Skip to content
Opens in a new window
Listen to this chapter • 5:58

[1] ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು. ರಾಜರನ್ನು ಸೋಲಿಸಿ, ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಸಂಧಿಸಿ ಅವನನ್ನು ಆಶೀರ್ವದಿಸಿದನು.

[2] ಅಬ್ರಹಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತರಲ್ಲಿ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿಗೆ ಮೊದಲನೆಯದಾಗಿ, “ನೀತಿರಾಜನು” ಎಂದೂ ತರುವಾಯ “ಸಾಲೇಮಿನ ರಾಜ,” ಅಂದರೆ, “ಸಮಾಧಾನದ ಅರಸನು” ಎಂದರ್ಥ.

[3] ಈ ಮೆಲ್ಕಿಜೆದೇಕನಿಗೆ ತಂದೆಯೂ, ತಾಯಿಯೂ, ವಂಶಾವಳಿಯೂ ಇಲ್ಲ. ಅವನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಅವನು ದೇವರ ಪುತ್ರ ಆಗಿರುವವರಿಗೆ ಹೋಲಿಕೆಯಾಗಿರುವ ನಿತ್ಯ ಯಾಜಕನಾಗಿ ಉಳಿಯುತ್ತಾನೆ.

[4] ಮೆಲ್ಕಿಜೆದೇಕನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ಮೂಲ ಪಿತೃವಾದ ಅಬ್ರಹಾಮನು ಗೆದ್ದು ತಂದವುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಇವನಿಗೇ ಕೊಟ್ಟನಲ್ಲಾ.

[5] ನಿಜವಾಗಿಯೂ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು, ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮಭಾಗಗಳನ್ನು ತೆಗೆದುಕೊಳ್ಳುವುದಕ್ಕೆ ಮೋಶೆಯ ನಿಯಮದಲ್ಲಿ ಅಪ್ಪಣೆಯಿದೆ.

[6] ಆದರೆ ವಂಶಾವಳಿಯಲ್ಲಿ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದ ದಶಮಭಾಗವನ್ನು ತೆಗೆದುಕೊಂಡದ್ದಲ್ಲದೆ, ವಾಗ್ದಾನಗಳನ್ನು ಪಡೆದಿದ್ದ ಅಬ್ರಹಾಮನನ್ನು ಆಶೀರ್ವದಿಸಿದನು.

[7] ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನೇ ದೊಡ್ಡವನು ಎಂಬುದರಲ್ಲಿ ವಿವಾದವಿಲ್ಲ.

[8] ಇಲ್ಲಿ ದಶಮಭಾಗಗಳನ್ನು ತೆಗೆದುಕೊಳ್ಳುತ್ತಿರುವ ಲೇವಿಯರು ಕೇವಲ ಮರ್ತ್ಯ ಮಾನವರು. ಆದರೆ ಅಲ್ಲಿ ತೆಗೆದುಕೊಳ್ಳುವ ಮೆಲ್ಕಿಜೆದೇಕನು ಜೀವಿಸುತ್ತಿದ್ದಾನೆಂದು ಸಾಕ್ಷಿ ಹೊಂದಿರುವವನು.

[9] ಇದು ಮಾತ್ರವಲ್ಲದೆ ದಶಮಭಾಗಗಳನ್ನು ತೆಗೆದುಕೊಳ್ಳುವ ಲೇವಿಯೂ ಅಬ್ರಹಾಮನ ಮೂಲಕ ದಶಮಭಾಗಗಳನ್ನು ಕೊಟ್ಟ ಹಾಗಾಯಿತು.

[10] ಹೇಗೆಂದರೆ, ಮೆಲ್ಕಿಜೆದೇಕನು ಅಬ್ರಹಾಮನನ್ನು ಸಂಧಿಸಿದಾಗ, ಲೇವಿಯು ತನ್ನ ಪಿತೃ ಆದ ಅಬ್ರಹಾಮನ ದೇಹದಲ್ಲಿ ಇದ್ದನು ಎಂದು ಪರಿಗಣಿಸಬಹುದು.

