Skip to content
Opens in a new window
Listen to this chapter • 6:17

[1] ಧರ್ಮಶಾಸ್ತ್ರವು ಮುಂದೆ ಬರಬೇಕಾಗಿದ್ದ ಉತ್ತಮ ಸಂಗತಿಗಳ ಛಾಯೆಯೇ ಹೊರತು ಅವುಗಳ ನಿಜ ಸ್ವರೂಪವಲ್ಲ. ಆದ್ದರಿಂದ ಆ ಧರ್ಮಶಾಸ್ತ್ರವು ಪ್ರತಿ ವರ್ಷವೂ ಯಾವಾಗಲೂ ಅರ್ಪಿತವಾಗುವ ಒಂದೇ ವಿಧವಾದ ಯಜ್ಞಗಳನ್ನು ಅರ್ಪಿಸಿ, ದೇವರ ಸಮೀಪಕ್ಕೆ ಬರುವವರನ್ನು ಎಂದಿಗೂ ಪರಿಪೂರ್ಣತೆಗೆ ತರಲಾರದು.

[2] ತಂದಿದ್ದ ಪಕ್ಷದಲ್ಲಿ ಯಜ್ಞಗಳ ನಿಂತು ಹೋಗುತ್ತಿದ್ದವು, ಏಕೆಂದರೆ ಆರಾಧನೆ ಮಾಡುವವರು ಒಂದು ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ, ಅವರಿಗೆ ಪಾಪದ ಪ್ರಜ್ಞೆ ಎಂದಿಗೂ ಕಾಡುತ್ತಿರಲಿಲ್ಲ.

[3] ಈಗಲಾದರೋ ಆ ಯಜ್ಞಗಳಿಂದ ಪ್ರತಿ ವರ್ಷದಲ್ಲಿಯೂ ಪಾಪಗಳ ಜ್ಞಾಪಕವಾಗುವುದುಂಟು,

[4] ಯಾಕೆಂದರೆ ಹೋರಿಗಳ ಮತ್ತು ಕುರಿಗಳ ರಕ್ತದಿಂದ ಪಾಪಗಳನ್ನು ಪರಿಹಾರಮಾಡುವುದು ಅಸಾಧ್ಯವಾಗಿದೆ.

[5] ಆದ್ದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ, “(ದೇವರೇ,) ಯಜ್ಞಗಳೂ ಕಾಣಿಕೆಗಳೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ,

[6] ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡುವುದಿಲ್ಲ.

[7] ಆಗ ನಾನು, ಇಗೋ, ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವ ಪ್ರಕಾರ ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದೆನು.

[8] ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಲ್ಪಟ್ಟ ಯಜ್ಞಗಳು, “ಸರ್ವಾಂಗಹೋಮಗಳು ಮತ್ತು ಪಾಪಪರಿಹಾರಕ ಯಜ್ಞಗಳು ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವುದಿಲ್ಲ” ಎಂದು ಹೇಳಿದ್ದಾನೆ.

[9] ತರುವಾಯ ಆತನು “ಇಗೋ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ತೆಗೆದುಬಿಡುತ್ತಾನೆ.

[10] ಯೇಸು ಕ್ರಿಸ್ತನು ಒಂದೇ ಸಾರಿ ದೇಹ ಸಮರ್ಪಣೆ ಮಾಡಿ ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಶುದ್ಧೀಕರಿಸಲ್ಪಟ್ಟವರಾಗಿರುವೆವು.

[11] ಇದಲ್ಲದೆ ಪ್ರತಿಯೊಬ್ಬ ಯಾಜಕನು ಪ್ರತಿದಿನ ಸೇವೆಮಾಡುತ್ತಾ, ಎಂದಿಗೂ ಪಾಪಗಳನ್ನು ತೆಗೆದು ಹಾಕಲಾರದಂಥ, ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಾ ನಿಂತುಕೊಂಡಿರುವನು.

[12] ಆದರೆ ಕ್ರಿಸ್ತನು ಪಾಪಗಳಿಗೋಸ್ಕರ ಸದಾಕಾಲಕ್ಕೂ ಒಂದೇ ಯಜ್ಞವನ್ನು ಸಮರ್ಪಿಸಿದ ಮೇಲೆ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.

