Skip to content
Opens in a new window
Listen to this chapter • 5:27

[1] ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೂ, ಸಹೋದರನಾದ ತಿಮೊಥೆಯನೂ, ನಮಗೆ ಪ್ರಿಯನೂ ಜೊತೆ ಸೇವಕನೂ ಆಗಿರುವ ಫಿಲೆಮೋನನೆಂಬ ನಿನಗೂ,

[2] ಮತ್ತು ಸಹೋದರಿಯಾದ ಅಪ್ಫಿಯಳಿಗೂ, ನಮ್ಮ ಸಹ ಹೋರಾಟಗಾರನಾದ ಅರ್ಖಿಪ್ಪನಿಗೂ ನಿನ್ನ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ಬರೆಯುವುದೇನಂದರೆ:

[3] ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಆಗಲಿ.

[4] ಕರ್ತನಾದ ಯೇಸುವಿನ ಮೇಲೆ ನೀನು ಇಟ್ಟಿರುವ ನಂಬಿಕೆ, ಪ್ರೀತಿ ಹಾಗೂ ದೇವಜನರ ಮೇಲಿರುವ ನಿನ್ನ ಪ್ರೀತಿಯನ್ನು ಕುರಿತು ಕೇಳಿದ್ದರಿಂದ,

[5] ನನ್ನ ಪ್ರಾರ್ಥನೆಗಳಲ್ಲಿ ಯಾವಾಗಲೂ ನಿನ್ನನ್ನು ನೆನಪು ಮಾಡಿಕೊಂಡು ನಾನು ದೇವರಿಗೆ ಸ್ತೋತ್ರವನ್ನು ಸಲ್ಲಿಸುತ್ತೇನೆ, ನಿನಗಾಗಿ ವಿಜ್ಞಾಪನೆ ಮಾಡುತ್ತೇನೆ.

[6] ಕ್ರಿಸ್ತನಲ್ಲಿ ನಮಗೆ ದೊರಕಿರುವ ಎಲ್ಲಾ ಸುವರಗಳನ್ನು ಕುರಿತು ನೀನು ತಿಳಿವಳಿಕೆಯನ್ನು ಹೊಂದುತ್ತಿರುವೆ. ಕ್ರಿಸ್ತ ನಂಬಿಕೆಯಲ್ಲಿರುವ ನಿನ್ನ ಅನ್ಯೋನ್ಯತೆಯೂ ಕ್ರಿಸ್ತನಿಗೆ ಅತಿಯಾದ ಮಹಿಮೆಯನ್ನು ಉಂಟುಮಾಡಬೇಕೆಂದು ಪ್ರಾರ್ಥಿಸುತ್ತೇನೆ.

[7] ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಪ್ರೋತ್ಸಾಹವೂ, ಪ್ರೇರಣೆಯೂ ಉಂಟಾದುದರಿಂದ ಅವರ ಬಗ್ಗೆ ಇರುವ ಪ್ರೀತಿಯಿಂದ ನನಗೆ ಬಹಳ ಆನಂದವೂ, ಸಮಾಧಾನವೂ ಉಂಟಾಯಿತು.

[8] ವೃದ್ಧನೂ, ಈಗ ಕ್ರಿಸ್ತಯೇಸುವಿನ ನಿಮಿತ್ತ ಸೆರೆಯಾಳಾಗಿರುವ ಈ ಪೌಲನೆಂಬ ನಾನು ಪ್ರೀತಿಯ ನಿಮಿತ್ತ ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ.

[9] ನೀನು ಯುಕ್ತವಾದದ್ದನ್ನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ನನಗೆ ಕ್ರಿಸ್ತನಲ್ಲಿ ಪೂರ್ಣ ಅಧಿಕಾರವಿದ್ದರೂ ಹಾಗೆ ಆಜ್ಞಾಪಿಸದೇ

[10] ನಾನು ಸೆರೆಯಲ್ಲಿ ಬಂಧಿಯಾಗಿರುವಾಗ ನನ್ನ ಮಗನಂತೆ ಬಂದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ.

[11] ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ.

[12] ನನಗೆ ಪ್ರಾಣ ಪ್ರಿಯನಂತಿರುವ ಅವನನ್ನು ನಿನ್ನ ಬಳಿಗೆ ಕಳುಹಿಸಿ ಕೊಡುತ್ತಿದ್ದೇನೆ.

