[1] ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು.
[2] ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. “ಮೆಲ್ಕಿಜೆದೇಕ್”, ಎಂಬ ಹೆಸರಿಗೆ ಮೊದಲು “ನೀತಿಯ ರಾಜ” ಎಂದೂ, ಅನಂತರ “ಸಾಲೇಮಿನ ರಾಜ” ಎಂದರೆ “ಸಮಾಧಾನದ ರಾಜ” ಎಂದೂ ಅರ್ಥ.
[3] ಅವನಿಗೆ ತಂದೆಯಿಲ್ಲ, ತಾಯಿಯಿಲ್ಲ, ವಂಶಾವಳಿಯೂ ಇಲ್ಲ. ಹುಟ್ಟು, ಸಾವು ಇಲ್ಲ. ಆತನು ದೇವರ ಕುಮಾರನಿಗೆ ಹೋಲಿಕೆಯಾಗಿದು, ನಿರಂತರವಾಗಿ ಯಾಜಕನಾಗಿರುವನು.
[4] ಈತನು ಎಷ್ಟು ಮಹಾನ್ ಆಗಿದ್ದನೆಂದು ಯೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು ತಾನು ಯುದ್ಧದಲ್ಲಿ ಗೆದ್ದು ತಂದ ಶ್ರೇಷ್ಠ ವಸ್ತುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಅವನಿಗೆ ಕೊಟ್ಟನಲ್ಲಾ.
[5] ನಿಜವಾಗಿಯೂ ಲೇವಿಯ ಕುಲದವರಲ್ಲಿ ಯಾಜಕೋದ್ಯೋಗವನ್ನು ಹೊಂದುವವರು, ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವುದಕ್ಕೆ ಧರ್ಮಶಾಸ್ತ್ರದಲ್ಲಿ ಅಪ್ಪಣೆಯಿದೆ.
[6] ಆದರೆ ಮೆಲ್ಕಿಜೆದೇಕನು ಲೇವಿಯ ವಂಶಾವಳಿಗೆ ಸೇರಿದವನಲ್ಲ, ಆದರೂ ಅಬ್ರಹಾಮನಿಂದ ದಶಮ ಭಾಗಗಳನ್ನು ತೆಗೆದುಕೊಂಡದ್ದಲ್ಲದೆ ದೇವರಿಂದ ವಾಗ್ದಾನಗಳನ್ನು ಹೊಂದಿದವನನ್ನು ಆಶೀರ್ವದಿಸಿದನು.
[7] ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನೇ ಹೆಚ್ಚಿನವನು ಎಂಬುದನ್ನು ನಿರಾಕರಿಸುವಂತಿಲ್ಲ.
[8] ದಶಮ ಭಾಗವನ್ನು ತೆಗೆದುಕೊಳ್ಳುವ ಯಾಜಕರು ಒಂದಲ್ಲಾ ಒಂದು ದಿನ ಸಾಯುತ್ತಾರೆ. ಆದರೆ ಅಬ್ರಹಾಮನಿಂದ ದಶಮ ಭಾಗವನ್ನು ತೆಗೆದುಕೊಂಡಾತನು ಚಿರಂಜೀವಿಯಾಗಿರುವನು.
[9] ಮತ್ತು ದಶಮ ಭಾಗಗಳನ್ನು ತೆಗೆದುಕೊಳ್ಳುವ ಲೇವಿಯು ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿತು.
[10] ಹೇಗೆಂದರೆ, ಮೆಲ್ಕಿಜೆದೇಕನು ಲೇವಿಯ ಮೂಲಪುರುಷನಾದ ಅಬ್ರಹಾಮನನ್ನು ಸಂಧಿಸಿದಾಗ ಲೇವಿಯು ತತ್ವರೂಪವಾಗಿ ಅಬ್ರಹಾಮನ ದೇಹದಲ್ಲಿದ್ದನು.
[11] ಇಸ್ರಾಯೇಲರಿಗೆ ಕೊಡಲಾದ ಧರ್ಮಶಾಸ್ತ್ರ ಲೇವಿಯರ ಯಾಜಕತ್ವದ ಮೇಲೆ ಆಧಾರಗೊಂಡಿದೆ. ಲೇವಿಯರ ಈ ಯಾಜಕತ್ವದಿಂದಲೇ ಸಂಪೂರ್ಣ ಸಿದ್ಧಿ ಪ್ರಾಪ್ತವಾಗುತ್ತಿದ್ದಾದರೆ, ಆರೋನನ ಪರಂಪರೆಗೆ ಸೇರದ, ಮೆಲ್ಕಿಜೆದೇಕನ ಪರಂಪರೆಗೆ ಸೇರಿದ ಬೇರೊಬ್ಬ ಯಾಜಕನು ಬರುವುದರ ಅಗತ್ಯವೇನಿತ್ತು?
[12] ಯಾಜಕತ್ವವು ಬದಲಾಗುವುದಾದರೆ ಧರ್ಮಶಾಸ್ತ್ರವೂ ಸಹ ಬದಲಾಗುವುದು ಅಗತ್ಯವಾಗಿದೆ.
[13] ಆದರೆ ಇವು ಯಾರ ಕುರಿತಾಗಿ ಹೇಳಲ್ಪಟ್ಟಿವೆಯೋ ಆತನು ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಒಬ್ಬನೂ ಯಜ್ಞವೇದಿಯ ಬಳಿ ಸೇವೆಮಾಡಿದ್ದಿಲ್ಲ.