[13] ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಮಾಡಲ್ಪಡುವ ತನಕ ಆತನು ಕಾಯುತ್ತಿರುವನು.

[14] ಆತನು ಶುದ್ಧೀಕರಿಸಲ್ಪಡುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ಪರಿಪೂರ್ಣರನ್ನಾಗಿ ಮಾಡಿದ್ದಾನೆ.

[15] ಪವಿತ್ರಾತ್ಮನು ಸಹ ನಮಗೆ ಸಾಕ್ಷಿಕೊಡುವಾತನಾಗಿ,

[16] “ಆ ದಿನಗಳು ಬಂದ ಮೇಲೆ ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು, ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು, ಅವರ ಮನಸ್ಸಿನಲ್ಲಿ ಅವುಗಳನ್ನು ಬರೆಯುವೆನು ಎಂದು ಕರ್ತನು ನುಡಿಯುತ್ತಾನೆ.” ಎಂಬುದಾಗಿ ಹೇಳಿದ ತರುವಾಯ ಇನ್ನು,

[17] “ಅವರ ಪಾಪಗಳನ್ನೂ ಅವರ ದುಷ್ಕೃತ್ಯಗಳನ್ನೂ ನನ್ನ ನೆನಪಿಗೆ ಎಂದಿಗೂ ತಂದುಕೊಳ್ಳುವುದಿಲ್ಲ.” ಎಂದು ಹೇಳುತ್ತಾನೆ.

[18] ಪಾಪ ಕ್ಷಮಾಪಣೆಯಾದಲ್ಲಿ ಇನ್ನೂ ಅವುಗಳ ವಿಷಯದಲ್ಲಿ ಯಜ್ಞಗಳನ್ನು ಸಮರ್ಪಣೆಮಾಡುವಂಥ ಅವಶ್ಯಕತೆ ಇಲ್ಲ.

[19] ಹೀಗಿರುವಲ್ಲಿ ಸಹೋದರರೇ, ಯೇಸು ತನ್ನ ರಕ್ತದಿಂದ ಆತನ ದೇಹವೆಂಬ ಪರದೆಯ ಮೂಲಕ ನಮಗೆ ಹೊಸದಾದ ಸಜೀವ ಮಾರ್ಗವನ್ನು ತೆರೆದಿಟ್ಟಿದ್ದಾನೆ. ಅದರ ಮೂಲಕ ಅತಿ ಪರಿಶುದ್ಧ ಸ್ಥಳವನ್ನು ಪ್ರವೇಶಿಸಲು ನಮಗೆ ಭರವಸೆ ದೊರೆತಿದೆ.

[21] ಮತ್ತು ದೇವರ ಮನೆತನದ ಮೇಲೆ ಅಧಿಕಾರವಿರುವ ಶ್ರೇಷ್ಠ ಯಾಜಕನು ನಮಗಿದ್ದಾನೆ.

[22] ಆದಕಾರಣ ಕೆಟ್ಟ ಮನಸ್ಸಾಕ್ಷಿಯನ್ನು ಪ್ರೋಕ್ಷಿಸಿ ಶುದ್ಧೀಕರಿಸಿಕೊಂಡು, ತಿಳಿನೀರಿನಿಂದ ತೊಳೆದ ದೇಹದಿಂದಲೂ, ಯಥಾರ್ಥಹೃದಯದಿಂದಲೂ, ನಂಬಿಕೆಯ ಪೂರ್ಣನಿಶ್ಚಯದಿಂದಲೂ ದೇವರ ಸಮೀಪಕ್ಕೆ ಬರೋಣ.

[23] ನಾವು ನಮ್ಮ ನಿರೀಕ್ಷೆಯನ್ನು ಕುರಿತು ಮಾಡಿದ ಅರಿಕೆಯನ್ನು ನಿಶ್ಚಂಚಲದಿಂದ ಬಿಗಿಯಾಗಿ ಹಿಡಿಯೋಣ, ಯಾಕೆಂದರೆ ವಾಗ್ದಾನ ಮಾಡಿದಾತನು ನಂಬಿಗಸ್ತನು.

