ಪರ್ವತಗಳು ಕರಗಿಹೋದವು, ಇಸ್ರಾಯೇಲಿನ ದೇವರಾದ ಯೆಹೋವನ ಎದುರಿಗೆ ಆ ಸೀನಾಯಿಬೆಟ್ಟವೂ ನೀರಾಯಿತು.
[6] “ಅನಾತನ ಮಗನಾದ ಶಮ್ಗರನ ಕಾಲದಲ್ಲಿಯೂ, ಯಾಯೇಲಳ ದಿನಗಳಲ್ಲಿಯೂ ರಾಜಮಾರ್ಗಗಳಲ್ಲಿ ಸಂಚಾರವು ನಿಂತುಹೋಯಿತು. ಪ್ರಯಾಣಿಕರು ಅಂಕುಡೊಂಕಾದ ದಾರಿಹಿಡಿದು ಹೋದರು.
[7] ದೆಬೋರಳಾದ ನಾನು ಇಸ್ರಾಯೇಲರಲ್ಲಿ ತಾಯಿಯಂತೆ ಎದ್ದುಬರುವವರೆಗೆ ಇಸ್ರಾಯೇಲ್ ಗ್ರಾಮಗಳು ಹಾಳುಬಿದ್ದಿದ್ದವು.
[8] ಜನರು ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು; ಯುದ್ಧವು ಉರುಬಾಗಿಲವರೆಗೂ ಬಂದಿತ್ತು. ಇಸ್ರಾಯೇಲರ ನಲ್ವತ್ತು ಸಾವಿರ ಸೈನಿಕರ ಮಧ್ಯದಲ್ಲಿ ಗುರಾಣಿ ಬರ್ಜಿಗಳು ಇರಲೇ ಇಲ್ಲ.
[9] ನನ್ನ ಹೃದಯವು ಇಸ್ರಾಯೇಲರ ಸೇನಾಧಿಪತಿಗಳಲ್ಲಿಯೂ, ಸ್ವಇಚ್ಛೆಯಿಂದ ಸೈನ್ಯದಲ್ಲಿ ಸೇರಿದ ಜನರಲ್ಲಿಯೂ ಸಂತೋಷಿಸುತ್ತದೆ; ಅವರಿಗೋಸ್ಕರ ಯೆಹೋವನನ್ನು ಕೊಂಡಾಡುತ್ತೇವೆ.
[10] “ಬಿಳೀ ಕತ್ತೆಗಳ ಮೇಲೆ ಸವಾರಿಮಾಡುವವರೇ, ರತ್ನಗಂಬಳಿಗಳ ಮೇಲೆ ಕುಳಿತುಕೊಳ್ಳುವವರೇ, ಕಾಲ್ನಡಿಗೆಯಲ್ಲಿ ಪ್ರಯಾಣಿಸುವವರೇ, ಗಾನಮಾಡಿರಿ.
[11] ಸೇದುವ ಬಾವಿಗಳ ಬಳಿಯಲ್ಲಿ ಬಿಲ್ಲುಗಾರರ ಧ್ವನಿಗಿಂತ ಗಟ್ಟಿಯಾಗಿ ಯೆಹೋವನ ನೀತಿಸಾಧನೆಯ ವರ್ಣನೆಯನ್ನು ಕೇಳಿರಿ. ಆತನು ತನ್ನ ಪ್ರಜೆಗಳಾಗಿರುವ ಇಸ್ರಾಯೇಲ್ ಗ್ರಾಮಸ್ಥರ ನ್ಯಾಯವನ್ನು ಸ್ಥಾಪಿಸಿದ್ದಾನಲ್ಲಾ. ಆ ಕಾಲದಲ್ಲಿ ಯೆಹೋವನ ಜನರು ಊರುಬಾಗಿಲುಗಳಿಗೆ ಇಳಿದು ಬಂದರು.
[12] ‘ಎಚ್ಚರವಾಗು, ದೆಬೋರಳೇ! ಎಚ್ಚರವಾಗು, ಎಚ್ಚರವಾಗು, ಎಚ್ಚರವಾಗಿ ಗಾನಮಾಡು. ಬಾರಾಕನೇ, ಏಳು; ಅಬೀನೋವಮನ ಮಗನೇ, ನೀನು ಸೆರೆಹಿಡಿದವರನ್ನು ಸಾಗಿಸಿಕೊಂಡು ಹೋಗು.’
[13] “ಆಗ ಚದರಿಹೋದವರು ನಾಯಕರ ಬಳಿಗೆ ಕೂಡಿಬಂದರು. ಯೆಹೋವನ ಜನರು ವೀರರಾಗಿ ನನ್ನ ಸಹಾಯಕ್ಕೆ ನೆರೆದು ಬಂದರು.
