[1] ಪ್ರತಿಯೊಬ್ಬ ಮಹಾಯಾಜಕ ಮನುಷ್ಯರೊಳಗಿಂದ ಆರಿಸಲಾಗಿ ಕಾಣಿಕೆಗಳನ್ನೂ ಯಜ್ಞಗಳನ್ನೂ ಪಾಪಗಳಿಗಾಗಿ ಸಮರ್ಪಿಸಲು ಮನುಷ್ಯರ ಪರವಾಗಿ ದೇವರ ಕಾರ್ಯಗಳಿಗಾಗಿ ನೇಮಿಸಲಾಗುತ್ತಾನಲ್ಲಾ.
[2] ಮಹಾಯಾಜಕನು ತಾನೂ ಬಲಹೀನ ಆಗಿರುವುದರಿಂದ ಆತನು ಅಜ್ಞಾನಿಗಳನ್ನೂ ಮಾರ್ಗ ತಪ್ಪಿದವರನ್ನೂ ಕುರಿತು ಕನಿಕರ ತೋರಿಸಬಲ್ಲನು.
[3] ಆ ಬಲಹೀನತೆಯ ಕಾರಣದಿಂದ ಆತನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಬೇಕಾದವನಾಗಿದ್ದಾನೆ.
[4] ಆರೋನನಂತೆ ದೇವರಿಂದ ಕರೆ ಹೊಂದದ ಹೊರತು ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳಲಾರನು.
[5] ಅದೇ ರೀತಿಯಾಗಿ ಕ್ರಿಸ್ತ ಯೇಸು ಮಹಾಯಾಜಕರಾಗುವ ಮಹಿಮೆಯನ್ನು ತಮ್ಮ ಮೇಲೆ ತಾವೇ ತೆಗೆದುಕೊಳ್ಳಲಿಲ್ಲ. ಆದರೆ ದೇವರು, “ನೀನು ನನ್ನ ಪುತ್ರನು, ಇಂದು ನಾನು ನಿನ್ನ ತಂದೆಯಾಗಿದ್ದೇನೆ!” ಎಂದು ಹೇಳಿದರು.
[6] ದೇವರು ಇನ್ನೊಂದು ಸ್ಥಳದಲ್ಲಿ: “ನೀನು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಪ್ರಕಾರವಿರುವ ಯಾಜಕನು!” ಎಂದು ಹೇಳುತ್ತಾರೆ.
[7] ಕ್ರಿಸ್ತ ಯೇಸುವು ಭೂಲೋಕದ ದಿನಗಳಲ್ಲಿ ಮರಣದಿಂದ ತಪ್ಪಿಸಲು ಶಕ್ತರಾಗಿರುವ ದೇವರಿಗೆ ಬಲವಾಗಿ ಕೂಗುತ್ತಾ ಕಣ್ಣೀರಿಟ್ಟರು. ಯೇಸುವಿನ ಭಯಭಕ್ತಿಯ ನಿಮಿತ್ತ ಅವರ ಪ್ರಾರ್ಥನೆ, ವಿಜ್ಞಾಪನೆಗಳಿಗೆ ಉತ್ತರ ಸಿಕ್ಕಿತ್ತು.
[8] ಕ್ರಿಸ್ತ ಯೇಸು ದೇವರ ಪುತ್ರರಾಗಿದ್ದರೂ ತಾವು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡರು.
[9] ಹೀಗೆ ಯೇಸು ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ನಿರಂತರವಾಗಿ ರಕ್ಷಣೆಗೆ ಕಾರಣರಾದರು.
[10] ಯೇಸು ದೇವರಿಂದ ನೇಮಕಗೊಂಡು, ಮೆಲ್ಕಿಜೆದೇಕನ ಕ್ರಮದ ಪ್ರಕಾರ ಮಹಾಯಾಜಕರಾದರು.
[11] ಈ ವಿಷಯದಲ್ಲಿ ನಾವು ಹೇಳಬೇಕಾದದ್ದು ಎಷ್ಟೋ ಇದೆ. ನೀವು ಗ್ರಹಿಸ ಬಯಸದಿರುವುದರಿಂದ ಅದನ್ನೆಲ್ಲಾ ವಿವರಿಸುವುದು ಕಷ್ಟವಾಗಿದೆ.
[12] ನೀವು ಇಷ್ಟರೊಳಗೆ ಬೋಧಕರಾಗಿ ಇರಬೇಕಾಗಿತ್ತು. ಆದರೂ ನಿಮಗೆ ದೇವರ ವಾಕ್ಯಗಳ ಪ್ರಾಥಮಿಕ ಉಪದೇಶಗಳನ್ನೇ ಕಲಿಸಿಕೊಡಬೇಕಾಗಿದೆ. ನಿಮಗೆ ಹಾಲಿನ ಅವಶ್ಯಕತೆಯಿದೆಯೇ ಹೊರತು ಗಟ್ಟಿಯಾದ ಆಹಾರವಲ್ಲ.
[13] ಹಾಲು ಕುಡಿಯುವವರು ಕೂಸಿನಂತಿದ್ದು ನೀತಿ ಬೋಧನೆಯಲ್ಲಿ ಅನುಭವ ಇಲ್ಲದವರಾಗಿದ್ದಾರೆ.
[14] ಆದರೆ ಗಟ್ಟಿಯಾದ ಆಹಾರವು, ತಮ್ಮ ಜ್ಞಾನೇಂದ್ರಿಯಗಳನ್ನು ಅಭ್ಯಾಸಿಸಿ, ತರಬೇತುಗೊಂಡದ್ದರಿಂದ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ವಿವೇಚಿಸಿ ಪೂರ್ಣ ಬೆಳವಣಿಗೆ ಹೊಂದಿದವರಿಗೆ ಸೇರಿದ್ದಾಗಿದೆ.