Skip to content
Opens in a new window
Listen to this chapter • 6:12

[1] ಆದಕಾರಣ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಇರುವುದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನೂ ನಾವು ಎಸೆದುಬಿಟ್ಟು,

[2] ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವರೂ ಅದನ್ನು ಪರಿಪೂರ್ಣಗೊಳಿಸುವವರೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ನಮ್ಮ ಮುಂದೆ ಇಟ್ಟಿರುವ ಓಟವನ್ನು ಸಹನೆಯಿಂದ ಓಡೋಣ. ಯೇಸು ತಮ್ಮ ಮುಂದೆ ಇಟ್ಟಿದ್ದ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ, ಈಗ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿದ್ದಾರೆ.

[3] ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡ ಯೇಸುವನ್ನು ಕುರಿತು ನೀವು ಯೋಚಿಸಿರಿ.

[4] ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ, ಇನ್ನೂ ರಕ್ತವನ್ನು ಸುರಿಸುವಷ್ಟು ಅದನ್ನು ಎದುರಿಸಲಿಲ್ಲ.

[5] ಒಬ್ಬ ತಂದೆ ಮಕ್ಕಳಾಗಿರುವ ನಿಮಗೆ ಎಚ್ಚರಿಸಲಾದ ಮಾತನ್ನು ನೀವು ಮರೆತಿದ್ದೀರಿ. ಅದು, “ನನ್ನ ಮಗನೇ, ಕರ್ತದೇವರ ಶಿಕ್ಷೆಯನ್ನು ಹಗುರವಾಗಿ ಎಣಿಸಬೇಡ. ಅವರು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.

[6] ಏಕೆಂದರೆ, ಕರ್ತದೇವರು ಯಾರನ್ನು ಪ್ರೀತಿಸುತ್ತಾರೋ ಅವರನ್ನು ಶಿಕ್ಷಿಸುತ್ತಾರೆ. ತಾವು ಸ್ವೀಕರಿಸುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾರೆ!” ಎಂಬುದಾಗಿದೆ.

[7] ಶಿಸ್ತಿಗಾಗಿ ಕಷ್ಟವನ್ನು ನೀವು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳೆಂದು ನಡೆಸಿಕೊಳ್ಳುತ್ತಾರೆ. ಏಕೆಂದರೆ ತಂದೆಯಿಂದ ಶಿಸ್ತುಹೊಂದದ ಮಕ್ಕಳೆಲ್ಲಿ?

[8] ನೀವು ಶಿಕ್ಷೆ ಹೊಂದುವವರೆಲ್ಲರೊಂದಿಗೆ ಪಾಲುಗಾರರಾಗಿರದಿದ್ದರೆ, ನೀವು ಅಕ್ರಮವಾಗಿ ಹುಟ್ಟಿದ ಮಕ್ಕಳೇ ಹೊರತು ನಿಜ ಮಕ್ಕಳಲ್ಲ.

[9] ಇದು ಮಾತ್ರವಲ್ಲದೆ, ನಮ್ಮನ್ನು ಶಿಕ್ಷಿಸಿದ ಇಹಲೋಕದ ಶಾರೀರಿಕ ತಂದೆಗಳನ್ನು ನಾವು ಸನ್ಮಾನಿಸಿದೆವಷ್ಟೆ. ಆತ್ಮಗಳಿಗೆ ತಂದೆಯಾದ ದೇವರಿಗೆ ನಾವು ಇನ್ನೂ ಎಷ್ಟೋ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ?

[10] ನಮ್ಮ ತಂದೆಯಾದವರು ತಮಗೆ ಒಳ್ಳೆಯದೆಂದು ತಿಳಿದಾಗ, ಸ್ವಲ್ಪಕಾಲ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ತಮ್ಮ ಪವಿತ್ರತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಒಳ್ಳೆಯದಕ್ಕಾಗಿಯೇ ಶಿಕ್ಷಿಸುತ್ತಾರೆ.

