[1] ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ ದೇವಾಲಯವಿತ್ತು.
[2] ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ ದೀಪಸ್ತಂಭ, ಮೇಜು, ಮತ್ತು ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು.
[3] ಮತ್ತು ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು.
[4] ಅದರಲ್ಲಿ ಚಿನ್ನದ ಧೂಪಾರತಿಯು ಮತ್ತು ಚಿನ್ನದ ತಗಡಿನಿಂದ ಹೊದಿಸಿದ ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ ಚಿನ್ನದ ಪಾತ್ರೆಯೂ, ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು.
[5] ಅದರ ಮೇಲೆ ಕೃಪಾಸನವನ್ನು ಮುಚ್ಚುವ ತೇಜಸ್ಸಿನ ಕೆರೂಬಿಗಳೂ ಇದ್ದವು. ಅದನ್ನು ಈಗ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ.
[6] ಹೀಗೆ ಇವುಗಳನ್ನು ಸಿದ್ಧಮಾಡಿದ ನಂತರ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು.
[7] ಆದರೆ ಎರಡನೆಯ ಕೋಣೆಯೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೊಮ್ಮೆ ಪ್ರವೇಶಿಸುತ್ತಿದ್ದನು. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ. ಆ ರಕ್ತವನ್ನು ತನ್ನಗಾಗಿಯೂ ಮತ್ತು ಜನರ ಉದ್ದೇಶಪೂರ್ವಕವಲ್ಲದ ಅಪರಾಧಗಳಿಗೋಸ್ಕರವೂ ಸಮರ್ಪಿಸಬೇಕಾಗಿತ್ತು.
[8] ಈ ಗುಡಾರದ ಮೊದಲನೆಯ ಭಾಗವು ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲ ಎಂಬುದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.
[9] ಇದು ಈಗಿನ ಕಾಲಕ್ಕೆ ಒಂದು ನಿದರ್ಶನವಾಗಿದೆ. ಅದೇನೆಂದರೆ ಅದರ ಕ್ರಮದ ಮೇರೆಗೆ ಸಮರ್ಪಣೆಯಾಗುವ ಕಾಣಿಕೆಗಳೂ ಮತ್ತು ಯಜ್ಞಗಳೂ ಆರಾಧನೆ ಮಾಡುವವರ ಮನಸ್ಸಾಕ್ಷಿಯನ್ನು ಪರಿಪೂರ್ಣಗೊಳಿಸಲು ಆಗಲಿಲ್ಲ.
[10] ಅವು ಅನ್ನಪಾನಗಳೂ ಮತ್ತು ವಿವಿಧ ಆಚರಣೆಗಳಿಗೂ ಒಳಪಟ್ಟಿರುವ ಸ್ನಾನಗಳು ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು. ಇವು ಸುಧಾರಣೆಯ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.
[11] ಕ್ರಿಸ್ತನಾದರೋ ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ,
[12] ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ ಸ್ವಂತ ರಕ್ತದ ಮೂಲಕ ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ ನಿತ್ಯ ವಿಮೋಚನೆಯನ್ನು ಸಾಧಿಸಿದನು.
[13] ಹೋತ ಹೋರಿಗಳ ರಕ್ತವೂ ಅಶುದ್ಧರಾದವರ ಮೇಲೆ ಚಿಮುಕಿಸುವ ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ,
[14] ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, ನಮ್ಮನ್ನು ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುತ್ತದಲ್ಲವೇ?
[15] ದೇವರಿಂದ ಕರೆಯಲ್ಪಟ್ಟ ಜನರು, ದೇವರ ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.
[16] ಮರಣ ಶಾಸನವು ಇರುವಲ್ಲಿ ಆದನ್ನು ಬರೆಸಿದ ವ್ಯಕ್ತಿಯ ಸಾವನ್ನು ಸಾಬೀತಪಡಿಸುವುದು ಅಗತ್ಯ.
[17] ಮರಣ ಶಾಸನವು ವ್ಯಕ್ತಿಯ ಮರಣವಾದ ಮೇಲೆ ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಬರೆದವನು ಜೀವದಿಂದಿರುವಾಗ ಎಂದಿಗೂ ಜಾರಿಗೆ ಬರುವುದಿಲ್ಲ.
[18] ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ.
[19] ಮೋಶೆಯು ದೇವರ ಪ್ರತಿಯೊಂದು ಆಜ್ಞೆಯನ್ನು ಧರ್ಮಶಾಸ್ತ್ರದ ಪ್ರಕಾರ ಜನರೆಲ್ಲರಿಗೆ ತಿಳಿಸಿದ ಮೇಲೆ, ಅವನು ನೀರು, ಕೆಂಪು ಉಣ್ಣೆ, ಹಿಸ್ಸೋಪುಕಡ್ಡಿ ಇವುಗಳೊಂದಿಗೆ ಹೋರಿಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿದನು.
[20] “ಇದು ದೇವರು ನಿಮಗೋಸ್ಕರ ಆಜ್ಞಾಪಿಸಿದ ಒಡಂಬಡಿಕೆಯ ರಕ್ತವಾಗಿದೆ” ಎಂದು ಹೇಳಿದನು.
[21] ಇದಲ್ಲದೆ ಗುಡಾರದ ಮೇಲೆಯೂ ದೇವರ ಸೇವೆಗೆ ಬೇಕಾಗಿರುವ ಎಲ್ಲಾ ಪಾತ್ರೆಗಳ ಮೇಲೆಯೂ ಅದೇ ರೀತಿಯಾಗಿ ರಕ್ತವನ್ನು ಪ್ರೋಕ್ಷಿಸಿದನು.
[22] ಧರ್ಮಶಾಸ್ತ್ರದ ಪ್ರಕಾರ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು. ರಕ್ತಧಾರೆ ಇಲ್ಲದೆ ಪಾಪ ಕ್ಷಮಾಪಣೆಯು ಉಂಟಾಗುವುದಿಲ್ಲ.
[23] ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ ಛಾಯೆಯಂತಿರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ, ಪರಲೋಕದವುಗಳನ್ನು ಶುದ್ಧೀಕರಿಸಲು ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯ.
[24] ಯಾಕೆಂದರೆ ಕ್ರಿಸ್ತನು ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು.
[25] ಇದಲ್ಲದೆ, ಮಹಾಯಾಜಕನು ವರ್ಷ ವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಅತಿ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ಕ್ರಿಸ್ತನು ತನ್ನನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಅಲ್ಲಿಗೆ ಪ್ರವೇಶಿಸಲಿಲ್ಲ.
[26] ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕಾದಿಯಿಂದ ಎಷ್ಟೋ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಒಂದೇ ಸಾರಿ, ಯುಗಗಳ ಸಮಾಪ್ತಿಯವರೆಗೂ, ಆತನು ಪಾಪ ನಿವಾರಣೆ ಮಾಡುವ ಉದ್ದೇಶದಿಂದ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು.
[27] ಒಂದೇ ಸಾರಿ ಸಾಯುವುದೂ ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ,
[28] ಹಾಗೆಯೇ ಕ್ರಿಸ್ತನು ಸಹ ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ.