[1] ಸುವಾರ್ತೆಯನ್ನು ಸಾರಿದ್ದರಿಂದ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ, ನಮಗೆ ಪ್ರಿಯನೂ ಜೊತೆಗೆಲಸದವನೂ ಆಗಿರುವ ಫಿಲೆಮೋನನಿಗೂ
[2] ಸಹೋದರಿ ಅಪ್ಫಿಯಳಿಗೂ ನಮ್ಮ ಸಹ ಸೈನಿಕನಾದ ಅರ್ಖಿಪ್ಪನಿಗೂ ನಿಮ್ಮ ಮನೆಯಲ್ಲಿ ಸೇರುವ ಸಭೆಯವರಿಗೂ ಬರೆಯುವುದೇನೆಂದರೆ:
[3] ನಮ್ಮ ತಂದೆಯಾದ ದೇವರಿಂದಲೂ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಇರಲಿ.
[4] ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ಜ್ಞಾಪಕಮಾಡಿಕೊಂಡು ನನ್ನ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
[5] ಏಕೆಂದರೆ, ನಮ್ಮ ಕರ್ತ ಆಗಿರುವ ಯೇಸುವಿನಲ್ಲಿ ನಿನಗಿರುವ ವಿಶ್ವಾಸವನ್ನೂ ಪರಿಶುದ್ಧರೆಲ್ಲರಿಗಾಗಿ ನಿನಗಿರುವ ಪ್ರೀತಿಯನ್ನೂ ಕುರಿತು ನಾನು ಕೇಳಿದ್ದೇನೆ.
[6] ನಿನ್ನ ವಿಶ್ವಾಸದಲ್ಲಿ ಅನ್ಯೋನ್ಯತೆಯು ನಿನ್ನ ಎಲ್ಲಾ ಒಳ್ಳೆಯದರ ಆಳವಾದ ತಿಳುವಳಿಕೆಯನ್ನು ಕ್ರಿಸ್ತ ಯೇಸುವಿಗಾಗಿ ಪರಿಣಾಮಗೊಳಿಸಿ ಹಂಚುವಂತೆ ನಾನು ಪ್ರಾರ್ಥಿಸುತ್ತೇನೆ.
[7] ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಉತ್ತೇಜನವಾದ್ದರಿಂದ, ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಆನಂದವೂ ಆದರಣೆಯೂ ಉಂಟಾದವು.
[8] ಆದಕಾರಣ, ನಾನು ಈಗ ನಿನಗೆ ಏನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ಕ್ರಿಸ್ತ ಯೇಸುವಿನಲ್ಲಿ ನನಗೆ ಬಹು ಧೈರ್ಯವಿದ್ದರೂ
[9] ಹಾಗೆ ಆಜ್ಞಾಪಿಸದೆ, ಈಗ ಕ್ರಿಸ್ತ ಯೇಸುವಿನ ಸೆರೆಯಾಳೂ ಮುದುಕನೂ ಆಗಿರುವ ಪೌಲನೆಂಬ ನಾನು ಪ್ರೀತಿಯ ನಿಮಿತ್ತವೇ ನಿನ್ನನ್ನು ಬೇಡಿಕೊಳ್ಳುತ್ತೇನೆ.
[10] ನಾನು ಬಂಧಿಯಾಗಿರುವಾಗ ನನ್ನ ಮಗನಂತೆ ಬಂದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಕೇಳಿಕೊಳ್ಳುತ್ತೇನೆ. ಏಕೆಂದರೆ ನಾನು ಸೆರೆಯಲ್ಲಿದ್ದಾಗ ಅವನು ನನಗೆ ಆತ್ಮಿಕ ಮಗನಾದನು.
[11] ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ.
[12] ನನಗೆ ಪ್ರಾಣವಾಗಿರುವ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ನಾನು ಕಳುಹಿಸಿ ಕೊಡುತ್ತಿದ್ದೇನೆ.
[13] ಸುವಾರ್ತೆಯ ನಿಮಿತ್ತ ಸೆರೆಯಲ್ಲಿರುವ ನನಗೆ ಉಪಚಾರ ಮಾಡುವಂತೆ ನಿನಗೆ ಬದಲಾಗಿ ಓನೇಸಿಮನನನ್ನು ನನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಅಪೇಕ್ಷಿಸಿದ್ದೆನು.
[14] ಆದರೆ ನಿನ್ನ ಉಪಚಾರವು ಬಲಾತ್ಕಾರದಿಂದಾಗದೆ, ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ, ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ.