[24] ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಹುರಿದುಂಬಿಸೋಣ.

[25] ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ.

[26] ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೂ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಉಳಿದಿರುವುದಿಲ್ಲ.

[27] ಬದಲಿಗೆ, ಅತ್ಯಂತ ಭಯಂಕರವಾದ ನ್ಯಾಯತೀರ್ಪಿನ ನಿರೀಕ್ಷೆ ಹಾಗೂ ದೇವರ ವಿರೋಧಿಗಳನ್ನು ದಹಿಸುವ ಕೋಪಾಗ್ನಿಯೂ ಮಾತ್ರ ಇರುವವು.

[28] ಮೋಶೆಯ ಧರ್ಮಶಾಸ್ತ್ರವನ್ನು ತಿರಸ್ಕಾರ ಮಾಡಿದವನಿಗೆ ಇಬ್ಬರ ಇಲ್ಲವೆ ಮೂವರ ಸಾಕ್ಷ್ಯಧಾರದ ಮೇಲೆ ಕರುಣೆಯಿಲ್ಲದೆ ಮರಣದಂಡನೆ ಆಗುತ್ತಿತಷ್ಟೆ.

[29] ಹೀಗಿರುವಲ್ಲಿ, ದೇವಕುಮಾರನನ್ನು ತುಳಿದು, ತನ್ನನ್ನು ಶುದ್ಧೀಕರಿಸಿದ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ, ದೇವರ ಕೃಪಾವರವಾಗಿರುವ ಆತ್ಮನನ್ನು ತಿರಸ್ಕರಿಸುವವನೋ, ಇನೆಂಥ ಕ್ರೂರದಂಡನೆಗೆ ಗುರಿ ಆಗುತ್ತಾನೆಂದು ನೀವೇ ಯೋಚಿಸಿನೋಡಿ?

[30] “ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು” ಹೇಳಿದಾತನನ್ನು ಬಲ್ಲೆವು. ಇದಲ್ಲದೆ “ಕರ್ತನು ತನ್ನ ಜನರಿಗೆ ನ್ಯಾಯ ತೀರಿಸುವನು” ಎಂದು ಹೇಳಿಯದೆ.

[31] ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವುದು ಎಷ್ಟೋ ಭಯಂಕರವಾದದ್ದು.

[32] ಹೀಗಿರಲಾಗಿ ನೀವು ಜ್ಞಾನಪ್ರಕಾಶವನ್ನು ಹೊಂದಿದ ಮೇಲೆ ಕಷ್ಟಾನುಭವವೆಂಬ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ.

[33] ಕೆಲವು ಸಾರಿ ನೀವು ನಿಂದೆಗಳನ್ನೂ, ಸಂಕಟಗಳನ್ನೂ, ಅನುಭವಿಸಿ ಹಾಸ್ಯಕ್ಕೆ ಗುರಿಯಾದಿರಿ. ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಪಾಲುಗಾರರಾಗಿದ್ದು ಕಷ್ಟಾನುಭವಿಗಳಾದಿರಿ.

[34] ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ ಉತ್ತಮವಾಗಿಯೂ, ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು, ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟು ಕೊಟ್ಟಿದ್ದೀರಿ.

[35] ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ ಮಹಾ ಪ್ರತಿಫಲ ಉಂಟು.

[36] ನೀವು ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ.

[37] “ಬರುವಾತನು ಇನ್ನು ಸ್ವಲ್ಪ ಕಾಲದಲ್ಲಿ ಬರುವನು ತಡಮಾಡುವುದಿಲ್ಲ.

[38] ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು, ಅವನು ಅದರಿಂದ ಹಿಂಜರಿದರೆ ಅವನಲ್ಲಿ ನನಗೆ ಮೆಚ್ಚಿಕೆಯಿರುವುದಿಲ್ಲ.”

[39] ನಾವಾದರೋ ಹಿಂಜರಿದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವರಾಗಿದ್ದೇವೆ.

ಇಬ್ರಿಯರಿಗೆ — Chapters