Skip to content
Opens in a new window
Listen to this chapter • 4:57

[1] ಪ್ರಿಯರೇ, ಒಬ್ಬರಿಗೊಬ್ಬರು ಪ್ರೀತಿಯಲ್ಲಿ ಮುಂದುವರೆಯಿರಿ.

[2] ಪರಕೀಯರಿಗೆ ಸತ್ಕಾರ ಮಾಡುವುದನ್ನು ಅಲಕ್ಷ್ಯ ಮಾಡಬೇಡಿರಿ. ಏಕೆಂದರೆ ಅದನ್ನು ಮಾಡುವುದರ ಮೂಲಕ, ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.

[3] ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂಬಂತೆ ಅವರನ್ನು ಜ್ಞಾಪಕಮಾಡಿಕೊಳ್ಳಿರಿ. ಕಷ್ಟ ಅನುಭವಿಸುವವರ ಸಂಗಡ ನೀವು ಸಹ ಕಷ್ಟ ಅನುಭವಿಸುವವರೆಂಬಂತೆ ನೆನೆಸಿರಿ.

[4] ಎಲ್ಲರೂ ವಿವಾಹವನ್ನು ಗೌರವಿಸಬೇಕು ಮತ್ತು ದಾಂಪತ್ಯ ಜೀವನವು ಪರಿಶುದ್ಧವಾದದ್ದಾಗಿರಬೇಕು. ಏಕೆಂದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವರು.

[5] ಹಣದಾಶೆಯಿಂದ ನಿಮ್ಮ ಜೀವನ ದೂರವಾಗಿರಲಿ, ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ಏಕೆಂದರೆ ದೇವರು ಹೀಗೆ ಹೇಳಿದ್ದಾರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ!”

[6] ಆದ್ದರಿಂದ, “ಕರ್ತದೇವರು ನನ್ನ ಸಹಾಯಕರು, ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?” ಎಂದು ನಾವು ಧೈರ್ಯವಾಗಿ ಹೇಳುವೆವು.

[7] ನಿಮಗೆ ದೇವರ ವಾಕ್ಯವನ್ನು ತಿಳಿಸಿ, ನಿಮ್ಮನ್ನು ನಡೆಸಿದ ನಿಮ್ಮ ಪಾಲಕರನ್ನು ಜ್ಞಾಪಕಮಾಡಿಕೊಳ್ಳಿರಿ. ಅವರು ಜೀವಿಸಿದ ದಾರಿಯ ಅಂತ್ಯ ಫಲವನ್ನು ಆಲೋಚಿಸಿ, ಅವರ ನಂಬಿಕೆಯನ್ನು ಅನುಸರಿಸಿರಿ.

[8] ಕ್ರಿಸ್ತ ಯೇಸುವು ನಿನ್ನೆ ಇದ್ದ ಹಾಗೆ ಈ ಹೊತ್ತೂ ಇದ್ದಾರೆ, ನಿರಂತರವೂ ಹಾಗೆಯೇ ಇರುವರು.

[9] ವಿಚಿತ್ರವಾದ ವಿವಿಧ ಬೋಧನೆಗಳ ಸೆಳೆತಕ್ಕೆ ಸಿಲುಕದಿರಿ. ಏಕೆಂದರೆ ಕೃಪೆಯ ಮೂಲಕ ಹೃದಯವನ್ನು ಬಲಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳಲ್ಲಿ ಮಗ್ನರಾದವರು, ಅವುಗಳಿಂದ ಏನೂ ಪ್ರಯೋಜನ ಹೊಂದಲಿಲ್ಲ.

[10] ನಮಗೊಂದು ಬಲಿಪೀಠ ಉಂಟು. ಅದರ ಪದಾರ್ಥವನ್ನು ತಿನ್ನುವುದಕ್ಕೆ ಗುಡಾರದ ಸೇವೆ ಮಾಡುವವರಿಗೆ ಹಕ್ಕಿಲ್ಲ.

[11] ಮಹಾಯಾಜಕನು ಪಾಪದ ನಿಮಿತ್ತವಾಗಿ ಪಶುಗಳ ರಕ್ತವನ್ನು ತೆಗೆದುಕೊಂಡು ಮಹಾ ಪವಿತ್ರ ಸ್ಥಳದೊಳಗೆ ಹೋದ ಮೇಲೆ, ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಟ್ಟು ಬಿಡಲಾಗುತ್ತವಲ್ಲಾ.

[12] ಅದರಂತೆ ಯೇಸು ಸಹ ತಮ್ಮ ಸ್ವಂತ ರಕ್ತದಿಂದ ಜನರನ್ನು ಪವಿತ್ರಪಡಿಸುವುದಕ್ಕೋಸ್ಕರ ಊರ ಹೊರಗೆ ಬಾಧೆಪಟ್ಟರು.

