Skip to content
Opens in a new window
Listen to this chapter • 3:04

[1] ನಾವು ಈಗ ಹೇಳುವ ಸಂಗತಿಗಳಲ್ಲಿ ಮುಖ್ಯವಾದ ಮಾತೇನೆಂದರೆ, ಪರಲೋಕದೊಳಗೆ ಮಹೋನ್ನತನ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾದಂಥ ಮಹಾಯಾಜಕನು ನಮಗಿದ್ದಾನೆ.

[2] ಆತನು ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ಕರ್ತನೇ ಹಾಕಿದ ನಿಜವಾದ ದೇವದರ್ಶನ ಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ.

[3] ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ, ಯಜ್ಞಗಳನ್ನೂ ಸಮರ್ಪಿಸುವುದಕ್ಕೆ ನೇಮಕವಾಗಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ಈತನಿಗೂ ಸಹ ಏನಾದರೂ ಇರುವುದು ಅಗತ್ಯವಾಗಿದೆ.

[4] ಆತನು ಇನ್ನೂ ಭೂಮಿಯ ಮೇಲೆ ಇದ್ದಿದ್ದರೆ ಯಾಜಕನಾಗುತ್ತಿರಲಿಲ್ಲ. ಯಾಕೆಂದರೆ ಧರ್ಮಶಾಸ್ತ್ರದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ.

[5] ಮೋಶೆಯು ಗುಡಾರವನ್ನು ಕಟ್ಟುವುದಕ್ಕಿದ್ದಾಗ, “ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇಕು” ಎಂದು ದೇವರಿಂದ ಎಚ್ಚರಿಸಲ್ಪಟ್ಟಂತೆಯೇ ಪರಲೋಕದಲ್ಲಿರುವವುಗಳ ಪ್ರತಿರೂಪವೂ, ಛಾಯೆಯೂ ಆಗಿರುವ ಆಲಯದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

[6] ಆದರೆ ಯೇಸು ಕ್ರಿಸ್ತನು ಅದಕ್ಕಿಂತ ಶ್ರೇಷ್ಠವಾದ ಉತ್ತಮ ಸೇವೆಯನ್ನು ಹೊಂದಿದವನಾಗಿದ್ದಾನೆ, ಯಾಕೆಂದರೆ ಈತನು ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ.

[7] ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲದ್ದಾಗಿದ್ದರೆ, ಎರಡನೆಯ ಒಡಂಬಡಿಕೆಯ ಅಗತ್ಯವಿರುತ್ತಿರಲಿಲ್ಲ.

[8] ಆದರೆ ದೇವರು ಆ ಜನರಲ್ಲಿ ತಪ್ಪು ಹೊರಿಸಿ ಹೀಗೆಂದನು, “‘ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು’ ಎಂದು ಕರ್ತನು ಹೇಳುತ್ತಾನೆ.

[9] ‘ಈ ಒಡಂಬಡಿಕೆಯು ನಾನು ಇವರ ಪೂರ್ವಿಕರನ್ನು ಕೈಹಿಡಿದು ಐಗುಪ್ತ ದೇಶದೊಳಗಿನಿಂದ ಕರೆದುಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯ ಹಾಗಲ್ಲ. ಏಕೆಂದರೆ ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾದ್ದರಿಂದ ನಾನು ಅವರನ್ನು ಲಕ್ಷಿಸಲಿಲ್ಲ’ ಎಂದು ಕರ್ತನು ಹೇಳುತ್ತಾನೆ.

[10] ‘ಆ ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು’ ಹೀಗಿರುವುದು, ‘ನಾನು ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ನಾನು ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರುವರು.

[11] ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ “ಕರ್ತನನ್ನು ತಿಳಿದುಕೊಳ್ಳಿರಿ” ಎಂದು ಬೋಧಿಸಬೇಕಾಗಿರುವುದಿಲ್ಲ. ಏಕೆಂದರೆ ಹೀನರಾದವರು ಮೊದಲುಗೊಂಡು ಉನ್ನತರಾದವರ ತನಕ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು.

[12] ನಾನು ಅವರ ದುಷ್ಕೃತ್ಯಗಳನ್ನು ಕರುಣೆಯಿಂದ ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ’” ಎಂದು ಕರ್ತನು ನುಡಿಯುತ್ತಾನೆ.

[13] ಆತನು “ಹೊಸತು” ಎಂದು ಹೇಳಿದ್ದರಲ್ಲಿ ಮೊದಲಿದ್ದ ಒಡಂಬಡಿಕೆಯನ್ನು ಹಳೆಯದಾಗಿ ಮಾಡಿದ್ದಾನೆ. ಅದು ಹಳೆಯದಾಗುತ್ತಾ ಅಳಿದುಹೋಗುವುದಕ್ಕೆ ಸಮೀಪವಾಗಿದೆ.

ಇಬ್ರಿಯರಿಗೆ — Chapters