[1] ಗತಕಾಲದಲ್ಲಿ ನಮ್ಮ ಪಿತೃಗಳ ಸಂಗಡ ವಿವಿಧ ರೀತಿಯಲ್ಲಿಯೂ ಅನೇಕಬಾರಿ ಪ್ರವಾದಿಗಳ ಮುಖಾಂತರವೂ ಮಾತನಾಡಿದ ದೇವರು,
[2] ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ಮುಖಾಂತರ ಮಾತನಾಡಿದ್ದಾರೆ. ಈ ಕ್ರಿಸ್ತ ಯೇಸುವನ್ನೇ ದೇವರು ಎಲ್ಲಕ್ಕೂ ಬಾಧ್ಯರನ್ನಾಗಿ ನೇಮಿಸಿದರು. ಇವರ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದರು.
[3] ಈ ಕ್ರಿಸ್ತ ಯೇಸುವೇ ದೇವರ ಮಹಿಮೆಯ ಪ್ರಕಾಶವೂ ಅವರ ವ್ಯಕ್ತಿತ್ವದ ಪ್ರತಿರೂಪವಾಗಿರುವ ದೇವಪುತ್ರ ಆಗಿದ್ದಾರೆ. ಈ ಕ್ರಿಸ್ತ ಯೇಸುವೇ ತಮ್ಮ ಶಕ್ತಿಯುತ ವಾಕ್ಯದಿಂದ ಸಮಸ್ತಕ್ಕೂ ಆಧಾರವಾಗಿದ್ದಾರೆ. ಕ್ರಿಸ್ತ ಯೇಸು ತಾವಾಗಿಯೇ ನಮ್ಮ ಪಾಪಗಳನ್ನು ಶುದ್ಧಿಮಾಡಿ ಉನ್ನತದೊಳಗೆ ಮಹೋನ್ನತ ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.
[4] ದೇವಪುತ್ರ ಆಗಿರುವ ಕ್ರಿಸ್ತ ಯೇಸುವು ದೇವದೂತರಿಗಿಂತಲೂ ಶ್ರೇಷ್ಠರಾಗಿದ್ದಾರೆ. ಅವರಿಗಿಂತ ಅತಿ ಶ್ರೇಷ್ಠ ಹೆಸರನ್ನು ಬಾಧ್ಯವಾಗಿ ಹೊಂದಿದವರೂ ಆಗಿದ್ದಾರೆ.
[5] ದೇವರು ತಮ್ಮ ದೂತರೊಳಗೆ ಯಾರಿಗಾದರೂ ಹೀಗೆ ಎಂದಾದರೂ ಹೇಳಿದ್ದುಂಟೋ, “ನೀನು ನನ್ನ ಪುತ್ರನು; ಇಂದು ನಾನು ನಿನ್ನ ತಂದೆಯಾಗಿದ್ದೇನೆ!” ಎಂದೂ, “ನಾನು ಆತನ ತಂದೆಯಾಗಿರುವೆನು; ಆತನು ನನಗೆ ಮಗನಾಗಿರುವನು!”
[6] ಇದಲ್ಲದೆ ಮೊದಲು ಹುಟ್ಟಿದವರನ್ನು ದೇವರು ಲೋಕದೊಳಗೆ ಬರಮಾಡುವಾಗ, “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ!” ಎಂದು ಹೇಳಿದ್ದಾರೆ.
[7] ದೂತರ ವಿಷಯದಲ್ಲಿ ದೇವರು ಮಾತನಾಡುವಾಗ, “ಅವರು ತಮ್ಮ ದೂತರನ್ನು ಆತ್ಮಗಳಾಗಿಯೂ ತಮ್ಮ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾರೆ!” ಎಂದು ಹೇಳಿದ್ದಾರೆ.
[8] ತಂದೆ ದೇವರು ತಮ್ಮ ಪುತ್ರ ಆಗಿರುವವರ ವಿಷಯದಲ್ಲಿ ಹೀಗೆ ಹೇಳಿದ್ದಾರೆ: “ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿಮ್ಮ ರಾಜದಂಡವಾಗಿದೆ.
[9] ನೀವು ನೀತಿಯನ್ನು ಪ್ರೀತಿಸಿದ್ದೀರಿ. ಅನೀತಿಯನ್ನು ದ್ವೇಷಿಸಿದ್ದೀರಿ; ಆದ್ದರಿಂದ ದೇವರೇ, ನಿಮ್ಮ ದೇವರು ನಿಮ್ಮನ್ನು ನಿಮ್ಮ ಜೊತೆಗಾರರಿಗಿಂತ ಮಿಗಿಲಾಗಿ ಆನಂದದ ತೈಲದಿಂದ ಅಭಿಷೇಕಿಸಿದ್ದಾರೆ!”
[10] ಇದಲ್ಲದೆ ದೇವರು ಹೀಗೆಂದರು: “ಕರ್ತದೇವರೇ, ಆದಿಯಲ್ಲಿ ನೀವು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀರಿ, ಆಕಾಶಗಳು ನಿಮ್ಮ ಕೈಕೆಲಸಗಳಾಗಿವೆ.
[11] ಅವು ನಾಶವಾಗುವವು. ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.
[12] ಅವುಗಳನ್ನು ಮೇಲಂಗಿಯಂತೆ ಮಡಿಸುತ್ತಿರಿ, ಅವು ವಸ್ತ್ರದಂತೆ ಮಾರ್ಪಡುತ್ತವೆ. ಆದರೆ ನೀವು ಏಕರೀತಿಯಾಗಿದ್ದೀರಿ. ನಿಮ್ಮ ವರ್ಷಗಳು ಮುಗಿದುಹೋಗುವುದಿಲ್ಲ!”
[13] ಆದರೆ ದೇವದೂತರಲ್ಲಿ ಯಾರ ವಿಷಯದಲ್ಲಿಯಾದರೂ, “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು!” ಎಂಬುದಾಗಿ ದೇವರು ಎಂದಾದರೂ ಹೇಳಿದ್ದುಂಟೇ?
[14] ಈ ದೇವದೂತರೆಲ್ಲರೂ ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲಾದ ಸೇವೆಯ ಆತ್ಮಗಳು ಅಲ್ಲವೇ?