[11] ಲೇವಿಯರ ಯಾಜಕತ್ವದ ಆಧಾರದ ಮೇಲೆ ಜನರು ನಿಯಮವನ್ನು ಪಡೆದಿದ್ದರು. ಈ ಯಾಜಕತ್ವದ ಮೂಲಕವೇ ಪರಿಪೂರ್ಣತೆಯು ಉಂಟಾಗಿದ್ದರೆ, ಆರೋನನ ಕ್ರಮಾನುಸಾರವಾಗಿರದೆ ಮೆಲ್ಕಿಜೆದೇಕನ ಕ್ರಮದ ಪ್ರಕಾರ ಬೇರೊಬ್ಬ ಯಾಜಕನು ಎದ್ದೇಳುವ ಅವಶ್ಯವೇನಿತ್ತು?

[12] ಯಾಜಕತ್ವವು ಬದಲಾದಾಗ ನಿಯಮವು ಸಹ ಬದಲಾಗುವುದು ಅಗತ್ಯ.

[13] ಇವು ಯಾರ ವಿಷಯದಲ್ಲಿ ಹೇಳಿದೆಯೋ ಆ ವ್ಯಕ್ತಿ ಬೇರೊಂದು ಗೋತ್ರಕ್ಕೆ ಸೇರಿದವನು. ಆ ಗೋತ್ರದಿಂದ ಎಂದೂ ಯಾರೂ ಬಲಿಪೀಠದ ಬಳಿ ಸೇವೆ ಮಾಡಿದವರಲ್ಲ.

[14] ಹೀಗೆ ನಮ್ಮ ಕರ್ತ ಯೇಸು ಯೂದಾ ಗೋತ್ರಕ್ಕೆ ಸೇರಿದವರೆಂದು ತಿಳಿದ ಸಂಗತಿಯಾಗಿದೆ. ಈ ಗೋತ್ರವನ್ನು ಸಂಬಂಧಿಸಿ ಮೋಶೆಯು ಯಾಜಕರ ವಿಷಯವಾಗಿ ಏನನ್ನೂ ಹೇಳಲಿಲ್ಲ.

[15] ಮೆಲ್ಕಿಜೆದೇಕನಂತೆ ಇನ್ನೊಬ್ಬ ಯಾಜಕನು ಏಳುತ್ತಾನೆಂಬುದು ಇನ್ನೂ ಎಷ್ಟೋ ಹೆಚ್ಚಾಗಿ ಸ್ಪಷ್ಟವಾಗಿದೆ.

[16] ಕ್ರಿಸ್ತ ಯೇಸು ಯಾಜಕರಾದುದು ಅಳಿವಿಲ್ಲದ ಜೀವದ ಶಕ್ತಿಗೆ ಅನುಸಾರವಾಗಿದೆಯೇ ಹೊರತು ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ.

[17] ಕರ್ತ ಯೇಸುವಿನ ವಿಷಯದಲ್ಲಿ, “ನೀನು ಸದಾಕಾಲವೂ, ಮೆಲ್ಕಿಜೆದೇಕನ ಕ್ರಮದ ಯಾಜಕನಾಗಿದ್ದೀ,” ಎಂಬ ಸಾಕ್ಷಿಯಿದೆ.

[18] ಏಕೆಂದರೆ ಮೊದಲಿದ್ದ ಆಜ್ಞೆಯು ನಿರ್ಬಲವೂ ನಿಷ್ಪ್ರಯೋಜಕವೂ ಆಗಿರುವ ಕಾರಣದಿಂದ ಅದು ರದ್ದಾಯಿತು.

[19] ಮೋಶೆಯ ನಿಯಮವು ಯಾವುದನ್ನೂ ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಬದಲಾಗಿ ದೇವರ ಸಮೀಪಕ್ಕೆ ಒಯ್ಯುವಂತೆ ಹೊಸ ಉತ್ತಮ ನಿರೀಕ್ಷೆಗೆ ನಡಿಸುತ್ತದೆ.

