[1] ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ.
[2] ಆದರೆ ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ. ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದನು.
[3] ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.
[4] ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು.
[5] ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?, “ನೀನು ನನ್ನ ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” “ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು.”
[6] ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ “ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು” ಎಂದು ಆಜ್ಞಾಪಿಸಿದ್ದಾನೆ.
[7] ದೇವದೂತರ ವಿಷಯದಲ್ಲಿ, “ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ, ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ” ಎಂದು ಹೇಳಿದ್ದಾನೆ.
[8] ಆದರೆ ಮಗನ ವಿಷಯದಲ್ಲಿಯಾದರೋ, “ದೇವರೇ ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿನ್ನ ರಾಜದಂಡವಾಗಿದೆ.
[9] ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ. ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಅಧಿಕವಾಗಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ” ಎಂದು ಹೇಳಿದ್ದಾನೆ.
[10] “ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ. ಆಕಾಶವು ನಿನ್ನ ಕೈಕೆಲಸವಾಗಿದೆ,
[11] ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.
[12] ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು ಅವು ವಸ್ತ್ರದಂತೆ ಬದಲಾಗುವವು. ನೀನಾದರೂ ಅನನ್ಯನು. ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ” ಎಂತಲೂ ಹೇಳುತ್ತಾನೆ.
[13] ಆದರೆ ಯಾವ ದೇವದೂತನಿಗಾದರೂ ದೇವರು, “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂಬುದಾಗಿ ಎಂದಾದರೂ ಹೇಳಿದ್ದಾನೋ?
[14] ಈ ಎಲ್ಲಾ ದೇವದೂತರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ ಸೇವಕಾತ್ಮಗಳಲ್ಲವೋ?