[1] ಆದ್ದರಿಂದ ಕ್ರಿಸ್ತ ಯೇಸುವಿನ ವಿಷಯವಾದ ಪ್ರಾಥಮಿಕ ಉಪದೇಶಗಳನ್ನು ಬಿಟ್ಟು, ನಿರ್ಜೀವ ಕ್ರಿಯೆಗಳಿಂದ ದೇವರ ಕಡೆಗೆ ತಿರುಗಿಕೊಳ್ಳುವುದೂ ದೇವರಲ್ಲಿ ನಂಬಿಕೆಯಿಡುವುದೂ
[2] ದೀಕ್ಷಾಸ್ನಾನಗಳ ಬೋಧನೆಯೂ ಹಸ್ತಾರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಮುಂತಾದವುಗಳನ್ನು ಪುನಃ ಅಸ್ತಿವಾರವನ್ನಾಗಿ ಹಾಕದೆ, ನಾವು ಪರಿಪೂರ್ಣತೆಗೆ ಹೋಗೋಣ.
[3] ದೇವರು ಅನುಮತಿಸಿದರೆ ನಾವು ಇದನ್ನು ಮಾಡೋಣ.
[4] ಒಂದು ಸಾರಿ ಬೆಳಕನ್ನು ಪಡೆದು, ಪರಲೋಕದ ವರವನ್ನು ರುಚಿ ನೋಡಿ, ಪವಿತ್ರಾತ್ಮ ದೇವರ ಪಾಲನ್ನು ಹೊಂದಿ,
[5] ದೇವರ ವಾಕ್ಯದ ಒಳ್ಳೆತನವನ್ನೂ ಬರುವ ಲೋಕದ ಶಕ್ತಿಯನ್ನೂ ರುಚಿ ನೋಡಿದವರು
[6] ಬಿದ್ದುಹೋದರೆ, ಅವರನ್ನು ತಿರುಗಿ ಪಶ್ಚಾತ್ತಾಪಕ್ಕೆ ನಡೆಸುವುದು ಅಸಾಧ್ಯ. ಏಕೆಂದರೆ ಅವರು ತಾವಾಗಿಯೇ ದೇವರ ಪುತ್ರ ಆಗಿರುವವರನ್ನು ಪುನಃ ಶಿಲುಬೆಗೆ ಹಾಕುವವರೂ ಅವರನ್ನು ಬಹಿರಂಗವಾಗಿ ಅವಮಾನ ಪಡಿಸುವವರೂ ಆಗಿರುತ್ತಾರೆ.
[7] ಭೂಮಿಯು ತನ್ನ ಮೇಲೆ ಆಗಾಗ್ಗೆ ಬೀಳುವ ಮಳೆಯನ್ನು ಹೀರಿಕೊಂಡು ಅದು ತನ್ನ ಒಡೆಯನಿಗೆ ಯೋಗ್ಯವಾದ ಬೆಳೆಯನ್ನು ಕೊಡುವುದಾದರೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ.
[8] ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ, ನಿಷ್ಪ್ರಯೋಜಕವಾದದ್ದಾಗಿ ಶಾಪಕ್ಕೆ ಗುರಿಯಾಗಿ, ಕೊನೆಗದು ಬೆಂಕಿಗೆ ತುತ್ತಾಗುತ್ತದೆ.
[9] ಪ್ರಿಯರೇ, ನಾವು ಈ ರೀತಿಯಾಗಿ ಮಾತನಾಡಿದರೂ ನಿಮ್ಮ ವಿಷಯವಾಗಿಯೂ ನೀವು ಉತ್ತಮವಾದವುಗಳನ್ನೂ ರಕ್ಷಣೆಯ ಕಾರ್ಯಗಳನ್ನೂ ಹೊಂದಿದ್ದೀರಿ ಎಂಬ ನಿಶ್ಚಯ ನಮಗಿದೆ.
[10] ಅವರು ನಿಮ್ಮ ಸೇವೆಯನ್ನೂ ನೀವು ಪರಿಶುದ್ಧರಿಗೆ ಸೇವೆಮಾಡಿದ್ದರಲ್ಲಿ ಇನ್ನೂ ಮಾಡುತ್ತಿರುವುದರಲ್ಲಿ ದೇವರ ಹೆಸರಿನ ಕಡೆಗೆ ತೋರಿಸಿದ ಪ್ರೀತಿಯನ್ನೂ ಅವರು ಮರೆಯುವುದಕ್ಕೆ ದೇವರು ಅನ್ಯಾಯಗಾರರಲ್ಲ.