[11] ಯಾವ ಶಿಕ್ಷೆಯಾದರೂ ಆ ಸಮಯಕ್ಕೆ ಸಂತೋಷಕರವಾಗಿ ತೋಚದೆ, ದುಃಖಕರವಾಗಿ ತೋಚುತ್ತದೆ. ತರುವಾಯ, ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನವುಳ್ಳ ನೀತಿಯ ಫಲವನ್ನು ಕೊಡುತ್ತದೆ.

[12] ಆದ್ದರಿಂದ, ಜೋತು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ಬಲಪಡಿಸಿರಿ.

[13] “ನಿಮ್ಮ ಪಾದಗಳಿಗೆ ನೇರವಾದ ದಾರಿಯನ್ನು ಮಾಡಿರಿ.” ಹೀಗೆ ಮಾಡಿದರೆ ಕುಂಟ ಕಾಲು ಉಳುಕಿಹೋಗದೆ ವಾಸಿಯಾಗುವುದು.

[14] ಎಲ್ಲರ ಸಂಗಡ ಸಮಾಧಾನದಿಂದ ಜೀವಿಸಲು ಮತ್ತು ಪವಿತ್ರರಾಗಿರಲು ಸರ್ವಪ್ರಯತ್ನ ಮಾಡಿರಿ. ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣುವುದಿಲ್ಲ.

[15] ನಿಮ್ಮಲ್ಲಿ ಯಾರೂ ದೇವರ ಕೃಪೆಗೆ ತಪ್ಪಿಹೋಗದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಅದರಿಂದ ಅನೇಕರು ಮಲಿನರಾಗದಂತೆಯೂ

[16] ಯಾವ ಕಾಮುಕರಾಗಲಿ, ಏಸಾವನಂಥ ಪ್ರಾಪಂಚಿಕರಾಗಲಿ ನಿಮ್ಮಲ್ಲಿ ಇರದಂತೆಯೂ ಜಾಗ್ರತೆಯಿಂದ ನೋಡಿಕೊಳ್ಳಿರಿ. ಅವನು ಒಂದು ತುತ್ತು ಅನ್ನಕ್ಕಾಗಿ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು.

[17] ತರುವಾಯ ಅವನು ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಬಯಸಿ, ಕಣ್ಣೀರನ್ನು ಸುರಿಸುತ್ತಾ ಬೇಡಿಕೊಂಡರೂ ಪಶ್ಚಾತ್ತಾಪಕ್ಕೆ ಮಾರ್ಗವಿಲ್ಲದೆ ನಿರಾಕರಿಸಲಾದವನೆಂದು ನೀವು ಬಲ್ಲಿರಿ.

[18] ನೀವು ಮುಟ್ಟಬಹುದಾದ ಮತ್ತು ಬೆಂಕಿಹತ್ತಿದಂಥ ಬೆಟ್ಟಕ್ಕೂ ಮಬ್ಬಿಗೂ ಕತ್ತಲೆಗೂ ಬಿರುಗಾಳಿಗೂ

[19] ತುತೂರಿಯ ಧ್ವನಿಗೂ ಮಾತುಗಳ ಶಬ್ದಕ್ಕೂ ಬಂದವರಲ್ಲ. ಆ ಶಬ್ದವನ್ನು ಕೇಳಿದವರು, ತಮಗೆ ಇನ್ನು ಒಂದು ಮಾತನ್ನಾದರೂ ಹೇಳಬಾರದೆಂದು ಬೇಡಿಕೊಂಡರು.

[20] ಏಕೆಂದರೆ, “ಯಾವ ಮೃಗವಾದರೂ ಬೆಟ್ಟವನ್ನು ಮುಟ್ಟಿದರೆ, ಅದನ್ನು ಕಲ್ಲೆಸೆದು ಕೊಲ್ಲಬೇಕು, ಇಲ್ಲವೆ ಈಟಿಯಿಂದ ತಿವಿಯಬೇಕು,” ಎಂದು ಆಜ್ಞಾಪಿಸಿದ್ದನ್ನು ಅವರು ತಾಳಲಾರದೆ ಹೋದರು.

