[1] ಹೀಗಿರಲಾಗಿ ದೇವರ ವಿಶ್ರಾಂತಿಯಲ್ಲಿ ಸೇರುವೆವು ಎಂಬ ವಾಗ್ದಾನವು ಇನ್ನೂ ಉಳಿದಿರಲು ನಿಮ್ಮಲ್ಲಿ ಯಾರಾದರೂ ಅದನ್ನು ಹೊಂದದೆ ಇರಬಾರದು ಎಂದು ಎಚ್ಚರವಹಿಸೋಣ.
[2] ಇಸ್ರಾಯೇಲರಿಗೆ ಸುವಾರ್ತೆಯು ಸಾರೋಣವಾದಂತೆಯೇ ನಮಗೂ ಸಾರಿಹೇಳಲಾಯಿತು. ಆದರೆ ಕೇಳಿದವರು ವಿಧೇಯರಾದವರ ನಂಬಿಕೆಯಲ್ಲಿ ಭಾಗವಹಿಸದೇ ಹೋದದ್ದರಿಂದ, ಸಾರಿದ ವಾಕ್ಯವು ಅವರಿಗೆ ಪ್ರಯೋಜನವಾಗಲಿಲ್ಲ.
[3] ಈಗ ದೇವರು ಹೇಳಿದಂತೆಯೇ ವಿಶ್ವಾಸದಲ್ಲಿರುವ ನಾವು ಆ ವಿಶ್ರಾಂತಿಯಲ್ಲಿ ಪ್ರವೇಶಿಸಿದೆವು, “ ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ’ ಎಂದು ನಾನು ಕೋಪದಿಂದ ಪ್ರಮಾಣಮಾಡಿದೆನು,” ಆದರೂ ದೇವರ ಕೆಲಸವು ಜಗತ್ತಿನ ಸೃಷ್ಟಿಯ ಕಾರ್ಯದಿಂದಲೇ ಮುಗಿದಿದೆ.
[4] ಪವಿತ್ರ ವೇದದ ಯಾವುದೋ ಒಂದು ಸ್ಥಳದಲ್ಲಿ ಏಳನೆಯ ದಿವಸವನ್ನು ಕುರಿತು, “ದೇವರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು,” ಎಂತಲೂ,
[5] ಮೇಲಿನ ವಾಕ್ಯಕ್ಕೆ ಸಂಬಂಧಿಸಿ, “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ,” ಎಂದೂ ದೇವರು ಇನ್ನೊಂದು ಕಡೆ ಹೇಳಿದ್ದಾರೆ.
[6] ಆದ್ದರಿಂದ ಯಾರಿಗೆ ಮೊದಲು ಸುವಾರ್ತೆಯು ಸಾರಲಾಯಿತೋ ಅವರು ಅವಿಧೇಯತೆಯ ನಿಮಿತ್ತ ಆ ವಿಶ್ರಾಂತಿಯಲ್ಲಿ ಸೇರದೆಹೋದರು. ಆದರೂ ಕೆಲವರು ಆ ವಿಶ್ರಾಂತಿಯಲ್ಲಿ ಪ್ರವೇಶಿಸುವ ಅವಕಾಶ ಇನ್ನೂ ಇರುವುದರಿಂದ ಅವರು ಸೇರುವರು.
[7] ದೇವರು “ಈ ಹೊತ್ತೇ” ಎಂದು ಬೇರೊಂದು ದಿವಸವನ್ನು ಗೊತ್ತು ಮಾಡುತ್ತಾರೆ. ಈ ದಿನವನ್ನು ಕುರಿತೇ ಬಹುಕಾಲದ ನಂತರ ದಾವೀದನ ಮೂಲಕ ಮೊದಲೇ ಹೀಗೆ ಹೇಳಿದ್ದಾರೆ: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.”
[8] ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ದೇವರು ಬೇರೊಂದು ದಿವಸವನ್ನು ಕುರಿತು ಹೇಳುತ್ತಿರಲಿಲ್ಲವಲ್ಲ.
[9] ಆದ್ದರಿಂದ ದೇವಜನರಿಗೆ ಸಬ್ಬತ್ ಎಂಬ ವಿಶ್ರಾಂತಿಯು ಇನ್ನೂ ಇದೆ.
[10] ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿ ವಿಶ್ರಾಂತಿ ಪಡೆದಂತೆ, ದೇವರ ವಿಶ್ರಾಂತಿಯನ್ನು ಪಡೆದವರು ಸಹ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ವಿಶ್ರಾಂತಿ ಪಡೆಯುತ್ತಾರೆ.
[11] ಆದ್ದರಿಂದ ಈ ವಿಶ್ರಾಂತಿಯನ್ನು ಪಡೆಯಲು ನಾವು ಪ್ರಯತ್ನಿಸೋಣ. ನಮ್ಮಲ್ಲಿ ಯಾರೂ ಆ ಜನರ ಅವಿಧೇಯತೆಯನ್ನು ಅನುಸರಿಸಿ, ನಾಶರಾಗದೇ ಇರೋಣ.
[12] ಯಾಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಕ್ರಿಯಾತ್ಮಕವಾದದ್ದು, ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು, ಪ್ರಾಣ ಮತ್ತು ಆತ್ಮಗಳ ಕೀಲು ಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ಛೇದಿಸುವಂಥದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸಿ ತೀರ್ಪು ನೀಡುವಂಥದ್ದು ಆಗಿದೆ.
[13] ನಾವು ಲೆಕ್ಕ ಒಪ್ಪಿಸಬೇಕಾಗಿರುವ ದೇವರ ದೃಷ್ಟಿಗೆ ಸಮಸ್ತವೂ ಬಹಿರಂಗವಾದದ್ದಾಗಿಯೂ ಬಯಲಾದದ್ದಾಗಿಯೂ ಆಗಿದೆ. ಎಲ್ಲಾ ಸೃಷ್ಟಿಯಲ್ಲಿ ದೇವರ ದೃಷ್ಟಿಗೆ ಮರೆಯಾದದ್ದು ಯಾವುದೂ ಇಲ್ಲ.
[14] ಆದ್ದರಿಂದ ಪರಲೋಕಗಳನ್ನು ದಾಟಿಹೋದ ದೇವಪುತ್ರ ಯೇಸು ಎಂಬ ಶ್ರೇಷ್ಠ ಮಹಾಯಾಜಕರು ನಮಗಿರುವುದರಿಂದ ನಾವು ಅರಿಕೆಮಾಡುವ ವಿಶ್ವಾಸವನ್ನು ಬಿಗಿಯಾಗಿ ಹಿಡಿಯೋಣ.
[15] ನಮಗಿರುವ ಮಹಾಯಾಜಕ ನಮ್ಮ ಬಲಹೀನತೆಗಳನ್ನು ಕುರಿತು ಅನುಕಂಪಗೊಳ್ಳದೆ ಇರುವವರಲ್ಲ. ಅವರು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದರೂ ಪಾಪ ಮಾತ್ರ ಮಾಡಲಿಲ್ಲ.
[16] ನಾವು ಕರುಣೆಯನ್ನು ಹೊಂದುವಂತೆಯೂ ತಕ್ಕ ಸಮಯದಲ್ಲಿ ಸಹಾಯ ಮಾಡುವ ಕೃಪೆಯನ್ನು ಪಡೆಯುವಂತೆಯೂ ಧೈರ್ಯದಿಂದ ಕೃಪಾಸನದ ಬಳಿಗೆ ಬರೋಣ.