[1] ನಂಬಿಕೆಯೋ ನಾವು ನಿರೀಕ್ಷಿಸುವಂಥವುಗಳ ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ.
[2] ನಮ್ಮ ಹಿರಿಯರು ತಮ್ಮ ನಂಬಿಕೆಯಿಂದಲೇ ದೈವಸಮ್ಮತಿಯನ್ನು ಪಡೆದರು.
[3] ವಿಶ್ವವು ದೇವರ ಮಾತಿನಿಂದಲೇ ನಿರ್ಮಿತವಾಯಿತೆಂದು ನಾವು ನಂಬಿಕೆಯಿಂದಲೇ ತಿಳಿದುಕೊಂಡಿದ್ದೇವೆ. ಈ ಕಾರಣದಿಂದ ಕಾಣಿಸುವ ಈ ಜಗತ್ತು ದೃಶ್ಯವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.
[4] ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಇದರ ಮೂಲಕ ಅವನು ನೀತಿವಂತನೆಂದು ಸಾಕ್ಷಿ ಹೊಂದಿದನು. ದೇವರು ಅವನ ಕಾಣಿಕೆಗಳನ್ನು ಕುರಿತು ಪ್ರಶಂಸಿಸಿದನು. ಅವನು ಸತ್ತುಹೋಗಿದ್ದರೂ, ಅವನ ನಂಬಿಕೆಯ ಮೂಲಕ ಇನ್ನೂ ಮಾತನಾಡುವವನಾಗಿದ್ದಾನೆ.
[5] ನಂಬಿಕೆಯಿಂದಲೇ ಹನೋಕನು ಮರಣವನ್ನು ಅನುಭವಿಸದೇ ಒಯ್ಯಲ್ಪಟ್ಟನು. ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಯಾರಿಗೂ ಕಾಣಿಸಿಗಲಿಲ್ಲ. ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಹೊಂದಿದನು.
[6] ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು.
[7] ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ದೈವೋಕ್ತಿಯನ್ನು ಹೊಂದಿ, ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ನಂಬಿಕೆಯಿಂದಲೇ ಅವನು ಲೋಕದವರು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು. ಆದುದ್ದರಿಂದ ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.
[8] ನಂಬಿಕೆಯಿಂದಲೇ ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.
[9] ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗ, ಅಲ್ಲಿ ಅನ್ಯ ದೇಶದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಭಾಧ್ಯರಾಗಿದ್ದ ಇಸಾಕನೂ, ಯಾಕೋಬನೂ ಅವನಂತೆಯೇ ಗುಡಾರಗಳಲ್ಲಿ ವಾಸಿಸಿದರು.
[10] ಯಾಕೆಂದರೆ ಅವನು ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.
[11] ಇದಲ್ಲದೆ ಸಾರಳು ವಾಗ್ದಾನ ಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯ ಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವುದಕ್ಕೆ ಶಕ್ತಿಯನ್ನು ಹೊಂದಿದಳು.
[12] ಆದುದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು.
[13] ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು ಒಪ್ಪಿಕೊಂಡರು.
[14] ಇಂಥ ಮಾತುಗಳನ್ನಾಡುವವರು ತಾವು ಸ್ವದೇಶವನ್ನು ಹುಡುಕುವವರಾಗಿದ್ದರೆಂಬುದನ್ನು ವ್ಯಕ್ತಪಡಿಸುತ್ತದೆ.
[15] ತಾವು ಬಿಟ್ಟು ಬಂದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು.
[16] ಆದರೆ ಅವರು ಪರಲೋಕವೆಂಬ ಉತ್ತಮ ದೇಶವನ್ನು ಹಾರೈಸುವವರು. ಆದ್ದರಿಂದ ದೇವರು ಅವರ ದೇವರೇ ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಗೊಳ್ಳದೇ, ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.
[17] ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು.
[19] ನನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳಿದುಕೊಂಡಿದ್ದನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಪಡೆದುಕೊಂಡನು.
[20] ನಂಬಿಕೆಯಿಂದಲೇ ಇಸಾಕನು ಯಾಕೋಬನನ್ನು ಮತ್ತು ಏಸಾವನನ್ನು ಆಶೀರ್ವದಿಸಿದಾಗ ಮುಂದೆ ಸಂಭವಿಸಬಹುದಾದ ವಿಷಯಗಳನ್ನು ಸೂಚಿಸಿದನು.