[20] ಇದಂತೂ ಆಣೆಯಿಲ್ಲದೆ ಆಗಿರುವಂಥದ್ದಲ್ಲ! ಲೇವಿಯರು ಆಣೆಯಿಲ್ಲದೆಯೇ ಯಾಜಕರಾದರು,

[21] ಆದರೆ ಯೇಸು ದೇವರ ಆಣೆಯಿಂದಲೇ ಯಾಜಕರಾದರು. ಹೀಗೆ ದೇವರು ಹೇಳಿದ್ದೇನೆಂದರೆ: “ ಕರ್ತ ಆಗಿರುವ ನಾನು ಆಣೆಯಿಟ್ಟು ಹೇಳಿದ್ದೇನೆ. ನಾನು ಎಂದಿಗೂ ಮನಸ್ಸನ್ನು ಬದಲಾಯಿಸುವುದಿಲ್ಲ. ‘ನೀನು ಸದಾಕಾಲವೂ ಯಾಜಕನಾಗಿದ್ದೀ.’ ”

[22] ಇದರಿಂದಲೇ ಯೇಸು ಎಷ್ಟೋ ಉತ್ತಮವಾದ ಒಡಂಬಡಿಕೆಗೆ ಹೊಣೆಗಾರರಾದರು.

[23] ಒಂದು ಕಡೆ ಆ ಯಾಜಕರು ಮುಂದುವರಿಯದಂತೆ ಮರಣವು ಅಡ್ಡಿಯಾದದ್ದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು.

[24] ಇನ್ನೊಂದು ಕಡೆ ಯೇಸುವಾದರೋ ಸದಾಕಾಲ ಇರುವುದರಿಂದ ನಿರಂತರವಾಗಿ ತಮ್ಮ ಯಾಜಕತ್ವವನ್ನು ಹೊಂದಿದವರಾಗಿದ್ದಾರೆ.

[25] ಇದಲ್ಲದೆ ಯೇಸು ತಮ್ಮ ಮೂಲಕ ದೇವರ ಕಡೆ ಬರುವವರನ್ನು ಪರಿಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತರಾಗಿದ್ದಾರೆ. ಏಕೆಂದರೆ ಅವರಿಗೋಸ್ಕರ ಯೇಸು ವಿಜ್ಞಾಪನೆ ಮಾಡುವುದಕ್ಕಾಗಿ ಯಾವಾಗಲೂ ಬದುಕುವವರಾಗಿದ್ದಾರೆ.

[26] ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರೂ ಗಗನ ಮಂಡಲಗಳಿಗಿಂತ ಉನ್ನತಕ್ಕೇರಿದಾತರೂ ಆಗಿರುವ ಇಂಥಾ ಮಹಾಯಾಜಕ ನಮಗಿದ್ದಾರೆ.

[27] ಮೊದಲು ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಾರ್ಪಣೆ ಮಾಡುವ ಆ ಮಹಾಯಾಜಕರಂತೆ ಯೇಸು ಪ್ರತಿದಿನವೂ ಬಲಿ ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಇವರು ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡಾಗ ಅದನ್ನು ಒಂದೇ ಸಾರಿ ಮಾಡಿ ಮುಗಿಸಿದರು.

[28] ಏಕೆಂದರೆ ಮೋಶೆಯ ನಿಯಮವು ಬಲಹೀನರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಿಸುತ್ತದೆ. ಆದರೆ ಮೋಶೆಯ ನಿಯಮದ ತರುವಾಯ ದೇವರ ಆಣೆಯೊಡನೆ ಬಂದ ವಾಕ್ಯವು ನಿತ್ಯವಾಗಿ ಪರಿಪೂರ್ಣರಾದ ಪುತ್ರನನ್ನೇ ಪ್ರಧಾನಯಾಜಕರನ್ನಾಗಿ ನೇಮಿಸುತ್ತದೆ.

ಇಬ್ರಿಯರಿಗೆ — Chapters