[1] ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೋಸ್ಕರ ಹೊರಟುಹೋಗಿ ಆಕೆಯ ತಂದೆಗೆ, “ನಾನು ನನ್ನ ಹೆಂಡತಿಯ ಹತ್ತಿರ ಒಳಗಿನ ಕೋಣೆಗೆ ಹೋಗುತ್ತೇನೆ” ಅಂದನು. ಅದಕ್ಕೆ ಅವನು, “ಹೋಗಬಾರದು;
[2] ನೀನು ನಿಜವಾಗಿ ಆಕೆಯನ್ನು ಹಗೆಮಾಡುತ್ತೀಯೆಂದು ತಿಳಿದು ಅವಳನ್ನು ನಿನ್ನ ಗೆಳೆಯರಲ್ಲೊಬ್ಬನಿಗೆ ಮದುವೆಮಾಡಿಕೊಟ್ಟೆನು. ಆಕೆಯ ತಂಗಿಯು ಆಕೆಗಿಂತ ಸುಂದರಿಯಾಗಿದ್ದಾಳಲ್ಲಾ; ಈಕೆಯು ನಿನಗಿರಲಿ” ಅಂದನು.
[3] ಆಗ ಸಂಸೋನನು, “ಈ ಸಾರಿ ನಾನು ಫಿಲಿಷ್ಟಿಯರಿಗೆ ಕೇಡುಮಾಡುವುದಾದರೆ ತಪ್ಪು ನನ್ನದಲ್ಲ” ಎಂದುಕೊಂಡು ಹೋಗಿ
[4] ಮುನ್ನೂರು ನರಿಗಳನ್ನು ಹಿಡಿದು, ಬಾಲಕ್ಕೆ ಬಾಲವನ್ನು ಸೇರಿಸಿ ಕಟ್ಟಿ, ಅವುಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ, ಪಂಜುಗಳಿಗೆ ಬೆಂಕಿಹೊತ್ತಿಸಿ,
[5] ಆ ನರಿಗಳನ್ನು ಫಿಲಿಷ್ಟಿಯರ ಹೊಲಗಳಲ್ಲಿ ಬಿಟ್ಟು, ಅವರ ತೆನೆಗೂಡುಗಳನ್ನೂ, ಇನ್ನೂ ಕೊಯ್ಯದೆ ಇದ್ದ ಬೆಳೆಯನ್ನೂ, ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು.
[6] ಫಿಲಿಷ್ಟಿಯರು ಇದನ್ನು ಮಾಡಿದವರು ಯಾರೆಂದು ವಿಚಾರಿಸುವಲ್ಲಿ ತಿಮ್ನಾ ಊರಿನವನ ಅಳಿಯನಾದ ಸಂಸೋನನೆಂದು ಗೊತ್ತಾಯಿತು. ಅವನ ಮಾವನು ಅವನ ಹೆಂಡತಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟದ್ದೇ ಇದಕ್ಕೆ ಕಾರಣವೆಂದು ಅವರು ತಿಳಿದು, ಆಕೆಯನ್ನೂ, ಆಕೆಯ ತಂದೆಯನ್ನೂ ಸುಟ್ಟುಬಿಟ್ಟರು.
[7] ಸಂಸೋನನು ಅವರಿಗೆ, “ನೀವು ಹೀಗೆ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿತೀರಿಸದೆ ಬಿಡುವುದಿಲ್ಲ” ಎಂದು ಹೇಳಿ
[8] ಅವರ ತೊಡೆ, ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿ, ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
[9] ಆಗ ಫಿಲಿಷ್ಟಿಯರು ಹೊರಟು ಯೆಹೂದಾ ಪ್ರಾಂತ್ಯದ ಲೆಹೀ ಎಂಬಲ್ಲಿಗೆ ಹೋಗಿ ಪಾಳೆಯಮಾಡಿಕೊಂಡರು.
[10] ನೀವು ನಮಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದೇಕೆ ಎಂದು ಯೆಹೂದ್ಯರು ಅವರನ್ನು ಕೇಳಲು ಅವರು, “ಸಂಸೋನನನ್ನು ಹಿಡಿದು ಕಟ್ಟಿ ಅವನು ನಮಗೆ ಮಾಡಿದಂತೆಯೇ ಅವನಿಗೂ ಮಾಡಬೇಕೆಂದು ಬಂದೆವು” ಎಂದು ಉತ್ತರಕೊಟ್ಟರು.