[14] ನಮ್ಮ ಕರ್ತನು ಯೆಹೂದ ಗೋತ್ರದಲ್ಲಿ ಜನಿಸಿಬಂದವನೆಂಬುದು ಸ್ಪಷ್ಟವಾಗಿದೆ. ಈ ಗೋತ್ರಕ್ಕೆ ಸಂಬಂಧಿಸಿದಂತೆ ಮೋಶೆಯು ಯಾಜಕರ ಕುರಿತಾಗಿ ಏನನ್ನೂ ಹೇಳಲಿಲ್ಲ.
[15] ಈ ಯಾಜಕನು ಶರೀರದ ಸಂಬಂಧಪಟ್ಟಿರುವ ನಿಯಮದ ಪ್ರಕಾರವಾಗಿರದೆ, ಲಯವಾಗದ ಜೀವಶಕ್ತಿಯ ಮೇರೆಗೆ, ಮೆಲ್ಕಿಜೆದೇಕನಂತೆ ಇನ್ನೊಬ್ಬ ಯಾಜಕನು ಎಳುತ್ತಾನೆಂಬುದಾದರೆ ಅದು ಇನ್ನೂ ಹೆಚ್ಚು ಸ್ಪಷ್ಟವಾಗಿ ವ್ಯಕ್ತವಾಗುತ್ತದಲ್ಲಾ.
[17] ಆತನ ವಿಷಯದಲ್ಲಿ “ನೀನು ಸದಾಕಾಲಕ್ಕೂ ಮೆಲ್ಕಿಜೆದೇಕನ ತರಹದ ಯಾಜಕನೇ” ಎಂಬುದಾಗಿ ಧರ್ಮಶಾಸ್ತ್ರವು ಸಾಕ್ಷಿಕರಿಸುತ್ತದೆ.
[18] ಯಾಕೆಂದರೆ ಮೊದಲಿದ್ದ ಆಜ್ಞೆಯು ದುರ್ಬಲವೂ, ನಿಷ್ಪ್ರಯೋಜಕವೂ ಆಗಿರುವ ಕಾರಣದಿಂದ ಅದು ರದ್ದಾಯಿತು.
[19] ಧರ್ಮಶಾಸ್ತ್ರವು ಯಾವುದನ್ನೂ ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಬದಲಾಗಿ ದೇವರ ಸಮೀಪಕ್ಕೆ ನಡೆಸಲ್ಪಡುವಂಥ ಉತ್ತಮವಾದ ಹೊಸ ನಿರೀಕ್ಷೆಯೊಂದು ಕೊಡಲ್ಪಟ್ಟಿದೆ.
[20] ಇದು ಪ್ರತಿಜ್ಞೆ ರಹಿತವಾದ್ದದು ಅಲ್ಲ. ಇದಲ್ಲದೆ ಲೇವಿಯರು ಪ್ರತಿಜ್ಞೆಯಿಲ್ಲದೆ ಯಾಜಕರಾದರು.
[21] ಆತನಾದರೋ, ಪ್ರತಿಜ್ಞೆಯೊಡನೆ ಯಾಜಕನಾಗಿ ಮಾಡಲ್ಪಟ್ಟನು. ಆದರೆ ದೇವರು ಆತನಿಗೆ “‘ನೀನು ಸದಾಕಾಲವೂ ಯಾಜಕನಾಗಿದ್ದೀ’ ಎಂದು ನಾನು ಪ್ರಮಾಣಮಾಡಿ ನುಡಿದಿದ್ದೇನೆ ಮತ್ತು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ” ಎಂಬುದಾಗಿ ಹೇಳಿದ್ದಾನೆ.
[22] ಯೇಸು ಪ್ರತಿಜ್ಞೆಯೊಡನೆಯೇ ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಆಧಾರನಾದನು.
[23] ಲೇವಿಯರು ಶಾಶ್ವತವಾಗಿ ಉದ್ಯೋಗನಡಿಸುವುದಕ್ಕೆ ಮರಣವು ಅಡ್ಡಿಯಾಗಿರುವುದರಿಂದ ಅವರಲ್ಲಿ ಅನೇಕರು ಯಾಜಕರಾದರು.
[24] ಆತನಾದರೋ ಸದಾಕಾಲ ಜೀವಿಸುವುದರಿಂದ ಆತನ ಯಾಜಕತ್ವವನ್ನು ಶಾಶ್ವತವಾದ್ದದು.
[25] ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತನಾಗಿದ್ದಾನೆ. ಯಾಕೆಂದರೆ ಅವರಿಗೋಸ್ಕರ ವಿಜ್ಞಾಪನೆ ಮಾಡುವುದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ.
[26] ಇಂಥವನೇ ನಮಗೆ ಬೇಕಾಗಿರುವ ಮಹಾಯಾಜಕನು, ಈತನು ಪರಿಶುದ್ಧನೂ, ನಿರ್ದೋಷಿಯೂ, ನಿಷ್ಕಳಂಕನೂ, ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನು, ಆಕಾಶಮಂಡಲಗಳಿಗಿಂತ ಉನ್ನತದಲ್ಲಿರುವವನೂ ಆಗಿರುವನು.
[27] ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆ ಮೇಲೆ ಜನರ ಪಾಪಪರಿಹಾರಕ್ಕಾಗಿ ಯಜ್ಞ ಸಮರ್ಪಣೆಮಾಡುವ ಲೇವಿ ಮಹಾಯಾಜಕರಂತೆ ಈತನು ಪ್ರತಿದಿನವೂ ಯಜ್ಞಗಳನ್ನು ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಈತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.
[28] ಧರ್ಮಶಾಸ್ತ್ರವು ದುರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಕ ಮಾಡುತ್ತದೆ. ಆದರೆ ಧರ್ಮಶಾಸ್ತ್ರದ ತರುವಾಯ ಪ್ರತಿಜ್ಞೆಯೊಡನೆ ಬಂದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ಯಾಜಕನನ್ನಾಗಿ ನೇಮಕ ಮಾಡಿದೆ.