Skip to content
Opens in a new window
Listen to this chapter • 3:21

[1] ಆದ್ದರಿಂದ ಪರಿಶುದ್ಧರಾದ ಪ್ರಿಯರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಅರಿಕೆಮಾಡುವ ಅಪೊಸ್ತಲರೂ ಮಹಾಯಾಜಕರೂ ಆಗಿರುವ ಯೇಸುವನ್ನೇ ಆಲೋಚಿಸಿರಿ.

[2] ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ ಯೇಸು ತಮ್ಮನ್ನು ನೇಮಿಸಿದವರಿಗೆ ನಂಬಿಗಸ್ತರಾಗಿದ್ದಾರೆ.

[3] ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವುದರಿಂದ, ಮೋಶೆಗಿಂತ ಯೇಸು ಹೆಚ್ಚಾದ ಮಹಿಮೆಗೆ ಯೋಗ್ಯರೆಂದು ಎಣಿಸಿಕೊಂಡಿದ್ದಾರೆ.

[4] ಏಕೆಂದರೆ ಪ್ರತಿಯೊಂದು ಮನೆಯೂ ಯಾರೋ ಒಬ್ಬರಿಂದ ಕಟ್ಟಲಾಗುತ್ತದೆ. ಆದರೆ ಸಮಸ್ತವನ್ನು ಕಟ್ಟಿದವರು ದೇವರೇ.

[5] “ನಿಜವಾಗಿಯೂ ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು.” ಅವನು, ಮುಂದೆ ಪ್ರಕಟವಾಗಬೇಕಾಗಿದ್ದ ಒಬ್ಬರಿಗೆ ಸಾಕ್ಷಿಯಾಗಿದ್ದನು.

[6] ಕ್ರಿಸ್ತ ಯೇಸುವಾದರೋ ಮಗನಾಗಿ ದೇವರ ಮನೆಯ ಮೇಲೆ ನಂಬಿಗಸ್ತರಾಗಿದ್ದಾರೆ. ಆದುದರಿಂದ ನಾವು ನಮ್ಮ ಧೈರ್ಯವನ್ನೂ ನಾವು ಹೊಗಳಿಕೊಳ್ಳುವ ನಿರೀಕ್ಷೆಯನ್ನೂ ಕಡೆಯತನಕ ದೃಢವಾಗಿ ಹಿಡಿದುಕೊಂಡಿದ್ದರೆ ನಾವೇ ದೇವರ ಮನೆಯಾಗಿರುತ್ತೇವೆ.

[7] ಆದ್ದರಿಂದ ಪವಿತ್ರಾತ್ಮ ದೇವರು ಹೇಳುವ ಪ್ರಕಾರ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,

[8] ಅರಣ್ಯದಲ್ಲಿದ್ದಾಗ ನನ್ನನ್ನು ಪರೀಕ್ಷಿಸಿದ ದಿನದಲ್ಲಿ ಕೋಪಕ್ಕೆ ಈಡುಮಾಡಿದಂತೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.

[9] ನಿಮ್ಮ ಪಿತೃಗಳು ನನ್ನನ್ನು ಕೆಣಕಿ ಪರೀಕ್ಷಿಸಿದರು, ನಲವತ್ತು ವರ್ಷ ನನ್ನ ಕಾರ್ಯಗಳನ್ನು ನೋಡಿದರು.

[10] ಆದ್ದರಿಂದ ನಾನು ಆ ಸಂತತಿಯವರ ಮೇಲೆ ಕೋಪಿಸಿಕೊಂಡು, ‘ಅವರು ಯಾವಾಗಲೂ ತಮ್ಮ ಹೃದಯದಲ್ಲಿ ತಪ್ಪಿಹೋಗುತ್ತಾರೆ, ಅವರು ನನ್ನ ಮಾರ್ಗಗಳನ್ನು ತಿಳಿದುಕೊಳ್ಳಲಿಲ್ಲ.’

[11] ಆದ್ದರಿಂದ, ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ!’ ಎಂದು ನಾನು ನನ್ನ ಕೋಪದಲ್ಲಿ ಪ್ರಮಾಣಮಾಡಿದೆನು!”

[12] ಪ್ರಿಯರೇ, ದೇವರನ್ನು ಬಿಟ್ಟುಹೋಗುವ ಅವಿಶ್ವಾಸಯುಳ್ಳ ದುಷ್ಟ ಹೃದಯವು ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ.

[13] ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ, “ಈ ಹೊತ್ತು” ಎಂಬುದು ಇರುವವರೆಗೆ ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ.

[14] ಮೊದಲಿನಿಂದಿರುವ ನಮ್ಮ ನಿರೀಕ್ಷೆಯನ್ನು ಅಂತ್ಯದವರೆಗೂ ನಾವು ದೃಢವಾಗಿ ಹಿಡಿದುಕೊಳ್ಳುವುದಾದರೆ ಕ್ರಿಸ್ತ ಯೇಸುವಿನ ಭಾಗಿಗಳಾಗಿದ್ದೇವಲ್ಲಾ!

[15] ಈಗಲೇ ಹೇಳಿದಂತೆ: “ನೀವು ಈ ಹೊತ್ತು ದೇವರ ಸ್ವರವನ್ನು ಕೇಳಿದರೆ, ತಿರುಗಿಬಿದ್ದಾಗ ನಡೆದಂತೆ ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.”

[16] “ದೇವರು ನುಡಿದದ್ದನ್ನು ಕೇಳಿ ಕೋಪಗೊಂಡು ವಿರೋಧಿಸಿದವರು ಯಾರು? ಆದರೂ ಮೋಶೆಯ ಮೂಲಕ ಈಜಿಪ್ಟಿನಿಂದ ಹೊರಟು ಬಂದವರೆಲ್ಲರೂ ಹಾಗೆ ಮಾಡಲಿಲ್ಲವಲ್ಲಾ?

[17] ನಲವತ್ತು ವರ್ಷ ದೇವರು ಯಾರ ಮೇಲೆ ಕೋಪಗೊಂಡರು? ಪಾಪಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!

[18] ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲ!” ಎಂದು ಯಾರನ್ನು ಕುರಿತು ಅವರು ಪ್ರಮಾಣ ಮಾಡಿದರು, ಅವಿಧೇಯರಾದವರ ಕುರಿತಲ್ಲವೇ?

[19] ಅವರು ಸೇರಲಾರದೆ ಹೋದದ್ದು ಅವರ ಅವಿಶ್ವಾಸದಿಂದಲೇ ಎಂದು ಕಾಣುತ್ತೇವೆ.

ಇಬ್ರಿಯರಿಗೆ — Chapters