Skip to content
Opens in a new window
Listen to this chapter • 3:08

[1] ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ.

[2] ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ, ಯೇಸುವೂ ತನ್ನನ್ನು ನೇಮಕ ಮಾಡಿರುವಾತನಿಗೆ ನಂಬಿಗಸ್ತನಾಗಿದ್ದಾನೆ.

[3] ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ ಮೋಶೆಗಿಂತ ಯೇಸು ಹೆಚ್ಚಾದ ಗೌರವಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ.

[4] ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ ಸಮಸ್ತವನ್ನು ಕಟ್ಟಿದಾತನು ದೇವರೇ.

[5] ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾದ ಸೇವಕನಾಗಿದ್ದನು. ಅವನು ಮುಂದೆ ಪ್ರಕಟವಾಗಬೇಕಾಗಿದ್ದಂಥ ವಿಷಯಗಳಿಗೆ ಸಾಕ್ಷಿಕೊಟ್ಟಿದ್ದಾನೇ.

[6] ಆದರೆ ಕ್ರಿಸ್ತನಾದರೋ ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ. ನಾವು ನಮ್ಮ ಭರವಸೆಯನ್ನೂ, ನಿರೀಕ್ಷೆಯ ಮಹತ್ವವನ್ನೂ, ಕಡೆ ತನಕ ಗಟ್ಟಿಯಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ.

[7] ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ, “ನೀವು ಈ ದಿನ ದೇವರ ಸ್ವರಕ್ಕೆ ಕಿವಿಗೊಡುವುದಾದರೆ,

[8] ಇಸ್ರಾಯೇಲ್ಯರು ಅರಣ್ಯದಲ್ಲಿ, ದೇವರನ್ನು ಪರೀಕ್ಷಿಸಿದ ದಿನದಲ್ಲಿ ಹಠಮಾರಿಗಳಾದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.

[9] ನಿಮ್ಮ ಹಿರಿಯರು ಮೊಂಡುತನದಿಂದ ನನ್ನನ್ನು ಪರೀಕ್ಷಿಸಿ, ನಲವತ್ತು ವರ್ಷ ನನ್ನ ಕೃತ್ಯಗಳನ್ನು ನೋಡಿದರು.

[10] ಆದ್ದರಿಂದ, ನಾನು ಈ ಸಂತತಿಯವರ ಮೇಲೆ ಬಹಳ ಬೇಸರಗೊಂಡು, ‘ಅವರು ಯಾವಾಗಲೂ ತಪ್ಪಿಹೋಗುವ ಹೃದಯವುಳ್ಳವರೂ, ಅವರು ನನ್ನ ಮಾರ್ಗಗಳನ್ನು ತಿಳಿಯದವರೂ’ ಎಂದು ನಾನು ಹೇಳಿದೆ.

[11] ಹೀಗಿರಲು ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು ಕೋಪಗೊಂಡು ಪ್ರಮಾಣಮಾಡಿದೆನು.’”

[12] ಸಹೋದರರೇ, ಜೀವಸ್ವರೂಪನಾದ ದೇವರನ್ನು ತ್ಯಜಿಸಿ ಬಿಡುವ ಅಪನಂಬಿಕೆಯುಳ್ಳ ದುಷ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರದಂತೆ ಜಾಗರೂಕರಾಗಿ ನೋಡಿಕೊಳ್ಳಿರಿ.

[13] ನಿಮ್ಮಲ್ಲಿ ಒಬ್ಬರಾದರೂ ಪಾಪದಲ್ಲಿ ಸಿಕ್ಕಿ ಮೋಸಹೋಗಿ ಕಠಿಣರಾಗದಂತೆ, ‘ಇಂದು’ ಎಂದು ಕರೆಯಲ್ಪಡುವ ಅವಕಾಶ ಇನ್ನೂ ಇರುವಾಗಲೇ, ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.

[14] ಮೊದಲಿನಿಂದಲೂ ಇರುವ ನಮ್ಮ ಭರವಸೆಯನ್ನು ಅಂತ್ಯದ ವರೆಗೂ ದೃಢವಾಗಿ ಹಿಡಿದುಕೊಳ್ಳುವುದಾದರೆ ನಾವು ಕ್ರಿಸ್ತನಲ್ಲಿ ಪಾಲುಗಾರರಾಗುತ್ತೇವೆ.

[15] “ನೀವು ಈ ಹೊತ್ತು ದೇವರ ಸ್ವರವನ್ನು ಕೇಳುವುದಾದರೆ, ಪೂರ್ವಿಕರು ಮೊಂಡುತನದಿಂದ ಮಾಡಿದಂತೆ, ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ.”

[16] ಆತನು ನುಡಿದದ್ದನ್ನು ಕೇಳಿ ವಿರೋಧಿಸಿದವರು ಯಾರು? ಮೋಶೆಯ ಮೂಲಕ ಐಗುಪ್ತದೊಳಗಿಂದ ಹೊರಗೆ ಕರೆತರಲ್ಪಟ್ಟವರೆಲ್ಲರೂ ಅಲ್ಲವೇ?

[17] ಮತ್ತು ದೇವರು ನಲವತ್ತು ವರ್ಷ ಯಾರ ಮೇಲೆ ಬಹಳವಾಗಿ ಕೋಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದುಹೋದವು.

[18] ನನ್ನ ವಿಶ್ರಾಂತಿಯಲ್ಲಿ ನೀವು ಸೇರುವುದೇ ಇಲ್ಲವೆಂದು ಯಾರನ್ನು ಕುರಿತು ಆತನು ಪ್ರಮಾಣಮಾಡಿದನೂ? ಅವಿಧೇಯರನ್ನು ಕುರಿತಲ್ಲವೇ?

[19] ಅವರು ವಿಶ್ರಾಂತಿಯಲ್ಲಿ ಸೇರಲಾರದೇ ಹೋದದ್ದು ಅವರ ಅಪನಂಬಿಕೆಯಿಂದಲೇ ಎಂದು ನಾವು ಅರಿತಿದ್ದೇವೆ.

ಇಬ್ರಿಯರಿಗೆ — Chapters