[1] ನಂಬಿಕೆ ಎಂಬುದು ನಾವು ನಿರೀಕ್ಷಿಸುವವುಗಳ ನಿಶ್ಚಯವೂ ಕಾಣದವುಗಳ ನಿದರ್ಶನವೂ ಆಗಿದೆ.
[2] ಹಿರಿಯರು ನಂಬಿಕೆಯಿಂದಲೇ ಒಳ್ಳೆಯ ಸಾಕ್ಷಿಹೊಂದಿದರು.
[3] ವಿಶ್ವವು ದೇವರ ವಾಕ್ಯದಿಂದ ಉಂಟಾದವೆಂದೂ ಕಾಣುವಂತವುಗಳು ಕಾಣದವುಗಳಿಂದ ಉಂಟಾದವು ಎಂಬುದನ್ನು ನಾವು ನಂಬಿಕೆಯಿಂದ ತಿಳಿದುಕೊಂಡದ್ದರಿಂದ ಗ್ರಹಿಸುತ್ತೇವೆ.
[4] ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಉತ್ತಮ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ಅವನು ನೀತಿವಂತನೆಂದು ಸಾಕ್ಷಿಹೊಂದಿದನು. ದೇವರು ಸಹ ಅವನ ಕಾಣಿಕೆಗಳನ್ನು ಸ್ವೀಕಾರಮಾಡಿದರು. ಅವನು ಸತ್ತು ಹೋಗಿದ್ದರೂ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
[5] ನಂಬಿಕೆಯಿಂದಲೇ ಹನೋಕನು ಮರಣ ಹೊಂದದೆ, ಒಯ್ಯಲಾದನು. “ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.” ಅವನು ಒಯ್ಯಲಾಗುವುದಕ್ಕಿಂತ ಮುಂಚೆ ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿಹೊಂದಿದನು.
[6] ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವರು, ದೇವರು ಇದ್ದಾರೆಂತಲೂ ತಮ್ಮನ್ನು ಜಾಗ್ರತೆಯಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾರೆಂತಲೂ ನಂಬಬೇಕು.
[7] ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಕೆ ಪಡೆದು ಭಕ್ತಿಯಲ್ಲಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧಮಾಡಿದನು. ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಗೆ ಅನುಸಾರವಾಗಿ ನಂಬಿಕೆಯಿಂದ ಬರುವ ನೀತಿಗೆ ಬಾಧ್ಯನಾದನು.
[8] ನಂಬಿಕೆಯಿಂದಲೇ ಅಬ್ರಹಾಮನು ಕರೆಕೊಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.
[9] ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗಲೂ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರು ಸಹ ಗುಡಾರಗಳಲ್ಲಿ ವಾಸಿಸಿದರು.
[10] ಏಕೆಂದರೆ ದೇವರು ಯಾವುದನ್ನು ಕಟ್ಟುವವರೂ ಮಾಡುವವರೂ ಆಗಿದ್ದಾರೋ ಆ ಅಸ್ತಿವಾರಗಳುಳ್ಳ ಪಟ್ಟಣಕ್ಕೋಸ್ಕರ ಅವರು ಎದುರುನೋಡುತ್ತಿದ್ದರು.
[11] ನಂಬಿಕೆಯಿಂದಲೇ ಸಾರಳು ಸಹ ವಾಗ್ದಾನ ಮಾಡಿದ ದೇವರು ನಂಬಿಗಸ್ತರು ಎಂದೆಣಿಸಿ ತಾನು ಪ್ರಾಯಮೀರಿದವಳಾಗಿದ್ದರೂ ಗರ್ಭವತಿಯಾಗುವುದಕ್ಕೆ ಸಾಮರ್ಥ್ಯ ಹೊಂದಿ, ಒಂದು ಮಗುವನ್ನು ಹೆತ್ತಳು.
[12] ಆದ್ದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆ ಗುಂಪುಗುಂಪಾಗಿಯೂ ಸಮುದ್ರ ತೀರದಲ್ಲಿರುವ ಮರಳಿನಂತೆ ಅಸಂಖ್ಯವಾಗಿಯೂ ಸಂತತಿಯವರು ಹುಟ್ಟಿದರು.
[13] ಈ ಎಲ್ಲಾ ಜನರು ಮರಣ ಹೊಂದುವಾಗಲೂ ವಿಶ್ವಾಸದಿಂದ ಜೀವಿಸುವವರಾಗಿದ್ದರು. ವಾಗ್ದಾನದ ಸಂಗತಿಗಳನ್ನು ಅವರು ಹೊಂದಲಿಲ್ಲ. ಅವುಗಳನ್ನು ಅವರು ದೂರದಿಂದಲೇ ನೋಡಿ ಸ್ವಾಗತಿಸಿದರು. ತಾವು ಭೂಮಿಯ ಮೇಲೆ ಪರದೇಶದವರೂ ಅಪರಿಚಿತರೂ ಆಗಿದ್ದೇವೆಂದು ಒಪ್ಪಿಕೊಂಡರು.
