Skip to content
Opens in a new window
Listen to this chapter • 2:36

[1] ಮನುಷ್ಯರೊಳಗಿಂದ ಪ್ರತಿಯೊಬ್ಬ ಮಹಾಯಾಜಕನೂ ಆರಿಸಲ್ಪಟ್ಟು ಮನುಷ್ಯರಿಗೋಸ್ಕರ ದೇವರ ಕಾರ್ಯಗಳನ್ನು ನಡೆಸುವುದಕ್ಕಾಗಿ ನೇಮಿಸಲಾಗಿದ್ದು. ಅವನು ಪಾಪಗಳ ನಿವಾರಣೆಗಾಗಿ ಕಾಣಿಕೆಗಳನ್ನು ಮತ್ತು ಯಜ್ಞಗಳನ್ನು ಸಮರ್ಪಿಸಬೇಕು.

[2] ತಾನೂ ಸಹ ಬಲಹೀನನಾಗಿರುವುದರಿಂದ ಅವನು ಅಜ್ಞಾನಿಗಳಿಗೂ ಮತ್ತು ಮಾರ್ಗತಪ್ಪಿದವರಿಗೂ ದಯಾಪರನಾಗಿ ನಡೆದುಕೊಳ್ಳುವುದಕ್ಕೆ ಶಕ್ತನಾಗಿರುವನು.

[3] ಆದ್ದರಿಂದ, ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು.

[4] ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳುವುದಕ್ಕಾಗುವುದಿಲ್ಲ, ಆದರೆ ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ.

[5] ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ “ನೀನು ನನ್ನ ಮಗನು, ಈ ಹೊತ್ತು ನಾನು ನಿನಗೆ ತಂದೆಯಾದೆನು” ಎಂದು ದೇವರೇ ಹೇಳಿದನು.

[6] ಆತನು ಇನ್ನೊಂದು ಕಡೆಯಲ್ಲಿ, “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನು” ಎಂದು ಹೇಳುತ್ತಾನೆ.

[7] ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು.

[8] ಹೀಗೆ ಆತನು ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.

[9] ಇದಲ್ಲದೆ ಆತನು ಪರಿಪೂರ್ಣನಾಗಿ, ತನಗೆ ವಿಧೇಯರಾಗಿರುವ ಎಲ್ಲರಿಗೂ ನಿತ್ಯ ರಕ್ಷಣೆಗೆ ಕಾರಣನಾದನು.

[10] ಅಲ್ಲದೆ ಆತನು ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ ದೇವರಿಂದ ನೇಮಿಸಲ್ಪಟ್ಟನು.

[11] ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ಆದರೆ ನಿಮ್ಮ ಕಿವಿಗಳು ಮಂದವಾಗಿರುವುದರಿಂದ ಅದನ್ನು ವಿವರಿಸುವುದು ಕಷ್ಟವಾಗಿದೆ.

[12] ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ, ದೇವರ ವಾಕ್ಯಗಳ ಮೂಲಪಾಠಗಳನ್ನು ಒಬ್ಬನು ನಿಮಗೆ ಪುನಃ ಕಲಿಸಿಕೊಡಬೇಕಾಗಿದೆ. ನಿಮಗೆ ಇನ್ನೂ ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.

[13] ಹಾಲು ಕುಡಿಯುವವನು ಕೂಸಿನಂತಿದ್ದು ನೀತಿಯ ಸಂದೇಶದಲ್ಲಿ ಅನುಭವ ಇಲ್ಲದವನಾಗಿದ್ದಾನೆ.

[14] ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ, ಅಂದರೆ ತಪ್ಪು ಮತ್ತು ಸರಿಯಾದ್ದದನ್ನು ಗುರುತಿಸಲು, ಅಭ್ಯಾಸದ ಮೂಲಕ ನೈಪುಣ್ಯತೆಯನ್ನು ಹೊಂದಿದವರಿಗೋಸ್ಕರವಾಗಿದೆ.

ಇಬ್ರಿಯರಿಗೆ — Chapters