[11] ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ, “ಫಿಲಿಷ್ಟಿಯರು ನಮ್ಮ ಮೇಲೆ ದೊರೆತನಮಾಡುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೋ? ಹೀಗೆ ಯಾಕೆ ಮಾಡಿದಿ?” ಎಂದು ಕೇಳಲು ಅವನು, “ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ” ಅಂದನು.
[12] ಅವರು, “ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಬೇಕೆಂದು ಬಂದಿದ್ದೇವೆ” ಅನ್ನಲು ಸಂಸೋನನು, “ಹಾಗಾದರೆ ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿರಿ” ಎಂದನು.
[13] ಅದಕ್ಕೆ ಅವರು, “ನಾವು ಸತ್ಯವಾಗಿ ನಿನ್ನನ್ನು ಕೊಲ್ಲುವುದಿಲ್ಲ; ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸುತ್ತೇವೆ” ಎಂದು ಹೇಳಿ ಅವನನ್ನು ಎರಡು ಹೊಸ ಹಗ್ಗಗಳಿಂದ ಕಟ್ಟಿ ಗುಡ್ಡದ ಮೇಲಿನಿಂದ ಕರತಂದರು.
[14] ಸಂಸೋನನು ಲೆಹೀಯ ಸಮೀಪಕ್ಕೆ ಬರಲು ಫಿಲಿಷ್ಟಿಯರು ಅವನನ್ನು ಕಂಡು ಆರ್ಭಟಿಸಿದರು. ಯೆಹೋವನ ಆತ್ಮವು ಅವನ ಮೇಲೆ ಬಂದದ್ದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ್ದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು.
[15] ಅಲ್ಲಿ ಒಂದು ಕತ್ತೆಯ ದವಡೇ ಎಲುಬು ಬಿದ್ದಿತ್ತು. ಅದು ಇನ್ನೂ ಹಸಿದಾಗಿತ್ತು. ಅವನು ಅದನ್ನು ತೆಗೆದುಕೊಂಡು ಅದರಿಂದ ಸಾವಿರ ಜನರನ್ನು ಸಂಹರಿಸಿಬಿಟ್ಟು,
[16] “ಕತ್ತೆಯ ದವಡೇ ಎಲುಬಿನಿಂದ ಸಾವಿರ ಜನರನ್ನು ಸಾಯಿಸಿದೆನು; ಕತ್ತೆಯ ದವಡೇ ಎಲುಬಿನಿಂದ ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು” ಎಂದು ಹೇಳಿ,
[17] ತನ್ನ ಕೈಯಲ್ಲಿದ್ದ ಎಲುಬನ್ನು ಬೀಸಾಡಿದನು. ಆ ಸ್ಥಳಕ್ಕೆ ರಾಮತ್ ಲೆಹೀ ಎಂದು ಹೆಸರಾಯಿತು.
[18] ಅವನು ಬಹಳ ಬಾಯಾರಿದವನಾಗಿ ಯೆಹೋವನಿಗೆ, “ನೀನು ನಿನ್ನ ಸೇವಕನ ಮೂಲಕವಾಗಿ ಈ ಮಹಾಜಯವನ್ನುಂಟುಮಾಡಿದ ಮೇಲೆ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೋ” ಎಂದು ಮೊರೆಯಿಡಲು
[19] ಆತನು ಲೇಹಿಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಲು ಅವನು ಅದನ್ನು ಕುಡಿದು ಪುನಃ ಚೈತನ್ಯಹೊಂದಿದನು. ಆದ್ದರಿಂದ ಅದಕ್ಕೆ ಏನ್ ಹಕ್ಕೋರೇ ಎಂದು ಹೆಸರಾಯಿತು; ಅದು ಇಂದಿನ ವರೆಗೂ ಲೆಹೀಯಲ್ಲಿರುತ್ತದೆ.
[20] ಫಿಲಿಷ್ಟಿಯರ ಪ್ರಾಬಲ್ಯದಲ್ಲಿ ಸಂಸೋನನು ಇಸ್ರಾಯೇಲ್ಯರನ್ನು ಇಪ್ಪತ್ತು ವರ್ಷಗಳ ವರೆಗೆ ಪಾಲಿಸಿದನು.