[14] ಇಂಥಾ ಸಂಗತಿಗಳನ್ನು ಹೇಳುವ ಜನರು ತಮ್ಮ ಸ್ವಂತ ದೇಶಕ್ಕಾಗಿ ಎದುರುನೋಡುತ್ತಿದ್ದರು.
[15] ಒಂದು ವೇಳೆ ತಾವು ಬಿಟ್ಟುಬಂದ ದೇಶವನ್ನು ಕುರಿತು ಅವರು ಯೋಚಿಸುತ್ತಿದ್ದರೆ, ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು.
[16] ಅದರ ಬದಲು ಅವರು ಅದಕ್ಕಿಂತ ಉತ್ತಮವಾದ ಪರಲೋಕದ ದೇಶವನ್ನು ನಿರೀಕ್ಷಿಸಿದರು. ಆದ್ದರಿಂದ ದೇವರು ಅವರ ದೇವರೆನಿಸಿಕೊಳ್ಳುವುದಕ್ಕೆ ನಾಚಿಕೊಳ್ಳದೆ ಅವರಿಗಾಗಿ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾರೆ.
[17] ಅಬ್ರಹಾಮನು ಪರೀಕ್ಷೆಗೆ ಒಳಗಾದಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು.
[18] ಅವನ ವಿಷಯದಲ್ಲಿ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ದೇವರು ಅವನಿಗೆ ಹೇಳಿದ್ದರೂ ವಾಗ್ದಾನ ಸ್ವೀಕರಿಸಿದವನು ತನ್ನ ಒಬ್ಬನೇ ಮಗನನ್ನು ಬಲಿಗಾಗಿ ಅರ್ಪಿಸಿದನು.
[19] ತನ್ನ ದೇವರು ಸತ್ತವರೊಳಗಿಂದ ಎಬ್ಬಿಸಲು ಸಮರ್ಥರು ಎಂದು ಅಬ್ರಹಾಮನು ತಿಳಿದಿದ್ದನು. ಅವನು ಇಸಾಕನನ್ನು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಹೊಂದಿದನು.
[20] ನಂಬಿಕೆಯಿಂದಲೇ ಇಸಾಕನು ಮುಂದೆ ಬರಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು.
[21] ನಂಬಿಕೆಯಿಂದಲೇ ಯಾಕೋಬನು ಮರಣ ಹೊಂದುವ ಸಮಯದಲ್ಲಿ ಯೋಸೇಫನ ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
[22] ನಂಬಿಕೆಯಿಂದಲೇ ಯೋಸೇಫನು ಸಾಯುವಾಗ ಇಸ್ರಾಯೇಲರು ಹೊರಡುವುದನ್ನು ಕುರಿತು ಮಾತನಾಡಿ ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆಕೊಟ್ಟನು.
[23] ನಂಬಿಕೆಯಿಂದಲೇ ಮೋಶೆ ಹುಟ್ಟಿದಾಗ ಕೂಸು ಸುಂದರವಾಗಿರುವುದನ್ನು ಅವನ ತಂದೆತಾಯಿಗಳು ನೋಡಿ ಅರಸನ ಅಪ್ಪಣೆಗೆ ಭಯಪಡದೆ ಅವನನ್ನು ಮೂರು ತಿಂಗಳು ಬಚ್ಚಿಟ್ಟರು.
[24] ಮೋಶೆಯು ದೊಡ್ಡವನಾಗಿ ಬೆಳೆದ ಮೇಲೆ ನಂಬಿಕೆಯಿಂದಲೇ ಫರೋಹನ ಪುತ್ರಿಯ ಮಗನೆಂದು ಕರೆಯಿಸಿಕೊಳ್ಳಲು ನಿರಾಕರಿಸಿದ್ದನು.
[25] ಮೋಶೆ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ದೇವಜನರೊಂದಿಗೆ ಕಷ್ಟ ಅನುಭವಿಸುವುದನ್ನೇ ಆರಿಸಿಕೊಂಡನು.
[26] ಈಜಿಪ್ಟಿನ ನಿಕ್ಷೇಪಕ್ಕಿಂತಲೂ ಕ್ರಿಸ್ತ ಯೇಸುವಿಗಾಗಿ ನಿಂದೆಯನ್ನು ಹೊಂದುವುದು ಮಹಾಐಶ್ವರ್ಯವೆಂದೆಣಿಸಿಕೊಂಡನು. ಏಕೆಂದರೆ ಅವನು ತನ್ನ ಬಹುಮಾನಕ್ಕಾಗಿ ಎದುರು ನೋಡಿದನು.