[11] ಅಂತ್ಯದವರೆಗೆ ನೀವು ನಿಮ್ಮ ನಿರೀಕ್ಷೆಯ ಪೂರ್ಣ ನಿಶ್ಚಯವನ್ನು ಗ್ರಹಿಸುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ.
[12] ನೀವು ಸೋಮಾರಿಗಳಾಗಿರಬಾರದು. ವಿಶ್ವಾಸದಿಂದಲೂ ತಾಳ್ಮೆಯಿಂದಲೂ ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವವರನ್ನು ಅನುಸರಿಸುವವರಾಗಿರಬೇಕು.
[13] ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತಮಗಿಂತಲೂ ಹೆಚ್ಚು ದೊಡ್ಡವರಾರೂ ಇಲ್ಲದ್ದರಿಂದ ತಮ್ಮ ಮೇಲೆ ಆಣೆಯಿಟ್ಟು,
[14] “ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು, ನಿನ್ನ ಸಂತಾನವನ್ನು ಹೆಚ್ಚಿಸೇ ಹೆಚ್ಚಿಸುವೆನು,” ಎಂದು ಹೇಳಿದರಷ್ಟೆ.
[15] ಹೀಗೆ ಅಬ್ರಹಾಮನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಪಡೆದುಕೊಂಡನು.
[16] ಮನುಷ್ಯರು ನಿಜವಾಗಿಯೂ ದೊಡ್ಡವರ ಮೇಲೆ ಆಣೆ ಇಡುತ್ತಾರಷ್ಟೆ. ಆಣೆಯನ್ನು ದೃಢಪಡಿಸುವುದು ಪ್ರತಿಯೊಂದು ವಿವಾದಕ್ಕೂ ಅಂತ್ಯವಾಗಿರುವುದು.
[17] ದೇವರು ತಮ್ಮ ಮಾರ್ಪಡದ ಉದ್ದೇಶವನ್ನು ವಾಗ್ದಾನದ ಬಾಧ್ಯಸ್ಥರಿಗೆ ಇನ್ನೂ ಹೆಚ್ಚಾಗಿಯೇ ತೋರಿಸಬೇಕೆಂದು ಆಣೆಯಿಟ್ಟು ಸ್ಥಿರಪಡಿಸಿದರು.
[18] ದೇವರ ವಾಗ್ದಾನ ಮತ್ತು ಆಣೆ ಇವೆರಡೂ ಬದಲಾಗದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಸುಳ್ಳಾಡುವವರಲ್ಲ. ಇದರಿಂದಾಗಿ, ದೇವರ ಆಶ್ರಯವನ್ನು ಹೊಂದುವುದಕ್ಕೆ ಓಡಿಬಂದಿರುವ ನಾವು, ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡಿದುಕೊಳ್ಳಲು ಬಲವಾದ ಉತ್ತೇಜನ ಉಂಟಾಯಿತು.
[19] ಈ ನಿರೀಕ್ಷೆಯು ನಮ್ಮ ಆತ್ಮಕ್ಕೆ ನಿಶ್ಚಯವಾದದ್ದೂ ಸ್ಥಿರವಾದದ್ದೂ ಆಗಿರುವ ಲಂಗರದ ಹಾಗಿದೆ. ಅದು ಅತಿ ಪರಿಶುದ್ಧಸ್ಥಳದ ತೆರೆಯ ಒಳಗಡೆ ಪ್ರವೇಶಿಸುವಂಥದ್ದೂ ಆಗಿದೆ.
[20] ಯೇಸು ಸದಾಕಾಲವೂ ಮೆಲ್ಕಿಜೆದೇಕನ ಕ್ರಮದ ಮಹಾಯಾಜಕರಾಗಿ ಅತಿ ಪರಿಶುದ್ಧ ಸ್ಥಳಕ್ಕೆ ಮುಂದಾಗಿ ಹೋಗಿ ಯೇಸು ನಮ್ಮ ಪರವಾಗಿ ಪ್ರವೇಶಿಸಿದ್ದಾರೆ.