[21] ಯಾಕೋಬನು ತಾನು ಮರಣ ಹೊಂದುವ ಸಮಯದಲ್ಲಿ ನಂಬಿಕೆಯಿಂದಲೇ ಯೋಸೇಫನ ಮಕ್ಕಳಿಬ್ಬರನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
[22] ಯೋಸೇಫನು ತನ್ನ ಮರಣ ಸಮಯದಲ್ಲಿ ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಡುವುದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳನ್ನು ತೆಗೆದುಕೊಂಡು ಹೋಗುವ ವಿಷಯದಲ್ಲಿ ಅಪ್ಪಣೆ ಕೊಟ್ಟನು.
[23] ಮೋಶೆ ಹುಟ್ಟಿದಾಗ ಅವನ ತಂದೆತಾಯಿಗಳು ಕೂಸು ಸುಂದರವಾಗಿದೆ ಎಂದು ನೋಡಿ ಅರಸನ ಅಪ್ಪಣೆಗೆ ಭಯಪಡದೇ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು.
[24] ನಂಬಿಕೆಯಿಂದಲೇ ಮೋಶೆಯು ದೊಡ್ಡವನಾದ ಮೇಲೆ ಫರೋಹನ ಪುತ್ರಿಯ ಮಗನೆನಿಸಿಕೊಳ್ಳುವುದು ಬೇಡವೆಂದುಕೊಂಡನು.
[25] ಸ್ವಲ್ಪ ಕಾಲದಲ್ಲಿ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ದೇವಜನರೊಂದಿಗೆ ಕಷ್ಟವನ್ನು ಅನುಭವಿಸುವುದೇ ಮೇಲೆಂದು ತೀರ್ಮಾನಿಸಿಕೊಂಡನು.
[26] ಐಗುಪ್ತದೇಶದ ಸರ್ವಐಶ್ವರ್ಯಕ್ಕಿಂತಲೂ, ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು. ಏಕೆಂದರೆ ಮುಂಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.
[27] ನಂಬಿಕೆಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೇ ಐಗುಪ್ತದೇಶವನ್ನು ಬಿಟ್ಟುಹೋದನು. ಏಕೆಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಂತೆ ದೃಢಚಿತ್ತನಾಗಿದ್ದನು.
[28] ಚೊಚ್ಚಲ ಮಕ್ಕಳನ್ನು ಸಂಹರಿಸುವವನು, ಇಸ್ರಾಯೇಲ್ಯರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ, ನಂಬಿಕೆಯಿಂದಲೇ ಅವನು ಪಸ್ಕವನ್ನೂ ರಕ್ತಪೋಕ್ಷಣಾಚಾರವನ್ನೂ ಆಚರಿಸಿದನು.
[29] ಇಸ್ರಾಯೇಲ್ಯರು ನಂಬಿಕೆಯಿಂದಲೇ ಕೆಂಪು ಸಮುದ್ರವನ್ನು ಒಣ ಭೂಮಿಯನ್ನು ದಾಟುವಂತೆ ದಾಟಿದರು. ಐಗುಪ್ತದೇಶದವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿದಾಗ ಮುಳುಗಿ ಹೋದರು.
[30] ನಂಬಿಕೆಯಿಂದಲೇ ಅವರು ಏಳು ದಿನಗಳ ತನಕ ಯೆರಿಕೋ ಪಟ್ಟಣದ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು.
[31] ನಂಬಿಕೆಯಿಂದಲೇ ರಾಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿಕೊಂಡು, ಅವಿಧೇಯರೊಂದಿಗೆ ನಾಶವಾಗದೆ ಉಳಿದಳು.
[32] ಇನ್ನೂ ಏನು ಹೇಳಬೇಕು? ಗಿದ್ಯೋನ್, ಬಾರಾಕ ಸಂಸೋನ, ಯೆಪ್ತಾಹ, ದಾವೀದ, ಸಮುವೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು.
[33] ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು.,
[34] ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು.
[35] ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು.
[36] ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು.
[37] ಕೆಲವರನ್ನು ಜನರು ಕಲ್ಲೆಸೆದು ಕೊಂದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು.
[38] ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು.
[39] ಇವರೆಲ್ಲರು ತಮ್ಮ ನಂಬಿಕೆಯ ಮೂಲಕ ಒಳ್ಳೆ ಸಾಕ್ಷಿಯನ್ನು ಹೊಂದಿದವರಾಗಿದ್ದರೂ, ವಾಗ್ದಾನದ ಫಲವನ್ನು ಹೊಂದಲಿಲ್ಲ.
[40] ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ, ನಾವಿಲ್ಲದೆ ಅವರು ಪರಿಪೂರ್ಣರಾಗಬಾರದೆಂದು ಸಂಕಲ್ಪಿಸಿದನು.