[13] ಆದ್ದರಿಂದ ನಾವು ಯೇಸು ಹೇಗೆ ನಿಂದನೆಯನ್ನು ಹೊತ್ತುಕೊಂಡರೋ ಹಾಗೆ ಹೊತ್ತು ಪಾಳೆಯದ ಆಚೆ ಅವರ ಬಳಿಗೆ ಹೊರಟು ಹೋಗೋಣ.

[14] ಏಕೆಂದರೆ ಶಾಶ್ವತವಾದ ಪಟ್ಟಣವು ಇಲ್ಲಿ ನಮಗಿಲ್ಲ. ಮುಂದೆ ಬರುವ ಪಟ್ಟಣವನ್ನು ಹುಡುಕುತ್ತಾ ಇದ್ದೇವೆ.

[15] ಆದ್ದರಿಂದ ಯೇಸುವಿನ ಮೂಲಕವಾಗಿಯೇ ದೇವರಿಗೆ ಸ್ತೋತ್ರದ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಅದು ದೇವರ ಹೆಸರಿಗೆ ಸಲ್ಲಿಸುವ ಕೃತಜ್ಞತೆಯೆಂಬ ತುಟಿಗಳ ಫಲವೇ ಆಗಿದೆ.

[16] ಇದಲ್ಲದೆ ಒಳ್ಳೆಯದನ್ನು ಮಾಡುವುದನ್ನೂ ಪರರೊಡನೆ ಹಂಚಿಕೊಳ್ಳುವುದನ್ನೂ ಮರೆಯಬೇಡಿರಿ. ಏಕೆಂದರೆ ಇಂಥಾ ಯಜ್ಞಗಳನ್ನು ದೇವರು ಮೆಚ್ಚುತ್ತಾರೆ.

[17] ನಿಮ್ಮ ನಾಯಕರಿಗೆ ವಿಧೇಯರಾಗಿದ್ದು, ಅವರಿಗೆ ಅಧೀನರಾಗಿರಿ. ಏಕೆಂದರೆ ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಮನನೊಂದವರಾಗದೆ ಸಂತೋಷದಿಂದ ಇದನ್ನು ಮಾಡುವವರಾಗಲಿ. ಏಕೆಂದರೆ ಅವರು ಮನನೊಂದವರಾಗಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.

[18] ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಶುದ್ಧಮನಸ್ಸಾಕ್ಷಿಯಿಂದ ಪ್ರತಿಯೊಂದರಲ್ಲಿಯೂ ಪ್ರಾಮಾಣಿಕವಾಗಿ ಇರಲು ಬಯಸುತ್ತೇವೆ.

[19] ನೀವು ಪ್ರಾರ್ಥನೆ ಮಾಡುವಂತೆ, ನಾನು ನಿಮ್ಮನ್ನು ಬಹು ವಿಶೇಷವಾಗಿ ಬೇಡಿಕೊಳ್ಳುತ್ತೇನೆ. ಇದರ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ಪುನಃ ಬರುವೆನು.

[20] ಕುರಿ ಹಿಂಡಿಗೆ ಮಹಾಕುರುಬ ಆಗಿರುವ ನಮ್ಮ ಕರ್ತ ಯೇಸುವನ್ನು ನಿತ್ಯಒಡಂಬಡಿಕೆಯ ರಕ್ತದ ಮೂಲಕ ಸಮಾಧಾನದ ದೇವರು ಸತ್ತವರೊಳಗಿಂದ ಜೀವಂತವಾಗಿ ಬರಮಾಡಿದರು.

[21] ನೀವು ದೇವರ ಚಿತ್ತಾನುಸಾರವಾಗಿ ಎಲ್ಲವನ್ನೂ ಮಾಡುವಂತೆ ನಿಮ್ಮನ್ನು ಸನ್ನದ್ಧರಾಗಿ ಮಾಡಲಿ. ಕ್ರಿಸ್ತ ಯೇಸುವಿನ ಶಕ್ತಿಯ ಮೂಲಕವಾಗಿ ಪ್ರತಿಯೊಂದು ಸತ್ಕಾರ್ಯಗಳನ್ನು ತಮಗೆ ಮೆಚ್ಚಿಕೆಯಾಗುವಂತೆ ನಿಮ್ಮ ಮೂಲಕವಾಗಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಯೇಸುವಿಗೆ ಮಹಿಮೆ ಉಂಟಾಗಲಿ. ಆಮೆನ್.

[22] ಪ್ರಿಯರೇ, ಈ ಪ್ರಬೋಧನೆಗಳನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುವ ಹಾಗೆ ಸಂಕ್ಷೇಪವಾಗಿ ನಾನು ಈ ಪತ್ರವನ್ನು ಬರೆದಿದ್ದೇನೆ.

[23] ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.

[24] ನಿಮ್ಮ ಎಲ್ಲಾ ನಾಯಕರಿಗೆ, ದೇವಜನರಿಗೆ ವಂದನೆಗಳು. ಇಟಲಿಯವರು ನಿಮ್ಮನ್ನು ವಂದಿಸುತ್ತಾರೆ.

[25] ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ!

ಇಬ್ರಿಯರಿಗೆ — Chapters