[13] ನಾನು ಸುವಾರ್ತೆಯ ನಿಮಿತ್ತ ಸೆರೆಮನೆಯಲ್ಲಿರುವಾಗ ನನಗೆ ಉಪಚಾರಮಾಡುವಂತೆ ನಿನಗೆ ಬದಲಾಗಿ ಅವನನ್ನು ನನ್ನ ಬಳಿಯಲ್ಲೇ ಉಳಿಸಿಕೊಳ್ಳಬೇಕೆಂದು ಆಲೋಚಿಸಿದ್ದೆನು.

[14] ಆದರೆ ನಿನ್ನ ಉಪಕಾರವು ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ.

[15] ಅವನು ಸ್ವಲ್ಪಕಾಲ ನಿನ್ನಿಂದ ದೂರವಾಗಿಹೋದದ್ದು ಬಹುಶಃ ನೀನು ಅವನನ್ನು ನಿರಂತರವಾಗಿ ಸೇರಿಸಿಕೊಳ್ಳುವುದಕ್ಕಾಗಿಯೇ ಇರಬಹುದು;

[16] ಇನ್ನು ಮೇಲೆ ಅವನು ದಾಸನಂತಾಗಿರದೆ ದಾಸನಿಗಿಂತ ಮಿಗಿಲಾಗಿ ಉತ್ತಮವಾದ ಪ್ರಿಯ ಸಹೋದರನಂತಾಗಬೇಕು. ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ ನಿನಗೆ ಲೋಕದ ಪ್ರಕಾರವಾಗಿಯೂ, ಕರ್ತನ ಸಂಬಂಧದಲ್ಲಿಯೂ ಇನ್ನೂ ಹೆಚ್ಚು ಪ್ರಿಯನಾಗಿರುವನಲ್ಲವೇ?

[17] ನೀನು ನನ್ನನ್ನು ಜೊತೆಗಾರನೆಂದು ಭಾವಿಸುವುದಾದರೆ ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ ಅವನನ್ನು ಸೇರಿಸಿಕೋ.

[18] ಆದರೆ ಅವನಿಂದ ನಿನಗೆ ಏನಾದರೂ ನಷ್ಟವಾಗಿದ್ದರೆ ಅಥವಾ ಅವನು ನಿನಗೆ ಸಾಲವೇನಾದರೂ ತೀರಿಸಬೇಕಾಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು.

[19] ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನೇ ನನಗೆ ಹೊಣೆಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕೇ?

[20] ಹೌದು, ಸಹೋದರನೇ, ಕರ್ತನಲ್ಲಿ ನಿನ್ನಿಂದ ನನಗೆ ಪ್ರಯೋಜನವಾಗುವಂತೆ ಮಾಡು. ಕ್ರಿಸ್ತನಲ್ಲಿ ನನ್ನ ಹೃದಯವನ್ನು ಉಲ್ಲಾಸಗೊಳಿಸು.

[21] ನಿನ್ನ ವಿಧೇಯತೆಯಲ್ಲಿ ಭರವಸೆವುಳ್ಳವನಾಗಿ ಈ ಪತ್ರಿಕೆಯನ್ನು ನಿನಗೆ ಬರೆದಿದ್ದೇನೆ. ನಾನು ಹೇಳುವುದಕ್ಕಿಂತಲೂ ಹೆಚ್ಚಾಗಿಯೇ ನೀನು ಮಾಡುತ್ತಿ ಎಂದು ನನಗೆ ಗೊತ್ತಿದೆ.

[22] ಇದಲ್ಲದೆ ದೇವರು ನಿಮ್ಮ ಪ್ರಾರ್ಥನೆಗಳನ್ನು ಕೇಳಿ ನಾನು ನಿಮ್ಮ ಬಳಿಗೆ ಬರುವುದಕ್ಕೆ ಕೃಪೆ ಮಾಡುವನೆಂಬ ನಿರೀಕ್ಷೆ ನನಗುಂಟು. ಆದಕಾರಣ ನಾನು ಉಳಿದುಕೊಳ್ಳಲು ಒಂದು ಕೊಠಡಿಯನ್ನು ಸಿದ್ಧಪಡಿಸು.

[23] ಕ್ರಿಸ್ತಯೇಸುವಿನ ನಿಮಿತ್ತವಾಗಿ ನನ್ನ ಜೊತೆ ಸೆರೆಯವನಾದ ಎಪಫ್ರನೂ ನಿನಗೆ ವಂದನೆ ತಿಳಿಸುತ್ತಾನೆ.

[24] ನನ್ನ ಜೊತೆಗೆಲಸದವರಾದ ಮಾರ್ಕ, ಅರಿಸ್ತಾರ್ಕ, ದೇಮ, ಲೂಕ ಇವರೆಲ್ಲರೂ ನಿನಗೆ ವಂದನೆ ತಿಳಿಸಿದ್ದಾರೆ.

[25] ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್.