[15] ಓನೇಸಿಮನು ಸ್ವಲ್ಪಕಾಲ ನಿನ್ನಿಂದ ಅಗಲಿದ್ದು ಬಹುಶಃ ನೀನು ಅವನನ್ನು ನಿರಂತರವಾಗಿ ಸೇರಿಸಿಕೊಳ್ಳುವುದಕ್ಕಾಗಿಯೇ!
[16] ಇನ್ನು ಮೇಲೆ ಅವನು ದಾಸನಾಗದೆ, ದಾಸನಿಗಿಂತ ಮೇಲಾಗಿ ಪ್ರಿಯ ಸಹೋದರನಂತಾಗಬೇಕು. ಅವನು ವಿಶೇಷವಾಗಿ ನನಗೆ ಬಹು ಪ್ರಿಯನಾಗಿದ್ದಾನೆ. ಆದರೂ ಓನೇಸಿಮನು ನಿನಗೆ ಮಾನವ ರೀತಿಯಲ್ಲಿಯೂ ಕರ್ತ ಯೇಸುವಿನಲ್ಲಿಯೂ ಒಬ್ಬ ಸಹೋದರನಾಗಿ ಇನ್ನು ಎಷ್ಟೋ ಪ್ರಿಯನಾಗಿರಬೇಕಲ್ಲವೇ.
[17] ಆದಕಾರಣ ನಾನು ನಿನಗೆ ಅನ್ಯೋನ್ಯತೆವುಳ್ಳವನೆಂದು ನೀನು ಎಣಿಸುವುದಾದರೆ ನನ್ನನ್ನು ಸ್ವೀಕರಿಸಿಕೊಳ್ಳುವ ಪ್ರಕಾರವೇ ಅವನನ್ನು ಸ್ವೀಕರಿಸು.
[18] ಅವನು ನಿನಗೆ ಏನಾದರೂ ತಪ್ಪು ಮಾಡಿದ್ದರೆ ಅಥವಾ ಅವನು ಸಾಲವೇನಾದರೂ ತೀರಿಸಬೇಕಾಗಿದ್ದರೆ, ಅದನ್ನು ನನ್ನ ಲೆಕ್ಕಕ್ಕೆ ಹಾಕು.
[19] ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ನನ್ನ ಸ್ವಂತ ಕೈಯಲ್ಲಿ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನು ನಿನ್ನ ಪ್ರಾಣವನ್ನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕಾಗಿಲ್ಲ.
[20] ಸಹೋದರನೇ ಹೌದು, ಕರ್ತ ಯೇಸುವಿನಲ್ಲಿ ನಿನ್ನಿಂದ ನನಗೆ ಈ ಸಹಾಯಮಾಡು; ಅದು ಕ್ರಿಸ್ತ ಯೇಸುವಿನಲ್ಲಿ ನನ್ನ ಹೃದಯವನ್ನು ಉತ್ತೇಜನಗೊಳಿಸಲಿ.
[21] ನಿನ್ನ ವಿಧೇಯತೆಯಲ್ಲಿ ಭರವಸೆಯುಳ್ಳವನಾಗಿ ನಾನು ನಿನಗೆ ಬರೆದಿದ್ದೇನೆ. ನಾನು ಹೇಳಿದ್ದಕ್ಕಿಂತಲೂ ಹೆಚ್ಚಾಗಿಯೇ ನೀನು ಮಾಡುವೆಯೆಂದು ನನಗೆ ಗೊತ್ತಿದೆ.
[22] ಇದಲ್ಲದೆ: ನಿಮ್ಮ ಪ್ರಾರ್ಥನೆಯ ದೆಸೆಯಿಂದ ನಾನು ಪುನಃ ನಿಮ್ಮ ಬಳಿಗೆ ಬರುತ್ತೇನೆಂದು ನನಗೆ ನಿರೀಕ್ಷೆ ಇರುವುದು. ಆದಕಾರಣ ನನಗಾಗಿ ಒಂದು ಅತಿಥಿ ಕೊಠಡಿಯನ್ನು ಸಿದ್ಧಮಾಡು.
[23] ಕ್ರಿಸ್ತ ಯೇಸುವಿಗಾಗಿ ನನ್ನ ಜೊತೆ ಸೆರೆಯಾಳಾಗಿರುವ ಎಪಫ್ರನು ನಿನಗೆ ವಂದನೆ ತಿಳಿಸುತ್ತಾನೆ.
[24] ನನ್ನ ಜೊತೆಕೆಲಸದವರಾದ ಮಾರ್ಕ, ಅರಿಸ್ತಾರ್ಕ, ದೇಮ ಹಾಗೂ ಲೂಕ ನಿನ್ನನ್ನು ವಂದಿಸುತ್ತಾರೆ.
[25] ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ.