[1] ದೇವರಿಗೂ ಕರ್ತ ಆಗಿರುವ ಯೇಸು ಕ್ರಿಸ್ತರಿಗೂ ದಾಸನಾಗಿರುವ ಯಾಕೋಬನು, ವಿವಿಧ ದೇಶಗಳಲ್ಲಿ ಚದರಿರುವ ಇಸ್ರಾಯೇಲರ ಹನ್ನೆರಡು ಗೋತ್ರದವರಿಗೆ ಬರೆಯುವುದು: ನಿಮಗೆ ಶುಭವಾಗಲಿ.
[2] ನನ್ನ ಪ್ರಿಯರೇ, ನಿಮ್ಮ ನಂಬಿಕೆಯು ವಿವಿಧ ಕಷ್ಟಗಳಿಗೆ ಗುರಿಯಾಗುವಾಗ ಅವುಗಳನ್ನು ಸಂತೋಷದಿಂದ ಎಣಿಸಿಕೊಳ್ಳಿರಿ.
[3] ನಿಮ್ಮ ನಂಬಿಕೆಯ ಪರೀಕ್ಷೆಯು ದೃಢ ನಿಷ್ಠೆಯನ್ನು ಉಂಟುಮಾಡುತ್ತದೆ ಎಂದು ತಿಳಿದಿದ್ದೀರಿ.
[4] ಆ ದೃಢ ನಿಷ್ಠೆಯು ನಿಮ್ಮಲ್ಲಿ ಪೂರ್ಣ ಕ್ರಿಯೆಯನ್ನು ಉಂಟುಮಾಡಿದಾಗ, ಆಗ ನೀವು ಪರಿಪಕ್ವತೆಗೆ ಬಂದವರೂ ಪರಿಪೂರ್ಣರೂ ಯಾವ ಕೊರತೆಯೂ ಇಲ್ಲದವರೂ ಆಗಿರುವಿರಿ.
[5] ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.
[6] ನೀವು ಕೇಳಿಕೊಂಡಾಗ ಸ್ವಲ್ಪವೂ ಸಂದೇಹ ಪಡದೆ ನಂಬಿಕೆಯಿಂದ ಕೇಳಿಕೊಳ್ಳಿರಿ. ಏಕೆಂದರೆ ಸಂದೇಹ ಪಡುವವನು ಬಿರುಗಾಳಿಯ ಬಡಿತಕ್ಕೆ ಒಳಗಾದ ಸಮುದ್ರದ ತೆರೆಯಂತೆ ಅಲೆದಾಡುತ್ತಿರುವನು.
[7] ಅಂಥವನು ತಾನು ಕರ್ತ ದೇವರಿಂದ ಏನಾದರೂ ಹೊಂದುವೆನೆಂದು ನಿರೀಕ್ಷಿಸದೆ ಇರಲಿ.
[8] ಅಂತಹ ವ್ಯಕ್ತಿ ಎರಡು ಮನಸ್ಸುಳ್ಳವನೂ ತನ್ನ ಮಾರ್ಗಗಳಲ್ಲೆಲ್ಲಾ ಚಂಚಲನೂ ಆಗಿದ್ದಾನೆ.
[9] ಹೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತಸ್ಥಿತಿಗೆ ಬಂದೆನೆಂದು ಅಭಿಮಾನಪಡಲಿ.
[10] ಐಶ್ವರ್ಯವಂತನಾದ ಸಹೋದರನು, ತಾನು ದೀನಸ್ಥಿತಿಗೆ ಬಂದೆನೆಂದು ಅಭಿಮಾನಪಡಲಿ. ಆದರೆ ಐಶ್ವರ್ಯವಂತನು ಕಾಡು ಹೂವಿನಂತೆ ಮರೆಯಾಗುವನು.
[11] ಸೂರ್ಯನು ಉದಯಿಸಿದ ತರುವಾಯ ಉಷ್ಣತೆಯಿಂದ ಗಿಡ ಬಾಡಲು, ಅದರ ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುವುದಷ್ಟೆ. ಹೀಗೆಯೇ ಐಶ್ವರ್ಯವಂತನು ತನ್ನ ದಾರಿಗಳಲ್ಲಿ ಬಾಡಿಹೋಗುವನು.
[12] ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತದೇವರು ತಮ್ಮನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ಹೊಂದುವನು.
[13] ಯಾರಿಗಾದರೂ ಶೋಧನೆ ಬಂದಾಗ, “ದೇವರು ನನ್ನನ್ನು ಶೋಧಿಸುತ್ತಿದ್ದಾರೆ ಎಂದು ಹೇಳಬಾರದು,” ಏಕೆಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರರು. ಅವರು ಯಾರನ್ನೂ ಶೋಧಿಸುವುದೂ ಇಲ್ಲ.
[14] ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಆಕರ್ಷಿಸಿ ಮರುಳುಗೊಂಡವನಾಗಿ ಶೋಧನೆಗೆ ಒಳಗಾಗುವನು.
[15] ಆಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಸಂಪೂರ್ಣವಾದ ಮೇಲೆ ಮರಣವನ್ನು ಹೆರುತ್ತದೆ.
[16] ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.
[17] ಎಲ್ಲಾ ಉತ್ತಮ ಮತ್ತು ಪೂರ್ಣವಾದ ವರಗಳೂ ಮೇಲಿನಿಂದ ಬಂದವುಗಳೇ, ಅವು ಪರಲೋಕದ ಬೆಳಕಿನ ತಂದೆಯಿಂದ ಇಳಿದು ಬರುತ್ತವೆ. ಆ ತಂದೆಯು ಬದಲಾಗುವ ನೆರಳಿನಂತೆ ಬದಲಾಗುವವರಲ್ಲ.
[18] ತಂದೆಯು ತಮ್ಮ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಲಾಗಿ ನಾವು ಅವರ ಸರ್ವ ಸೃಷ್ಟಿಗಳಲ್ಲಿ ಪ್ರಥಮ ಫಲವಾದೆವು.
[19] ನನ್ನ ಪ್ರಿಯರೇ ಇದನ್ನು ತಿಳಿಯಿರಿ, ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ತೀವ್ರವಾಗಿಯೂ ಮಾತನಾಡುವುದರಲ್ಲಿ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.
[20] ಏಕೆಂದರೆ ಮನುಷ್ಯನ ಕೋಪವು ದೇವರು ಬಯಸುವ ನೀತಿಯ ಜೀವನವನ್ನು ತರುವುದಿಲ್ಲ.
[21] ಆದಕಾರಣ ಎಲ್ಲಾ ಮಾಲಿನ್ಯವನ್ನೂ ಉಳಿದಿರುವ ದುಷ್ಟತನವನ್ನೂ ತೆಗೆದುಹಾಕಿ, ನಿಮ್ಮೊಳಗೆ ಬೇರೂರಿರುವ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.
[22] ನೀವು ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ.
[23] ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡ ಮನುಷ್ಯನಂತಿರುವನು.
[24] ಏಕೆಂದರೆ ಇವನು ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ಹೋಗಿದ್ದರೂ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು.
[25] ಆದರೆ ಸ್ವಾತಂತ್ರ್ಯವನ್ನುಂಟುಮಾಡುವ ಪರಿಪೂರ್ಣವಾದ ನಿಯಮವನ್ನು ಲಕ್ಷ್ಯವಿಟ್ಟು ನೋಡುತ್ತಲೇ ಇರುವವನು, ಆ ವಾಕ್ಯವನ್ನು ಕೇಳಿದರೂ ಮರೆತು ಹೋಗದೆ ಅದರಂತೆ ನಡೆಯುವವನಾದ್ದರಿಂದ ಅವನು ಧನ್ಯನಾಗುವನು.
[26] ನಿಮ್ಮಲ್ಲಿ ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜಕವಾಗಿದೆ.
[27] ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಅವರ ಸಂಕಟದಲ್ಲಿ ಪರಾಮರಿಸಿ, ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವುದೇ ತಂದೆ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ದೋಷವೂ ಆಗಿರುವ ಭಕ್ತಿ.