[21] ಇದಲ್ಲದೆ ಆ ದೃಶ್ಯವು ಎಷ್ಟೋ ಭಯಂಕರವಾದದ್ದರಿಂದ ಮೋಶೆಯು, “ನಾನು ಭಯದಿಂದಲೂ ನಡುಕದಿಂದಲೂ ತುಂಬಿದವನಾಗಿದ್ದೇನೆ!” ಎಂದು ಹೇಳಿದನು.

[22] ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವವುಳ್ಳ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಆನಂದಭರಿತ ಅಸಂಖ್ಯಾತ ದೇವದೂತಗಣಗಳ ಬಳಿಗೂ

[23] ಪರಲೋಕದಲ್ಲಿ ಹೆಸರು ದಾಖಲಾಗಿರುವ ಮಂಡಳಿಗೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೂ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ ಪರಿಪೂರ್ಣವಾಗಿರುವ ನೀತಿವಂತರ ಆತ್ಮಗಳ ಬಳಿಗೂ

[24] ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ, ಪ್ರೋಕ್ಷಿಸಿದ ರಕ್ತದ ಬಳಿಗೂ ಬಂದಿದ್ದೀರಿ.

[25] ಮಾತನಾಡುವ ದೇವರನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಭೂಮಿಯ ಮೇಲೆ ಎಚ್ಚರಿಸಿದವರನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ, ಪರಲೋಕದಿಂದ ಎಚ್ಚರಿಸುವ ದೇವರಿಂದ ನಾವು ತೊಲಗಿ ಹೋದರೆ, ಹೇಗೆ ತಾನೆ ದಂಡನೆಯಿಂದ ನಾವು ತಪ್ಪಿಸಿಕೊಳ್ಳಬಲ್ಲೆವು?

[26] ಆ ಕಾಲದಲ್ಲಿ ದೇವರ ಧ್ವನಿಯು ಭೂಮಿಯನ್ನು ಕದಲಿಸಿತು. ಈಗಲಾದರೋ, “ಇನ್ನೊಂದು ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ!” ಎಂದು ದೇವರು ವಾಗ್ದಾನಮಾಡಿದ್ದಾರೆ.

[27] “ಇನ್ನೂ ಒಂದು ಸಾರಿ,” ಎಂಬ ಮಾತು ನಿರ್ಮಿತವಾಗಿರುವ ಕದಲುವ ವಸ್ತುಗಳು ತೆಗೆದುಹಾಕಲಾಗುವುದು ಎಂದೂ ಕದಲಿಸದೆ ಇರುವ ವಸ್ತುಗಳು ಸ್ಥಿರವಾಗಿರುವುದು ಎಂಬುದನ್ನು ಸೂಚಿಸುತ್ತದೆ.

[28] ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು, ಸ್ವೀಕರಿಸುವವರಾಗಿದ್ದುದರಿಂದ ನಾವು ಕೃತಜ್ಞತೆಯಿಂದ ಇರೋಣ. ನಾವು ದೇವರಿಗೆ ಭಯಭಕ್ತಿಯಿಂದ ಕೂಡಿದ ಮೆಚ್ಚಿಕೆಯುಳ್ಳ ಸೇವೆಯನ್ನು ಸಲ್ಲಿಸುವಂತೆ ಕೃತಜ್ಞತೆಯನ್ನು ತೋರಿಸುವವರಾಗಿರೋಣ.

[29] ಏಕೆಂದರೆ ನಮ್ಮ, “ದೇವರು ದಹಿಸುವ ಅಗ್ನಿಯಾಗಿದ್ದಾರೆ.”

ಇಬ್ರಿಯರಿಗೆ — Chapters