Skip to content
Opens in a new window
Listen to this chapter • 3:29

[1] ಹೀಗಿರಲಾಗಿ, ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನ ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ ಅದರಿಂದ ತಪ್ಪಿಹೋಗದಂತೆ ನಾವು ಭಯಭಕ್ತಿಯಿಂದ ಇರೋಣ.

[2] ಇಸ್ರಾಯೇಲ್ಯರಿಗೆ ದೇವರ ವಿಶ್ರಾಂತಿಯ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು. ಆದರೆ ಆ ಕಾಲದಲ್ಲಿ ಕೇಳಿದವರ ನಂಬಿಕೆಯೊಂದಿಗೆ ಇವರು ಪಾಲುಗಾರರಾಗದ ಕಾರಣ ಆ ಸಂದೇಶದಿಂದ ಅವರಿಗೆ ಪ್ರಯೋಜನವಾಗಲಿಲ್ಲ.

[3] ಈಗ ನಂಬುವವರಾದ ನಾವುಗಳೇ ಆ ವಿಶ್ರಾಂತಿಯಲ್ಲಿ ಸೇರುವವರು. ಏಕೆಂದರೆ ಲೋಕಾದಿಯಿಂದ ತನ್ನ ಸೃಷ್ಟಿಯ ಕಾರ್ಯಗಳು ಮುಗಿದುಹೋದಾಗ್ಯೂ “ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ ಎಂದು ನಾನು ಕೋಪದಿಂದ ಪ್ರಮಾಣ ಮಾಡಿದೆನು” ಎಂದು ಹೇಳಿದೆಯಲ್ಲಾ.

[4] ಎಲ್ಲಿಯೋ ಒಂದು ಕಡೆ ಏಳನೆಯ ದಿನವನ್ನು ಕುರಿತಾಗಿ, “ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂದು” ಬರೆದದೆ.

[5] “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು” ಎಂದು ಭಾಗದಲ್ಲಿ ಆತನು ಪುನಃ ಹೇಳಿದ್ದಾನೆ.

[6] ಆದ್ದರಿಂದ, ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುವುದಕ್ಕೆ ದೇವರು ಇನ್ನೂ ಅನುಮತಿಸುವವನಾಗಿದ್ದಾನೆ. ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದರು.

[7] ಪುನಃ ಬಹುಕಾಲದ ನಂತರ ಆತನು ದಾವೀದನ ಮೂಲಕ ‘ಈ ಹೊತ್ತೇ’ ಎಂದು ಬೇರೊಂದು ದಿನವನ್ನು ಗೊತ್ತುಮಾಡಿದ್ದಾನೆ. ಹೇಗೆಂದರೆ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಡುವುದಾದರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ!” ಎಂದು ಹೇಳುತ್ತಾನಷ್ಟೆ.

[8] ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ಬೇರೊಂದು ದಿನವನ್ನು ಕುರಿತು ದೇವರು ಹೇಳುತ್ತಿರಲಿಲ್ಲವಲ್ಲಾ.

[9] ಆದಕಾರಣ ದೇವರ ಜನರಿಗೆ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು.

[10] ಹೇಗೆಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.

[11] ಆದ್ದರಿಂದ ನಾವು ಈ ವಿಶ್ರಾಂತಿಯಲ್ಲಿ ಸೇರುವುದಕ್ಕೆ ಪ್ರಯತ್ನಿಸೋಣ. ನಮ್ಮಲ್ಲಿ ಒಬ್ಬರಾದರೂ ಅವರಂತೆ ಅವಿಧೇಯರಾಗಿ ಬಿದ್ದುಹೋಗದೆ ಇರೋಣ.

[12] ಏಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಸಕ್ರಿಯವಾದದ್ದು ಮತ್ತು ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.

[13] ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.

[14] ಆಕಾಶಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿದ್ದಾನೆ. ಆದುದರಿಂದ ನಮಗಿರುವ ನಂಬಿಕೆಯನ್ನು ದೃಢವಾಗಿ ಹಿಡಿಯೋಣ.

[15] ಏಕೆಂದರೆ ನಮಗಿರುವ ಮಹಾಯಾಜಕನು ನಮ್ಮ ಬಲಹೀನತೆಗಳಲ್ಲಿ ಅನುಕಂಪ ತೋರಿಸುವವನಾಗಿದ್ದಾನೆ. ಆತನು ಸರ್ವ ವಿಷಯಗಳಲ್ಲಿಯೂ ನಮ್ಮ ಹಾಗೆ ಶೋಧನೆಗೆ ಗುರಿಯಾದವನು, ಪಾಪ ಮಾತ್ರ ಮಾಡಲಿಲ್ಲವಷ್ಟೇ.

[16] ಆದುದರಿಂದ ನಾವು ತಕ್ಕ ಸಮಯದಲ್ಲಿ ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಆತನ ಕೃಪಾಸನದ ಮುಂದೆ ಬರೋಣ.

ಇಬ್ರಿಯರಿಗೆ — Chapters