[14] ಅಮಾಲೇಕ್ಯರ ಪ್ರದೇಶದಲ್ಲಿ ನೆಲೆಗೊಂಡಿರುವ ಎಫ್ರಾಯೀಮ್ಯರೂ ಅವರ ಜೊತೆಯಲ್ಲಿ ಬೆನ್ಯಾಮೀನ್ಯರೂ ಬಂದರು. ಮಾಕೀರನ ಗೋತ್ರದಿಂದ ಪ್ರಧಾನರೂ ಜೆಬುಲೂನ್ ಕುಲದಿಂದ ದಂಡಧಾರಿಗಳಾದ ಸೇನಾನಾಯಕರೂ
[15] ದೆಬೋರಳ ಜೊತೆಯಲ್ಲಿ ಇಸ್ಸಾಕಾರ್ ಕುಲಪ್ರಭುಗಳೂ ಇಸ್ಸಾಕಾರರೊಡನೆ ಬಾರಾಕನೂ ಆಗಮಿಸಿದರು. ಇವರೆಲ್ಲರೂ ಬಾರಾಕನ ಹೆಜ್ಜೆಹಿಡಿದು ತಟ್ಟನೆ ತಗ್ಗಿನ ಪ್ರದೇಶಕ್ಕೆ ಬಂದರು. ರೂಬೇನ್ಯರ ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ
[16] ರೂಬೇನ್ಯರೇ, ನೀವು ಕುರಿಹಟ್ಟಿಗಳಲ್ಲಿ, ಮಂದೆಗಳ ಮಧ್ಯದಲ್ಲಿ ಕೊಳಲೂದುವುದನ್ನು ಕೇಳಬೇಕೆಂದು ಅಲ್ಲಿಯೇ ಕುಳಿತಿರುವುದೇಕೆ? ರೂಬೇನ್ಯರು ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ.
[17] ಗಿಲ್ಯಾದ್ಯರು ಯೊರ್ದನಿನ ಆಚೆಯಲ್ಲೇ ಉಳಿದರು. ದಾನ್ ಕುಲದವರು ಹಡಗುಗಳಲ್ಲಿಯೇ ಉಳಿದದ್ದೇಕೆ? ಆಶೇರ್ ಕುಲದವರು ತಮ್ಮ ರೇವುಗಳನ್ನು ಬಿಡದೆ ಸಮುದ್ರ ತೀರದಲ್ಲಿ ಸುಮ್ಮನೆ ಕುಳಿತುಬಿಟ್ಟರು.
[18] ಜೆಬುಲೂನ್ಯರು ತಮ್ಮ ಜೀವವನ್ನು ಮರಣದ ಆಪತ್ತಿಗೆ ಒಪ್ಪಿಸಲು ಸಿದ್ಧರಿದರು, ನಫ್ತಾಲ್ಯರು ಸಹ ರಣರಂಗದಲ್ಲಿಯೇ ಇದ್ದರು.
[19] “ಅರಸರು ಬಂದು ಯುದ್ಧಮಾಡಿದರು; ಕಾನಾನ್ಯ ರಾಜರು ಮೆಗಿದ್ದೋ ನೀರಿನ ಕಾಲುವೆಗಳ ಬಳಿಯಲ್ಲಿರುವ ತಾನಾಕದಲ್ಲಿ ಕೂಡಿಬಂದು ಹೋರಾಡಿದರು. ಅವರಿಗೆ ದ್ರವ್ಯವೇನೂ ಸಿಕ್ಕಲಿಲ್ಲ.
[20] ನಕ್ಷತ್ರಗಳೂ ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದವು.
[21] ಪೂರ್ವಪ್ರಸಿದ್ಧವಾದ ಕೀಷೋನ್ ಹೊಳೆಯು ಶತ್ರುಗಳನ್ನು ಕೊಚ್ಚಿಕೊಂಡು ಹೋಯಿತು. ನನ್ನ ಮನವೇ ನೀನು ಧೈರ್ಯದಿಂದ ಮುಂದಕ್ಕೆ ಹೊರಡು.
[22] ಆಗ ಅತಿವೇಗವಾಗಿ ಓಡುತ್ತಿದ್ದ ಅವರ ಬಲವಾದ ಕುದುರೆಗಳ ಗೊರಸುಗಳ ಪೆಟ್ಟಿನಿಂದ ನೆಲವು ಕಂಪಿಸಿತು.
[23] ಮೇರೋಜ್ ಊರನ್ನು ಶಪಿಸಿರೆಂದು ಯೆಹೋವನ ದೂತನು ಹೇಳುತ್ತಾನೆ. ‘ಅದರ ನಿವಾಸಿಗಳು ಯೆಹೋವನ ಸಹಾಯಕ್ಕೆ ಬರಲಿಲ್ಲ. ಯುದ್ಧವೀರರ ಹೋರಾಟದ ವಿರುದ್ಧ ಯೆಹೋವನ ಸಹಾಯಕ್ಕೆ ಬರಲಿಲ್ಲವಲ್ಲಾ; ಅವರನ್ನು ಶಪಿಸೇ ಶಪಿಸಿರಿ!’