[27] ನಂಬಿಕೆಯಿಂದಲೇ ಮೋಶೆ ಅರಸನ ಕೋಪಕ್ಕೆ ಭಯಪಡದೆ ಈಜಿಪ್ಟನ್ನು ಬಿಟ್ಟುಹೋದನು. ಏಕೆಂದರೆ ಅವನು ಕಣ್ಣಿಗೆ ಕಾಣದ ದೇವರನ್ನು ಕಣ್ಣಾರೆ ಕಾಣುತ್ತಿರುವನೋ ಎನ್ನುವಷ್ಟು ದೃಢಚಿತ್ತನಾಗಿದ್ದನು.
[28] ಚೊಚ್ಚಲ ಮಕ್ಕಳನ್ನು ಸಂಹರಿಸುವ ದೂತನು ಇಸ್ರಾಯೇಲರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ ಮೋಶೆ ನಂಬಿಕೆಯಿಂದಲೇ ಪಸ್ಕವನ್ನೂ ರಕ್ತ ಪ್ರೋಕ್ಷಣೆಯನ್ನೂ ಆಚರಿಸಿದ್ದನು.
[29] ನಂಬಿಕೆಯಿಂದಲೇ ಇಸ್ರಾಯೇಲರು ಒಣ ಭೂಮಿಯನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು. ಈಜಿಪ್ಟಿನವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿ ಮುಳುಗಿ ಹೋದರು.
[30] ಇಸ್ರಾಯೇಲರು ಏಳು ದಿವಸಗಳು ಯೆರಿಕೋವಿನ ಗೋಡೆಗಳನ್ನು ಸುತ್ತಿದ ಮೇಲೆ, ಅವು ಬಿದ್ದು ಹೋದದ್ದು ನಂಬಿಕೆಯಿಂದಲೇ.
[31] ರಹಾಬಳೆಂಬ ವೇಶ್ಯೆಯು ಗೂಢಚಾರರನ್ನು ಸಮಾಧಾನವಾಗಿ ಸ್ವಾಗತಿಸಿದ್ದರಿಂದ ಅವಿಧೇಯರೊಂದಿಗೆ ನಾಶವಾಗದೆ ಉಳಿದದ್ದು ನಂಬಿಕೆಯಿಂದಲೇ.
[32] ಇನ್ನೂ ಏನು ಹೇಳಬೇಕು? ಗಿಡಿಯೋನ್, ಬಾರಾಕ್, ಸಂಸೋನ್, ಎಪ್ತಾಹ, ದಾವೀದ, ಸಮುಯೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವುದಕ್ಕೆ ನನಗೆ ಸಮಯ ಸಾಲದು.
[33] ಇವರೆಲ್ಲರೂ ನಂಬಿಕೆಯ ಮೂಲಕವೇ ರಾಜ್ಯಗಳನ್ನು ಸ್ವಾಧೀನಮಾಡಿಕೊಂಡರು. ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು,
[34] ಬೆಂಕಿಯ ಶಕ್ತಿಯನ್ನು ಆರಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ಬಲಹೀನತೆಯಿಂದ ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರರ ಸೈನ್ಯಗಳನ್ನು ಓಡಿಸಿಬಿಟ್ಟರು,
[35] ಸ್ತ್ರೀಯರು ಸತ್ತು ಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಆದರೆ ಬೇರೆ ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಉತ್ತಮ ಪುನರುತ್ಥಾನ ಹೊಂದುವುದಕ್ಕಾಗಿ ತಮಗೆ ಬಿಡುಗಡೆಯನ್ನು ಸ್ವೀಕರಿಸದೆ ಹೋದರು,
[36] ಇನ್ನೂ ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು ತಿಂದು ಬೇಡಿ ಸೆರೆವಾಸವನ್ನು ಸಹ ಅನುಭವಿಸಿದರು,
[37] ಕೆಲವರ ಮೇಲೆ ಕಲ್ಲೆಸೆದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಸಾಯಿಸಿದರು, ಕೆಲವರನ್ನು ಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು, ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ
[38] ಭೂಮಿಯ ಕಾಡು, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು. ಇಂಥವರಿಗೆ ಈ ಲೋಕವು ಯೋಗ್ಯವಾದ ಸ್ಥಳವಲ್ಲ.
[39] ಇವರೆಲ್ಲರೂ ತಮ್ಮ ನಂಬಿಕೆಯ ಮೂಲಕ ಒಳ್ಳೆಯ ಸಾಕ್ಷಿಯನ್ನು ಹೊಂದಿದವರಾಗಿದ್ದರೂ ವಾಗ್ದಾನವಾದದ್ದನ್ನು ಹೊಂದಲಿಲ್ಲ.
[40] ಏಕೆಂದರೆ ನಮ್ಮೊಂದಿಗೆ ಅವರು ಪರಿಪೂರ್ಣರಾಗಬೇಕೆಂದು ದೇವರು ನಮಗೋಸ್ಕರ ಉತ್ತಮವಾದದ್ದನ್ನು ಸಂಕಲ್ಪಿಸಿದ್ದಾರೆ.