[24] “ಎಲ್ಲಾ ಸ್ತ್ರೀಯರಲ್ಲಿ ಕೇನ್ಯನಾದ ಹೆಬೆರನ ಹೆಂಡತಿ ಯಾಯೇಲಳೆ ಭಾಗ್ಯವಂತಳು. ಗುಡಾರಗಳಲ್ಲಿ ವಾಸಿಸುವ ಸ್ತ್ರೀಯರಲ್ಲಿ ಆಕೆಯೇ ಆಶೀರ್ವದಿಸಲ್ಪಟ್ಟವಳು.
[25] ನೀರು ಕೇಳಿದನು, ಹಾಲು ಕೊಟ್ಟಳು; ಉತ್ತಮ ಪಾತ್ರೆಯಲ್ಲಿ ಮಜ್ಜಿಗೆ ಕೊಟ್ಟಳು.
[26] ಕೈಚಾಚಿ ಗೂಟವನ್ನು ತೆಗೆದುಕೊಂಡಳು; ಬಲಗೈಯಲ್ಲಿ ದೊಡ್ಡ ಸುತ್ತಿಗೆಯನ್ನು ಹಿಡಿದಳು; ಆ ಸುತ್ತಿಗೆಯಿಂದ ಸೀಸೆರನ ತಲೆಯನ್ನು ಒಡೆದುಬಿಟ್ಟಳು. ಅವನ ನೆತ್ತಿಗೆ ತಿವಿದು ಜಡಿದಳು.
[27] ಅವನು ಆಕೆಯ ಕಾಲುಗಳ ಬಳಿಯಲ್ಲಿ ಉರುಳಿ ಬಿದ್ದನು; ಅವನು ಆಕೆಯ ಕಾಲುಗಳ ಬಳಿಯಲ್ಲಿ ಮುದುರಿಕೊಂಡು ಉರುಳಿದನು. ಅವನು ಬಿದ್ದಲ್ಲೇ ಸತ್ತನು.
[28] “ಸೀಸೆರನ ತಾಯಿಯು ಕಿಟಿಕಿಯಿಂದ ನೋಡಿದಳು; ಸೀಸೆರನ ತಾಯಿಯು ಕಿಟಿಕಿಯ ಜಾಲರಿಗಳಿಂದ ಕೂಗಿದಳು. ‘ಅವನ ರಥವು ಬರುವುದಕ್ಕೆ ಏಕೆ ಇಷ್ಟುಹೊತ್ತಾಯಿತು! ಅವನ ಕುದುರೆಗಳ ಗೊರಸುಗಳಿಗೆ ಇಷ್ಟು ಸಾವಕಾಶವೇಕೆ’ ಅಂದಳು.
[29] ಬುದ್ಧಿವಂತೆಯರಾದ ಸ್ತ್ರೀಯರು ಕೊಟ್ಟ ಉತ್ತರವನ್ನೇ ಈಕೆಯು ತನ್ನಲ್ಲಿ ತಾನೇ ಅಂದುಕೊಳ್ಳುತ್ತಿದ್ದದ್ದು ಏನೆಂದರೆ,
[30] ‘ನಿಶ್ಚಯವಾಗಿ ಅವರಿಗೆ ಕೊಳ್ಳೆ ಸಿಕ್ಕಿರುತ್ತದೆ; ಅದನ್ನು ಹಂಚಿಕೊಳ್ಳುತ್ತಿದ್ದಾರಲ್ಲವೋ?. ಪ್ರತಿಯೊಬ್ಬ ಪುರುಷನಿಗೆ ಒಬ್ಬಿಬ್ಬರು ಹೆಂಗಸರೂ, ಸೀಸೆರನಿಗೆ ನಾನಾ ವರ್ಣಗಳುಳ್ಳ ಬಟ್ಟೆಗಳೂ, ವಿಚಿತ್ರವಾಗಿ ಕಸೂತಿಹಾಕಿದ ಎರಡು ವಸ್ತ್ರಗಳೂ, ಕಂಠಮಾಲೆಯೂ ದೊರಕಿರುತ್ತವೆ.’
[31] ಯೆಹೋವನ ಎಲ್ಲಾ ಶತ್ರುಗಳೂ ಹೀಗೆಯೇ ನಾಶವಾಗಲಿ. ಆತನನ್ನು ಪ್ರೀತಿಸುವ ಭಕ್ತರು ಪ್ರಕಾಶದಿಂದ ಉದಯಿಸುವ ಸೂರ್ಯನಂತಿರಲಿ.” ಅನಂತರ ದೇಶದಲ್ಲಿ ನಲವತ್ತು ವರ್ಷ ಸಮಾಧಾನವಿತ್ತು.